ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಭಜ ಗೋವಿಂದಂ ಮೂಢಮತೆ

ಭಜ ಗೋವಿಂದಂ ಮೂಢಮತೆ
(ಆದಿಶಂಕರರು ನಮ್ಮನ್ನು ಮೂಢರೇಕೆಂದು ಕರೆಯುತ್ತಾರೆ?)
-ಓಶೋ

ಏಕೆಂದರೆ ನೀವು ಹಾಗಿರುವಿರಿ.  ಆದ್ದರಿಂದ ಬೇರೆ ರೀತಿಯಲ್ಲಿ ಹೇಳುವುದು ಸುಳ್ಳಾದೀತು.  ಶಂಕರರು ನಿಮ್ಮೊಂದಿಗೆ – ‘ಭಜ ಗೋವಿಂದಂ ಭಜ ಗೋವಿಂದಂ ಗೋವಿಂದಂ ಭಜ ಮೂಢಮತೆ’ – ಎಂದು ಸಂಭೋದಿಸಿ ಹೇಳುವಾಗ ಅಂತರಾಳದ ಪ್ರೀತಿಯಿಂದ – ಅತ್ಯಂತ ಕರುಣೆಗೆ ವಶರಾಗಿ ಹಾಗೆ ಹೇಳುವರು.  ಅವರು ನಿಮ್ಮನ್ನೇನು ಬಯ್ಯುತ್ತಿಲ್ಲ.  ಶಂಕರರು ಎಂದೂ ಬಯ್ಯುವವರೇ ಅಲ್ಲ.  ಅವರ ಬಾಯಿಂದ ಬೈಗುಳವೇ ಬಾರದು.  ಅದು ಅಸಂಭವ.  ಅವರು ನಿಮ್ಮನ್ನು ಎಚ್ಚರಿಸುತ್ತಿರುವರು – ನಿದ್ದೆಯಿಂದ ಎಬ್ಬಿಸುತ್ತಿರುವರು – ಎಬ್ಬಿಸಿ ಮುಂದೆ ದೂಡುತ್ತಿರುವರು.  ‘ಎದ್ದೇಳು! ಬೆಳಗಾಯಿತು ಸೂರ್ಯನಾಗಲೇ ಮೇಲೆ ಬಂದಿರುವನು, ನೀನಿನ್ನೂ ಮಲಗಿರುವುದು ಒಳ್ಳೆಯದಲ್ಲ’ – ಎಂದು ಹೇಳುತ್ತಿರುವರು.

ಅವರು ಮೂಢರೆನ್ನುವುದು – ಅಷ್ಟು ಕಠೋರವಾಗಿ ಹೇಳದಿದ್ದರೆ ನಿಮ್ಮ ನಿದ್ದೆ ಹರಿಯದೆಂದು.  ಅವರು ಮೂಢರೆನ್ನುವುದು – ಅದೇ ಸತ್ಯ – ಅದೇ ತಥಾರ್ಥವಾದುದರಿಂದ.

ಮೂಢತೆಯ ಅರ್ಥ : ಮೂರ್ಛೆ.
ಮೂಢತೆಯ ಅರ್ಥ : ನಿದ್ದೆಯಲ್ಲೇ ಜೀವಿಸುವುದು.
ಮೂಢತೆಯ ಅರ್ಥ : ವಿವೇಕ ಹೀನತೆ.
ಮೂಢತೆಯ ಅರ್ಥ : ಜಾಗೃತಿಯ ಕೊರತೆ – ಎಚ್ಚರವಿಲ್ಲದಿರುವಿಕೆ.

ನಿನಗೆ ಸಿಟ್ಟು ಬಂದಾಗ ಹೆಚ್ಚು ಮೂಢನಾಗುವೆ.  ಆಗ ಎಚ್ಚರವು ಇನ್ನಷ್ಟು ಅಳಿದಂತಾಗುವುದು.  ಒಮ್ಮೊಮ್ಮೆ ನೀನು ಎಚ್ಚೆತ್ತಿರುವುದು ಉಂಟು.  ಆಗ ನೀನು ಅಷ್ಟೊಂದು ಮೂಢನಾಗಿರುವುದಿಲ್ಲ.  ಒಮ್ಮೆ ನೀನು ಕಡಿಮೆ ಮೂಢನಾಗಿರುವಿ – ಮತ್ತೊಮ್ಮೆ ಹೆಚ್ಚು ಮೂಢನಾಗಿರುವಿ.  ಇದು ನಿನಗೂ ಗೊತ್ತಾಗುವುದು.  ಮನಸ್ಸಿನಲ್ಲಿ ಮೋಹ ಬೆಳೆದಾಗ ಹೆಚ್ಚು ಮೌಢ್ಯವುಂಟಾಗುವುದು – ವಾಸನೆ ಪ್ರಬಲಿಸಿದಾಗ ಹೆಚ್ಚು ಮೂಢರಾಗುವಿರಿ.

