ಕನ್ನಡದಲ್ಲೂ ವಿಜ್ಞಾನವನ್ನು ಮನೋಜ್ಞವಾಗಿಸಿದ ಮಹನೀಯರು
- ವಿಶ್ವೇಶ್ವರ ಭಟ್
ಕ್ಷಣಕ್ಷಣ ಸುದ್ದಿ ಜಂಜಾಟ, ಬ್ರೇಕಿಂಗ್ ನ್ಯೂಸ್‌ಭರಾಟೆ ಮಧ್ಯದಲ್ಲಿ ಇತ್ತೀಚೆಗೆ ಎರಡು ತಾಸು ಬೆಂಗಳೂರಿನ ಸದಾ ಗಿಜಿಗಿಡುವ ತರಗುಪೇಟೆಯಲ್ಲಿರುವ ನನ್ನ ಅಚ್ಚುಮೆಚ್ಚಿನ ಅಡ್ಡೆಯಾದ ಕೃಷ್ಣಪ್ಪ ಐತಾಳರ ರದ್ದಿ ಅಂಗಡಿಯಲ್ಲಿ ಕಳೆದು ಹೋಗಿದ್ದೆ. ಕಳೆದ ಇಪ್ಪತ್ತೊಂದು ವರ್ಷಗಳಿಂದ ಐತಾಳರ ರದ್ದಿ ಅಂಗಡಿಗೆ ಅವೆಷ್ಟು ಸಲ ಹೋಗಿದ್ದೇನೋ ಲೆಕ್ಕವಿಲ್ಲ. ಪತ್ರಿಕೆ, ಟಿ.ವಿ. ಚಾನೆಲ್‌ನ್ನು ಹೆಗಲಿಗೇರಿಸಿಕೊಂಡ ಬಳಿಕ 'ಅಡ್ಡೆ' ಭೇಟಿಗೆ ಕೊಂಚ ಅಡ್ಡಿಯಾಗಿದೆ. ನನ್ನ ಪಾಲಿಗೆ ಅದು ಪವಿತ್ರಕ್ಷೇತ್ರ, ತ್ರಿವೇಣಿಸಂಗಮ. ಬೆಂಗಳೂರಿನ ಎಲ್ಲ ರದ್ದಿ ಪೇಪರ್, ಪುಸ್ತಕಗಳು ಅವರ ಅಂಗಡಿಯನ್ನು ಸ್ಪರ್ಶಿಸಿ ಮುಂದೆ ಹೋಗುತ್ತಿದ್ದ ಕಾಲವೊಂದಿತ್ತು. ಐತಾಳರಿಗೂ ವಯಸ್ಸಾಯಿತು. ಮಕ್ಕಳು ವಿದ್ಯಾಭ್ಯಾಸ, ಉದ್ಯೋಗಕ್ಕೆಂದು ಅಮೆರಿಕ ಸೇರಿದರು. ಕುಲಕಸುಬನ್ನು ಬಿಡಬಾರದೆಂದು ಐತಾಳರು ರದ್ದಿ ಅಂಗಡಿಯನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ.
ಐತಾಳರು ಬರೀ ರದ್ದಿ ಅಂಗಡಿಯ ಮಾಲೀಕರಾಗಿದ್ದರೆ ನನಗೆ ಆಸಕ್ತಿಯಿರುತ್ತಿರಲಿಲ್ಲ. ಕಾರಣ ತರಗುಪೇಟೆ ಹಾಗೂ ಸುತ್ತಮುತ್ತ ಹತ್ತಾರು ರದ್ದಿ ಅಂಗಡಿಗಳಿವೆ. ಆ ಅಂಗಡಿಗಳ ಮಾಲೀಕರ್ಯಾರೂ ಐತಾಳರ ರೀತಿ ಅಲ್ಲ. ರದ್ದಿ ಅಂಗಡಿಯನ್ನಿಟ್ಟುಕೊಂಡು ಐತಾಳರು ಸ್ವತಃ ಪುಸ್ತಕ, ಓದಿನಲ್ಲಿ ಆಸಕ್ತಿ ಬೆಳೆಸಿಕೊಂಡವರು. ಪುಸ್ತಕಗಳ ಬಗ್ಗೆ ಒಬ್ಬ ವಿಶ್ವವಿದ್ಯಾಲಯದ ಗ್ರಂಥಪಾಲಕನಿಗಿಂತ ಹೆಚ್ಚು ತಿಳಿವಳಿಕೆ, ಆಸಕ್ತಿ ಅವರಿಗಿದೆ. ನೀವು ಯಾವುದೇ ಪುಸ್ತಕಗಳ ಬಗ್ಗೆ ಹೇಳಿ ಅವರು ಇನ್ನಷ್ಟು ಮಾಹಿತಿ ಕೊಟ್ಟು ಮಾತುಕತೆಯನ್ನು ವಿಸ್ತರಿಸುತ್ತಾರೆ. ಹಾಗಂತ ವಾಚಾಳಿಯಲ್ಲ. ಪ್ರತಿದಿನ ಅಂಗಡಿಗೆ ಬರುವ ನೂರಾರು ಪುಸ್ತಕಗಳ ಪೈಕಿ ಹತ್ತಾರು ಪುಸ್ತಕಗಳನ್ನು ಓದಲು ಎತ್ತಿಟ್ಟುಕೊಳ್ಳುತ್ತಾರೆ. ಗಿರಾಕಿಗಳಿಲ್ಲದಿದ್ದಾಗ ಓದಿನಲ್ಲಿ ತಲ್ಲೀನ. 'ವ್ಯಾಪಾರಕ್ಕೆ ವ್ಯಾಪಾರ, ಓದಿಗೆ ಓದು, ಅದೇ ರದ್ದಿ ಅಂಗಡಿಯ ಮಜಕೂರು ಮಾರಾಯ್ರೇ' ಈ ಮಾತು ಅವರ ಬಾಯಲ್ಲಿ ಆಗಾಗ ಉದುರುವುದುಂಟು.
ಒಂದು ಹೊಸ ಓದು, ಪುಸ್ತಕ ಸಿಕ್ಕರೆ ಐತಾಳರಿಗೆ ಏನೋ ಸಂಭ್ರಮ. ನಿಧಿ ಸಿಕ್ಕಷ್ಟು ಆನಂದ. ಫೋನ್ ಮಾಡಿ ಹೇಳದಿದ್ದರೆ ಸಮಾಧಾನವಿಲ್ಲ. 'ಐತಾಳರೇ, ಪುಸ್ತಕ ಹುಳು ಎಂಬ ಬಿರುದು ನಿಮಗೆ ಒಪ್ಪುವಷ್ಟು ಬೇರಾರಿಗೂ ಒಪ್ಪುವುದಿಲ್ಲ' ಎಂದು ತಮಾಷೆ ಮಾಡಿದರೆ, 'ಭಟ್ಟರೇ, ಆಸ್ಕರ್ ವೈಲ್ಡ್ ಒಂದು ಮಾತನ್ನು ಹೇಳಿದ್ದಾನೆ ಗೊತ್ತಾ? If one cannot enjoy reading a book over and over again, there is no use reading at all ಅಂತಾರೆ ಐತಾಳರು.
ಪ್ರತಿಸಲ ಐತಾಳರ ಅಂಗಡಿಗೆ ಹೋದಾಗಲೂ ನಾನು ಬರೀ ಕೈಯಲ್ಲಿ ವಾಪಸ್ ಬಂದಿದ್ದೇ ಇಲ್ಲ. ಎಲ್ಲರೂ ಅವರ ಅಂಗಡಿಗೆ ಹಳೆ ಪೇಪರ್, ಪುಸ್ತಕಗಳನ್ನು ಮಾರಲು ಹೋಗುತ್ತಾರೆ. ಆದರೆ ನಾನು ಮಾತ್ರ ಅವುಗಳನ್ನು ಖರೀದಿಸಲು ಹೋಗುತ್ತೇನೆ. ನನ್ನ ಪಾಲಿಗೆ ಅದು ಜ್ಞಾನಗಂಗೆ! ಪ್ರತಿದಿನ ಟ್ರಕ್ಕುಗಟ್ಟಲೆ ಪೇಪರ್, ಪುಸ್ತಕ, ನೋಟ್ ಬುಕ್‌ಗಳು ಬರುತ್ತವೆ, ಹೋಗುತ್ತವೆ. ನನ್ನಂಥ ಕೆಲವು ಪುಸ್ತಕ ಹುಳುಗಳಿಗೆ ಐತಾಳರು ಆಗಾಗ ಪುಸ್ತಕ, ರದ್ದಿ ಪೇಪರ್‌ಗಳನ್ನು ಎತ್ತಿಟ್ಟು ತಿನಿಸುತ್ತಿರುತ್ತಾರೆ.
