ಉಮರ್ ಖಯ್ಯಾಮ್
ಉಮರ್ ಖಯ್ಯಾಮ್
ಇಂದು ಮಹಾನ್ ದಾರ್ಶನಿಕ ಕವಿ ಉಮರ್ ಖಯ್ಯಾಮ್ ಹುಟ್ಟಿದ ದಿನ ಎಂದು ನೋಡಿದೆ. ಇರಬಹುದು. ಇಲ್ಲದಿರಲೂ ಬಹುದು. ಮಹಾನ್ ದಾರ್ಶನಿಕರನ್ನು ನೆನೆಯಲು ಹುಟ್ಟಿದ ದಿನ ಎಂಬುದು ಒಂದು ನೆಪವಷ್ಟೇ.
ಉಮರ್ ಖಯ್ಯಾಮ್ ಅವರು ರುಬಾಯ್ಯತ್ ಎಂದು ಪ್ರಸಿದ್ಧವಾಗಿರುವ ರುಬಾಯಿ ಛಂದಸ್ಸಿನ ಚೌಪದಿಗಳ ಮೂಲಕ ಪ್ರಸಿದ್ಧರಾದ ಕವಿ. ಅವರು ಪರ್ಷಿಯ ದೇಶದವರು. ಫಿಯಾತ್ ಉದ್ದೀನ್ ಅಬುಲ್ ಫಾತ್ ಒಮರ್ ಬಿನ್ ಇಬ್ರಾಹಿಂ ಅಲ್ ಖಯ್ಯಾಮಿ ಎಂದು ಇವರ ಪೂರ್ಣ ಹೆಸರು. ಆದರೆ ಉಮರ್ ಖಯ್ಯಾಮ್ ಎಂದೇ ಆತ ಸುಪ್ರಸಿದ್ಧರು.
ಉಮರ್ ಖಯ್ಯಾಮ್ ಖೊರಾಸಾನ್ ಪ್ರಾಂತ್ಯಕ್ಕೆ ಸೇರಿದ ನೀಷಾಪುರ ಎನ್ನುವ ಗ್ರಾಮದಲ್ಲಿ ಜನ್ಮ ತಾಳಿದರು. ಇವರ ಕಾಲದ ವಿಚಾರದಲ್ಲಿ ತಜ್ಞರಲ್ಲಿ ಭಿನ್ನಾಭಿಪ್ರಾಯಗಳಿವೆ. ಹಲವರ ಪ್ರಕಾರ ಇವರು 1015 ಮತ್ತು 1020ರ ಮಧ್ಯೆ ಜನಿಸಿ 1123 ರ ವರೆಗೂ ಜೀವಿಸಿದ್ದರೆಂದೂ ಮತ್ತೆ ಹಲವರ ಪ್ರಕಾರ 1050 ರಲ್ಲಿ ಜನಿಸಿ 1132 ವರೆಗೂ ಇದ್ದರೆಂದೂ ತಿಳಿದುಬರುತ್ತದೆ.
ಉಮರ್ ಗುಡಾರಗಳನ್ನು (ಡೇರೆ) ಮಾಡುವವರ ಮನೆತನಕ್ಕೆ ಸೇರಿದವರು. ಖಯ್ಯಾಮ್ ಎಂದರೆ ಗುಡಾರವೆಂದರ್ಥ. ಉಮರ್ ಇದರಿಂದಾಗಿ ಉಮರ್ ಖಯ್ಯಾಮ್ ಎಂದೇ ಆದರು.
