ಬಿ.ವಿ. ದಕ್ಷಿಣಾ ಮೂರ್ತಿ
ಬಿ.ವಿ. ದಕ್ಷಿಣಾ ಮೂರ್ತಿ
ಬಿ.ವಿ. ದಕ್ಷಿಣಾ ಮೂರ್ತಿ ಅವರು ಆದರ್ಶ ಶಿಕ್ಷಕರು, ಶಿಕ್ಷಣ ತಜ್ಞರು, ಕಾದಂಬರಿಕಾರರು, ವಾಗ್ಮಿಗಳು ಮತ್ತು ಕ್ರಿಕೆಟ್ ಪಟುಗಳಾಗಿ ಪ್ರಸಿದ್ಧರಾದವರು.
ದಕ್ಷಿಣಾ ಮೂರ್ತಿ ಅವರು ತುಮಕೂರು ಜಿಲ್ಲೆಯ ಸಿರಾ ತಾಲ್ಲೂಕಿನ ಬ್ರಹ್ಮಸಂದ್ರ ಎಂಬ ಗ್ರಾಮದಲ್ಲಿ 1925ರ ಜನವರಿ 6ರಂದು ಜನಿಸಿದರು. ಸೀಬೀ ಹೋಬಳಿಯಿಂದ ಬ್ರಹ್ಮಸಂದ್ರ ಕೇವಲ ಎರಡು ಮೈಲಿ ದೂರ. ಅವರ ತಂದೆ ಬಿ . ವೆಂಕಟ ನಾರಾಯಣ ಶಾಸ್ತ್ರಿಗಳು. ತಾಯಿ ಸೀತಮ್ಮನವರು. ಸಂಪ್ರದಾಯಸ್ಥ ಕುಟುಂಬದಿಂದ ಬಂದ ಇವರ ತಂದೆಯವರು ಗ್ರಾಮದ ಪುರೋಹಿತರಾಗಿದ್ದರು. ದಕ್ಷಿಣಾ ಮೂರ್ತಿಯವರು ಎಂಟು ಮಕ್ಕಳ ತುಂಬು ಕುಟುಂಬದಲ್ಲಿ ಕೊನೆಯ ಮಗ. ಇವರ ಧರ್ಮಪತ್ನಿ ವಿಶಾಲಾಕ್ಷಿ ದಕ್ಷಿಣಾ ಮೂರ್ತಿಯವರು ಕನ್ನಡದ ಖ್ಯಾತ ಲೇಖಕಿ. ಈ ಮಹಾನ್ ದಂಪತಿಯ ಸುಪುತ್ರಿ ಡಾ. ಮಂಗಳಾ ಪ್ರಿಯದರ್ಶಿನಿ DrMangala Priyadarshini ಅವರೂ ಶಿಕ್ಷಣ ಮತ್ತು ಸಾಹಿತ್ಯಲೋಕದ ಮಹತ್ವದ ಸಾಧಕಿ.
ದಕ್ಷಿಣಾ ಮೂರ್ತಿಯವರ ವಿದ್ಯಾಭ್ಯಾಸ ಬ್ರಹ್ಮಸಂದ್ರದ ಸರ್ಕಾರೀ ಶಾಲೆಯಲ್ಲಿ ಪ್ರಾರಂಭವಾದರೆ, ಪ್ರೌಢಶಾಲಾ ಹಾಗೂ ಇಂಟರ್ ಮೀಡಿಯಟ್ ಶಿಕ್ಷಣ, ತುಮಕೂರಿನ ಸರ್ಕಾರೀ ಪ್ರೌಢಶಾಲೆಯಲ್ಲಾಯಿತು. ನಂತರ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಬಿ.ಎಸ್ಸಿ ಪದವಿ ಪಡೆದು ಮುಂದೆ ಮೈಸೂರಿನಲ್ಲಿ ವ್ಯಾಸಂಗ ಮಾಡಿ ಬಿ.ಎಡ್ ಪದವಿಯನ್ನು ಗಳಿಸಿದರು.
