ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಬುಲೆಟ್ ಪ್ರಕಾಶ್


 ಬುಲೆಟ್ ಪ್ರಕಾಶ್ 


ದಿವಂಗತ ಬುಲೆಟ್ ಪ್ರಕಾಶ್ ಕನ್ನಡದ ಉತ್ತಮ ಹಾಸ್ಯಪಾತ್ರಧಾರಿಗಳಲ್ಲಿ ಒಬ್ಬರೆನಿಸಿದ್ದವರು.

ಬುಲೆಟ್ ಪ್ರಕಾಶ್ 1976ರ ಏಪ್ರಿಲ್ 2ರಂದು ಜನಿಸಿದರು.

ಬುಲೆಟ್ ಪ್ರಕಾಶ್ ಅವರ ಹಲವಾರು ಹಾಸ್ಯದ ತುಣುಕುಗಳನ್ನು ನೋಡಿ ನಾವೆಲ್ಲಾ ನಕ್ಕಿದ್ದೆವು.  ರಂಗಾಯಣ ರಘು ಜೊತೆ ನಿರ್ಮಾಣ, ನಿರ್ದೇಶನ ಕೂಡಾ ಮಾಡಿದ ಈ ಹುಡುಗನ ಕನ್ನಡ ಕ್ರಿಯಾಶೀಲತೆ ಮೆಚ್ಚುವಂತದಿತ್ತು.  

ಮೊದಲು ‘ಎ. ಕೆ. 47’ ಚಿತ್ರದಲ್ಲಿ ಖಳರಾಗಿ ಬಂದ ಬುಲೆಟ್ ಪ್ರಕಾಶ್ ಮುಂದಿನ ದಿನಗಳಲ್ಲಿ ಹಾಸ್ಯನಟರಾಗಿ ಜನಪ್ರಿಯರಾಗಿದ್ದರು.  ಅವರು ನಟಿಸಿದ ಚಿತ್ರಗಳ ಸಂಖ್ಯೆ  350ಕ್ಕೂ ಹೆಚ್ಚಿನದು.  ಕನ್ನಡವಲ್ಲದೆ ಕೆಲವೊಮ್ಮೆ ಹೊರ ಭಾಷಾ ಚಿತ್ರಗಳಲ್ಲೂ ನಟಿಸಿ ಬಂದಿದ್ದರು.   ಕೋಮಲ್, ಕೋಕಿಲ, ಬುಲೆಟ್, ಟೆನ್ನಿಸ್, ಮಂಡ್ಯ, ಶರಣ್  ಇಂಥಹ ಹುಡುಗರ ಹಾಸ್ಯ,  ಕನ್ನಡಿಗರನ್ನು ಇನ್ನೂ ಚಲನಚಿತ್ರಗಳತ್ತ ಕಣ್ಣುಹಾಯಿಸುವಲ್ಲಿ ಸಾಕಷ್ಟು ಪ್ರೇರಕವಾಗಿರುವಂತದ್ದು. ಸಾಕಷ್ಟು  ಕಷ್ಟಪಟ್ಟು ದುಡಿಯುವ ಈ ಹುಡುಗರಿಗೆ ಚಿತ್ರಪ್ರೇಕ್ಷಕರು ಮತ್ತು ಚಿತ್ರರಂಗ ಸಾಕಷ್ಟು ಕೃತಜ್ಞರಾಗಿರಬೇಕು.

ಬುಲೆಟ್ ಪ್ರಕಾಶ್ ‘ಪರಾರಿ’ ಎಂಬ ಚಿತ್ರದಲ್ಲಿ ನಾಯಕ ನಟರಾಗಿ ಅಭಿನಯಿಸಿದ್ದರು. ‘ಐತಲಕ್ಕಡಿ’ ಅಂತಹ ಚಿತ್ರದ ನಿರ್ಮಾಣದಲ್ಲೂ ಭಾಗವಹಿಸಿದ್ದರು. ಬುಲೆಟ್ ಪ್ರಕಾಶ್ ಚುನಾವಣಾ ರಂಗದಲ್ಲಿ ಕೂಡಾ ಕೆಲಕಾಲ ಚಾಲ್ತಿಯಲ್ಲಿದ್ದರು.