ತುಳಸೀದಾಸರ ಜೀವನದಲ್ಲಿ ಒಂದು ಕತೆ.  ಪತ್ನಿ ತೌರುಮನೆಗೆ ಹೋಗಿದ್ದಳು.  ಮಳೆಗಾಲದ ರಾತ್ರಿ ಮನೆಯ ಮೇಲಿಂದ ಒಂದು ಹಾವು ಇಳಿ ಬಿದ್ದಿತ್ತು.  ತುಳಸಿದಾಸರು ಮನೆಯ ಮೇಲೇರಿದರು.  ಹಿಂಬಾಗಿಲಿನಿಂದ ಕಳ್ಳನಂತೆ ಮನೆಯೊಳಗೆ ಪ್ರವೇಶಿಸಿದರು.  ಹಾವೆಂದು ಸಹ ಗುರುತಿಸಲಾಗದಷ್ಟು ಮೂಢತೆ ಉಂಟಾಗಿರಬೇಕು. ಹಗ್ಗವೆಂದು ಭಾವಿಸಿದರು.  ವಾಸನೆ ಅಷ್ಟು ಪ್ರಬಲಿಸಿತ್ತೇನೋ – ವಾಸನೆಯಿಂದ ಅಷ್ಟು ಕುರುಡರಾಗಿದ್ದರೇನೋ.  ಕಣ್ಣು ಮುಂದೆ ಕತ್ತಲೆ ಹಿಡಿದಿತ್ತೆಂದು ತೋರುವುದು.  ಹಾಗಿಲ್ಲದಿದ್ದರೆ ಹಾವು ಕೂಡ ಕಾಣಲಾಗದಂತೆ ಏಕಾಗುವುದು.

ಸರ್ವೇಸಾಮಾನ್ಯವಾಗಿ ಹಗ್ಗದಷ್ಟೇ ಹಾವನ್ನು ಭ್ರಮಿಸುವುದು ಸಹಜ.  ಭಯದ ದೆಸೆಯಿಂದ ಮನುಷ್ಯನು ಮೃತ್ಯುವಿಗೆ ಹೆದರುವನು.  ರಸ್ತೆಯಲ್ಲಿ ಹಗ್ಗ ಬಿದ್ದಿದ್ದರೂ ಮನುಷ್ಯ ಹಾವೆಂದು ಭ್ರಮಿಸುವನು.

ಇಲ್ಲಾದದ್ದು ತದ್ವಿರುದ್ಧ.  ಅಲ್ಲಿದ್ದದ್ದು ಹಾವು.  ತುಳಸಿದಾಸರು ಹಗ್ಗವೆಂದು ಬಗೆದರು.  ಅದನ್ನು ಹಿಡಿದು ಸ್ಪರ್ಶಿಸಿದರೂ ಅವರಿಗೆ ತಿಳಿಯಲಿಲ್ಲ.  ಸರ್ವಥಾ ಮೂರ್ಚಾವಸ್ಥೆ.  ಕಾಮವಾಸನೆ ಮನುಷ್ಯನನ್ನು ಕುರುಡುಗೊಳಿಸುವುದು.

ಇವರೀ ಸ್ಥಿತಿಯನ್ನು ಕಂಡು ಪತ್ನಿ ಹೇಳಿದಳು – ‘ನನ್ನ ಮೇಲಿರುವಷ್ಟು ಪ್ರೇಮವನ್ನು ರಾಮನ ಮೇಲಿಟ್ಟು ಸ್ತುತಿಸಿದರೆ ನೀವು ರಾಮನನ್ನು ಕಾಣಬಹುದಿತ್ತು.  ರಾಮನನ್ನು ಪಡೆಯಬಹುದಿತ್ತು!’  ಹಿಂದಿರುಗಿ ನೋಡಿದರು -  ಹಾವು ಒಮ್ಮೇಲೆ ಎಚ್ಚರ ಬಂದಿತು – ‘ಕಾಮ ವಾಸನೆಯಿಂದ ಅಂಧನಾದೆನೆಂದು.’  ಜೀವನದಲ್ಲಿ ಒಮ್ಮೇಲೆ ಕ್ರಾಂತಿ ತಲೆದೋರಿತು.  ಪತ್ನಿಯೇ ಗುರುವಾದಳು.  ವಾಸನೆಯು ನಿರ್ವಾಸನೆಯ ಕಡೆಗೆ ಹಿಡಿದೆಳೆಯಿತು.  ಸನ್ಯಾಸ ಜೀವನವನ್ನು ಕೈಗೊಂಡು ಪರಮಾತ್ಮನನ್ನು ಅರಸತೊಡಗಿದರು.  ಅವರಲ್ಲಿ ಕಾಮನಾಗಿ ಬೆಳೆಯುತ್ತಿದ್ದ ಊರ್ಜೆ ರಾಮನಾಗಿ ಬಲಿಯಿತು.

ಮೂಢತೆ ಆ ಊರ್ಜೆ(ಶಕ್ತಿ)ಯೇ ಸರಿ.  ಇದು ಮಲಗಿದಂತಿದೆ – ಅದೇ ನಾಳೆ ಎದ್ದೇಳುವುದು.  ಇಂದು ಅಡಗಿದಂತಿದೆ -  ನಾಳೆ ಹೊರಬರುವುದು.  ಮೂಢತೆಯೇ ಪ್ರಜ್ಞೆಯಾಗುವುದು.  ನಿನ್ನಾನಿದ್ರೆಯೇ ನಿನ್ನ ಜಾಗರಣೆಯಾಗುವುದು.  ಆದ್ದರಿಂದ ಅದಕ್ಕಾಗಿ ಕಸಿವಿಸಿಯಾಗಬೇಡಿ.  ಮನಸ್ಸಿನಲ್ಲಿ ನಿಂದೆಯನ್ನು ತಂದುಕೊಳ್ಳಬೇಡಿ.  ಹಾಗೂ ನಿಮ್ಮ ಮೂಢತೆಯನ್ನು ಬೈತಿಟ್ಟುಕೊಳ್ಳುವ ಪ್ರಯತ್ನ ಮಾಡಬೇಡಿ.  ಬಹು ಮಂದಿ ಹಾಗೆ ಮಾಡುವರು.  ಅಂಥವರು ಮಹಾ ಮೂಢರು.  ತಮ್ಮ ಮೌಢ್ಯವನ್ನು ಬಚ್ಚಿಡುವವರು  ಮಹಾ ಮೂಢರು.  ಚಿಕ್ಕ ಪುಟ್ಟ ಕೆಲ ತಿಳುವಳಿಕೆಯನ್ನು ಸಂಗ್ರಹಿಸಿ ತಮ್ಮ ಮೂಢತೆಯನ್ನು ಅಲ್ಪ ತಿಳುವಳಿಕೆಯಿಂದ ಮುಚ್ಚುವರು.  ಒಳಗೆ ಗಾಯ ಹಸಿಯಾಗಿದೆ.  ಮೇಲೆ ಮಾತ್ರ ಹೂವನ್ನಿಟ್ಟು ಮುಚ್ಚುವರು.  ಶಾಸ್ತ್ರಗಳಿಂದ ಎರವು ಪಡೆದ ಜ್ಞಾನ ಇಂಥ ಹೂಗಳು.  ಮತ್ತೊಬ್ಬರಿಂದ ಎರವಲು ಪಡೆದ ತಿಳುವಳಿಕೆ ಇಂಥವೇ.  ಇವುಗಳಿಂದ ನಿಮ್ಮ ಮೂಢತೆಯನ್ನು ಮುಚ್ಚಿ ಅದನ್ನು ಮರೆತು ಬಿಡುವಿರಿ.

ಮೂಢತೆಯನ್ನು ಮುಚ್ಚಿಡಬಾರದು.  ಅದನ್ನು ನೆನಪಿನಲ್ಲಿಡಬೇಕು.  ನೆನಪಿನಲ್ಲಿದ್ದರೆ ಮಾತ್ರ ಅದನ್ನು ಅಳಿಸಲಾದೀತು.  ಮರೆತರೆ ಅದು ಹಾಗೆಯೇ ಉಳಿದು ಹೋಗುವುದು.  ಆದ್ದರಿಂದ ಶಂಕರರು ಹೆಜ್ಜೆ ಹೆಜ್ಜೆಗೆ – ‘ಭಜಗೋವಿಂದಂ ಭಜಗೋವಿಂದಂ ಮೂಢಮತೆ’ – ಎಂದು ಒತ್ತಿ ಒತ್ತಿ ಪುನಃ ಪುನಹ ಸಂಭೋದಿಸುವರು.

ನಿಮ್ಮ ಮೂರ್ಛೆಯನ್ನು ಕಂಡು ಕರುಣೆಯಿಂದ ಹೀಗೆ ಹೇಳುವರು – ‘ನೆನಪಿರಲಿ – ನೀವು ಮೂಢರೆಂದು! ಇದನ್ನು ಮರೆಯದಿರಿ.’ ಆದರೆ ನೀವು ಇದನ್ನು ಮರೆಯಲಿಕ್ಕಾಗಿಯೇ ಯಾವಾಗಲೂ ಪ್ರಯತ್ನ ಮಾಡುವಿರಿ.  ನಾನು ಮೂಢನೆಂಬುದು ಹೇಗಾದರೂ ಮರೆಯಬೇಕೆಂಬುದೇ ನಿಮ್ಮ ಸಂಚು.  ಜ್ಞಾನಮಾನಿಗಳಾಗಿ  ಪಂಡಿತಮಾನಿಗಳಾಗಿ ವರ್ತಿಸುವಿರಿ.

ಜ್ಞಾನಿಗಳಾದವರು ಮಾತ್ರ ತಾವು ಜ್ಞಾನಿಗಳಲ್ಲವೆಂದು ತಿಳಿಯುವರು.  ಅಜ್ಞಾನಿಯು ತನ್ನ ಜ್ಞಾನಕ್ಕಾಗಿ ಉಬುಗೊಬ್ಬುಗಳಿಂದ ಸಂಘರ್ಷಿಸುವನು.  ತನಗೇನೂ ತಿಳಿಯದೆಂದು ಅವನು ಏನು ಮಾಡಿದರೂ ಒಪ್ಪಲಿಕ್ಕಿಲ್ಲ.  ಪರಮಜ್ಞಾನಿಗಳಾದವರು ಮಾತ್ರ ತಮಗೆ ಎಷ್ಟರ ಮಟ್ಟಿಗೆ ತಿಳುವಳಿಕೆಯಿದೆ ಅಥವಾ ಇಲ್ಲವೆಂದು ಒಪ್ಪಲು ಸಿದ್ಧರಾಗುವರು.

ಎಡಿಸನ್ ಹೇಳಿದರು – ಜನ ತನ್ನನ್ನು ಬಹು ತಿಳಿದವನೆನ್ನುವರು.  ಆದರೆ ವಸ್ತುತಃ ನನ್ನ ಸ್ಥಿತಿ ಹೇಗಿದೆಯೆಂದರೆ – ಓರ್ವ ಪುಟ್ಟ ಬಾಲಕ ಸಾಗರ ತೀರದ ಮರಳಿನ ಮೇಲೆ ಬಿದ್ದಿರುವ ಕವಡೆ ಕಪ್ಪೆ ಚಿಪ್ಪುಗಳನ್ನು ಆರಿಸಿಟ್ಟುಕೊಂಡಂತೆ – ಅಷ್ಟೇ ಜ್ಞಾನ ನನ್ನ ಬಳಿಯಿರುವುದು.  ಮುಷ್ಠಿಯಲ್ಲಿ ಒಂದಷ್ಟು ಕವಡೆ ಕಪ್ಪೆಚಿಪ್ಪುಗಳು.  ಮುಂದೆ ವಿರಾಟ್ ಸಾಗರ ಭೋರಿಡುತ್ತಿದೆ.  ಅದರ ಬಗ್ಗೆ ಏನೇನೂ ಅರಿಯೆ.