ಚಿಕ್ಕಂದಿನಿಂದಲೇ ಬುದ್ಧಿ ಸಂಪನ್ನರಾದ ಉಮರ್, ಕವಿ ಮಾತ್ರ ಆಗಿರದೆ ಜ್ಯೋತಿಷ್ಯ, ಬೀಜಗಣಿತ, ಕ್ಷೇತ್ರಗಣಿತ, ಭೌತವಿಜ್ಞಾನದಲ್ಲೂ ಪಾರಂಗತರಾಗಿದ್ದರು. ಅಂತಃಸ್ಫೂರ್ತಿಯನ್ನು ಅಪಾರವಾಗಿ ಪಡೆದಿದ್ದ ಇವರು ದಾರ್ಶನಿಕರಾಗಿಯೂ ಇದ್ದು ಸೂಫಿಗಳಂತೆ ಅನುಭಾವಿಯೂ ಆಗಿದ್ದರು.
ಉಮರ್ ಖಯಾಮ್ ಎಷ್ಟು ವಿದ್ವಾಂಸರಾಗಿದ್ದರೋ ತಮ್ಮ ಜೀವನಕ್ರಮದಲ್ಲಿ ಅಷ್ಟೇ ಸರಳವಾಗಿಯೂ ಅನಾಸಕ್ತರಾಗಿಯೂ ಇದ್ದರಂತೆ. ಅಧಿಕಾರಕ್ಕೆ ಬಂದ ಬಾಲ್ಯಸ್ನೇಹಿತ ನಿಜಾಮ್ ಉಲ್ ಮುಲ್ಕ್‌ನು ಮೊದಲು ಮಾಡಿಕೊಂಡಿದ್ದ ಮಾತಿನ ಪ್ರಕಾರ ಉಮರರಿಗೆ ಪದವಿ, ಬಿರುದು, ಧನ ಇತ್ಯಾದಿ ನೀಡಲು ಬಂದಾಗ ಅವೆಲ್ಲವನ್ನೂ ನಿರಾಕರಿಸಿ ರಾಜ್ಯದ ಯಾವುದೋ ಒಂದು ಮೂಲೆಯಲ್ಲಿ ನೆಲೆಸಿಕೊಂಡು ಜ್ಞಾನಸಂಪತ್ತನ್ನು ಜನರಲ್ಲಿ ಹರಡಲು ಬೇಕಾದ ಸೌಕರ್ಯಗಳನ್ನು ಮಾಡಿಕೊಟ್ಟರೆ ಸಾಕೆಂದು ಕೇಳಿಕೊಂಡರಂತೆ.
ಉಮರರ ಕೃತಿಗಳಲ್ಲಿ ಜೀಝ ಮಲ್ಲಿಕ್ಷಾಹಿ ಎನ್ನುವ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಟಿಪ್ಪಣಿಗಳೂ ಪ್ರಕಟಗೊಂಡಿದ್ದು ವಿದ್ವಾಂಸರಿಂದ ಮನ್ನಣೆ ಪಡೆದಿವೆ. ಹಾಗೆಯೇ ಬೀಜಗಣಿತದ ಮೇಲಿನ ಕೃತಿ ಇವರ ಬುದ್ಧಿಶಕ್ತಿಯ ಅಳತೆಗೋಲಾಗಿದೆಯೆಂದು ಹೇಳುತ್ತಾರೆ. ಯೂಕ್ಲಿಡರ ಕ್ಷೇತ್ರಗಣಿತದ ನಿರೂಪಣೆಗಳಲ್ಲಿರುವ ತೊಡಕುಗಳು ಎಂಬ ಗ್ರಂಥ ಉಮರರಿಗೆ ಅಪಾರ ಕೀರ್ತಿಯನ್ನು ತಂದಿತ್ತು. ಎಲ್ಲದಕ್ಕಿಂತ ಹೆಚ್ಚಾಗಿ ಇವರ ಖ್ಯಾತಿ ಉಳಿದಿರುವುದು ಇವರ ಕವನಗುಚ್ಛದಿಂದ.
