ಜೆಎಸ್ಎಸ್ ಮಹಾವಿದ್ಯಾಪೀಠ
ಜೆಎಸ್ಎಸ್ ಮಹಾವಿದ್ಯಾಪೀಠ
ಶ್ರೀ ಸುತ್ತೂರು ಜಗದ್ಗುರು ಶ್ರೀ ವೀರಸಿಂಹಾಸನ ಮಹಾಸಂಸ್ಥಾನ ಮಠವು ನಾಡಿನ
ಸುಪ್ರಸಿದ್ಧ ಪುಣ್ಯಕ್ಷೇತ್ರಗಳಲ್ಲಿ ಒಂದು.
ಆದಿಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರಿಂದ ಸಹಸ್ರ ಸಂವತ್ಸರಗಳ ಹಿಂದೆ
ಸಂಸ್ಥಾಪಿಸಲ್ಪಟ್ಟ ಶ್ರೀಮಠದ ಗುರುಪರಂಪರೆಯಲ್ಲಿ ಬಂದ ಎಲ್ಲ ಜಗದ್ಗುರುವರೇಣ್ಯರು ನಾಡಿನ
ಧಾರ್ಮಿಕ, ಆಧ್ಯಾತ್ಮಿಕ, ಶೈಕ್ಷಣಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಿಗೆ ಅಮೋಘ ಕೊಡುಗೆಗಳನ್ನು
ನಿರಂತರವಾಗಿ ನೀಡುತ್ತ ಬಂದಿದ್ದಾರೆ.
ಶ್ರೀಮಠದ 23ನೆಯ ಪೀಠಾಧ್ಯಕ್ಷರಾದ ‘ಶ್ರೀಮನ್ಮಹಾರಾಜ ರಾಜಗುರುತಿಲಕ’ ಜಗದ್ಗುರು
ಡಾ. ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರು ಶ್ರೀಮಠದ ಸೇವಾಕ್ಷೇತ್ರಗಳನ್ನು ನಾಡಿನ
ಉದ್ದಗಲಕ್ಕೂ ವಿಸ್ತಾರಗೊಳಿಸಿದರು. ಹತ್ತಾರು ಬಡ
ವಿದ್ಯಾರ್ಥಿಗಳಿಗೆ ಉಚಿತ ಆಶ್ರಯ ವಸತಿ ನೀಡುವುದರೊಂದಿಗೆ ಪ್ರಾರಂಭಿಸಿ ಮುಂದೆ ಪ್ರಸಾದನಿಲಯಗಳು,
ಶಿಶುಪಾಲನ ಕೇಂದ್ರಗಳ ಜೊತೆಗೆ 1954ರಲ್ಲಿ ಜೆಎಸ್ಎಸ್ ಮಹಾವಿದ್ಯಾಪೀಠವನ್ನು ಸ್ಥಾಪಿಸಿದರು. ಇಂದು ಅದರ ಆಶ್ರಯದಲ್ಲಿ ಶಿಶುವಿಹಾರದಿಂದ
ಸ್ನಾತಕೊತ್ತರದ ನಂತರ ಪೋಸ್ಟ್ ಡಾಕ್ಟರಲ್ ಸಂಶೋಧನೆಗಳವರೆಗೆ ಸಾಮಾನ್ಯ ಶಿಕ್ಷಣ, ತಾಂತ್ರಿಕ,
ವೈದ್ಯಕೀಯ, ಸಾಹಿತ್ಯ, ವಾಣಿಜ್ಯ, ಕಲೆ – ಎಲ್ಲ ವಿಷಯಗಳಲ್ಲಿಯೂ 350ಕ್ಕೂ ಹೆಚ್ಚು ಸಂಸ್ಥೆಗಳು
ದೇಶ-ವಿದೇಶಗಳಲ್ಲಿ ಸೇವೆ ಸಲ್ಲಿಸುತ್ತಿವೆ.
ಪರಮಪೂಜ್ಯರ ಜಯಂತಿಯನ್ನು ಪ್ರತಿವರ್ಷ ಆಗಸ್ಟ್ 29ರಂದು ಆಚರಿಸಲಾಗುತ್ತಿದ್ದು, ಈ ವರ್ಷ
ಪೂಜ್ಯರ ಜಯಂತಿಯ ಸಂಸ್ಮರಣೆಯ ಕೊಡುಗೆಯಾಗಿ ಜೆಎಸ್ಎಸ್ ಆಸ್ಪತ್ರೆಯ ನೂತನ ಕಟ್ಟಡವನ್ನು ಭಾರತದ
ರಾಷ್ಟ್ರಪತಿಗಳಾದ ಶ್ರೀ ಪ್ರಣಬ್ ಮುಖರ್ಜಿ ಅವರ ಉಪಸ್ಥಿತಿಯಲ್ಲಿ ನಾಡಿಗೆ ಸಮರ್ಪಿಸುವ
ಕಾರ್ಯಕ್ರಮವನ್ನು ಇಂದು (ಸೆಪ್ಟೆಂಬರ್ 23ರಂದು) ಆಚರಿಸಲಾಗುತ್ತಿದೆ.
