ಎಚ್. ಜಿ. ದತ್ತಾತ್ರೇಯ
ಎಚ್.ಜಿ. ದತ್ತಾತ್ರೇಯ
‘ದತ್ತಣ್ಣ’ ಎಂದೇ ಪ್ರಖ್ಯಾತರಾದ ಎಚ್ ಜಿ ದತ್ತಾತ್ರೇಯ ರಂಗಭೂಮಿ, ಕಿರುತೆರೆ, ಭಾರತೀಯ ಚಿತ್ರರಂಗಗಳಲ್ಲಿ ತಮ್ಮ ನಟನೆಯಿಂದ ಮತ್ತು ಅದೆಲ್ಲಕ್ಕೂ ಮೀರಿದ ಸರಳ ಸದ್ಗುಣಗಳಿಂದ ಹೆಸರಾಗಿದ್ದಾರೆ.
ದತ್ತಾತ್ರೇಯ 1942ರ ಏಪ್ರಿಲ್ 20ರಂದು ಚಿತ್ರದುರ್ಗದಲ್ಲಿ ಜನಿಸಿದರು. ಅವರ ತಂದೆ ಹರಿಹರ ಗುಂಡೂರಾವ್. ತಾಯಿ ವೆಂಕಮ್ಮ. ಅವರಿಗೆ ಒಡಹುಟ್ಟಿದವರು ಆರು ಮಂದಿ. ಅವರಲ್ಲಿ ಸಹೋದರರಾದ ಎಚ್. ಜಿ. ವೆಂಕಟೇಶ್ ಐಐಟಿ ಖರಗ್ಪುರದಲ್ಲಿ ಭೌತಶಾಸ್ತ್ರಜ್ಞರಾಗಿದ್ದರು. ಎಚ್. ಜಿ. ಸೂರ್ಯನಾರಾಯಣ ರಾವ್ ಮೈಸೂರು ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದರು. ಎಚ್. ಜಿ. ಸೋಮಶೇಖರ ರಾವ್ ಬರಹಗಾರರಾಗಿ ಮತ್ತು ಅಭಿನಯಕ್ಕೆ ಹಸರಾಗಿದ್ದವರು.
ದತ್ತಣ್ಣನವರ ವಿದ್ಯಾಭ್ಯಾಸ ಚಿತ್ರದುರ್ಗದಲ್ಲಿ ನಡೆಯಿತು. 1958ರಲ್ಲಿ ಮೆಟ್ರಿಕ್ಯುಲೇಶನ್ ಪ್ರಥಮ ರ್‍ಯಾಂಕ್, 1959ರಲ್ಲಿ ಇಂಟರ್ಮೀಡಿಯೆಟ್ ಎರಡನೇ ರ್‍ಯಾಂಕ್, 1964ರಲ್ಲಿ ಯುವಿಸಿಇ ಬೆಂಗಳೂರಿನಿಂದ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಪದವಿ, 1978ರಲ್ಲಿ ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ನಿಂದ ಎಲೆಕ್ಟ್ರಿಕಲ್ ಕಮ್ಯೂನಿಕೇಷನ್ ಇಂಜಿನಿಯರಿಂಗ್ ಮಾಸ್ಟರ್ಸ್ ಪದವಿ ಮುಂತಾದವು ದತ್ತಣ್ಣನವರ ಶೈಕ್ಷಣಿಕ ಸಾಧನೆಗಳು.