ದಕ್ಷಿಣಾಮೂರ್ತಿ ಅವರು ಗಾಂಧೀಜಿ , ಆನಿಬೆಸೆಂಟ್, ರಾಮಕೃಷ್ಣ ಪರಮಹಂಸರು , ವಿವೇಕಾನಂದರ ಪ್ರಭಾವಗಳಿಂದ ಆದರ್ಶ ವಿದ್ಯಾಸಂಸ್ಥೆಯಾಗಿ ರೂಪುಗೊಂಡಿದ್ದ ಬಸವನಗುಡಿಯ ನ್ಯಾಷನಲ್ ಹೈಸ್ಕೂಲಿಗೆ ವಿಜ್ಞಾನದ ಅಧ್ಯಾಪಕರಾಗಿ 1948 ರಲ್ಲಿ ಸೇರಿದರು. ಅದೇ ಸಂಸ್ಥೆಯಲ್ಲಿ ಅಧ್ಯಾಪಕರಾಗಿ, ಮುಖ್ಯೋಪಾಧ್ಯರಾಗಿ ನಲವತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿದರು. ಅತ್ಯುತ್ತಮ ಅಧ್ಯಾಪಕರಾಗಿದ್ದ ಅವರು ವಿದ್ಯಾರ್ಥಿ ವಲಯದಲ್ಲಿ ಬಿ.ವಿ.ಡಿ. ಎಂದೇ ಜನಪ್ರಿಯರಾಗಿದ್ದರು.
ದಕ್ಷಿಣಾ ಮೂರ್ತಿಯವರು ತಮ್ಮ ಪ್ರೌಢಶಾಲಾ ದಿನಗಳಿಂದಲೂ ಒಳ್ಳೆಯ ಕ್ರಿಕೆಟ್ ಆಟಗಾರರಾಗಿದ್ದು, ಬೆಂಗಳೂರಿನ ಸೆಂಟ್ರಲ್ ಕಾಲೇಜು ಸೇರಿದ ನಂತರ ವಾರ್ಸಿಟಿ ಆಟಗಾರರಾಗಿ ಅನೇಕ ಟೂರ್ನಿ ಪಂದ್ಯಗಳನ್ನಾಡಿದ್ದರು. ಅಂತರ ವಾರ್ಸಿಟಿ ಪಂದ್ಯ ಒಂದರಲ್ಲಿ ಶತಕ ಬಾರಿಸಿ, ‘ಪಂದ್ಯ ಪುರುಷೋತ್ತಮ‘ರಾಗಿ ಅಂದಿನ ದಿನ ಪತ್ರಿಕೆಗಳಲ್ಲಿ ಫೋಟೋ ಸಮೇತ ಅಭಿನಂದನೆಗಳಿಗೆ ಪಾತ್ರರಾಗಿದ್ದರು. ಅವರ ವಿದ್ಯಾರ್ಥಿಗಳೂ, ಖ್ಯಾತ ಕ್ರಿಕೆಟಿಗರೂ ಆದ ಬಿ . ಎಸ್ . ಚಂದ್ರ ಶೇಖರ್ ಹಾಗೂ ಇ. ಎ . ಎಸ್ . ಪ್ರಸನ್ನ ಅವರುಗಳು ತಮ್ಮ ಗುರುಗಳೊಂದಿಗೆ ಕ್ರಿಕೆಟ್ ಆಡುತ್ತಿದ್ದುದನ್ನು ಸ್ಮರಿಸುತ್ತಾರೆ.