ನಾನು ನಿಮಗೆ ಹೇಳಬೇಕೆಂದಿದ್ದು ಈ ವಿಷಯವನ್ನಲ್ಲ, ಇರಲಿ. ಇತ್ತೀಚೆಗೆ ಐತಾಳರ ಅಂಗಡಿಗೆ ಹೋದಾಗ ನಾನು ಹಳೆಪತ್ರಿಕೆಗಳ ರಾಶಿಯಲ್ಲಿ ಹೂತು ಹೋಗಿದ್ದೆ. ಮೂಲೆಯಲ್ಲಿ ಹಳೆ ಪತ್ರಿಕೆಗಳ ದೊಡ್ಡ ಗಂಟಿತ್ತು. ಆ ಪತ್ರಿಕೆಗಳನ್ನು ಮುಟ್ಟಿದರೆ ಕಾಗದವೆಲ್ಲ ಧೂಳಾಗಿ ಬಿಡುವಷ್ಟು ಪುರಾತನ ಎನಿಸುವಂಥವು. ಜತೆಗೆ ಧೂಳಿನ ಘಮಲು. ಪದೇ ಪದೆ ಶಿಮಲು ಬರುತ್ತಿದ್ದುದರಿಂದ ಹೆಚ್ಚು ಹೊತ್ತು ಅಲ್ಲಿರಲು ಆಗುತ್ತಿರಲಿಲ್ಲ. ಆದರೂ ಏನೋ ತವಕ. ಆ ಪತ್ರಿಕೆಗಳ ಗಂಟು ಬಿಚ್ಚಿ ತಡಕಾಡಬೇಕೆಂಬ ಹಂಬಲ. ಐತಾಳರ ಕಡೆ ನೋಡಿದೆ. 'ಅಯ್ಯೋ ನೋಡಿ ನೋಡಿ, ಹಳೆ ಪತ್ರಿಕೆಗಳನ್ನು ನೋಡಲು ಸಂಕೋಚವೇಕೆ? ಯಾರಿಗೆ ಗೊತ್ತು, ಅವು ನಿಮಗೆ ಉಪಯೋಗಕ್ಕೆ ಬಂದರೂ ಬಂದೀತು. ಹಾಗೆ ನೋಡಿದರೆ, ನನ್ನ ಅಂಗಡಿಗೆ ಮಂದಿ ರದ್ದಿ ಅಂಗಡಿ ಎಂದು ಯಾಕೆ ಕರೆಯುತ್ತಾರೋ ಗೊತ್ತಿಲ್ಲ. ಇಲ್ಲಿ ಬಿಸಾಕುವಂಥ ಒಂದೇ ಪತ್ರಿಕೆಯಿಲ್ಲ, ಪುಸ್ತಕವೂ ಇಲ್ಲ. ನನ್ನ ಪ್ರಾರಬ್ಧ, ಅಂಗಡಿ ಅಂತ ಇಟ್ಟುಕೊಂಡ ನಂತರ ಮಾರಲೇಬೇಕಲ್ಲ ಸ್ವಾಮಿ' ಅಂದರು.