1964ರಲ್ಲಿ ಇಂಜಿನಿಯರಿಂಗ್ ಪದವಿ ಮುಗಿದಾಗಲೆ ದತ್ತಣ್ಣನರು ಭಾರತೀಯ ವಾಯುಪಡೆಯ ತಾಂತ್ರಿಕ ವಿಭಾಗದಲ್ಲಿ ಕಮಿಷನ್ಡ್ ಆಫೀಸರ್ ಆಗಿ ವೃತ್ತಿ ಆರಂಭಿಸಿದರು. ಮುಂದೆ ಬೆಂಗಳೂರಿನ ಏರ್ಫೋರ್ಸ್ ಟೆಕ್ನಿಕಲ್ ಕಾಲೇಜಿನಲ್ಲಿ ತರಬೇತಿ ಪಡೆದರು. ಇಂಡಿಯನ್ ಇನ್ಸ್ಟಿಟ್ಯೂಟ್ನಲ್ಲಿ ಸ್ನಾತಕೋತ್ತರ ಪದವಿಗೆ ಓದುವ ಸಂದರ್ಭದಲ್ಲಿ 1984ರಲ್ಲಿ ಅವರಿಗೆ 'ಮ್ಯಾನೇಜ್ಮೆಂಟ್ ಅಂಡ್ ಅಡ್ವಾನ್ಸ್ಡ್ ಟೆಕ್ನಾಲಜೀಸ್' ಕುರಿತಾದ ಯಶಸ್ವೀ ಪ್ರಾಜೆಕ್ಟ್ ನಿರ್ವಹಣೆಗಾಗಿನ ಪ್ರಮಾಣಪತ್ರ ಸಂದಿತು. ದತ್ತಣ್ಣನವರು ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಆಗಿ ಇಪ್ಪತ್ತು ವರ್ಷ ಕಾರ್ಯನಿರ್ವಹಿಸಿದರು. ಮುಂದೆ ಹಿಂದೂಸ್ತಾನ್ ಏರೋನಾಟಿಕ್ಸ್ ಸಂಸ್ಥೆಯ ಮ್ಯಾನೇಜ್ಮೆಂಟ್ ಅಕಾಡೆಮಿಯ ಸಿಬ್ಬಂದಿ ತರಬೇತಿ ಕಾಲೇಜಿನಲ್ಲಿ ಡೆಪ್ಯೂಟಿ ಜನರಲ್ ಮ್ಯಾನೇಜರ್ ಮತ್ತು ಪ್ರಿನ್ಸಿಪಾಲರಾಗಿ ಕಾರ್ಯನಿರ್ವಹಿಸಿದರು. ದತ್ತಣ್ಣನವರು ಅವಿವಾಹಿತರಾಗಿ ತಮ್ಮ ಕಾಯಕ ಮತ್ತು ಕಲೆಯನ್ನು ಗಂಭೀರವಾಗಿ ಸ್ವೀಕರಿಸಿದವರು.
ಮಾಧ್ಯಮಿಕ ಶಾಲೆಯಿಂದಲೇ ದತ್ತಣ್ಣನವರಿಗೆ ನಾಟಕದ ಗೀಳು. ಅಕ್ಕಪಕ್ಕದ ಹುಡುಗರನ್ನು ಸೇರಿಸಿ ಮಾಡಿದ 'ಸೊಹ್ರಾಬ್-ರುಸ್ತುಂ' ನಾಟಕ ಅವರಿಗೆ ಪ್ರಖ್ಯಾತಿ ತಂದಿತ್ತು. ಪ್ರೌಢಶಾಲೆಯ ನಾಟಕದಲ್ಲಿ ಅವರದ್ದು ಮದಕರಿ ನಾಯಕನ ಪಾತ್ರ. ಚಿತ್ರದುರ್ಗಕ್ಕೆ ಬರುತ್ತಿದ್ದ ಜಮಖಂಡಿ ಕಂಪನಿ, ಗುಬ್ಬಿ ಕಂಪನಿ ನಾಟಕಗಳ ಪ್ರಭಾವ ಅವರ ಮೇಲಿತ್ತು. ಚಿತ್ರದುರ್ಗದ ಪ್ರೌಢ ಶಾಲೆಯಲ್ಲಿ 'ಅಳಿಯ ದೇವರು' ನಾಟಕದಲ್ಲಿ ರುಕ್ಕುಪಾತ್ರ, ದುರ್ಗದ ಹವ್ಯಾಸಿ ತಂಡ ಅಭಿನಯಿಸಿದ 'ದೇವದಾಸಿ' ನಾಟಕದಲ್ಲಿ ಸೀತಾಲಕ್ಷ್ಮಿ ಪಾತ್ರ, ಬೆಂಗಳೂರಿನ ಅಂತರ ಕಾಲೇಜು ನಾಟಕ ಸ್ಪರ್ಧೆಗಾಗಿ ‘ಡನ್‌ಲಪ್ ಗರ್ಲ್’ನಲ್ಲೂ ಅವರದು ಹೆಣ್ಣು ಪಾತ್ರ. ಹೀಗೆ ಮೊದ ಮೊದಲು ಅವರಿಗೆ ಸಿಕ್ಕಿದ್ದು ಹೆಣ್ಣು ಪಾತ್ರಗಳೇ! ಏರ್ ಫೋರ್ಸ್ ಅಡ್ಮಿನಿಸ್ಟ್ರೇಟಿವ್ ಕಾಲೇಜಿನಲ್ಲಿ ಸಹಾ ಅಂಬಾಸಿಡರ್ ಪಾತ್ರದಲ್ಲಿ ಅಭಿನಯಿಸಿ ಪ್ರಶಂಸೆ ಪಡೆದರು.