ರುಬಾಯತ್ ಎನ್ನುವುದು ನಾಲ್ಕು ಪಾದಗಳುಳ್ಳ ಸಣ್ಣ ಪದ್ಯ. ಮೂರನೆ ಪಾದವನ್ನು ಬಿಟ್ಟರೆ ಉಳಿದ ಪಾದಗಳ ಅಂತ್ಯಾಕ್ಷರಗಳು ಪ್ರಾಸಬದ್ಧವಾಗಿರುವ ಕವಿತಾರಚನೆ. ಈ ರೀತಿಯ ಪದ್ಯಗಳನ್ನು ಪರ್ಷಿಯದಲ್ಲಿ ಜಾರಿಗೆ ತಂದವರು ಷೇಕ್ ಅಬುಲ್ ಸೈಯದ್ ಬಿನ್ ಅಬುಲ್ ಖಯಿರ್ ಎನ್ನುವ ಸೂಫಿ. ಈ ರಚನೆ ಸೂಕ್ಷ್ಮರೀತಿಯ ಭಾವಪ್ರಕಾಶಕ್ಕೆ ಅನುಕೂಲವೆಂಬುದನ್ನು ಅರಿತ ಉಮರ್ ಅದನ್ನೇ ತಮ್ಮ ಮಾಧ್ಯಮವನ್ನಾಗಿ ಬಳಸಿಕೊಂಡರು. ರುಬಾಯುತ್ ಎನ್ನುವುದು ಖ್ಯಾತಿ ಪಡೆಯಲು ಭಾವಸಂಪನ್ನರಾದ ಉಮರರೇ ಕಾರಣರು.
ಇಂಗ್ಲೆಂಡಿನ ಕೇಂಬ್ರಿಜ್ ವಿಶ್ವವಿದ್ಯಾನಿಲಯದ ಎ.ಜೆ. ಆರ್ಬರಿ ಅವರು. ಸಂಶೋಧಿಸಿ ಸಂಪಾದಿಸಿದ ಉಮ್ ಖಯ್ಯಾಮ್ ಕೃತಿಗಳಲ್ಲಿ ಮೊದಲ ಸಂಸ್ಕರಣದಲ್ಲಿ 172 ಪದ್ಯಗಳೂ ಎರಡನೆಯ ಸಂಸ್ಕರಣದಲ್ಲಿ 252 ಪದ್ಯಗಳೂ ಇವೆ.
ರುಬಾಯತ್ಗಳಲ್ಲಿ ದೇವರು, ಜಗತ್ತು, ಸಂಸಾರ, ಬಂಧನ, ಮುಕ್ತಿ, ಸೃಷ್ಟಿ, ಸ್ಥಿತಿ, ಲಯ, ಜಗಳ, ಸ್ನೇಹ, ಪ್ರೇಮ, ಕೋಪ, ಹೆಂಡ, ಹೆಂಡದಂಗಡಿ, ಸೂರ್ಯೋದಯ, ಕತ್ತಲು ಇತ್ಯಾದಿ ಅನೇಕ ವಿಚಾರಗಳು ಕಂಡುಬರುತ್ತವೆ. ಯಾವ ಪಂಥಕ್ಕೂ ನಿರ್ದಿಷ್ಟವಾಗಿ ಸೇರಿಸಲಾಗದ ಇವರ ಕವನಗಳಲ್ಲಿ ಅತ್ಯಮೂಲ್ಯವಾದ ಅನುಭವ ಸಿದ್ಧಾಂತ ಕಾಣುತ್ತದೆ.