ನಾನು ಕೈ ಹಾಕಿದ 'ಗಂಟು' ಅಂತಿಂಥದ್ದಾಗಿರಲಿಲ್ಲ. ಅದು ಸುಮಾರು ತೊಂಬತ್ತೈದು ವರ್ಷಗಳ ಹಿಂದೆ ಪ್ರಕಟವಾಗುತ್ತಿದ್ದ ಪತ್ರಿಕೆಯ ಕಟ್ಟು. ಆ ಪತ್ರಿಕೆಯ ಹೆಸರು 'ವಿಜ್ಞಾನ.' 1918ರ ಅವಧಿಯಲ್ಲಿ ಪ್ರಕಟವಾಗುತ್ತಿದ್ದ ಪತ್ರಿಕೆ. ಸ್ವಾಭಾವಿಕವಾಗಿ ನನ್ನ ಆಸಕ್ತಿ ಕೆರಳಿತು. ತೊಂಬತ್ತೈದು ವರ್ಷಗಳ ಹಿಂದೆ ಕನ್ನಡದಲ್ಲಿ ವಿಜ್ಞಾನ ವಿಷಯಕ್ಕೆ ಸಂಬಂಧಿಸಿದ ಪತ್ರಿಕೆಯೊಂದು ಇತ್ತಾ? ಅಂಥ ಸಾಹಸ ಮಾಡಿದವರು ಯಾರು? ವಿಜ್ಞಾನವನ್ನು ಕನ್ನಡದಲ್ಲಿ ಬರೆಯಲು ಕಷ್ಟ ಎಂದು ನಾವು ಈಗ ಮೂಗು ಮುರಿಯುತ್ತೇವೆ. ಆದರೆ 1918ರಲ್ಲಿ ಅದನ್ನು ಕೃತಿರೂಪಕ್ಕೆ ತಂದಿದ್ದಾರಲ್ಲ, ಅವರ ಸಾಹಸ ಎಂಥದು? ವಿಜ್ಞಾನದಂಥ ವಿಷಯವನ್ನು ಕನ್ನಡದಲ್ಲಿ ಎಷ್ಟು ಸರಾಗವಾಗಿ, ಸರಳವಾಗಿ ಹೇಳಬಹುದಲ್ಲ ಎಂಬುದನ್ನು ತೋರಿಸಿಕೊಟ್ಟ ಆ ಪತ್ರಿಕೆಯ ಹಿಂದಿನ ಶಕ್ತಿಗಳ ಪ್ರೇರಣೆಯಾದರೂ ಏನು? ...ಮುಂತಾದ ಹಲವು ಪ್ರಶ್ನೆಗಳು, ಕುತೂಹಲಗಳು ಒಂದೇ ಸಮನೆ ಹಾದು ಹೋದವು.
ಈಗಲೂ ನಮ್ಮಲ್ಲಿ ವಿಜ್ಞಾನ ವಿಷಯಕ್ಕೆ ಸಂಬಂಧಿಸಿದಂತೆ ಬರೆಯುವವರ ಸಂಖ್ಯೆ ಕೈ ಬೆರಳಿನಲ್ಲಿ ಎಣಿಸಬಹುದು. ವಿಜ್ಞಾನವನ್ನು ಕನ್ನಡದಲ್ಲಿ ಹೇಳಿಕೊಡುವುದು, ಬರೆಯುವುದು ಕಷ್ಟ ಎಂದು ಬಹುತೇಕ ಮಂದಿ ಅನಿಸಿಕೆ. ಆದರೆ ಹಿಂದಿನ ಶತಮಾನದ ಆರಂಭದಲ್ಲಿ ವಿಜ್ಞಾನದಂಥ ಕಠಿಣ ವಿಷಯವನ್ನು ನಮ್ಮ ಭಾಷೆಯಲ್ಲಿ ಸರಳವಾಗಿ, ಅರ್ಥವಾಗುವ ಹಾಗೆ ಹೇಳಬಹುದು ಎಂಬುದನ್ನು ತೋರಿಸಿಕೊಟ್ಟವರು ಬೆಳ್ಳಾವೆ ವೆಂಕಟನಾರಣಪ್ಪ ಹಾಗೂ ನಂಗಪುರಂ ವೆಂಕಟೇಶಯ್ಯಂಗಾರ್ಯರು.
ಐತಾಳರ ಅಂಗಡಿಯಲ್ಲಿ ಸಿಕ್ಕಿದ 'ವಿಜ್ಞಾನ' ಪತ್ರಿಕೆಯ ನಾಲ್ಕು ಸಂಚಿಕೆಗಳನ್ನು ಎತ್ತಿಟ್ಟುಕೊಂಡು ಬಂದೆ. ಕನ್ನಡದಲ್ಲಿ ಬರೆಯುವವರು, ಅದರಲ್ಲೂ ವಿಜ್ಞಾನದ ವಿಷಯದಲ್ಲಿ ಬರೆಯುವವರು ಅತಿ ವಿರಳವಾಗಿದ್ದ ಕಾಲದಲ್ಲಿ, ವಿಜ್ಞಾನದಂಥ ಗಡುಚಾದ ವಿಷಯವನ್ನು ಜನಸಾಮಾನ್ಯರಿಗೂ ಅರ್ಥವಾಗುವಂಥ ಭಾಷೆಯಲ್ಲಿ ತಿಳಿ ಹೇಳುವಷ್ಟು ಕನ್ನಡಭಾಷೆ ಸಮೃದ್ಧವಾಗಿ ಬೆಳೆದಿಲ್ಲ ಎಂಬ ಭಾವನೆ ಇದ್ದ ಕಾಲದಲ್ಲಿ ಈ ಇಬ್ಬರು ಮಹನೀಯರು ಒಟ್ಟಾಗಿ ಇಂಥ ಸಾಹಸಕ್ಕೆ ಕೈ ಹಾಕಿದರಲ್ಲ, ಅವರಲ್ಲಿದ್ದ ಚೈತನ್ಯ, ಹಠ, ಕಳಕಳಿಯಾದರೂ ಎಂಥದ್ದು, ಅವರನ್ನು ಯಾವ ಸ್ಫೂರ್ತಿ ಜಾಗೃತವಾಗಿರಿಸಿತ್ತು... ಮುಂತಾದ ಯೋಚನೆಗಳು ಬರುವಾಗ ನನ್ನ ಮನಸ್ಸನ್ನು ಮುತ್ತಿದ್ದವು.
