ಹಾಸನ ರಾಜಾರಾವ್
ಹಾಸನ ರಾಜಾ ರಾವ್
ಕನ್ನಡಿಗರಾದ ರಾಜಾ ರಾವ್ ಇಂಗ್ಲಿಷ್ ಭಾಷೆಯಲ್ಲಿ ಬರೆದ ಅದ್ಭುತ ಕಥೆ ಕಾದಂಬರಿಗಳಿಂದ ವಿಶ್ವದಲ್ಲೆಲ್ಲಾ ಪ್ರಸಿದ್ಧರಾದವರು.
ರಾಜಾ ರಾವ್ 1908ರ ನವೆಂಬರ್ 8ರಂದು ಹಾಸನದಲ್ಲಿ ಜನಿಸಿದರು. ತಂದೆ ಎಚ್.ವಿ. ಕೃಷ್ಣಸ್ವಾಮಿ. ತಾಯಿ ಗೌರಮ್ಮ. ರಾಜಾರಾಯರು ನಾಲ್ಕು ವರ್ಷದವರಾಗಿದ್ದಾಗಲೇ ತಾಯಿಯ ಪ್ರೀತಿಯಿಂದ ವಂಚಿತರಾದರು.
ರಾಜಾ ರಾವ್ ಪದವಿಪೂರ್ವದವರೆಗೆ ಹೈದರಾಬಾದಿನಲ್ಲಿ ಓದಿದರು. ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ ಆಂಗ್ಲ ಭಾಷೆ ಮತ್ತು ಫ್ರೆಂಚ್ ಕಲಿತರು. ಹೈದರಾಬಾದಿನ ನಿಜಾಮ್ ಕಾಲೇಜಿನಿಂದ ಸಾಹಿತ್ಯ ಮತ್ತು ಇತಿಹಾಸದಲ್ಲಿ ಬಿ.ಎ. ಪದವಿ ಗಳಿಸಿದರು. ಮುಂದೆ ವಿದ್ಯಾರ್ಥಿವೇತನ ಪಡೆದು ಫ್ರಾನ್ಸ್ ದೇಶಕ್ಕೆ ಹೋಗಿ ಇತಿಹಾಸದಲ್ಲಿ ಹೆಚ್ಚಿನ ಸಂಶೋಧನೆ ನಡೆಸಿದರು. ಅಲ್ಲಿ ‘ಐರಿಷ್ ಸಾಹಿತ್ಯದ ಮೇಲೆ ಭಾರತೀಯ ಪ್ರಭಾವ’ದ ಕುರಿತು ಸಂಶೋಧನೆ ಮಂಡಿಸಿದರು.
1930ರ ಸುಮಾರಿಗೆ ರಾಜಾ ರಾವ್ ಅವರು ಹಲವಾರು ಪ್ರೌಢ ಕತೆಗಳನ್ನು ಬರೆದಿದ್ದರು. ಭಾರತದ ಪ್ರಾಚೀನ ಸಂಸ್ಕೃತಿ, ಅಧ್ಯಾತ್ಮದ ಬಗ್ಗೆ ಆಳವಾದ ಚಿಂತನೆ ಕೈಗೊಂಡರು. ಆಲ್ಪ್ಸ್ ಪರ್ವತದ ಬಳಿ ಋಷಿ ಜೀವನ ಸಾಗಿಸುತ್ತಿದ್ದ ರೋಮನ್ ರೋಲಾ ಎಂಬುವರ ಬಗ್ಗೆ ಅವರು ಬರೆದ ಲೇಖನವು ‘ಜಯಕರ್ನಾಟಕ’ ಪತ್ರಿಕೆಯಲ್ಲಿ ಪ್ರಕಟಗೊಂಡಿತ್ತು. ರಾಜಾ ರಾವ್ ಅವರು ಪ್ಯಾರಿಸ್ಸಿನ ಮರ್ಕುರೆಡ್ ಫ್ರಾನ್ಸ್, ಆಫೇರೆ ಎತ್ರಾಂಜೆರ್ ಮುಂತಾದ ಹಲವಾರು ಪತ್ರಿಕೆಗಳ ಸಂಪಾದಕ ಮಂಡಲಿಗಳ ಸದಸ್ಯರಾಗಿದ್ದರು.
1937ರಲ್ಲಿ ಭಾರತಕ್ಕೆ ಮರಳಿದ ರಾಜಾ ರಾವ್ ಅಧ್ಯಾತ್ಮಿಕ ಗುರುವಿನ ಅನ್ವೇಷಣೆಗೆ ತೊಡಗಿದ್ದರು. ಹೀಗೆ ಅವರು ಪಂಡಿತ ತಾರಾನಾಥ್ ಮತ್ತು ಶ್ರೀ ಅರವಿಂದರನ್ನು ಭೇಟಿ ಮಾಡಿದರು. ಅವರ ಬರವಣಿಗೆಯ ಮೇಲೆ ಭಾರತೀಯ ಧರ್ಮ, ಕಲೆ, ಭಾಷಾಶಾಸ್ತ್ರ, ತತ್ತ್ವಶಾಸ್ತ್ರಗಳ ದಟ್ಟ ಛಾಯೆ ಕಾಣುತ್ತಿತ್ತು. ಅವರ ಹಲವಾರು ಸಣ್ಣಕತೆಗಳು ಯೂರೋಪಿನ ಪತ್ರಿಕೆಗಳು, ಫ್ರಾನ್ಸ್, ಇಂಗ್ಲೆಂಡ್, ಏಷ್ಯಾಗಳಲ್ಲಿ ಪ್ರಕಟಗೊಂಡವು.