ಪರಮಪೂಜ್ಯರ ದೂರದೃಷ್ಟಿಯ ಫಲವಾಗಿ 1974ರಲ್ಲಿ ಜೆಎಸ್ಎಸ್ ಪ್ರಾಥಮಿಕ ಆರೋಗ್ಯ
ಕೇಂದ್ರವು ಮೈಸೂರಿನ ರಾಮಾನುಜ ರಸ್ತೆಯ ಜೆಎಸ್ಎಸ್ ಸಂಸ್ಥೆಗಳ ಆವರಣದಲ್ಲಿ ಪ್ರಾರಂಭವಾಯಿತು. ಅಂದು ಶಾಲಾ ಕಾಲೇಜುಗಳಲ್ಲಿ ವರ್ಷಕ್ಕೊಮ್ಮೆ
ನಡೆಸಲಾಗುತ್ತಿದ್ದ ವೈದ್ಯಕೀಯ ತಪಾಸಣೆ ಒಂದು ಯಾಂತ್ರಿಕ ಕ್ರಿಯೆಯಾಗಿರದೆ ಸಮಗ್ರ ಆರೋಗ್ಯ
ರಕ್ಷಣೆಗಾಗಿಯೇ ಇದು ಪ್ರಾರಂಭವಾಯಿತು. 1982ರಲ್ಲಿ
ಎಸ್ ಜೆ ಸಿ ಇ ಆವರಣದಲ್ಲಿ ಮತ್ತೊಂದು ಆರೋಗ್ಯ ಕೇಂದ್ರ ಪ್ರಾರಂಭವಾಯಿತು. 1984ರಲ್ಲಿ ಜೆಎಸ್ಎಸ್ ವೈದ್ಯಕೀಯ ಕಾಲೇಜು
ಸ್ಥಾಪನೆಯಾಯಿತು. ಕಾಲೇಜಿನ ಬೋಧನೆಗೆ ಆಸ್ಪತ್ರೆ
ಅಗತ್ಯವಾಗಿದ್ದುದರಿಂದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನೇ 60 ಹಾಸಿಗೆಗಳ ಆಸ್ಪತ್ರೆಯಾಗಿ
1986ರಲ್ಲಿ ಮೊದಲ ಹಂತದಲ್ಲಿ ಮೇಲ್ದರ್ಜೆಗೇರಿಸಲಾಯಿತು.
ಆನಂತರದಲ್ಲಿ ಈ ಆವರಣದಲ್ಲಿದ್ದ ಎಲ್ಲ ಸಂಸ್ಥೆಗಳನ್ನೂ ಬೇರೆಡೆಗೆ ಸ್ಥಳಾಂತರಿಸಿ, 1200
ಹಾಸಿಗೆಗಳ ಆಸ್ಪತ್ರೆಯನ್ನಾಗಿ ಮಾರ್ಪಡಿಸಲಾಯಿತು.
ಈ ಆಸ್ಪತ್ರೆಯಲ್ಲಿ ಎಲ್ಲಾ ವಿಭಾಗಗಳೂ ಎಲ್ಲಾ ರೀತಿಯಲ್ಲೂ ಸುಸಜ್ಜಿತವಾಗಿದ್ದು ಜೆಎಸ್ಎಸ್
ವೈದ್ಯಕೀಯ ಕಾಲೇಜು, ದಂತವೈದ್ಯ ಕಾಲೇಜು, ನರ್ಸಿಂಗ್ ಶಾಲೆ ಮತ್ತು ಕಾಲೇಜು, ಫಿಸಿಯೋಥೆರಪಿ, ವಾಕ್
ಮತ್ತು ಶ್ರವಣ ಸಂಸ್ಥೆ, ಫಾರ್ಮಸಿ ಕಾಲೇಜು ಮತ್ತು ಅಂಗಸಂಸ್ಥೆಗಳಿಗೆ ಕ್ಲಿನಿಕಲ್ ಸೌಲಭ್ಯಗಳನ್ನು
ಕಲ್ಪಿಸಲಾಗಿದೆ.