ಆ ಸಂಚಿಕೆಗಳಲ್ಲೆಲ್ಲೂ ಬೆಳ್ಳಾವೆ ವೆಂಕಟನಾರಣಪ್ಪ ಅವರ ಬಗೆಗಾಗಲಿ, ನಂಗಪುರಂ ವೆಂಕಟೇಶಯ್ಯಂಗಾರ್ಯ ಅವರ ಕುರಿತಾಗಲಿ ಯಾವ ವಿವರಗಳೂ ಇರಲಿಲ್ಲ. ಇವರ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಮೂಡಿದ್ದು ಆಗಲೇ. ಈ ಎರಡು ಹೆಸರುಗಳನ್ನು ಎಲ್ಲೋ ಕೇಳಿದ ಹಾಗಿದೆಯಲ್ಲ ಎಂದು ಅಂದುಕೊಂಡರೂ, ಸರಿಯಾಗಿ, ನಿಖರವಾಗಿ ಗುರುತಿಸಲೂ ಸಾಧ್ಯವಾಗಲಿಲ್ಲ. ನನ್ನ ಹುಡುಕಾಟ ಮುಂದುವರಿದಿತ್ತು. ಪರಿಚಿತರಾದ ಮೂರ್ನಾಲ್ಕು ಹಿರಿಯ, ಮಾಜಿ ಪತ್ರಕರ್ತರನ್ನು ಕೇಳಿದೆ. ಒಬ್ಬರ ಬಳಿ ತಲಾ ಕಾಲುಗಂಟೆ ಕೊರೆಸಿಕೊಂಡಿದ್ದನ್ನು ಬಿಟ್ಟರೆ ಹೆಚ್ಚು ಪ್ರಯೋಜನವಾಗಲಿಲ್ಲ. ನನ್ನ ಇಂಥ ಗೊಂದಲವನ್ನು ನಿವಾರಿಸುವ ಓದುಗ ಮಿತ್ರರಾದ ಬೆಂಗಳೂರು ವಾಸಿ ತೀರ್ಥಹಳ್ಳಿಯ ಸುಬ್ಬರಾವ್‌ಗೆ ವಿಷಯ ಹೇಳಿದೆ. ಅವರು ಎಲ್ಲವನ್ನೂ ಬರೆದುಕೊಂಡರು. ಎರಡು ದಿನಗಳ ಬಳಿಕ ನನ್ನ ಮುಂದೆ ಪುಸ್ತಕದೊಂದಿಗೆ ಹಾಜರಾದರು!
'ಸಾರ್, ನೀವು ಬೆಳ್ಳಾವೆ ವೆಂಕಟನಾರಣಪ್ಪ ಹಾಗೂ ನಂಗಪುರಂ ವೆಂಕಟೇಶಯ್ಯಂಗಾರ್ಯರ ಬಗ್ಗೆ ಕೇಳಿದಿರಲ್ಲ, ಇವರು ಪ್ರಕಟಿಸುತ್ತಿದ್ದ ಪತ್ರಿಕೆ ಬಗ್ಗೆ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಹಾಗೂ ಉದಯಭಾನು ಉನ್ನತ ಅಧ್ಯಯನ ಕೇಂದ್ರ 'ವಿಜ್ಞಾನ' ಎಂಬ ಹೆಸರಿನಲ್ಲಿ ಪುಸ್ತಕವನ್ನು ಪ್ರಕಟಿಸಿದೆ.' ಎಂದು ಸುಬ್ಬರಾವ್ ಹೇಳಿದಾಗ ಹುಡುಕುತ್ತಿದ್ದ 'ನಿಧಿ' ಸಿಕ್ಕಿದಷ್ಟು ಆನಂದವಾಯಿತು.