ಬಿ.ವಿ.ಡಿ. ಅವರು ವಿಜ್ಞಾನದ ಅಧ್ಯಾಪಕರಾದರೂ, ಅವರಿಗೆ ಕನ್ನಡ ಭಾಷೆ, ಸಾಹಿತ್ಯದಲ್ಲಿ ಅಪಾರವಾದ ಒಲವಿತ್ತು. ಅವರು ಕನ್ನಡ, ಇಂಗ್ಲೀಷ್ - ಎರಡೂ ಭಾಷೆಗಳಲ್ಲಿ ಉತ್ತಮ ವಾಗ್ಮಿಗಳು ಮತ್ತು ಬರಹಗಾರರಾಗಿದ್ದರು. ಕರ್ನಾಟಕ ರಾಜ್ಯ ಸರ್ಕಾರದ ಶಿಕ್ಷಣ ಇಲಾಖೆ, ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ನಿಗದಿ ಪಡಿಸಿದ್ದ ರೇಖಾ ಗಣಿತ, ಬೀಜ ಗಣಿತ, ಭೌತ ಶಾಸ್ತ್ರಕ್ಕೆ ಸಂಬಂಧಿಸಿದಂತೆ ಅವರು ರಚಿಸಿದ ಹನ್ನೊಂದು ಪುಸ್ತಕಗಳು ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕಗಳಾಗಿದ್ದವು.
ಶಿಕ್ಷಣ ಕ್ಷೇತ್ರದಲ್ಲಿ ತಜ್ಞರಾಗಿದ್ದ ಬಿ. ವಿ. ದಕ್ಷಿಣಾ ಮೂರ್ತಿ ಅವರು ಅನೇಕ ರಾಷ್ಟ್ರಮಟ್ಟದ, ರಾಜ್ಯಮಟ್ಟದ ಕಮ್ಮಟಗಳಲ್ಲಿ ಮಾರ್ಗದರ್ಶಕರಾಗಿ, ಸಲಹೆಗಾರರಾಗಿ, ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು. ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸಿದ್ದರು. ಬಡ ವಿದ್ಯಾರ್ಥಿಗಳಿಗೆ ಶಿಕ್ಷಣದ ಅವಕಾಶವನ್ನು ಕಲ್ಪಿಸುವ ನಿಟ್ಟಿನಲ್ಲಿ ಉಚಿತವಾಗಿ ಬೋಧನೆ ಮಾಡಿದ್ದರು . ಬಸವನಗುಡಿಯ ಥಿಯಸಾಫಿಕಲ್ ಸೊಸೈಟಿಯ ಶಂಕರಯ್ಯ ಹಾಲಿನಲ್ಲಿ ಅವರು ನಡೆಸುತ್ತಿದ್ದ ಉಚಿತ ತರಗತಿಗಳು ಉಲ್ಲೇಖಾರ್ಹವಾದುದು. ಗಾಂಧೀ ಬಜಾರಿನಲ್ಲಿ ವಿ. ಅಣ್ಣಯ್ಯನವರೊಂದಿಗೆ ‘ಯುವಕ ಸಂಘ‘ ವನ್ನು ಸ್ಥಾಪಿಸಿ ಹತ್ತಾರು ವರ್ಷಗಳ ಕಾಲ SSLC ವಿದ್ಯಾರ್ಥಿಗಳಿಗೆ ಉಚಿತವಾಗಿ ಬೋಧಿಸುತ್ತಿದ್ದು, ಶಂಕರಯ್ಯ ಹಾಲಿನ ಸಭಾಂಗಣ ಭರ್ತಿಯಾಗಿ ಸಾವಿರಾರು ವಿದ್ಯಾರ್ಥಿಗಳು ಬೀದಿಯಲ್ಲಿ ನಿಂತು ಪಾಠ ಕೇಳಿ ಉತ್ತೀರ್ಣರಾಗುತ್ತಿದ್ದುದು, ‘ಯುವಕ ಸಂಘ’ ದ ಇತಿಹಾಸದ ಒಂದು ಸುಂದರವಾದ ಅಧ್ಯಾಯವೇ ಸರಿ.
