ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ರೊನಾಲ್ಡಿನ್ಹೋ

ರೊನಾಲ್ಡಿನ್ಹೋ

ವಿಶ್ವದ ಸಾರ್ವಕಾಲಿಕ ಶ್ರೇಷ್ಠ ಆಟಗಾರರಲ್ಲಿ ಇತ್ತೀಚಿನ ಯುಗದಲ್ಲಿ ಅತ್ಯಂತ ಪ್ರಖ್ಯಾತನಾದ ಹುಡುಗ ರೊನಾಲ್ಡಿನ್ಹೋ.  ಈತ ಜನಿಸಿದ ದಿನ ಮಾರ್ಚ್ 21, 1980. ಬ್ರೆಜಿಲ್ ತಂಡ ಕ್ಷೇತ್ರಮಧ್ಯದ ಆಕ್ರಾಮಿಕ ಆಟಗಾರನಾದ ಈ ಹುಡುಗ ತನ್ನ ಎಂಟನೆಯ ಪುಟ್ಟವಯಸ್ಸಿನಿಂದಲೇ ಚೆಂಡಿನಾಟವನ್ನು ಲೀಲಾಜಾಲವಾಗಿ ಪ್ರದರ್ಶಿಸುತ್ತಾ ಪ್ರಖ್ಯಾತ ತಂಡಗಳಲ್ಲಿ ಆಡತೊಡಗಿದ.  ಅಂತರರಾಷ್ಟ್ರೀಯ ಫುಟ್ಬಾಲ್ ಕ್ರೀಡಾ ಒಕ್ಕೂಟದಿಂದ 2004ಮತ್ತು 2005 ವರ್ಷಗಳಲ್ಲಿ ಸತತವಾಗಿ ಎರಡು ಬಾರಿ ಶ್ರೇಷ್ಠ ಪುಟ್ಬಾಲ್ ಆಟಗಾರನೆಂದು ಪ್ರಸಿದ್ಧ ಪಡೆದ ಆಟಗಾರ ಈ ರೊನಾಲ್ಡಿನ್ಹೋ.   ಈತ ತನ್ನ ಹದಿಮೂರನೇ ವಯಸ್ಸಿನಲ್ಲಿ ಆಡಿದ ಪಂದ್ಯವೊಂದರಲ್ಲಿ ತನ್ನ ತಂಡ ಗಳಿಸಿದ 23-0 ಗೋಲುಗಳ ಜಯದಲ್ಲಿ ಎಲ್ಲಾ ಗೋಲುಗಳನ್ನೂ ತಾನೊಬ್ಬನೇ ಹೊಡೆದಿದ್ದ ಅಂದರೆ ಆತ ತನ್ನ ಆಟದಲ್ಲಿ ಅದೆಷ್ಟು ಪ್ರೇಮ ಹೊಂದಿದ್ದ, ಆತನ ಆತ್ಮ ವಿಶ್ವಾಸ ಮತ್ತು ಚಾಕಚಕ್ಯತೆ ಎಂಥದ್ದು ಎಂದು ಊಹಿಸಬಹುದು.   ಫುಟ್ಬಾಲ್ ಕ್ರೀಡೆಯ ದಂತ ಕಥೆ ಎನಿಸಿರುವ ಪೀಲೆ ಅವರು ಹೆಸರಿಸಿರುವ ಸಾರ್ವಕಾಲಿಕ ಶ್ರೇಷ್ಠ ಆಟಗಾರರಲ್ಲಿ ರೊನಾಲ್ಡಿನ್ಹೋ ಕೂಡಾ ಒಂದು ಪ್ರಮುಖ ಹೆಸರು.

ಅಂತರರಾಷ್ಟ್ರೀಯ ಕ್ರೀಡೆ ಎಂಬುದು ಇಂದಿನ ಯುಗದಲ್ಲಿ ಎಲ್ಲ ರೀತಿಯಲ್ಲಿಯೂ ಪ್ರತಿಷ್ಟೆ ಪರಾಕಾಷ್ಟೆಗಳ ರಣಾಂಗಣವೂ ಆಗಿದೆ.  ಹೀಗಾಗಿ ಅಲ್ಲಿ ಆಟಗಾರನನ್ನು ಯಾವ ರೀತಿಯಾಗಿ ಮೇಲಕ್ಕೆತ್ತಲಾಗುತ್ತದೋ, ಅಷ್ಟೇ ಶೀಘ್ರವಾಗಿ ಆತನನ್ನು ಪಾತಾಳಕ್ಕೆ ಇಳಿಸುವ ಘಟನೆಗಳೂ ಜರುಗುತ್ತವೆ.  ಅಲ್ಲಿನ ಜನಪ್ರಿಯತೆ, ಹಣ, ವಿವಿಧ ರೀತಿಯ ಮಾಧ್ಯಮ ಒತ್ತಡಗಳು, ಸೋಲಿನಭೀತಿಗಳು, ದುಶ್ಚಟಗಳು ಇತ್ಯಾದಿಗಳಲ್ಲಿ ಆಟಗಾರ ಎಂದು ಪ್ರಖ್ಯಾತನಾಗಿರುತ್ತಾನೆ, ಎಂದು ತನ್ನ ತಂಡಕ್ಕೆ ಕೇವಲ ಪ್ರಖ್ಯಾತಿಯ ಬೊಂಬೆಯಾಗಿ ಮಾತ್ರ ಸರಿದಾಡುತ್ತಿರುತ್ತಾನೆ,  ಎಂದು ಕಿತ್ತೊಗೆಯಲ್ಪಡುತ್ತಾನೆ ಇವೆಲ್ಲಾ ಊಹಿಸುವುದು ಕಷ್ಟ.  ಇನ್ನೂ ಮೂವತ್ತೊಂದರ ಹರಯದ ಈ ಹುಡುಗ ತನ್ನ ಮಾಂತ್ರಿಕತೆಯನ್ನು ಉಳಿಸಿಕೊಂಡು ತನ್ನ ಶ್ರೇಷ್ಠತೆಗೆ ಮರಳುತ್ತಾನೋ ಅಥವಾ ಈತನೂ ಒಂದು ಪುಟ್ಟ ಅವಧಿಯಲ್ಲಿ ಮಿಂಚಿ ಹೋದ ತಾತ್ಕಾಲಿಕ ನಕ್ಷತ್ರವೋ ಎಂಬುದನ್ನು ಕಾಲವೇ ಹೇಳಬೇಕು.

Tag: Ronaldinho

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