ಬೆಳ್ಳಾವೆ ವೆಂಕಟನಾರಣಪ್ಪ ಹಾಗೂ ನಂಗಪುರಂ ವೆಂಕಟೇಶಯ್ಯಂಗಾರ್ಯರು 'ವಿಜ್ಞಾನ' ಪತ್ರಿಕೆಯನ್ನು ನಡೆಸಿದ್ದು ಕೇವಲ ಎರಡೇ ವರ್ಷಗಳಿರಬಹುದು, ಆದರೆ ಅವರು ಹಾಕಿದ ಬುನಾದಿ ಮಾತ್ರ ಭದ್ರವಾದುದು. ಕನ್ನಡದಲ್ಲಿ ವಿಜ್ಞಾನ ವಿಷಯ ಬರೆಯುವುದೆಂತು ಎಂದು ಕೇಳುವ ಮಂದಿ ಈ ಇಬ್ಬರು 'ಸಾಹಸಿಗಳು' ಮಾಡಿದ ಪತ್ರಿಕೆಯನ್ನು ತಿರುವಿ ಹಾಕಬೇಕು. ನೇಚರ್, ಸೈಂಟಿಫಿಕ್, ಅಮೆರಿಕನ್ ಮುಂತಾದ ವಿಶ್ವವಿಖ್ಯಾತ ವಿಜ್ಞಾನ ಪತ್ರಿಕೆಗಳಿಂದ ಎಕ್ಸ್ ರೇ, ಐನ್‌ಸ್ಟೈನ್‌ನ ಸಾಪೇಕ್ಷ ಸಿದ್ಧಾಂತ, ಡಾರ್ವಿನ್‌ನ ವಿಕಾಸ ಸಿದ್ಧಾಂತ, ಅಮೋನಿಯಾ ತಯಾರಿಕ ವಿಧಾನ, ಅಣುವಿಜ್ಞಾನ ಮುಂತಾದ ಅನೇಕ ವಿಷಯಗಳ ಬಗೆಗಿನ ಲೇಖನಗಳನ್ನು ಸಾಮಾನ್ಯ ಕನ್ನಡಿಗನಿಗೂ ಅರ್ಥವಾಗುವ ರೀತಿಯಲ್ಲಿ, ಸ್ಥಳೀಯ ನುಡಿಗಟ್ಟು, ಹೋಲಿಕೆ, ಭಾಷೆಯ ಸೊಗಡಿನ ಮೂಲಕ ಅನುವಾದಿಸಿದ ರೀತಿ ಮಾತ್ರ ನಿಜಕ್ಕೂ ಶ್ಲಾಘನೀಯ. ಇವರು 'ವಿಜ್ಞಾನ' ಪತ್ರಿಕೆಗೆ ಬರೆಯುವ ಸಂದರ್ಭದಲ್ಲಿ ಸಿದ್ಧಪಡಿಸಿದ ಯಾವುದೇ ಪದಕೋಶವಿರಲಿಲ್ಲ, ಸಿದ್ಧ ಮಾದರಿಯೂ ಇರಲಿಲ್ಲ. ಇದನ್ನೇ ಮುಖ್ಯವಾಗಿಟ್ಟುಕೊಂಡು ಈಗಲೂ ಮೂಗು ಮುರಿಯುವವರಿದ್ದಾರೆ. ಆದರೆ ಇನ್ನೊಬ್ಬರಿಗೆ ತಾವು ಕೈಗೊಂಡ ಕೆಲಸ ಎಷ್ಟು ಕಠಿಣ ಎಂಬುದು ಗೊತ್ತಿತ್ತು. ಹೀಗಾಗಿ ಅದನ್ನು ಒಂದು ವ್ರತದಂತೆ, ತಪಸ್ಸಿನಂತೆ ನಡೆಸಿಕೊಂಡು ಹೋದರು.