ಬಿ.ವಿ.ಡಿ. ಯವರು ನಿವೃತ್ತರಾದಾಗ ಒಳ್ಳೆಯ ಅಧ್ಯಾಪಕ, ಉತ್ತಮ ಆಡಳಿತಗಾರ, ಸಂಘಟಕ , ಜನಾನುರಾಗಿಯಾಗಿದ್ದ ಅವರನ್ನು ಬಿಟ್ಟುಕೊಡಲು ಸಂಸ್ಥೆ ಸಿದ್ಧವಿರಲಿಲ್ಲ. ನ್ಯಾಷನಲ್ ವಿದ್ಯಾ ಸಂಸ್ಥೆಯ ಅಧ್ಯಕ್ಷರಾಗಿದ್ದ ಡಾ. ಎಚ್. ನರಸಿಂಹಯ್ಯನವರಿಂದ ನ್ಯಾಷನಲ್ ಎಜುಕೇಷನ್ ಸೊಸೈಟಿಯ ಗೌರವ ಕಾರ್ಯದರ್ಶಿಗಳಾಗಬೇಕೆಂಬ ಆಹ್ವಾನ ಸ್ವೀಕರಿಸಿ, ಮುಖ್ಯೋಪಾಧ್ಯ ಹುದ್ದೆಯಿಂದ ನಿವೃತ್ತರಾದ ಮಾರನೆಯ ದಿನದಿಂದಲೇ ನ್ಯಾಷನಲ್ ಎಜುಕೇಷನ್ ಸೊಸೈಟಿಯ ಗೌರವ ಕಾರ್ಯದರ್ಶಿಗಳಾಗಿ ಇಪ್ಪತ್ತೆರಡು ವರ್ಷಗಳ ಕಾಲ ನಿರಂತರವಾಗಿ ಸಂಸ್ಥೆಗೆ ಸೇವೆ ಸಲ್ಲಿಸಿದ ಗೌರವ ಅವರದು. ಡಾ. ಎಚ್. ನರಸಿಂಹಯ್ಯ ಹಾಗೂ ಬಿ.ವಿ. ದಕ್ಷಿಣಾ ಮೂರ್ತಿ ಜೋಡಿಯ ನೇತೃತ್ವದಲ್ಲಿ ನಾಲ್ಕು ಕಾಲೇಜುಗಳು, ನಾಲ್ಕು ಶಾಲೆಗಳು ಸಾಕಷ್ಟು ಅಭಿವೃದ್ಧಿಗೊಂಡವು . ಈ ಅವಧಿಯಲ್ಲಿ ನಗರದ ಹೊರವಲಯದ ಸುಬ್ರಮ್ಹಣ್ಯ ಪುರದಲ್ಲಿ ಒಂದು ಪ್ರೌಢ ಶಾಲೆ , ಹೊಸೂರು ಗ್ರಾಮಾಂತರ ಪ್ರದೇಶಗಳಾದ ಎಲ್ದೂರು, ಮುಡಿಯನೂರುಗಳಲ್ಲಿ ನ್ಯಾಷನಲ್ ವಿದ್ಯಾ ಸಂಸ್ಥೆಗಳು ಸ್ಥಾಪಿತವಾದವು .
ಕನ್ನಡ ಸಾಹಿತ್ಯದ ಬಗೆೆಗೆ ಅಪಾರ ಒಲವಿದ್ದ ಬಿವಿಡಿ ಅವರು, 1950 ರ ದಶಕಗಳಲ್ಲಿಯೇ 'ಅವಳೋ - ಇವಳೋ', 'ಮುಳುಗು - ತೇಲು‘ , ‘ಹೊಸ ವಸಂತ', ‘ನಾನೂ ವಿದ್ಯಾವಂತಳಾದೆ ‘ ಎಂಬ ಕಾದಂಬರಿಗಳನ್ನು ರಚಿಸಿದ್ದು , ಅವು ಆ ಕಾಲದಲ್ಲಿಯೇ ಅವರಿಗೆ ಜನಪ್ರಿಯತೆಯನ್ನು ತಂದುಕೊಟ್ಟಿದ್ದವು. ‘ಮಮತೆಯ ಸುಳಿ‘ ಯಲ್ಲಿ ಅವರ ಸಣ್ಣ ಕಥಾ ಸಂಕಲನವಾಗಿದ್ದು , ‘ಪರಿವರ್ತನೆ‘ - ಅವರ ಅಧ್ಯಾಪಕ ಬದುಕಿಗೆ ಸಂಬಂಧಿಸಿದ ಅನುಭವ ಕಥನವಾಗಿದ್ದು , ‘ಲೋಕ ಶಿಕ್ಷಣ ಸಂಸ್ಥೆ’ಯ ಪ್ರಶಸ್ತಿಗೆ ಭಾಜನವಾಯಿತು .