ಹಾಗೆಯೇ ನಿನ್ನಲ್ಲಿರುವ ಅತ್ಯಲ್ಪ ತೀರ ನಗಣ್ಯವಾದ ಜ್ಞಾನವೇ ನಿನಗೆ ಬಲು ದೊಡ್ದದೆನಿಸುವುದು.  ಒಂದು ಸಣ್ಣ ಹಣತೆ ಹಚ್ಚಿರುವೆ.  ಮಿಣಮಿಣನೆ ಅದರ ಅಲ್ಪ ಸ್ವಲ್ಪ ಬೆಳಕು ಬಿದ್ದಿದೆ.  ಪುಟ್ಟದೊಂದು ಕೊಠಡಿ.  ಅಷ್ಟು ಜಾಗದಲ್ಲಿ ಬೆಳಕು.  ಇದನ್ನೇ ನೀನು ಜ್ಞಾನವೆನ್ನುವೆ.  ಅನಂತವಾದುದು ಅಂಧಕಾರದ ಕೂಪದಲ್ಲಿ ಮುಳುಗಿದೆ.  ನಿನಗೆ ಅದರ ಪರಿವೆಯೇ ಇಲ್ಲ.  ನಿನ್ನ ಮೂಢತೆ ನಿನಗೆ ಅರಿವಾದಾಗ – ‘ಇದೂ ಒಂದು ಜ್ಞಾನವೇ?’ ಎಂದೆನಿಸದಿರದು.  ಮಿಣ ಮಿಣನೆ ಇಷ್ಟು ಮಾತ್ರ ಬೆಳಕು!
ತಿಳಿಯಬೇಕಾದುದು ಅನಂತವಾಗಿ ಬಿದ್ದಿದೆ.  ಯಾತ್ರೆ ಮಾಡಲು ಇನ್ನೂ ಅನಂತ ವಿಸ್ತಾರವಿದೆ.  ಶೋಧನೆ ಅನ್ವೇಷಣೆಗಳಿಗಾಗಿ ಅನಂತ ತತ್ವಗಳ ರಾಶಿ ಬಿದ್ದಿದೆ. ಕೈಯಲ್ಲಿರುವ ಒಂದೆರಡು ಕವಡೆಗಳಿಂದ ನಾನು ಜ್ಞಾನಿಯಾಗುತ್ತಿರುವೆ!  ಇದೆಂತಹ ವಿಚಿತ್ರ ವಿಡಂಬನೆ!  ಹೀಗೆನಿಸಿ ಕೈಯಲ್ಲಿರುವ ಒಂದೆರಡು ಕವಡೆಗಳನ್ನು ಬಿಸುಡುವಂತೆ – ಅಲ್ಪಜ್ಞಾನದ ಹಮ್ಮು ತನಗೆ ಕಳಚಿಕೊಂಡು ದೂರವಾಗುವುದು.

ಎಂದು ನೀನು ನಿನ್ನನ್ನು ಮೂಢನೆಂದರಿಯುವೆಯೋ – ಹಾಗೂ ಈ ಎಚ್ಚರದಿಂದ ತುಂಬುವಿಯೋ – ಅಂದೇ ಮೂಢತೆ ಕರಗಲಾರಂಭಿಸುವುದು.  ಈ ಎಚ್ಚರವು ನಿನ್ನನ್ನು ಮೌಢ್ಯದಿಂದ ಹೊರಗೊಯ್ಯುವುದು.  ಮೂಢತೆ ಎಂಬುವುದು ಎಚ್ಚರ ತಪ್ಪುವಿಕೆ.  ಎಚ್ಚರವಾದೊಡನೆ ಅದು ಅಳಿಯತೊಡಗುವುದು.

ಮನಶಾಸ್ತ್ರಜ್ಞರು ಹೇಳುವುದು – ಓರ್ವ ಹುಚ್ಚನಿಗೆ ತಾನು ಹುಚ್ಚನೆಂದು ಅರಿವು ಮೂಡಿದುದಾದರೆ ಅವನು ಸರಿಯಾಗುವನೆಂದು.  ಹುಚ್ಚನಿಗೆ ತಾನು ಹುಚ್ಚನೆಂದು ಆರ್ಥವಾಗುವುದಿಲ್ಲ.  ಅವನು ಜಗತ್ತೇ ಹುಚ್ಚೆಂದು ತಿಳಿಯುವನು.