‘ಗಾತ್ರವೂ ಆನೆಯಂತೆ, ಬದುಕೂ ಆನೆಯಂತೆ’ ಎಂದು ತಮ್ಮ ಬದುಕನ್ನು ವಿಶ್ಲೇಷಿಸಿಕೊಳ್ಳುತ್ತಿದ್ದ  ಬುಲೆಟ್ ಪ್ರಕಾಶ್ ತಮ್ಮ ಮೇಲಿನ ವಿಡಂಬನೆಯನ್ನು ನಗುನಗುತ್ತಾ ಸ್ವೀಕರಿಸಿದವರು.  ಸೈಕಲ್ ಮೇಲೆ ಶೂಟಿಂಗಿಗೆ ಬರುತ್ತಿದ್ದ ಈತನನ್ನು ಗೆಳೆಯರು ಬುಲೆಟ್ ಪ್ರಕಾಶ್ ಎಂದರು.  ಅದೇ ಆತನ ಹೆಸರಾಯಿತು.  ತನ್ನ ಅಂತರಂಗವನ್ನೆಲ್ಲಾ ತನ್ನ ದೊಡ್ಡ ದೇಹದಲ್ಲಿ ಬಚ್ಚಿಟ್ಟುಕೊಂಡು ಪ್ರೇಕ್ಷಕರಿಗೆ ನಗೆ ನೀಡುತ್ತಿದ್ದ   ಬುಲೆಟ್ ಪ್ರಕಾಶ್ 2020ರ ಏಪ್ರಿಲ್ 6ರಂದು ತಮ್ಮೆಲ್ಲ ನೋವುಗಳಿಗೆ ಇತಿಶ್ರೀ ಹಾಡಿ ಬದುಕಿನಂಗಣದಿಂದ‍ ಹೊರಗೆ ನಡೆದುಬಿಟ್ಟರು.

ಅವರು ತಮ್ಮ ತೂಕ 35 ಕಿಲೋ ಇಳಿಸಿಕೊಂಡರು ಎಂಬ ಸುದ್ಧಿ ಬಂದಿತ್ತು.  ಅವರು ಇಳಿಸಿಕೊಳ್ಳದೆ ಉಳಿಸಿಕೊಳ್ಳಬೇಕಿತ್ತ! ಇಳಿಸಿ-ಉಳಿಸಿಕೊಳ್ಳಬೇಕಿದ್ದಕ್ಕೆಲ್ಲ ಪ್ರಕೃತಿಯಲ್ಲಿ ಅದರದ್ದೇ ಆದ ನಿಯಮವಿದೆಯೆ?!

ಎಲ್ಲ ಅದಮೇಲೆ ಬದುಕಿನ ಈ ಪ್ರಶ್ನೆಗಳಿಂದ ಪ್ರಯೋಜನವಿದೆಯೆ.  ಲೋಕದ ಬದುಕು ಬಲ್ಲವರ್ಯಾರು,  ಕಾಲದ ಮುಂದೆ ನಿಲ್ಲುವರ್ಯಾರು.  ಎಲ್ಲ ಕೆಲವು ಕ್ಷಣಗಳಂತಹ ಬದುಕು. ಅದರ ತುಂಬ ಬರೀ ಕಥೆ, ವ್ಯಥೆ. ಈ ಮಧ್ಯೆ ನಮಗೆ ದಕ್ಕಿದ ಕೆಲವು ಸಂತಸದ ಕ್ಷಣಗಳ ನೆನಪಷ್ಟೇ ನಮ್ಮ ಬದುಕು.  ಅಂತಹ ಸಂತಸದ ಕ್ಷಣ ನಮ್ಮ ಬದುಕಲ್ಲಷ್ಟು ತುಂಬಿ ಸಣ್ಣ ವಯಸ್ಸಿನಲ್ಲೇ ತಮ್ಮ ಬುಲೆಟ್ ಹತ್ತಿ ಹೊರಟು ಹೋದ ಪ್ರಕಾಶ್ ನಿಜಕ್ಕೂ ಸ್ಮರಣೀಯರು.

On the birth anniversary of our lovely talent Late Bullet Prakash 


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