ಬಿ . ವಿ . ದಕ್ಷಿಣಾ ಮೂರ್ತಿಯವರು ಸಾವಿರಾರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದ್ದು , ಅವರ ವಿದ್ಯಾರ್ಥಿ ಸಮುದಾಯ ಭಾರತದಿಂದಾಚೆಗೆ ವಿದೇಶಗಳಲ್ಲೂ ಹಬ್ಬಿದ್ದಾರೆ. ಶಿಸ್ತಿನ ಸಿಪಾಯಿ, ಅಧ್ಯಾತ್ಮವಾದಿ , ಭಗವದ್ಗೀತಾ ತತ್ತ್ವಗಳ ಅನುಯಾಯಿಗಳಾಗಿದ್ದ ಶ್ರೀಯುತರು ಅಪಾರ ವಿದ್ಯಾರ್ಥಿಗಳ ಗೌರವಕ್ಕೆ ಪಾತ್ರರಾದವರು. ಅವರ ಪ್ರತಿಭೆ, ಪರಿಶ್ರಮಗಳ ಕಾರಣಗಳಿಂದಾಗಿ ಅನೇಕ ಪ್ರಶಸ್ತಿ, ಗೌರವಗಳು, ಸನ್ಮಾನಗಳು ಅವರನ್ನರಸಿ ಬಂದವು. ಮುಖ್ಯವಾಗಿ ಅವರು ರಾಷ್ಟ್ರಮಟ್ಟದಲ್ಲಿ ‘ಅತ್ಯುತ್ತಮ ಶಿಕ್ಷಕ ‘ ಪ್ರಶಸ್ತಿಗೆ ಭಾಜನರಾಗಿದ್ದರೆ, ರಾಜ್ಯ ಮಟ್ಟದಲ್ಲೂ ‘ಅತ್ಯುತ್ತಮ ಶಿಕ್ಷಕ‘ ಪ್ರಶಸ್ತಿಗೆ ಭಾಜನರಾಗಿದ್ದರು .
ಶಿಕ್ಷಣ ಕ್ಷೇತ್ರದಲ್ಲಿ ಆದರ್ಶ ಶಿಕ್ಷಕರಾಗಿ, ಸೃಜನ ಶೀಲ ಲೇಖಕರಾಗಿ, ವಾಗ್ಮಿಗಳಾಗಿ, ಚಿಂತಕರಾಗಿ, ಉತ್ತಮ ಆಡಳಿತಗಾರರಾಗಿ ತಮ್ಮ ಮಾನವೀಯ ಗುಣಗಳು, ವಿದ್ಯಾರ್ಥಿ ಪ್ರೇಮಕ್ಕೆ ಇನ್ನೊಂದು ಹೆಸರಾಗಿ ವಿದ್ಯಾ ಸೇವೆಗೆ ತಮ್ಮ ಬದುಕನ್ನು ಮುಡುಪಾಗಿಟ್ಟ ಶ್ರೀ ಬಿ . ವಿ . ದಕ್ಷಿಣಾ ಮೂರ್ತಿಯವರು 2004ರ ಮೇ 18ರಂದು ಈ ಲೋಕವನ್ನು ಅಗಲಿದ ಪ್ರಾಥಃಸ್ಮರಣೀಯರಾಗಿದ್ದಾರೆ.
ಕೃತಜ್ಞತೆಗಳು: ಡಾ. ಮಂಗಳಾ ಪ್ರಿಯದರ್ಶಿನಿ 🌷🙏🌷
On the birth anniversary Great Educationist, scholar, writer and cricketer B. V. Dakshina Murthy 🌷🙏🌷
ಕಾಮೆಂಟ್‌ಗಳು