ಈ 'ವಿಜ್ಞಾನ' ಪತ್ರಿಕೆಯನ್ನು ಇವರಿಬ್ಬರು ಹೇಗೆ ಪಕ್ಕಾ ಕನ್ನಡದ ಪತ್ರಿಕೆಯಾಗಿ ರೂಪಿಸಲು ಶ್ರಮಿಸಿದರು ಎಂಬುದನ್ನು ತಿಳಿಯಲು 'ನೆಲಗಡಲೆ ಕಾಯಿಯ ರೊಟ್ಟಿ' ಎಂಬ ಲೇಖನದ ಕೆಲವು ಸಾಲುಗಳನ್ನು ಓದಬೇಕು- 'ಐದಾಣೆ ಬೆಲೆಯ ನೆಲಗಡಲೆಯಲ್ಲಿ, ಹತ್ತಾಣೆಯ ಮಾಂಸದಲ್ಲಾಗಲಿ, ಎಂಟಾಣೆಯ ಹಾಲಿನಲ್ಲಾಗಲಿ, ಅಥವಾ ಆರೂವರೆ ಆಣೆಯ ಉರುಳುಗಡ್ಡೆಯಲ್ಲಾಗಲಿ ಇರುವಷ್ಟು ಪೋಷಕ ವಸ್ತುಗಳಿರುತ್ತವೆ.'
ಈ ಪತ್ರಿಕೆಯಲ್ಲಿ 'ಮಳೆ ಉಂಟಾಗುವುದು ಹೇಗೆ?' ಎಂಬ ಶೀರ್ಷಿಕೆಯ ಲೇಖನ ಓದುತ್ತಿದ್ದೆ. ನಮ್ಮ ಮಕ್ಕಳು ಈ ಪ್ರಶ್ನೆ ಕೇಳಿದರೆ ಉತ್ತರಿಸಲು ನಾವು ತಡಕಾಡುತ್ತೇವೆ. ಆದರೆ ಬೆಳ್ಳಾವೆಯವರ ನಿರೂಪಣೆ ಎಷ್ಟು ಸರಳ, ಸಂಕ್ಷಿಪ್ತ ಹಾಗೂ ಮನಮುಟ್ಟುವಂಥದ್ದು ಎಂಬುದು ಗೊತ್ತಾಗುತ್ತದೆ....
'ಒಂದು ಸಣ್ಣ ತಟ್ಟೆಯಲ್ಲಿ ಕೊಂಚ ನೀರು ಹಾಕಿ, ಅದನ್ನು ಗಾಳಿಯಾಡುವ ಬೈಲಿನಲ್ಲಿ, ಯಾರೂ ಮುಟ್ಟದಂತಿಟ್ಟರೆ, ಕೆಲವು ಕಾಲದಲ್ಲಿ ನೀರೆಲ್ಲಾ ಅದೃಶ್ಯವಾಗಿ ಬರೀ ಪಾತ್ರೆ ಮಾತ್ರ ಉಳಿಯುವುದು. ಆ ನೀರೆಲ್ಲಾ ಏನಾಯಿತು? ಅನಿಲಾವಸ್ಥೆಯನ್ನು ತಳೆದು ವಾಯುಮಂಡಲದಲ್ಲಿ ಬೆರೆತುಕೊಂಡಿತು. ಈ ತೆರನಾಗಿ ನೀರು ತನ್ನ ಅವಸ್ಥೆಯನ್ನು ಮೆಲ್ಲನೆ ಬದಲಾಯಿಸಿ ಆವಿಯಾಗುವುದಕ್ಕೆ ಬಾಷ್ಪೀಕರಣ (Evaporation) ಎಂದು ಹೆಸರು. ಒಣಗುವುದಕ್ಕೆ ಹಾಕಿದ ಒದ್ದೆ ಬಟ್ಟೆಗಳ ನೀರೆಲ್ಲಾ ಮೇಲೆ ಹೇಳಿದಂತೆ ಆವಿಯಾಗಿ ವಾಯುಮಂಡಲದಲ್ಲಿ ಸೇರಿಕೊಳ್ಳುತ್ತದೆ; ಬಿಸಿಲಿನಲ್ಲಿ ಹಾಕಿದರೆ ಬೇಗನೆ ಒಣಗುತ್ತವೆ. ಮೇಲೆ ಹೇಳಿದ ತಟ್ಟೆಯ ನೀರೆಲ್ಲಾ ಆವಿಯಾಗುವುದಕ್ಕೆ ಎರಡು ಮೂರು ದಿವಸಗಳಾದರೂ ಬೇಕಾಗಬಹುದು.
