ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಅಪ್ಪ ಮರೆತದ್ದು


ಆಪ್ಪ ಮರೆತದ್ದು

ತನ್ನ ಪುಟ್ಟ ಮಗ ನಿದ್ರಿಸುತ್ತಿದ್ದಾಗ ತಂದೆ ಮೆತ್ತಗೆ ತನ್ನ ಮಗನ ಕೋಣೆಗೆ ಮೆಲ್ಲ ಮೆಲ್ಲಗೆ ಹೆಜ್ಜೆ ಹಾಕುತ್ತಾ ಬಂದ.   ಮಲಗಿರುವ ಮುದ್ದು ಹುಡುಗನ ಕೆನ್ನೆ ಸವರುತ್ತಾ ಕುಳಿತು ತನ್ನ ಈ ಪುಟ್ಟ ಮಗನಿಗೇ ಹೇಳುತ್ತಿರುವೆನೇನೋ ಎಂಬ ಭಾವದಲ್ಲಿ ತನ್ನ ಆಂತರ್ಯದಲ್ಲಿಯೇ ಸಂಭಾಷಿಸಿಕೊಳ್ಳತೊಡಗಿದ.

“ಕಂದಾ, ನೀನು ಗಾಢ ನಿದ್ರೆಯಲ್ಲಿರುವಾಗ ನಾನು ಹೀಗೆ ಬಂದು ನಿನ್ಮುಂದೆ ಕೂತಿದೀನಿ.   ನಿನ್ನ ಈ ಪುಟಾಣಿ ಮುಂಗೈ ನಿನ್ನ ನುಣುಪಾದ ಈ  ಕೆನ್ನೆಯಡಿ ಎಷ್ಟು ಮುದ್ದಾಗಿ ಮಲಕ್ಕೊಂಡಿದೆ!  ಈ ಸುಂದರವಾಗಿರೋ ನಿನ್ನ  ಗುಂಗುರು ಕೂದ್ಲು ನಿನ್ನ ಈ ಮುದ್ಮುದ್ದಾದ  ಹಣೇಲಿ ಎಷ್ಟೊಂದು  ಒದ್ದೊದ್ದೆಯಾಗಿ ಅಂಟ್ಕೊಂಬಿಟ್ಟಿದೆ!   ನಿದ್ದೆಯಲ್ಲಿರೋವಾಗ  ನೀನು ಎಷ್ಟೊಂದು ಲಕ್ಷಣವಾಗ್ ಕಾಣ್ತಾ ಇದ್ದೀಯ ಗೊತ್ತ!  ನಾನು ಒಬ್ನೇ  ಸದ್ದಿಲ್ದೆ ನಿನ್ನ ರೂಮಲ್ಲಿ ಬಂದು ಕೂತಿದೀನಿ.  ಯಾಕೋ  ಪುಸ್ತಕ ಓದೋಣ ಅಂತ ಕೂತಿದ್ದಾಗ, ಮನಸ್ಸು ಪರಿತಾಪದ ಅಲೇಲಿ ಬೇಯೋಕೆ ಪ್ರಾರಂಭ ಮಾಡ್ತು.   ನನ್ನಲ್ಲಿ ಉಂಟಾದ ಈ ತಪ್ಪಿತಸ್ಥ ಭಾವನೆಯಿಂದ ಸುಮ್ನೆ ಇರೋಕ್ಕಾಗ್ಲಿಲ್ಲ. ಹೀಗೆ ನಿನ್ನ ಹತ್ರ ಬಂದ್ಬಿಟ್ಟೆ”,