ಆತ್ಮಪ್ರತ್ಯಾನುಬೋಧದಿಂದ ಚೋದಿತವಾದ ಉಮರ್ ಖಯ್ಯಾಮರ ಕವನಗಳು ಲೋಕದ ಅನುಭವವನ್ನೇ ಹೆಚ್ಚಿಸಿವೆ ಎಂದರೆ ತಪ್ಪಾಗಲಾರದು. ಸೂಫಿ ಅನುಭಾವಿಗಳ ಜಾಡಿನಲ್ಲೇ ನಡೆಯುತ್ತ ಅವರು ಹಾಡಿದ್ದೂ ಉಂಟು. ಮದ್ಯ, ಬಟ್ಟಲು, ಅರವಟ್ಟಿಗೆ ಮುಂತಾದ ಪ್ರತಿಮೆಗಳನ್ನು ಉಪಯೋಗಿಸಿದ್ದೂ ಉಂಟು. ಮದ್ಯವೆಂದರೆ ಭಗವಂತನ ಉಪಾಸನೆಯಿಂದ ಲಭ್ಯವಾಗುವ ಆನಂದ, ಬಟ್ಟಲೆಂದರೆ ಮಾನವ ಹೃದಯ, ಅರವಟ್ಟಿಗೆ ಎಂದರೆ ಭಕ್ತರ ಗುಂಪು. ಪ್ರಿಯತಮ ಎಂದರೆ ಬುದ್ಧಿ, ಗಂಧರ್ವ ಎಂದರೆ ದೇವರನ್ನು ಸಾಕ್ಷಾತ್ಕಾರ ಮಾಡಿಕೊಂಡವರು. ಹೀಗೆ ಇನ್ನೂ ಅನೇಕವು ಸೂಫಿಗಳ ಮಾತು. ಇವುಗಳ ಹಿಂದೆ ಅಡಗಿದೆ ಉಮರ ಖಯ್ಯಾಮರ ಅಂತರಂಗ, ಆತ್ಮದರ್ಶನ ಮತ್ತು ಜೀವನದ ಆಕಾಂಕ್ಷೆ.
ಉಮರ್ ವಿನೋದಪ್ರಿಯರಾಗಿದ್ದ ರಸಿಕರು. ಲಜ್ಜಾಹೀನನಾದ ಇಂದ್ರಿಯಾಸಕ್ತರಲ್ಲ. ಲೋಕವ್ಯವಹಾರದಲ್ಲಿಯೇ ಇದ್ದರೂ ಅನಾಸಕ್ತರು. ವಿಶ್ವದ ಎಲ್ಲ ಅಂಶಗಳಲ್ಲೂ ಅಖಂಡವಾಗಿ ಮತ್ತು ಗುಪ್ತವಾಗಿರುವ ತತ್ತ್ವವನ್ನು ಅರಸುತ್ತಿದ್ದ ಸಾಧಕರು. ಪ್ರಪಂಚದ ವಿಚಾರದಲ್ಲಿ ಅಭಿಮಾನವನ್ನು ತೋರಿಸುತ್ತಾರೆ. ಅದನ್ನು ಅಪಾರ್ಥ ಮಾಡಿಕೊಂಡವರಲ್ಲಿ ಮರುಕವನ್ನೂ ತೋರಿಸುತ್ತಾರೆ. ಪ್ರಪಂಚದ ಅನುಭವ ಅವರಿಗೆ ತಿರಸ್ಕೃತವಲ್ಲ. ಅದನ್ನು ಲೋಕಹಿತಕ್ಕಾಗಿ ಸಂಗ್ರಹಿಸುವಲ್ಲಿ ಜನರ ಸುಖ ಸಂತೋಷಗಳಿವೆ. ಮೋಕ್ಷ ಇದರಲ್ಲಿಯೇ ಇದೆ ಎಂಬುದು ಕವಿಯ ಮತ. ಪ್ರಪಂಚಕ್ಕೆ ಮೂಲವಾದ ಪರಾತ್ಪರ ವಸ್ತು ಒಂದಿದೆ ಎನ್ನುವುದರಲ್ಲಿ ನಾಸ್ತಿಕರೆಂದೆನಿಸಿಕೊಂಡ ಈ ಕವಿಗೆ ಸ್ವಲ್ಪವೂ ಸಂದೇಹವಿರಲಿಲ್ಲ. ಆ ದೇವನನ್ನು ಅರಿಯಲು ಮಾನವಗುಣವಾದ ಪ್ರೇಮವೇ ಸಾಧನವೆಂಬುದರಲ್ಲಿ ಇವರಿಗೆ ಪೂರ್ಣ ವಿಶ್ವಾಸವಿತ್ತು.