ದೆಹಲಿಯ ಕನ್ನಡ ಭಾರತಿ ಸಂಸ್ಥೆಯಲ್ಲಿ ಬಿ.ವಿ.ಕಾರಂತರ ನಹಿ ನಹಿ ರಕ್ಷತಿ, ಸಿಕ್ಕು, ಎಚ್ಚಮನಾಯಕ, ನಾನೇ ಬಿಜ್ಜಳ ಮುಂತಾದ ನಾಟಕಗಳಲ್ಲಿ ದತ್ತಣ್ಣ ನಟಿಸಿದ್ದರು. ‘ನಾನೇ ಬಿಜ್ಜಳ’ ನಾಟಕದಲ್ಲಿ ಬಿಜ್ಜಳನ ಪಾತ್ರ ದತ್ತಣ್ಣನವರಿಗೆ ಬಹಳ ಖ್ಯಾತಿ ತಂದು ಕೊಟ್ಟ ಪಾತ್ರ. ಹಲವಾರು ಗಣ್ಯರ ಅಪೇಕ್ಷೆಯ ಮೇರೆಗೆ ಅದು ಹಲವು ಬಾರಿ ಮರು ಪ್ರದರ್ಶನಗೊಂಡ ನಾಟಕ. ಎಂ.ಎಸ್.ಸತ್ಯು ರವರ ’ಕುರಿ’ನಾಟಕಕ್ಕೆ ನೇಪಥ್ಯದಲ್ಲಿ ದತ್ತಣ್ಣನವರದು ಪ್ರಮುಖಪಾತ್ರ.
ಬೆಂಗಳೂರಿನಲ್ಲಿ ಸುಧೀಂದ್ರರವರ ‘ಮಳೆ ನಿಲ್ಲುವವರೆಗೂ’, ಸಮುದಾಯದ ‘ಕೊಂದುಕೂಗಿತ್ತು ನೋಡಾ’, ‘ಸಂಕ್ರಾಂತಿ’, ‘ರುಡಾಲಿ’, ‘ಈ ಮುಖದವರು’, ‘ಪುರುಷ್’, ‘ಹಾವು ಏಣಿ’, ‘ರಕ್ತ ಕಲ್ಯಾಣ್’, ‘ನೆರಳು’, ‘ಸಿಂಗಾರವ್ವ ಮತ್ತು ಅರಮನೆ’. ‘ಕುರುಕ್ಷೇತ್ರದಿಂದ ಕಾರ್ಗಿಲ್’ವರೆಗೆ ಹೀಗೆ ಹಲವಾರು ನಾಟಕಗಳಲ್ಲಿನ ಪ್ರಮುಖ ಪಾತ್ರದಿಂದ ದತ್ತಣ್ಣ ಪ್ರಸಿದ್ಧಿ ಪಡೆದರು.