ಕಂದಾ, ನಾನು  ವೃಥಾ ನಿನ್ಮೇಲ್  ರೇಗಾಡ್ಬಿಟ್ಟೆ.  ನೀನು ಶಾಲೇಗ್ ಹೋಗೋಕೆ  ಬಟ್ಟೆ ಹಾಕ್ಕೋತಿದ್ದಾಗ ನಿನ್ನನ್ನು ಬೈದ್ಬಿಟ್ಟೆ.  ನಿನ್ನ ಮುಖಾನ  ನೀನು ಟವೆಲ್ಲಿಂದ ಹೊಡ್ಕೋತಾ ಇದ್ದೀಯ ಅಂತ ರೇಗ್ಬಿಟ್ಟೆ!  ನೀನು ಶೂ ಒರೆಸ್ಕೋತಾ ಇದ್ದೆ.  ಅದಕ್ಕೂ ಬೈದೆ.  ನೀನು ಯಾವುದೋ ಆಟದ ಸಾಮಾನನ್ನ ನೆಲದ ಮೇಲೆ ಬಿಸಾಡಿದೆ ಅಂತ ಆರ್ಭಟಿಸ್ದೆ!

ನೀನು ತಿಂಡಿ ತಿನ್ಬೇಕಾದ್ರೂ ನಾನು ಸುಮ್ನೆ ಇರಲಿಲ್ಲ.  ಏನೋ ತಪ್ಪು ಹುಡುಕ್ದೆ.  ನೀನು ಅದೇನನ್ನೋ ಚೆಲ್ದೆ.  ತಿಂಡಿಯನ್ನ ಗಬಗಬ ತಿಂದೆ.  ತಿನ್ನೋ ಬ್ರೆಡ್ ಮೇಲೆ ಒಂದು ರಾಶಿ ಬೆಣ್ಣೆ ಸುರಿದಿದ್ದೆ.  ಈ ಪ್ರತಿಯೊಂದಕ್ಕೂ ನಾನು ನಿನ್ಮೇಲೆ ರೇಗಾಡ್ದೆ.

ಅಂದು ನೀನು ಆಟಕ್ಕೆ ಹೊರಡ್ತಾ ಇದ್ದಾಗ ನಾನು ಕೆಲಸದ ಮೇಲೆ ಪ್ರವಾಸ ಹೊರಟಿದ್ದೆ.  ನೀನು ಓಡಿ ಬಂದು “ಹ್ಯಾಪಿ ಜರ್ನಿ ಅಪ್ಪಾ” ಅಂದೆ.  ನಾನು ಮಾಡಿದ್ದಾದ್ರೂ ಏನು?  “ಸುಮ್ನೆ ನಡೆಯೋ ಆಚ್ಗೆ” ಅಂತ ಒರಟಾಗಿ ಸಿಡುಕ್ದೆ.

ಇವತ್ತು ಸಂಜೆ ಕೂಡಾ ಹಾಗೇ ಆಯ್ತು.  ನಾನು ಮನೇಗ್ ಬರೋ ಸಮಯದಲ್ಲಿ ನೀನು ಮಂಡಿ ಊರ್ಕೊಂಡು ಗೋಲಿ ಆಡ್ತಾ ಇದ್ದೆ.  ನಿನ್ನ ಕಾಲ್ಚೀಲ ತೂತಾಗಿತ್ತು.  ನಿನ್ನ ಫ್ರೆಂಡ್ಸ್ ಎದುರಿಗೇ ನಿನ್ನನ್ನ ಮನೇಗ್ ಅಟ್ಬಿಟ್ಟೆ.    ಅಷ್ಟೊಂದು ಬೆಲೆ ಕೊಟ್ಟು ಕಾಲ್ಚೀಲ ತಗೊಂಡಿದ್ದು.  ನೀನು ಸ್ವಲ್ಪ ಚೆನ್ನಾಗಿ ಇಟ್ಕೋಬೇಕಿತ್ತಲ್ವ!