ಓ ದೇವನೇ ನನ್ನ ಶಕ್ತಿ ಇದ್ದಷ್ಟೂ ನಿನ್ನನ್ನು ಅರಿಯಲು ವಿಫಲನಾಗಿದ್ದರೆ ನನ್ನನ್ನು ಕ್ಷಮಿಸು. ಏಕೆಂದರೆ ನಾನು ಹೊಂದಿರತಕ್ಕ ಅಲ್ಪ ಶಕ್ತಿಯೇ ನಿನ್ನನ್ನು ಅರಿಯಲು ನನ್ನಲ್ಲಿ ಉಳಿದಿರುವ ಏಕೈಕ ಸಾಧನ - ಇದು ಉಮರ ಖಯ್ಯಾಮರ ಹೃದಯ ನಿವೇದನೆ. ಈ ಜೀವನ ರಹಸ್ಯಮಯ, ಇದರ ಮೊದಲು ಗೊತ್ತಿಲ್ಲ. ಇದರ ಭವಿಷ್ಯವೂ ಗೊತ್ತಿಲ್ಲ. ಈ ಎರಡು ಗೊತ್ತಿರದ ಅಂಕಗಳ ಮಧ್ಯೆ ನಾನು ಇರುವುದಾದರೂ ಎರಡೇ ದಿನ. ಇದ್ದಾಗ ಮಾಡಬಹುದಾದರೂ ಏನು? ಇದು ಉಮರ ಖಯ್ಯಾಮರ ಪ್ರಶ್ನೆ. ಇದನ್ನು ಅವರೇ ಉತ್ತರಿಸುತ್ತಾರೆ: ಕುಡಿ, ಕುಡಿದು ಸತ್ತರೆ, ನೀನಿತ್ತ ಬರಲಾರೆ! ಈ ಕುಡಿಯುವ ಅರ್ಥವಾದರೂ ಏನು? ಭಗವಂತನೆಂಬ ಮಧುವನ್ನು. ಕುಡಿದವ ಅಮರನಲ್ಲವೇ? ಹಿಂತಿರುಗಿ ಹೇಗೆ ಬರಬಲ್ಲ? ಉಮರರ ಮಾತು ಹೀಗೆ, ಅರ್ಥ ಹೀಗೆ.
ಉಮರ ಖಯ್ಯಾಮರ ರುಬಾಯತ್ಗಳು ನಾನಾ ಭಾಷೆಗಳಲ್ಲಿ ಅನುವಾದಗೊಂಡಿವೆ. ಇಂಗ್ಲಿಷ್, ಫ್ರೆಂಚ್, ಜರ್ಮನ್, ರಷ್ಯ ಮತ್ತಿತರ ಯುರೋಪಿನ ಭಾಷೆಗಳಲ್ಲಿ, ಸಂಸ್ಕೃತ, ಮರಾಠಿ, ತೆಲುಗು ಮತ್ತು ಕನ್ನಡ ಮೊದಲಾದ ಭಾರತೀಯ ಭಾಷೆಗಳಲ್ಲಿ ಉಮರ ಖಯ್ಯಾಮರ ಅಮರವಾಣಿ ಕೇಳಿಬರುತ್ತಿವೆ. ಕನ್ನಡದಲ್ಲಿ ಡಿ.ವಿ.ಜಿ ಅವರ ಉಮರನ ಒಸಗೆ ಖ್ಯಾತ ಅನುವಾದವೆನಿಸಿದೆ.
