ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಬೇಲಿಯ ಮೇಲಿನ ನೀಲಿಯ ಹೂಗಳು



ಸಾಲಾಗಿ ನವಿಲು ಗರಿಗೆದರಿ ನರ್ತಿಸಿದಂತೆ
ಮುಂಜಾವದಲಿ ಬೇಲಿ ತುಂಬ ನೀಲಿಯ ಹೂವು
ಜೀವನೋತ್ಸಾಹದಲಿ ಎದೆ ತುಂಬಿಸುವ ರೂಹು |
ಭೂಮಿಯಾಳವ ಭಾವ ಮೇಳೈಸಿ ಪುಟಿದಂತೆ
ಎಲ್ಲೆಂದರಲ್ಲೆ ಮನಸೇಚ್ಛೆ ಬೆಳೆದಿಹ ಬಳ್ಳಿ
ತೆರೆದಿಹುದು ನೂರು ಸಾವಿರ ನೀಲ ಬಗೆಗಣ್ಣು |
(ನೇಸರನಿಗೂ ಜಗಕೂ ಇನ್ನೂ ನಿದ್ದೆಗಣ್ಣು)

ಎಲ್ಲ ಒಂದೇ ಅದಕೆ – ತೋಟ ಬೇಲಿಯ ಕಳ್ಳಿ.
ಬಿಸಿಲು ಬಲಿಯುವ ಮುನ್ನ ಬಗೆಗೊಂಡ ಸೌಜನ್ಯ
ಮುಖವ ಸಣ್ಣದು ಮಾಡಿ ಮುದುರಿಕೊಂಡಿರೆ ಜೀವ
ಬರಿಯ ನೆನಪಿಗೆ ಉಳಿದ ದೇಟಿಗಂಟಿದ ಹೂವ
ಬದಿಬದಿಗೆ ನಾಳೆಯರಳುವ ಮೊಗ್ಗೆ ಮೂರ್ಧನ್ಯ |
ವಿಮಲ ಕೋಮಲ ಕಾಂತಿಯೊಗುಮಿಗುವ ಚೈತ್ಯಾಕ್ಷಿ
ಅದೋ ಅಲ್ಲಿ ಇದೋ ಇಲ್ಲಿ: ಪ್ರತ್ಯಕ್ಷ ಸುಮ ಸಾಕ್ಷಿ |

ಸಾಹಿತ್ಯ: ಚನ್ನವೀರ ಕಣವಿ

Tag: Beliya melina neeliya hoogalu

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