ಇಂದಿನ ಅಗತ್ಯತೆಗನುಗುಣವಾಗಿ ಸಾರ್ವಜನಿಕರಿಗೆ ಹೆಚ್ಚಿನ ವೈದ್ಯಕೀಯ ಸೇವೆಯ ಪ್ರಾಮುಖ್ಯತೆಯನ್ನು
ಮನಗಂಡು ನೂತನ ಆಸ್ಪತ್ರೆಯ ಕಟ್ಟಡದ ಭೂಮಿಪೂಜೆಯನ್ನು ಪರಮಪೂಜ್ಯ ಜಗದ್ಗುರು ಶ್ರೀಶಿವರಾತ್ರಿ
ದೇಶಿಕೇಂದ್ರ ಮಹಾಸ್ವಾಮಿಗಳವರ ದಿವ್ಯ ಸಾನ್ನಿಧ್ಯದಲ್ಲಿ 29.6.2008ರಂದು
ನೆರವೇರಿಸಲಾಯಿತು. ಈ ಆಸ್ಪತ್ರೆಯಲ್ಲಿ ಸಾಮಾನ್ಯ
ಜನರಿಗೂ ಅತ್ಯುತ್ತಮ ಸೌಲಭ್ಯಗಳುಳ್ಳ ಆರೋಗ್ಯ ಸೇವೆ ಸದಾ ದೊರಕುವಂತಾಗಿರುವುದು ನಾಡಿನ ಸೌಭಾಗ್ಯವಾಗಿದೆ.
ಅತ್ಯಾಧುನಿಕ ಸೌಲಭ್ಯಗಳುಳ್ಳ ಈ ಆಸ್ಪತ್ರೆ 12.50 ಲಕ್ಷ ಚದರ ಅಡಿ
ವಿಸ್ತೀರ್ಣವುಳ್ಳದ್ದಾಗಿದೆ. ಸಾಮಾನ್ಯ ಮತ್ತು ವಿಶೇಷ
ವಾರ್ಡುಗಳು ಸೇರಿ 1800 ಹಾಸಿಗೆಗಳಿವೆ.
ಡಯಾಗ್ನೋಸ್ಟಿಕ್ ಮತ್ತು ಚಿಕಿತ್ಸೆಗೆ ಅಗತ್ಯವಾದ ಅತ್ಯಾಧುನಿಕ ಯಂತ್ರೋಪಕರಣಗಳ
ಸೌಲಭ್ಯಗಳನ್ನೂ ಕಲ್ಪಿಸಲಾಗಿದೆ. ಹಾಲಿ ಇರುವ
ಆಸ್ಪತ್ರೆಯ ಕಟ್ಟಡದಲ್ಲಿ ಹೊಸ ಆಸ್ಪತ್ರೆಯ ಜೊತೆಗೆ ಬೇಕಾಗುವಷ್ಟು ಸ್ಥಳಾವಕಾಶವನ್ನು ಉಳಿಸಿಕೊಂಡು
ಉಳಿದ ವೈದ್ಯಕೀಯ ಸಂಸ್ಥೆಗಳಾದ ನರ್ಸಿಂಗ್ ಕಾಲೇಜು, ನರ್ಸಿಂಗ್ ಶಾಲೆ, ಫಿಸಿಯೋಥೆರಪಿ ಕಾಲೇಜು,
ವಾಕ್ ಮತ್ತು ಶ್ರವಣ ಸಂಸ್ಥೆಗಳಿಗೆ ಹಾಗೂ ಸಮಗ್ರ ಪುನರ್ವಸತಿ ಕೇಂದ್ರ ಹಾಗೂ ವೈದ್ಯಕೀಯ ಸಂಶೋಧನಾ
ಕೇಂದ್ರಗಳಿಗೆ ಸಹಾ ಸ್ಥಳಾವಕಾಶವನ್ನು ಕಲ್ಪಿಸಲಾಗುತ್ತಿದೆ.
ಮಾನವ ಸೇವೆಗಾಗಿ ನಿರಂತರವಾಗಿ ಶ್ರಮಿಸುತ್ತಿರುವ ಜೆಎಸ್ಎಸ್ ಸಂಸ್ಥೆಯು ತನ್ನ ಈ
ಮಹಾನ್ ಕೊಡುಗೆಯಿಂದ ಇನ್ನೂ ಎತ್ತರಕ್ಕೇರಿದೆ.
ಇದನ್ನು ಆಗುಮಾಡಿದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ಮತ್ತು ಅವರ ತಂಡಕ್ಕೆ
ಪ್ರಣಾಮಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇವೆ.
ಕಾಮೆಂಟ್‌ಗಳು