ಪಾರಸಿಕ ಹೃದಯ ಸಾಗರದಾಣಿಮುತ್ತುಗಳನ್
ಉಮರನಿಳಿದೆತ್ತಿ ತರಲ್, ಅದರಿಂದೆ ಸರವನ್
ಫಿಟ್ಸ್ಜೆರಲ್ಡನ್ ಕೋದನ್ ಆಂಗ್ಲರೇಷ್ಮೆಯಿನ್ ; ಅದರ
ಮಾಟವಿದು ಕನ್ನಡದ ನುಡಿವೆಣ್ಣಿಗೊಸಗೆ
ಇದು ಡಿವಿಜಿ ಅವರು ಉಮರನ ಒಸಗೆಯನ್ನು ಕನ್ನಡಕ್ಕೆ ತಂದ ಪರಿ.
ಅದರಲ್ಲಿ ನಾನು ಒಂದಷ್ಟನ್ನು ಅಲ್ಲಿ ಇಲ್ಲಿ ಚಿಂದಿ ಆಯ್ದವನಂತೆ ಇಲ್ಲಿ ಇಟ್ಟಿರುವೆ
ನಮ್ಮ ಸೃಷ್ಠಿಗೆ ಜೇಡಿಮಣ್ಣುಕಲಸಿದ ದಿನವೆ
ನಮ್ಮಿಂದ ಏನಹುದೆಂದಯ ದೇವನರಿತಿರ್ದನ್
ಅವನಾಣತಿಯನುಳಿದು ನಾಮೇನು ಗೇಯಲಹುದು?
ಇಂತಿರಲು ನಮಗೆ ನರಕದ ಸುಡಿತ ಸರಿಯೆ?
ಈ ಪುರಾತನ ಜೀರ್ಣ ಧರ್ಮಶಾಲೆಯೊಳಮಮ!
ಇರುಳು ಪಗಲುಗಳೆಂಬ ಬಾಗಿಲೆರಡರಲಿ
ಸುಲ್ತಾನರೇಸುಜನರ್ ಅಟ್ಟಹಾಸದಿ ಪೊಕ್ಕು
ಒಂದೆರಡು ತಾಸಿದ್ದು ನಿಲದೆ ತೆರಳಿದರು.
ಓ ದೇವ ನೀನರಿವೆ ನಿನ್ನ ನಾನರಸುತ್ತ
ಪಟ್ಟಲ್ಲ ಪಾಡುಗಳನಾದನಿತು ಪಟ್ಟೆನ್;
ಎನಗೆ ಬಂದರಿವಿನಾ ಕೊರೆಯ ನೀ ಮರೆತುಬಿಡು
ನಾನರಿದವನೆಂದು ಕನಿಕರಿಸಿ ನೋಡು
ಈ ಕಾಲದಲ್ಲಿ ಬಹಳ ಗೆಳೆಯರ ಬಯಸದಿರು
ಲೋಕಜನರನು ಕೊಂಚ ದೂರದಲ್ಲಿರಿಸು;
ಆಪ್ತನೆನಿಸಿದನ ಮತಿನೇತ್ರವನು ನೀಂ ತೆರೆಯೆ
ಶತ್ರುವವನಾದಾನು, ಬೆಳಕ ಸೈರಿಸದೆ.
ಜೀವನದ ಸೊದೆಯ ಸವಿಯಲ್ಕಿರುವುದೀ ನಿಮಿಷ;
ಕರೆವುದಿನ್ನೊಂದು ನಿಮಿಷದಲಿ ಸುಡುಗಾಡು;
ರವಿ ಶಶಿಗಳೋಡುತಿಹರೆಲ್ಲ ಶೂನ್ಯೋದಯಕೆ;
ಸಾಗುತಿಹರಟಕ! ಬಾ, ಸೊದೆಯುಣುವ ಬೇಗ.