ಖಲೀಲ ಜಿಬ್ರಾನ್ ಬರೆದಿರುವರು – ಒಬ್ಬ ಗೆಳೆಯ ಹುಚ್ಚನಾದ.  ಅವನನ್ನು ನೋಡಲು ಜಿಬ್ರಾನ ಆಸ್ಪತ್ರೆಗೆ ಹೋದ.  ಮುಂದಿನ ತೋಟದ ಒಂದು ಬೆಂಚಿನ ಮೇಲೆ ಅವನು ಕುಳಿತಿದ್ದ.  ಜಿಬ್ರಾನ್ ಅವನ ಬಳಿ ಹೋಗಿ ಕುಳಿತು ತುಂಬಾ ಸಹಾನುಭೂತಿಯಿಂದ – ‘ಮಿತ್ರ ನಿನ್ನನ್ನು ಇಲ್ಲಿ ಈ ಸ್ಥಿತಿಯಲ್ಲಿ ಕಂಡು ನನಗೆ ತುಂಬ ದುಃಖವೆನಿಸುತ್ತಿದೆ.’ ಎಂದನು.  ಅದಕ್ಕೆ ಗೆಳೆಯ ಜೆಬ್ರಾನನ್ನೇ ದಿಟ್ಟಿಸುತ್ತ ಕೇಳಿದನಂತೆ - ಏನು ದುಃಖವೇ? ದುಃಖವೇಕೆ?’

‘ನೀನು ಹುಚ್ಚಾಸ್ಪತ್ರೆಗೆ ಸೇರಬೇಕಾಗಿ ಬಂತಲ್ಲ ಎಂದು.’

ಅದಕ್ಕೆ ಹುಚ್ಚ ನಗತೊಡಗಿದ.  ‘ನೀನು ತಪ್ಪು ತಿಳಿದಿರುವೆ.  ಇಲ್ಲಿಗೆ ಬಂದಾಗಿನಿಂದ ಇನ್ನೂ ಬೇರೆ ಬೇರೆ ಹುಚ್ಚರುಗಳ ಸತ್ಸಂಗ ನನಗೆ ದೊರಕಿತು.  ಹೊರಗಂತೂ ಬರಿಯ ಹುಚ್ಚರೇ.  ಸಧ್ಯ ಅವರಿಂದ ಬಿಡುಗಡೆಯಾಯಿತು.  ಇದು ನನ್ನ ಸೌಭಾಗ್ಯ.  ನೀನು ಇದನ್ನು ಹುಚ್ಚಾಸ್ಪತ್ರೆ ಎಂದು ಭಾವಿಸಿದ್ದೀಯೇ.  ಹುಚ್ಚಾಸ್ಪತ್ರೆಯಿರುವುದು ಹೊರಗೆ.  ಈ ಗೋಡೆಗಳ ಹೊರಗೆ.  ಇಲ್ಲಿರುವವರು ಆರಿಸಿದ ಒಳ್ಳೆಯ ಒಂದಷ್ಟು ಜನ ಬುದ್ಧಿವಂತರು.’

ಹುಚ್ಚನಿಗೆ ತಾನು ಹುಚ್ಚನೆಂದು ತಿಳಿಯುವ ಬಗೆಯಾದರೂ ಹೇಗೆ?  ಅಷ್ಟು ತಿಳುವಳಿಕೆಯಿರುತ್ತಿದ್ದರೆ ಅವನು ಹುಚ್ಚನೇಕಾಗುವ?  ಹುಚ್ಚನಿಗೆ ತಾನು ಹುಚ್ಚನೆಂಬಷ್ಟಾದರೂ ತಿಳುವಳಿಕೆ ಬಂದಲ್ಲಿ ಅವನು ಹುಚ್ಚು ಇಳಿಯತೊಡಗಿದೆ ಎಂದರ್ಥ.

ರಾತ್ರಿ ನಿನಗೆ ನಿದ್ರೆಯಲ್ಲಿ ಕನಸು ಬೀಳುತ್ತಿರುವಾಗ – ನಾನು ಕನಸು ನೋಡುತ್ತಿರುವೆನೆಂಬ ಅರಿವು ಮೂಡಿದರೆ ಕನಸು ಹರಿಯ ತೊಡಗಿತೆಂದು ಅರ್ಥ.  ಕನಸು ನೋಡಲು – ನಾನು ಕನಸು ನೋಡುತ್ತಿದ್ದೇನೆಂಬ ಸ್ಮರಣೆಯಿಲ್ಲದಿರುವಿಕೆ ಅಗತ್ಯವಾದುದು.  ಬೆಳಿಗ್ಗೆ ನೆನಪಾಗುವುದು – ಅಷ್ಟರಲ್ಲಿ ಕನಸು ಹರಿದಿರುವುದು.  ಕನಸು ನಡೆದಿರುವ ವೇಳೆಯಲ್ಲಿ ನಿನಗೆ ನಿಜವಾಗಿಯೇ ನಡೆಯುತ್ತಿದೆಯೆಂದು  ಅನಿಸುತ್ತಿರುವುದು.  ತಟ್ಟನೆ ನಡುವೆ ಕನಸಿನಲ್ಲಿ ಇದು ಕನಸೆಂಬ ನೆನಪು ಬಂದರೆ ಸಾಕು ಕೂಡಲೇ ಕನಸು ಹರಿಯುವುದು.