ಆಮೇಲೆ ನಾನು ನನ್ರೂಮಲ್ಲಿ ಏನೋ ಓದ್ತಾ ಕೂತಿದ್ದಾಗ ನೀನು ಮೆಲ್ಲಗೆ ಹೆದರ್ಕೊಂಡು ಒಳಗ್ಬಂದೆ.  ನಿನ್ನ ಪುಟ್ಟ ಕಂಗಳಲ್ಲಿ ಅದೆಂತದ್ದೋ ನೋವಿನ ಛಾಯೆ ಇತ್ತು.  ನಾನು ಅಸಹನೆಯಿಂದ ನಿನ್ಕಡೆ ನೋಡ್ದಾಗ, ನೀನು ಇನ್ನಷ್ಟು ಹೆದರ್ಕೊಂಡು ಬಾಗಿಲ ಮರೆಯಲ್ಲಿ ನೋಡ್ತಾ ನಿಂತ್ಕೊಂಡೆ.  ಆಗ್ಲೂ ನಾನ್ ಮಾಡಿದ್ದೇನು?  “ಏನ್ಬೇಕು ನಿಂಗೆ? ಅಂತ ಹರಿಹಾಯ್ದೆ ಅಲ್ವ?”

ನೀನು ಮಾತ್ರ ಏನೂ ಹೇಳ್ಲಿಲ್ಲ.  ಪುಟು ಪುಟು ಅಂತ ಓಡಿ ಬಂದು ನನ್ ಕತ್ತಿನ ಸುತ್ತಾ ಕೈ ಬಳಸಿ ಮುದ್ದಿಸಿಬಿಟ್ಟೆ.  ನಿನ್ನ ಪುಟ್ಟ ಹೃದಯಲ್ಲಿ ಅದೆಂತ ಪ್ರೀತಿ ತುಂಬಿತ್ತು!  ನಾನು ನಿನ್ನನ್ನ  ಬೈದ್ರೂ ನೀನು ಅದೆಷ್ಟು ಸುಂದರವಾದ ಪ್ರೀತಿ ತೋರಿಸ್ಬಿಟ್ಟೆ ನಂಗೆ.

ಬಂದಷ್ಟೇ ಲಗುಬಗೆಯಿಂದ ಕುಟು ಕುಟು ಅಂತ ನನ್ನ ರೂಮಿಂದ ನೀನು ಓಡಿ ಹೋಗ್ಬಿಟ್ಟೆ.  ಮಗು ನೀ ಈ ಕಡೆ ಓಡಿ ಹೋದೆ, ಅದ್ಯಾಕೋ ನನಗೇ ಅರಿವಿಲ್ಲದ ಹಾಗೆ ನನ್ನ ಕೈನಲ್ಲಿದ್ದ ಪುಸ್ತಕ ನನ್ನ ಕೈಯಿಂದ ಜಾರಿ ಬಿತ್ತು!  ಅದೆಂತದ್ದೋ ದುಃಖ ನನ್ನನ್ನಾವರಿಸಿ ಬಿಡ್ತು!  ಪ್ರತಿಯೊಂದಕ್ಕೂ ತಪ್ಪು ಹುಡುಕೋ ನನ್ನ ಈ ದುರಭ್ಯಾಸದಿಂದ ನಾನು ಹೇಗೆ ಹೇಗೋ ಆಡ್ತೀನಲ್ವ!  ನೀನು ನನ್ನ ಮಗುವಾಗಿದ್ದಕ್ಕೆ ನಾನು ಕೊಡ್ತಾ ಇರೋ ಪ್ರತಿಫಲ ನೋಡು!