ಆದರೆ, ನೀರು ಅತಿ ತ್ವರೆಯಲ್ಲಿ ತನ್ನ ಅವಸ್ಥೆಯನ್ನು ಬಿಟ್ಟು ಅನಿಲರೂಪವಾದ ಉಗಿ (steam) ಯಾಗಬೇಕಾದರೆ, ತಟ್ಟೆಯನ್ನು ಬೆಂಕಿಯ ಮೇಲಿಡಬೇಕು; ಆಗ ನೀರು ಕಾಯ್ದು, ಕುದಿದು ಜಾಗ್ರತೆಯಲ್ಲಿ ಅನಿಲ ಸ್ಥಿತಿಯನ್ನು ಹೊಂದುವುದು. ಬಾಷ್ಪೀಕರಣವು ನೀರಿರುವೆಡೆಗಳಲೆಲ್ಲಾ ನಡೆಯುವುದಲ್ಲದೆ ಪ್ರಪಂಚದಲ್ಲಿ ವಿಶೇಷವಾಗಿ ಜರಗುವುದು. ಸೂರ್ಯನೇ ಬೆಂಕಿ. ಆತನ ತಾಪವು ಪೃಥ್ವಿಯಲ್ಲಿರುವ ಸಮುದ್ರ, ನದಿ, ಕೆರೆ, ಕುಂಟೆ ಮುಂತಾದವುಗಳಲ್ಲಿರುವ ನೀರಿನ ಮೇಲೆ ಬಿದ್ದು, ನೀರಿನ ಕೊಂಚ ಭಾಗವನ್ನು ಆವಿಯಾಗಿ ಹೊರಡಿಸುತ್ತದೆ. ಇದು ವಾಯುಮಂಡಲವನ್ನು ಸೇರುತ್ತದೆ. ಈ ರೀತಿಯಾಗಿ ಬಾಷ್ಪೀಕರಣವು ಸದಾ ನಡೆಯುತ್ತಿರುವ ಪಕ್ಷಕ್ಕೆ ಭೂಮಂಡಲದ ಮೇಲಿರತಕ್ಕ ನೀರೆಲ್ಲಾ ಎಂದರೆ, ಸಾಗರ, ನದಿ, ಕೆರೆ, ಕುಂಟೆ ಮುಂತಾದವುಗಳ ನೀರೆಲ್ಲಾ ಆವಿಯಾಗಿ, ಅವು ಬತ್ತಿ ಒಣಗಬೇಕಲ್ಲ? ಹಾಗೆ ಸಂಪೂರ್ಣವಾಗಿ ಒಣಗುತ್ತವೆಯೋ? ಇಲ್ಲ. ಕಾರಣವೇನು? ಹಿಂದೆ ಹೇಳಿದಂತೆ ವಾಯುಗತವಾಗುವ ಆವಿಯು ಮರಳಿ ಮಳೆ, ಮಂಜು, ಹಿಮ- ಈ ರೂಪಗಳಲ್ಲಿ ಭೂಮಿಯನ್ನು ಸೇರುತ್ತದೆ.
----
ಐತಾಳರಿಗೆ ಮನಸ್ಸಿನಲ್ಲಿ ಕೃತಜ್ಞತೆ ಸಲ್ಲಿಸುವಾಗ ಮನಸ್ಸಿನಲ್ಲಿ ಹಾದು ಹೋದ ಭಾವನೆಯೇನೆಂದರೆ, ನಾವು ಯಾವುದು ಹೊಸತು ಎಂದು ಬೀಗುತ್ತೇವೋ ಅದನ್ನು ಯಾರೋ, ಎಂದೋ ಮಾಡಿ ಮುಗಿಸಿರುತ್ತಾರೆ. ನಾವೇ ಎಲ್ಲವನ್ನೂ ಮಾಡಿದ್ದೇವೆಂದು ಬೀಗುತ್ತೇವೆ.
ಕೃಪೆ: ಕನ್ನಡ ಪ್ರಭ
Tag: Science in Kannada, Bellave Venkatanaranappa, Nangampuram Venkatesha Iyengar
Bellave Venkatnaranappanavara bagge mattastu tiliyabaekadare B.G.L.Swamy, avara PANCHKALASAGOPURA,mattu Lingaiah avru bareda,Kannada sahitya parishattu prkatisida BELLAVE VENKATANARANAPPA, krutigalannu odabahudu.
ಪ್ರತ್ಯುತ್ತರಅಳಿಸಿ