ಗುರ್ಜೈಫ್ ತಮ್ಮ ಶಿಷ್ಯರಿಗೆ ಹೇಳುತ್ತಿದ್ದರು – ದೊಡ್ಡ ಕನಸುಗಳನ್ನು ಹರಿಯುವ ಮೊದಲು ಸಣ್ಣ ಪುಟ್ಟ ಕನಸುಗಳನ್ನು ಮುರಿಯುವುದು ಕಲಿ.  ಈ ದೊಡ್ಡ ಸಂಸಾರ ಮಾಯೆ – ಇದನ್ನು ನೀನು ಒಮ್ಮೆಲೇ ಅಳಿಸಲಾರೆ.  ಸಣ್ಣ ಪುಟ್ಟ ಕನಸುಗಳನ್ನು ಮೊದಲು ಅಳಿಸಲು ಕಲಿಯಬೇಕು.  ರಾತ್ರಿಯ ಈ ಚಿಕ್ಕ ಪುಟ್ಟ ಕನಸುಗಳನ್ನೇ ಮುರಿಯಲಾಗದಿದ್ದ ಮೇಲೆ ಹಗಲಿನ ಈ ದೊಡ್ಡ ಕನಸನ್ನು ಮುರಿಯಲು ನಿನ್ನಿಂದಾದೀತೆ?  ಗುರ್ಜೈಫ್ ತನ್ನ ಶಿಷ್ಯರಿಗೆ ಹೇಳುವನಂತೆ – ರಾತ್ರೆ ಮಲಗುವಾಗ ಒಂದು ವೇಳೆ ಕನಸು ಬರುವುದಾದರೆ ಅದರೊಂದಿಗೆ ಆ ಕನಸಿನ ನೆನಪು ಕೂಡ ಜೊತೆಯಲ್ಲೇ ಬರುವಂತೆ ತದೇಕ ಚಿತ್ತದಿಂದ ಧ್ಯಾನ ಮಾಡುತ್ತಾ ಮಲಗಿರಿ.  ಹೀಗೆ ನೀವು ಮೂರು ವರ್ಷಗಳು ಒಂದೇ ರೀತಿ, ಇದೇ ವಿಚಾರ, ಇದೇ ಚಿಂತನೆ, ಇದೇ ಮನನಗಳಲ್ಲಿ – ಇದೇ ಧ್ಯಾನದಲ್ಲಿದ್ದರೆ ಆಗ ನಿಮಗೆ ಒಂದು ದಿನ ಆ ಶುಭ ವೇಳೆ ಬರುವುದು.  ಅದು ನಿಮ್ಮ ಪರಮ ಸುಕೃತ್ಯದ ವೇಳೆ. ಅಂದು ನಿಮಗೆ ಸ್ವಪ್ನದೊಂದಿಗೆ ಸ್ವಪ್ನ ನೋಡುತ್ತಿರುವೆನೆಂಬ ಜಾಗೃತಿಯೂ ಜೊತೆ ಜೊತೆಗೆ ಬರುವುದು.  ಇಷ್ಟಾದರೆ ಸಾಕು – ನಿಮ್ಮ ಕನಸುಗಳೆಲ್ಲ ಮುರಿದು ಬಿದ್ದವು.  ನಿದ್ರೆಯಲ್ಲೂ ಜಾಗೃತಿಯು ಪ್ರವೇಶಿಸುವುದು.  ಅಂದಿನಿಂದ ನಿಮ್ಮ ಕನಸುಗಳು ಅಳಿದು ಹೋಗುವುವು.  ಮುಂದೆ ಮತ್ತೆ ಕನಸಿನ ಸುಳಿವಿರುವುದಿಲ್ಲ.

ಆದರೀ ಕಣ್ತೆರೆದು ನೋಡುವ ಕನಸು ಬಹಳ ದೊಡ್ಡದು – ಬೃಹತ್ಸ್ವಪ್ನ.
ರಾತ್ರಿಯ ಕನಸು ಸ್ವಂತದ್ದು – ಪ್ರೈವೇಟ್ – ಒಬ್ಬೊಬ್ಬ ವ್ಯಕ್ತಿಯದು.  ಗಂಡನಿರಬಹುದು – ಆದರೂ ಕನಸಿನಲ್ಲಿ ತನ್ನ ಹೆಂಡತಿಯನ್ನು ಕನಸು ನೋಡಲು ಕರೆಯಲಾರ. ಒಮ್ಮೆಲೇ ಸ್ವಂತ ತೀರ ಸ್ವಂತದ್ದು.  ಮಿತ್ರ ತನ್ನ ಮಿತ್ರನನ್ನು ಕನಸಿಗೆ ಕರೆಯಲಾರ.  ತನ್ನ ಕನಸಿನಲ್ಲಿ ತನಗೆ ಬೇಕಾದ ಇನ್ನೊಬ್ಬನನ್ನು ಪಾಲುದಾರನನ್ನಾಗಿ ಮಾಡಿಕೊಳ್ಳಲು ಸಾಧ್ಯವಿಲ್ಲ.

ಕಣ್ತೆರೆದು ಕಾಣುವ ಈ ಕನಸು ಸಮಷ್ಟಿಯದು – ಸಾರ್ವಜನಿಕ.  ಇದನ್ನು ಮುರಿಯುವುದು ಬಲು ಕಷ್ಟ.  ಏಕೆಂದರೆ ಇದು ನಿನ್ನೊಬ್ಬನದಲ್ಲ – ಎಲ್ಲರದು – ಸಂಯುಕ್ತವಾದುದು.  ಆದರೂ ಕಣ್ಮುಚ್ಚಿ ನೋಡುವ ರಾತ್ರಿಯ ಕನಸನ್ನು ನೀನು ಅಳಿಸಬಲ್ಲೆಯಾದರೆ ಅದೇ ನೆನಪು ಈ ಸ್ವಪ್ನದಲ್ಲೂ ಉಪಯೋಗಕ್ಕೆ ಬಂದೀತು.  ನಂತರ ಈ ನೆನಪೇ ಸಾಕು – ಕಣ್ತೆರೆದು ನೋಡುವ ಈ ಕನಸಿನಲ್ಲೂ ಅದೇ ನೆನಪು ನಿರಂತರವಾಗಿ ಇರುತ್ತಾ ನಡೆದರೆ ‘ಇದೂ ಕನಸೇ, ಇದೂ ಕನಸೆ’ – ಎಂಬ ಎಚ್ಚರ ಎಡಬಿಡದೆ ಇದ್ದರೆ- ಈ ಕನಸಿನಿಂದಲೂ ಪಾರಾಗಬಹುದು.