1938ರಲ್ಲಿ ರಾಜಾ ರಾವ್ ಅವರು ಬರೆದ ಮೊದಲ ಕಾದಂಬರಿ ‘ಕಾಂತಾಪುರ’ ಮತ್ತು ‘ದ ಕೌ ಆಫ್ ದಿ ಬ್ಯಾರಿಕೇಡ್ಸ್’ ಸಣ್ಣ ಕಥಾಸಂಕಲನ ಲಂಡನ್ನಿನಲ್ಲಿ ಪ್ರಕಟಗೊಂಡಿತು. ನಂತರ ಹಲವಾರು ಕಥೆಗಳು ಲಂಡನ್ನಿನ ಎನ್‌ಕೌಂಟರ್, ನ್ಯೂಯಾರ್ಕಿನ ರಿವ್ಯೂ ಆಫ್ ನ್ಯೂಯಾರ್ಕ್, ಮುಂಬಯಿಯ ಇಲ್ಲಿಸ್ಟ್ರೇಟೆಡ್ ವೀಕ್ಲಿಯಲ್ಲಿ ಪ್ರಕಟಗೊಂಡವು.
ರಾಜಾ ರಾವ್ ಅವರು ಬರೆದದ್ದು ವಿಪುಲ ಸಾಹಿತ್ಯವಲ್ಲದಿದ್ದರೂ. ಗುಣದಲ್ಲಿ ಶ್ರೇಷ್ಠವೆಂದು ಅಂತಾರಾಷ್ಟ್ರೀಯ ವಿಮರ್ಶಕರಿಂದ ಮನ್ನಣೆ ಪಡೆದವು. ರಾಜಾ ರಾವ್ ಅವರ ಪ್ರಕಟಿತ ಕಾದಂಬರಿಗಳು ಮತ್ತು ಕಥೆಗಳೆಂದರೆ ‘ಕಾಂತಾಪುರ’ ಕಾದಂಬರಿ, ‘ದಿ ಕೌ ಆಫ್ ದ ಬ್ಯಾರಿಕೇಡ್ಸ್’ ಮತ್ತು ಇತರ ಕಥೆಗಳು’, ‘ದಿ ಸರ್ಪೆಂಟ್ ಅಂಡ್ ದ ರೋಪ್’, ‘ದ ಕ್ಯಾಟ್ ಅಂಡ್ ಶೇಕ್ಸ್ಪಿಯರ್’, ‘ಕಾಮ್ರೆಡ್ ಕಿರಿಲೋವ್’, ‘ದ ಪೋಲಿಸ್ ಮ್ಯಾನ್ ಅಂಡ್ ದಿ ರೋಸ್’ , ‘ದ ಚೆಸ್ ಮಾಸ್ಟರ್ ಅಂಡ್ ಹಿಸ್ ಮೂವ್ಸ್’, ‘ಆನ್ ದಿ ಗಂಗಾ ಘಾಟ್’, ‘ದ ಬೆಸ್ಟ್ ಆಫ್ ರಾಜಾ ರಾವ್’.
'ಚೇಂಜಿಂಗ್ ಇಂಡಿಯಾ’, ‘ವಿದರ್ ಇಂಡಿಯಾ’, ‘ದ ಮೀನಿಂಗ್ ಆಫ್ ಇಂಡಿಯಾ’, ‘ಗ್ರೇಟ್ ಇಂಡಿಯನ್ ವೇ - ಎ ಲೈಫ್ ಆಫ್ ಮಹಾತ್ಮಾಗಾಂಧೀ’, ‘ಟುಮಾರೋ’ ಮುಂತಾದವು ರಾಜಾ ರಾವ್ ಅವರ ಚಿಂತನಶೀಲ ಬರಹಗಳಾಗಿವೆ. .
ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಭಾರತ ಸರಕಾರದ ಪದ್ಮಭೂಷಣ, ಸಾಹಿತ್ಯ ವಲಯದ ಅತಿ ಪ್ರತಿಷ್ಠಿತ ನ್ಯೂ ಸ್ಟಾಡ್ಟ್ ಇಂಟರ್ನ್ಯಾಷನಲ್ ಪ್ರೈಜ್, ವಾಷಿಂಗ್‌ಟನ್ ಡಿ.ಸಿ.ಯ ವುಡ್ರೊವಿಲ್ಸನ್ ಅಂತಾರಾಷ್ಟ್ರೀಯ ಕೇಂದ್ರದ ಫೆಲೊ ಮುಂತಾದ ಗೌರವಗಳು ರಾಜಾ ರಾವ್ ಅವರಿಗೆ ಸಂದವು.
ಮುಂದೆ ಅಮೆರಿಕದಲ್ಲಿ ನೆಲೆಸಿದ ರಾಜಾರಾಯರು ಅಲ್ಲಿನ ವಿಶ್ವವಿದ್ಯಾಲಯಗಳಲ್ಲಿ ಬೋಧಿಸುತ್ತಿದ್ದರು. ಅವರು 2006ರಂದು ತಮ್ಮ 98ನೆಯ ವಯಸ್ಸಿನಲ್ಲಿ ಟೆಕ್ಸಾಸ್ನಲ್ಲಿ ನಿಧನರಾದರು. ಆಂಗ್ಲಭಾಷೆಯ ಕಥಾ ಲೋಕದಲ್ಲಿ ಭಾರತೀಯವಾದ ಮಣ್ಣಿನ ಗುಣದಿಂದ ನಳನಳಿಸಿದ ಸುಂದರ ಬರಹಗಳಿಂದ ಅವರ ಹೆಸರು ಚಿರವಿರಾಜಿತ.
On the birth anniversary of great English novelist of our land Hassan Raja Rao
ಕಾಮೆಂಟ್‌ಗಳು