ಮಗು ನಾನು ನಿನ್ನನ್ನ ಪ್ರೀತಿಸ್ತಾ ಇಲ್ಲ ಅಂದ್ಕೊಂಡು ಬಿಟ್ಟಿದೀಯಾ!  ನಾನು ನಿನ್ನನ್ನ ತುಂಬಾ ಪ್ರೀತಿಸ್ತೀನಿ ಪುಟ್ಟು.  ಆದ್ರೆ ನಾನು ನಿನ್ನಿಂದ ತುಂಬಾ ತುಂಬಾ ನಿರೀಕ್ಷಿಸ್ತಾ ಇದ್ದೀನಿ ಅಂತ ಅನ್ಸುತ್ತೆ.  ನಾನು ನಿನ್ನನ್ನೂ ನನ್ನಷ್ಟೇ ವಯಸ್ಸವನೂ ಅನ್ನೋತರಹ  ವರ್ತಿಸ್ತೀನಿ.  ನನ್ನ ವಯಸ್ಸೇನು, ನಿನ್ನ ವಯಸ್ಸೇನು?  ನಾನು ಮಾಡೋದನ್ನ ಈ ಚಿಕ್ಕ ವಯಸ್ಸಲ್ಲಿ ನಿರೀಕ್ಷೆ ಮಾಡೋದಾದ್ರೂ ಸಾಧ್ಯಾನಾ?  ಇಷ್ಟು ವಯಸ್ಸಾಗಿರೋ ನಾನೇ ಅದ್ರೂ ನಾನು ಮಾಡಬೇಕಿರೋದನ್ನೆಲ್ಲಾ ತುಂಬಾ ಅಚ್ಚುಕಟ್ಟಾಗಿ ಮಾಡಿಬಿಡ್ತಾ ಇದ್ದೀನ?  

ನಿನ್ನಲ್ಲೂ ಎಷ್ಟೊಂದು ಒಳ್ಳೆಯತನ ಇದೆ ಅಲ್ವ?  ನಿನ್ನ ಪುಟ್ಟ ಹೃದಯ ಅದೆಷ್ಟು ವಿಶಾಲವಾದ್ದು ನೋಡು.  ನೀನು ಓಡಿ ಬಂದು ನನ್ನನ್ನು ಮುದ್ದಿಸಿದ್ದಕ್ಕಿಂತ ಬೇರೇನು  ಬೇಕು ನಂಗೆ!

ಯಾಕೋ ಮಗು ಏನೂ ತೋಚ್ತಾನೇ ಇಲ್ಲ.  ಸಾರಿ ಮಗು.  ನಿನ್ನ ಬಳಿ ಇದನ್ನ ಹೇಳೋಕ್ಕಾಗೋಲ್ಲ.  ಆದ್ರೆ ಆ ಭಾವನೆಯಲ್ಲಿ, ನೀನು ಕಣ್ಮುಚ್ಚಿಕೊಂಡು ಮಲಗಿರೋವಾಗ ನಿನ್ನ ಮುಂದೆ ಕೂತು ಅಂದ್ಕೋತಾ ಇದ್ದೀನಿ.

ನಾಳೆಯಿಂದ ನಾನೂ ನಿನ್ನ ಫ್ರೆಂಡ್ ತರ ಇರೋಕೆ ಪ್ರಯತ್ನ ಮಾಡ್ತೀನಿ.....ಓ.ಕೆ.    ನೀನಿನ್ನೂ ಪುಟ್ಟ ಮಗು ಅನ್ನೋದನ್ನ ಮರೆತು ನಿನ್ನಿಂದ ತುಂಬಾ ಅಪೇಕ್ಷಿಸಿಬಿಟ್ಟೆ....

(ಮೂಲ:  W. Livingston Larned ಅವರ ‘Father Forgets’ ಲೇಖನದ ಒಂದು ತುಣುಕು ರೂಪಾಂತರ)

Tag: Appa Maretaddu, Father Forgets

ಕಾಮೆಂಟ್‌ಗಳು


  1. This made me write this. Thank you sir. This is my worthless confession. Worthless because she is gone long ago (1998). Thanks for this sir.