ಯಾರದರೂ ನಿನ್ನನು ಬೈದರೆಂದು ಭಾವಿಸು.  ಇದು ಒಂದು ಕನಸು ಎಂಬುದನ್ನು ನೆನಪಿಸಿಕೊಂಡರೆ ಸಾಕು – ನೀನು ಸಿಟ್ಟು ಮಾಡಲಾರೆ.  ಬಹು ಬೆಲೆ ಬಾಳುವ ಒಂದಾನೊಂದು ವಸ್ತು ನಿನ್ನ ಕೈಜಾರಿ ಕೆಳಗೆ ಬಿದ್ದು ಮುರಿದು ಹಾಳಾಯಿತೆಂದಿಟ್ಟುಕೋ – ಇದೆಲ್ಲ ಕನಸು ಎಂದು ನೀನು ನೆನಪು ಮಾಡಿಕೋ – ಹಾಳಾದುದರ ದುಃಖ ನಿನಗುಂಟಾಗದು.  ಹೆಂಡತಿ ಸತ್ತಳು – ಗಂಡ ಸತ್ತ – ಅಥವಾ ಒಬ್ಬನೇ ಮಗ ಸತ್ತು ಹೋದ – ಇಂದೊಂದು ಕನಸು ಎಂದುಕೊಳ್ಳಲು ತುಂಬಾ ಕಷ್ಟ – ತೀರ ಕಷ್ಟ!  ಆಹಾ!  ಆದರೂ ನೀನು ಅದನ್ನು ಕನಸೆಂದು ಭಾವಿಸುವೆಯಾದರೆ ದುಃಖ ವಿಸರ್ಜಿತವಾದಂತೆ.  ಎಲ್ಲವೂ ಕನಸೆಂದು ಯಾವಾತನು ಮನದಟ್ಟು ಮಾಡಿಕೊಂಡಿರುವನೋ ಅವನನ್ನು ಮೃತ್ಯುವೂ ಕೊಂಕಿಸಲಾರದು -  ಜೀವನವೂ ಕದಲಿಸಲಾರದು.  ಅವನಿಗೆ ಸುಖ ಸುಖವೆನಿಸದು; ದುಃಖ ದುಃಖವೆನಿಸದು.  ಇದನ್ನೇ ಬುದ್ಧತ್ವವೆನ್ನುವುದು – ಇದನ್ನೇ ಜೀನತ್ವವೆನ್ನುವುದು.  ಸುಖವೂ ಮುಟ್ಟದು.  ದುಃಖವೂ ಮುಟ್ಟದು – ಇದೇ ಪರಮ ಪ್ರಜ್ಞೆ.

ಶಂಕರರು ನಿಮ್ಮನ್ನು ಬಾರಿ ಬಾರಿಗೂ ಮೂಢರೆನ್ನುವುದು ಕೇಳಿ ಬೇಸರಿಸದಿರಿ.  ಸಿಟ್ಟಾಗದಿರಿ.  ಸಿಟ್ಟಾದುದರಿಂದ ಶಂಕರರಿಗೆ ಯಾವ ಹಾನಿಯಿಲ್ಲ.  ಸಿಟ್ಟಾದುದರಿಂದ – ‘ಶಂಕರರು ನಿಮ್ಮನ್ನು ಮೂಢರೆನ್ನುವುದು ಸರಿ’ – ಎಂಬುದನ್ನು ನೀವೇ ಸಮರ್ಥಿಸಿದಂತಾಗುವುದು.  ಅವರು ಸಂಕೋಚದಿಂದ ನಿಮ್ಮನ್ನು ಬರಿಯ ಮೂಢರೆಂದು ಹೇಳುತ್ತಿರುವರು.  ಆದರೆ ನೀವು ಬಹುಷಃ ಮಹಾ ಮೂಢರು!  ನಾವು ಮೂಢರಲ್ಲವೆಂದು ಹಠ ಮಾಡಬೇಡಿ.  ಏಕೆಂದರೆ ಆ ಹಟವೇ ನಿಮ್ಮ ಮೌಢ್ಯಕ್ಕೆ  ರಕ್ಷಣೆಯಾದೀತು.  ಮೌನವಾಗಿ ಒಪ್ಪಿಕೊಳ್ಳಿ – ನಿಮ್ಮ ಒಪ್ಪುವಿಕೆಯೇ ಮೌಢ್ಯವನ್ನು ಮುರಿಯುವುದು.  ಬರಿ ಒಪ್ಪಿಕೊಳ್ಳುವುದಷ್ಟೇ ಅಲ್ಲ; ಎದ್ದಾಗ – ಕುಳಿತಾಗ ನಾನು ಮೂಢ – ಮೂರ್ಚಿತ- ಅರಿವುಗೆಟ್ಟವನು – ಮರುಳು – ಎಂದು ಅಡಿಗಡಿಗೆ ನಿನಗೆ ನೀನೆ ನೆನಪಿಸುತ್ತಿರು.  ಆಗ ನಿನ್ನ ಗುಣ ಧರ್ಮಗಳು ಮಾರ್ಪಡುವುವು – ನಿನ್ನ ಕೃತ್ಯಗಳು ಬೇರೆಯಾಗುವುವು.   ನಿನ್ನ ಚೈತನ್ಯವು ಹೊಸ ದಿಕ್ಕಿನಲ್ಲಿ ಪ್ರವಹಿಸತೊಡಗುವುದು.  ಅಂದರೆ ನಾನು ಮೂರ್ಖನೆಂಬ ಅರಿವಿರಬೇಕು.  ಅದೇ ನಿನ್ನ ತಿಳುವಳಿಕೆಯ ಶುಭಾರಂಭ – ಸೂತ್ರಪಾಠ.