ದತ್ತಣ್ಣನವರು ಸಿನಿಮಾ ರಂಗಕ್ಕೆ ಬಂದದ್ದು ಬಹಳ ತಡವಾಗಿ, ಅಂದರೆ 45 ವರ್ಷ ತುಂಬಿದ ಮೇಲೆ. ಅವರು ಸಿನಿಮಾ ರಂಗಕ್ಕೆ ಬರುವ ಮುಂಚೆ ಏರ್ ಫೋರ್ಸ್‌ನಲ್ಲಿ ಕೆಲಸ ಮಾಡುತ್ತಿದ್ದ ಕಾರಣ ಹೆಚ್ಚಾಗಿ ಬೆಂಗಳೂರಿನಲ್ಲಿರಲ್ಲಿಲ್ಲ. ಭಾರತದ ಇತರ ನಗರಗಳಾದ ಚಂಡೀಗಢ, ದೆಹಲಿ, ಅಂಡಮಾನ್ ಮುಂತಾದೆಡೆ ಇದ್ದರು. 1987ರಲ್ಲಿ ಅವರು ಬೆಂಗಳೂರಿನ ಎಚ್ಎಎಲ್‌ಗೆ ವರ್ಗವಾಗಿ ಬಂದರು. ಟಿ.ಎಸ್. ರಂಗ ಅವರು ಮೊದಲ ಬಾರಿಗೆ 1 ಘಂಟೆ ಅವಧಿಯ ‘ಉದ್ಭವ್’ ಎಂಬ ಸಿನಿಮಾದಲ್ಲಿ ‘ದತ್ತಣ್ಣ’ನವರನ್ನು ಪರಿಚಯಿಸಿದರು. ಅದಾದ ನಂತರ ನಾಗಾಭರಣರ ‘ಆಸ್ಫೋಟ’ ಬಂತು. ಆ ಚಿತ್ರದಲ್ಲಿನ ಖಳನಟನ ಪಾತ್ರಕ್ಕೆ ರಾಷ್ಟ್ರಮಟ್ಟದ ಶ್ರೇಷ್ಠ ಪೋಷಕನಟ ಪ್ರಶಸ್ತಿ ದೊರಕಿತು. ನಂತರ ‘ಶರವೇಗದ ಸರದಾರ’, ‘ಮಾಧುರಿ’ ಮುಂತಾದ ಚಲನಚಿತ್ರಗಳಲ್ಲಿ ನಟಿಸಿದರು. ಆಮೇಲೆ ‘ವೈದ್ಯೋ ನಾರಾಯಣೋ ಹರಿ’ ಎಂಬ ಧಾರವಾಹಿ ಮೂಲಕ ದೂರದರ್ಶನಕ್ಕೂ ಕಾಲಿಟ್ಟರು. ಆಗ ಕೆಲಸದಲ್ಲಿದ್ದುದರಿಂದ ಹೆಚ್ಚಾಗಿ ನಟಿಸಲಾಗುತ್ತಿರಲ್ಲಿಲ್ಲ. ಅಲ್ಲಲ್ಲಿ ಒಂದೊಂದು ಚಿತ್ರದಲ್ಲಿ ಅಭಿನಯಿಸುತ್ತಿದ್ದರು. 1994ರಲ್ಲಿ ಕೆಲಸಕ್ಕೆ ರಾಜಿನಾಮೆ ನೀಡಿದ ನಂತರದಲ್ಲಿ ನಿರಂತರವಾಗಿ ಸಿನಿಮಾ, ನಾಟಕ, ಟಿವಿ ಮತ್ತು ರೇಡಿಯೋಗಳಲ್ಲಿ ನಟಿಸುತ್ತಾ ಸಾಗಿದ್ದಾರೆ.
ದತ್ತಣ್ಣನವರು ಅತ್ಯಂತ ವ್ಯಾಪಕವಾಗಿ ಕನ್ನಡಿಗರ ಮನ ಸೆಳೆದದ್ದು ‘ಮಾಯಾ ಮೃಗ’ ಧಾರಾವಾಹಿಯ ಶಾಸ್ತ್ರಿಗಳಾಗಿ. ಈಗಲೂ ದತ್ತಣ್ಣನವರೆಂದರೆ ಮನಸ್ಸಿಗೆ ಅತ್ಯಂತ ಆಪ್ತವಾಗಿ ನಿಲ್ಲುವ ಪಾತ್ರವದು. ತಮ್ಮ ಪಾತ್ರಗಳಿಗೆ ಪರಕಾಯ ಪ್ರವೇಶ ಮಾಡುವ ಅಪ್ಪಟ ಕಲಾವಿದರು ದತ್ತಣ್ಣ. ‘ಆಸ್ಫೋಟ’ದ ಖಳ, ‘ಅತಿಥಿ’ಯ ಅಸಹಾಯಕ ವೈದ್ಯ, ‘ಮುನ್ನುಡಿ’ಯ ಹುಡುಗಿ ಹುಡುಕ, ‘ಉಲ್ಟಾ ಪಲ್ಟಾ’ದ ತಲೆ ಚಚ್ಚಿಕೊಳ್ಳುವ ಇನ್ಸ್‌ಪೆಕ್ಟರು...,, ‘ಮುಸ್ಸಂಜೆ’ಯ ಶೇಷಣ್ಣ, ‘ರಾಮಾ ಶಾಮಾ ಭಾಮಾ’ದ ರಮೇಶನ ತಂದೆ, ‘ಬೆಟ್ಟದ ಜೀವ’ದ ಗೋಪಾಲಯ್ಯ ಮತ್ತು ಅವರಿಗೆ ರಾಷ್ಟ್ರ ಪ್ರಶಸ್ತಿಗಳಲ್ಲಿ ವಿಶೇಷ ಗೌರವ ಹಾಗೂ ಅಂತರರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಗೌರವ ತಂದ 'ಭಾರತ್ ಸ್ಟೋರ್ಸ್' ಚಿತ್ರದಲ್ಲಿ ಅಂಗಡಿಯ ಮಾಲೀಕ ಗೋವಿಂದ ಶೆಟ್ಟರ ಪಾತ್ರ, ಹೀಗೆ ತರಾವರಿ ಪಾತ್ರಗಳಿಗೆ ಜೀವ ತುಂಬಿರುವ ದತ್ತಣ್ಣ ಅವರು ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನಸೆಳೆದ ಗಮನಾರ್ಹ ಪ್ರತಿಭೆ. ಕಿರುತೆರೆಯಲ್ಲಿ ತೀರಾ ಗಂಭೀರ ಪಾತ್ರಗಳಿಂದ ಹಿಡಿದು 'ಡಂಡಂ ಡಿಗಡಿಗ’ ದಂತಹ ಧಾರಾವಾಹಿಗಳವರೆಗೆ ಎಲ್ಲ ರೀತಿಯ ಪಾತ್ರಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡವರು ಅವರು. ಇತ್ತೀಚಿನ ವರ್ಷದಲ್ಲಿ ಅವರು ಕಲಾತ್ಮಕ ಚಿತ್ರಗಳೇ ಅಲ್ಲದೆ ಜನಪ್ರಿಯ ವಾಹಿನಿ ಚಿತ್ರಗಳಲ್ಲೂ ಅಲ್ಲಲ್ಲಿ ಅಭಿನಯಿಸಿದ್ದಿದೆ.
ಗಿರೀಶ್ ಕಾಸರವಳ್ಳಿ, ಜಿ.ವಿ. ಐಯ್ಯರ್, ಬಿ.ವಿ.ಕಾರಂತ್, ಶೇಷಾದ್ರಿ, ಸೀತಾರಾಂ, ನಾಗಾಭರಣ, ಟಿ.ಎಸ್. ರಂಗ, ನಾಗತಿಹಳ್ಳಿ ಚಂದ್ರಶೇಖರ್ ಮುಂತಾದ ಪ್ರಖ್ಯಾತರ ನಿರ್ದೇಶನಗಳಲ್ಲಿ ದತ್ತಣ್ಣ ಅಭಿನಯಿಸಿದ್ದಾರೆ. ದತ್ತಣ್ಣ ಅವರು ಅಭಿನಯಿಸಿರುವ ಈ ಮಹಾನ್ ನಿರ್ದೇಶಕರ ಬಹುತೇಕ ಚಿತ್ರಗಳು ರಾಷ್ಟ್ರ ಪ್ರಶಸ್ತಿಗಳಿಸಿವೆ ಎಂಬುದು ಗಮನಾರ್ಹ. ಆಸ್ಫೋಟ, ಕ್ರೌರ್ಯ, ಕೊಟ್ರೇಶಿ ಕನಸು, ಚೈತ್ರದ ಚಿಗುರು, ಚಿನ್ನಾರಿ ಮುತ್ತ, ಉಲ್ಟಾ ಪಲ್ಟಾ, ಮುನ್ನುಡಿ, ಮುಸ್ಸಂಜೆ, ಬೆಟ್ಟದ ಜೀವ, ಭಾರತ್ ಸ್ಟೋರ್ಸ್, ವಿದಾಯ ಮುಂತಾದ ಪಾತ್ರಗಳು ದತ್ತಣ್ಣನವರಿಗೆ ಖುಷಿ ಕೊಟ್ಟಿವೆ. ಮುನ್ನುಡಿ ಚಿತ್ರದ ಅಭಿನಯಕ್ಕೆ ದತ್ತಣ್ಣನವರಿಗೆ ರಾಷ್ಟ್ರಪ್ರಶಸ್ತಿ ದೊರಕಿದೆ. 