    ಅಮ್ಮಾ ನೀನು ನನ್ನ ಜೀವನದ ಅವಿಭಾಜ್ಯ ಅಂಗ ಎನ್ನುವ ಅಂಶವನ್ನು ನಾನು ನಿನ್ನ ಕಡೆಗಾಲದವರಿಗೂ ಕಡೆಗಾಣಿಸಿದ್ದಾರೂ ಹೇಗೆ ಎನ್ನುವುದು ನನಗಿನ್ನೂ ಅಸ್ಪಷ್ಟವಾಗಿಯೇ ಉಳಿದಿದೆ.

    ನೀನಿತ್ತ ತಿನಿಸುಗಳ ಸವಿದಾಗ ಹೊಗಳಬಹುದಿತ್ತು - ಹೊಗಳಲಿಲ್ಲ
    ನಿನ್ನ ಹಾಡು ಕೇಳಿ ತಲೆಬಾಗಬಹುದಿತ್ತು......ಹಾಗಾಗಲಿಲ್ಲ
    ನಿನ್ನ ಪೂಜೆ ಪುನಸ್ಕಾರಗಳಿಗೆ ........ಸಹಕರಿಸಲಿಲ್ಲ
    ನಿನ್ನ ಕಾಯಿಲೆ ನೋವುಗಳಿಗೆ ಅವಕಾಶವಿದ್ದಾಗಲೂ ಹೆಚ್ಚು ಸ್ಪಂದಿಸಲಿಲ್ಲ
    ನೀನು ಆಗಾಗ ಹೇಳುತಿದ್ದ ಸಣ್ಣ ಪುಟ್ಟ ಕೆಲಸಗಳ ನಗುನಗುತಲಾದರೂ ಸಂವಹಿಸಬಹುದಿತ್ತು... ಹಾಗಾಗಲಿಲ್ಲ
    ನಿನ್ನ ಮುಗ್ದತೆಯ ತೆಗಳಬಾರದಿತ್ತು.....ಅದನ್ನೂ ಮಾಡಿಬಿಟ್ಟೆ
    ನಿನ್ನ ತ್ಯಾಗಗಳನ್ನು ನಿನ್ನ ಅಂತ್ಯಕಾಲದಲ್ಲೂ ನಾ ......ನೆನೆಯಲೇಯಿಲ್ಲ
    ನಿನಗೆ ಅನುಕಂಪ ತೋರಿಸಬಹುದಾದ ಎಲ್ಲಾಅವಕಾಶಗಳನ್ನೂ ....ನಾ ಕಡೆಗಾಣಿಸಿದೆನೇಕೋ
    ನಿನ್ನ ಬಿರು ನುಡಿಗಳ ಹಿಂದಿರುವ ನೋವ ಕಾಣುವಷ್ಟು ನಾ ಬೆಳೆಯಲಿಲ್ಲವೇಕೆ
    ನಿನ್ನ ಪ್ರೀತಿಯನ್ನು ಗುರುತಿಸುವಲ್ಲಿ ನಾ ಸೋತೆನೇಕೆ.....ಇಂದಿಗೂ ಅರ್ಥವಾಗದು
    ನಿನ್ನ ಅಸಮಾಧಾನಗಳನ್ನು ಅರ್ಥೈಸುವಷ್ಟಾದರೂ ....ಮನುಷ್ಯನಾಗಬಹುದಿತ್ತು
    ನಿನ್ನ ಕೈತುತ್ತು ನನ್ನನ್ನು ಇಷ್ಟು ಅಪ್ರಬುದ್ದನಾಗಿಸಿದ್ದಾದರೂ ಹೇಗೆ
    ನಿನ್ನ ನೆನಪಾದಾಗಲೆಲ್ಲಾ ನಾ.... ಸೋಲುತ್ತಲೇಯಿದ್ದೇನೆ...ಸೋಲು ಸಂಗಾತಿಯೆನಗೆ


    ಪ್ರೇರಣೆ: ಅಪ್ಪ ಮರೆತದ್ದು (ಸಂಸ್ಕೃತಿ ಸಲ್ಲಾಪ)


    ಪ್ರತ್ಯುತ್ತರಅಳಿಸಿ
ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