ಅಜ್ಞಾನದ ಅರಿವು ಜ್ಞಾನದ ಮೊದಲ ಚರಣ.

ಕತ್ತಲೆಯನ್ನು ಸರಿಯಾಗಿ ತಿಳಿಯುವುದು ದೀಪ ಬೆಳಗುವ ಮಂಗಳಾಚರಣೆ.
ಕತ್ತಲೆಯನ್ನೇ ಕತ್ತಲೆಯೆಂದು ತಿಳಿಯದವ – ಕುರುಡನ್ನು ಕುರುಡು ಎಂದು ತಿಳಿಯದವ – ಕಣ್ಣಿಗಾಗಿ ಏಕೆ ಹಂಬಲಿಸುವ?  ನೀನು ಚಿಕಿತ್ಸಕನ ಬಳಿ ಹೋದಾಗ ನಿನಗಾವ ಔಷದಿಯನ್ನು ಕೊಡುವುದು ಎಂದು ಆತ ಚಿಂತಿಸುವುದಿಲ್ಲ.  ರೋಗದ ವಿಧಾನದ ಬಗ್ಗೆ ಚಿಂತಿಸುವ.  ಡಯಾಗ್ನೈಸ್ ಸರಿಯಾಗಬೇಕೆಂದು ಅವನ ಚಿಂತೆ.  ಕಾಯಿಲೆಗೆ ವಿಧಾನ ಮೊದಲು ವಿಚಾರಾರ್ಹ.  ನಂತರ ಚಿಕಿತ್ಸೆ ವಿಧಾನವು ಸರಿಯಾದರೆ ಔಷದಿ ಮಾಡುವುದು ಸರಳ.  ಕಾಯಿಲೆ ಯಾವುದೆಂದು ಗುರುತು ಹಿಡಿದರೆ ಔಷದಿ ಮಾಡುವುದು ದೊಡ್ಡದೇನಲ್ಲ. ಆದ್ದರಿಂದ ದೊಡ್ಡ ದೊಡ್ಡ ಚಿಕಿತ್ಸಕರು ರೋಗದ ವಿಧಾನ ಹೇಳಲು ಹಣ ಪಡೆಯುವರು.  ರೋಗವಿಂತಹುದೆಂದು ತಿಳಿದರೆ ಔಷದಿ ಮಾಡುವುದು ಬಲು ಸುಲಭ.  ಅದೇನು ಮಹಾ. ದೊಡ್ಡ ದೊಡ್ಡ ಸೀಸೆಗಳಲ್ಲಿ ತಯಾರಾಗಿರುವುದು.  ಖಾಯಿಲೆ ಮಾತ್ರ ತಿಳಿದರೆ ಸಾಕು.  ತನಗೆ ತಾನೇ ಔಷದಿ ಸಿಕ್ಕೀತು ಅಡಚಣೆಯೇ ಇಲ್ಲ.

ಶಂಕರರು ಪುನಃ ಪುನಃ ಹೇಳುವರು.  ‘ಹೇ ಮೂಢ! ಗೋವಿಂದನನ್ನು ನೆನೆ.’

ಅವರು ನಿಮ್ಮ ರೋಗಕ್ಕೆ ವಿಧಾನವನ್ನು ಹೇಳುತ್ತಿರುವರು.  ಮೂಢತೆಯೇ ನಿಮ್ಮ ರೋಗ, ಗೋವಿಂದನ ಭಜನೆ ಅದಕ್ಕೆ ಔಷಧಿ.  ನೀನು ಮೂಢನೇ ಅಲ್ಲವಾದರೆ ಗೋವಿಂದನ ಭಜನೆ ಏಕೆ ಮಾಡುವೆ?  ನಿನಗೆ ಕಾಯಿಲೆ ಇಲ್ಲವಾದ ಮೇಲೆ ಚಿಕಿತ್ಸೆಯೇಕೆ?  ಒಂದು ವೇಳೆ ನಿನ್ನ ರೋಗವನ್ನೇ ಜೋಪಾನ ಮಾಡುತ್ತಿದ್ದು – ರೋಗವೇ ನಿನ್ನ ಆರೋಗ್ಯವೆಂದು ಪೋಷಣೆ ಮಾಡಿದರೆ ಆಗ ನೀನು ಸರಿ ಹೋಗುವುದು ಅಸಾಧ್ಯ – ನಿನ್ನ ಚಿಕಿತ್ಸೆಯೇ ಅಸಾಧ್ಯ.

(ಓಶೋ ಅವರ ‘ಭಜಗೋವಿಂದಂ ಮೂಢಮತೆ – ಬನ್ನಿ ಒಮ್ಮೆ ಹಿಂತಿರುಗಿ ನೋಡುವ’ ಪುಸ್ತಕದಿಂದ ಆಯ್ದ ಭಾಗ.  ಇದು ನನ್ನ ಅಚ್ಚುಮೆಚ್ಚಿನ ಪುಸ್ತಕಗಳಲ್ಲೊಂದು)

Tag: Bhaja Govindam Mudamathe

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