2012 ವರ್ಷದಲ್ಲಿ ರಾಷ್ಟ್ರೀಯ ಪ್ರಶಸ್ತಿಗಳಲ್ಲಿ ಪ್ರಾದೇಶಿಕ ಪ್ರಶಸ್ತಿ ಪಡೆದ ಪಿ. ಶೇಷಾದ್ರಿಯವರ ನಿರ್ದೇಶನದ ‘ಭಾರತ್ ಸ್ಟೋರ್ಸ್’ ಚಿತ್ರದಲ್ಲಿನ ಅವರ ಅಭಿನಯಕ್ಕೆ ತೀರ್ಪುಗಾರರ ವಿಶೇಷ ಮೆಚ್ಚುಗೆಯ ಗೌರವ ಸಂದಿದೆ. ಆಸ್ಪೋಟ ಚಿತ್ರಕ್ಕೆ ಅವರಿಗೆ ಶ್ರೇಷ್ಠ ನಟರೆಂಬ ರಾಜ್ಯಪ್ರಶಸ್ತಿ ಮತ್ತು ಹಲವಾರು ಬಾರಿ ಪೋಷಕ ನಟ ರಾಜ್ಯ ಪ್ರಶಸ್ತಿಗಳೂ ಅಲ್ಲದೆ ಅನೇಕ ಸಂಘಸಂಸ್ಥೆಗಳ ಪ್ರಶಸ್ತಿ ಗೌರವಗಳೂ ಸಂದಿವೆ.
ಹಿಂದೆ ಹಲವು ಬಾರಿ ಹಿಂದಿ ಚಿತ್ರರಂಗದಲ್ಲಿ ನಟಿಸಿದ್ದ ದತ್ತಣ್ಣನವರು ಇತ್ತೀಚಿನ ವರ್ಷದ ಪ್ರಖ್ಯಾತ 'ಮಿಷನ್ ಮಂಗಲ್' ಚಿತ್ರದಲ್ಲಿ ವಿಜ್ಞಾನಿಗಳಾಗಿ ನಟಿಸಿದರು. ಅಕ್ಷಯ್ ಕುಮಾರ್ ಅವರಂತೂ ಇವರನ್ನು ಆಪ್ತವಾಗಿ ಕಂಡು ಎಲ್ಲರ ಬಳಿಯೂ ಇವರನ್ನು ಮೂರು ಬಾರಿ ರಾಷ್ಟ್ರಪ್ರಶಸ್ತಿ ಪಡೆದ ಮಹನೀಯರೆಂದು ಪರಿಚಯಿಸುತ್ತಿದ್ದರು. ಇಲ್ಲಿ ಸಲ್ಲುವವರು ಅಲ್ಲಿಯೂ, ಎಲ್ಲೆಲ್ಲಿಯೂ ಸಲ್ಲುವರಯ್ಯ🙏
ತಮ್ಮ ಕಾಯಕವನ್ನು ಗೌರವಿಸುವವರನ್ನು ಇಡೀ ಸಮಾಜವೇ ಗೌರವಿಸುತ್ತದೆ. ಹಾಗಾಗಿ ದತ್ತಣ್ಣನವರು ಎಲ್ಲೆಡೆ ಗೌರವಾನ್ವಿತರು. ಇಂತಹ ಕಲಾವಿದರು ಕಲಾರಂಗದಲ್ಲಿ ಇನ್ನೂ ಇರುವುದರಿಂದಲೇ ಕಲಾರಂಗ ಇನ್ನೂ ತನ್ನ ಮಹತ್ವವನ್ನು ಅಲ್ಲಲ್ಲಿ ಉಳಿಸಿಕೊಂಡಿದೆ. ಈ ಮಹಾನ್ ಕಲಾವಿದರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭ ಹಾರೈಕೆಗಳನ್ನು ಸಲ್ಲಿಸೋಣ.
On the birth day of our pride artiste Dattatreya H G Sir 🙏
ಕಾಮೆಂಟ್‌ಗಳು