ಯಾತನೆಯ ತಿದಿಯೊಳಗೆ ಬಿದ್ದರುವನು; ಹಠಾತ್ತನೆ ಸುಟ್ಟುಹೋಗಿರುವನು
ಅವನ ಬದುಕಿನ ಗುಡಾರದ ಹಗ್ಗಗಳನ್ನು ವಿಧಿಯಲುಗು ಕತ್ತರಿಸಿರುವುದು
ಆಸೆಗಳ ದಲ್ಲಾಳಿಯು ಅವನನ್ನು ಕಾಸಿಲ್ಲದೆ ಮಾರಿರುವನು!
ಹಿಂದೊಂದು ಬಾಗಿಲ್, ಆ ಬೀಗಕ್ಕೆ ಕೈಯಿಲ್ಲ;
ಮುಂದೆ ತೆರೆ, ಅದನೆತ್ತಿ ನೋಡಲಳವಲ್ಲ.
ಈ ಎಡೆಯೊಳೊಂದೆರಡು ದಿನ ನೀನು-ನಾನೆಂದು
ಹರಟುವೆವು ಬಳಿಕಿಲ್ಲ ನೀನು-ನಾನುಗಳು.
ತೆವಳಿ ತಿಣುಕುತ ಸಾಯುತಿರುವೆಮ್ಮ ಕವಿದಿರುವ
ಗಗನವೆಂಬೀ ಬೋರಲಿರುವ ಬೋಗುಣಿಗೆ
ವರಕೆಂದು ಕೈಯೆತ್ತಿ ಮೊರೆಯಿಟ್ಟು ಫಲವೇನು ?
ನಿನ್ನ ನನ್ನವೊಲೆ ಅದು ಕೈ ಸಾಗದಿಹುದು.
ಏಳೆನ್ನ ಮನದನ್ನೆ ! ನೋಡು ಪೊಳ್ತರೆ ಬಂದು ನಿಶಿಯ ಬೋಗುಣಿಯೊಳಕೆ ಹೊಂಬುಗುರಿಯೆಸೆದು ತಾರೆಯರಳಂಗಳನಿಲ್ಲಿಂದೆ ಚೆಲ್ಲಾಡಿಹನು; ನಿದ್ದೆ ಸಾಕಿನ್ನೀಗ ಮುದ್ದಣುಗಿ ಬಾರ.
ಒಂದು ದಿನ ಸಂಜೆ ನಾಂ ಚೌಕದೊಳಿರಲು
ಕುಂಬರನು ಗುದ್ದುತಿದ್ದನು ಹಸಿಯ ಮಣ್ಣ;
ನಾಲಗೆಯನದುಮಿಸಿಕೊಳುತ್ತೆಂದಿತಾ ಮುದ್ದೆ:
"ನಾನಿರ್ದೆ ನಿನ್ನವೊಲೆ; ಮೆಲನೆ ಮುಟ್ಟಣ್ಣ !"
ಆಹ! ಕುಂದಿನಿಸಿಲ್ಲವೆಂದು, ನೀ ಬಾರ.
ಆಗಸದಿ ಕುಂದುವಡೆದಿಂದು ಪುಟ್ಟುತಿಹಂ
ಇನ್ನೇಸುದಿನವೆನ್ನ ಕಾಣ್ಬನವನೀ ವನದಿ?
ಬೇಗ ನಾನವನಿಂದೆ ಮರೆಯಾಗಿ ಪೋಪೆಂ.
ಆಗಳೆನ್ನ ಸಮಾಧಿಯೆಡೆಗೈದಿ ಮೆಲುಮೆಲನೆ,
ನುಣ್ಚರದಿನೋಲವಿನಾ ಪಾಡುಗಳ ಪಾಡಿ,
ಮಧುರಸವನದರಮೇಲತಿಶಯದಿ ನೀಂ ಸೂಸಿ,
ಬೋರಲಿದು ಮಧುವಿದ್ದ ಒಬ್ಬನು ದಯೆಯಿಂ
Omar Khayyam
ಕಾಮೆಂಟ್‌ಗಳು