ತಿರುಕನ ಕನಸು
ತಿರುಕನ ಕನಸು
ಧರೆಯ ಭೋಗವನ್ನು ಮೆಚ್ಚಿ
ಹರನ ಮರೆದು ಕೆಡಲುಬೇಡ
ಧರೆಯ ಭೋಗ ಕನಸಿನಂತೆ ಕೇಳು ಮಾನವ
ತಿರುಕನೋರ್ವನೂರ ಮುಂದೆ
ಮುರುಕು ಧರ್ಮಶಾಲೆಯಲ್ಲಿ
ಒರಗಿರುತ್ತಲೊಂದು ಕನಸ ಕಂಡನೆಂತನೆ
ಪುರದ ರಾಜ ಸತ್ತನವಗೆ
ವರ ಕುಮಾರರಿಲ್ಲದಿರಲು
ಕರಿಯ ಕೈಗೆ ಕುಸುಮ ಮಾಲೆಯಿತ್ತು ಪುರದೊಳು
ನಡೆದು ಯಾರ ಕೊರಳಿನಲ್ಲಿ
ತೊಡರಿಸುವದೊ ಅವರ ಪಟ್ಟ
ಕೊಡೆಯರನ್ನು ಮಾಳ್ಪೆವೆಂದು ಬಿಟ್ಟರಲ್ಲಿಯೆ
ಒಡನೆ ತನ್ನ ಕೊರಳಿನಲ್ಲಿ
ತೊಡರಿಸಲ್ಕೆ ಕಂಡು ತಿರುಕ
ಪೊಡವಿಯಾಣ್ಮ ನಾದೆನೆಂದು ಹಿಗ್ಗುತಿರ್ದನು
ಪಟ್ಟವನ್ನು ಕಟ್ಟಿ ನೃಪರು
ಕೊಟ್ಟರವಗೆ ಕನ್ಯೆಯರನು
ನೆಟ್ಟನವನು ರಾಜ್ಯವಾಳ್ದ ಕನಸಿನಲ್ಲಿಯೇ
ಭಟ್ಟನಿಗಳ ಕೂಡಿನಲ್ಲ
ನಿಷ್ಟ ಸುಖದೊಳಿರಲವಂಗೆ
ಹುಟ್ಟಿ ಹೆಣ್ಣು ಗಂಡು ಮಕ್ಕಳಾದುವಾಗಲೇ
ಓಲಗದಲಿರುತ್ತ ತೊಡೆಯ
ಮೇಲೆ ಮಕ್ಕಳಾಡುತಿರಲು
ಲೀಲೆಯಿಂದ ಚಾತುರಂಗ ಬಲವ ನೋಡುತ
ಲೋಲನಾಗಿ ನುಡಿದನಿನಿತು
ಕೇಳು ಮಂತ್ರಿ ಸುತರುಗಳಿಗೆ
ಬಾಲೆಯರನು ನೋಡಿ ಮದುವೆ ಮಾಡಬೇಕಲೈ
ನೋಡಿ ಬನ್ನಿರೆನಲು ಜೀಯ
ನೋಡಿ ಬಂದೆವೆನಲು ಬೇಗ
ಮಾತು ಮದುವೆ ಮಂಟಪದೊಳು ಸಕಲಕಾರ್ಯವ
ಗಾಢವಾಗೆ ಸಂಭ್ರಮಗಳು
ಮಾಡುತ್ತಿದ್ದ ಮದುವೆಗಳನು
ಕೂಡಿದಖಿಳ ರಾಯರೆಲ್ಲ ಮೆಚ್ಚುವಂದದಿ
ಧನದ ಮದವು ರಾಜ್ಯ ಮದವು
ತನುಜ ಮದವು ಯುವತಿ ಮದವು
ಜನಿತವಾಗಿ ಕನಸಿನಲ್ಲಿ ಹಿಗ್ಗುತಿರ್ದನು
ಅನಿತರೊಳಗೆ ನೃಪರ ಕಂಡು
ಮನೆಯ ಮುತ್ತಿದಂತೆಯಾಗಿ
ಕನಸಕಾಣುತಿರ್ದು ಹೆದರಿ ಕಣ್ಣು ತೆರೆದನು
ಮೆರೆಯುತಿರ್ದ ಭಾಗ್ಯವೆಲ್ಲ
ಹರಿದುಹೋಯಿತೆಂದು ತಿರುಕ
ಮರಳಿ ನಾಚುತಿರ್ದ ಮರುಳನಂತೆಯಾಗಲೆ
ಸಿರಿಯು ಕನಸಿನಂತೆಯೆಂದು
ಅರಿದು ಷಡಕ್ಷರಿಯ ವರನ
ಹರುಷದಿಂದ ಭಜಿಸು ನಿತ್ಯಸುಖವು ತಪ್ಪದು
ಸಾಹಿತ್ಯ: ಮುಪ್ಪಿನ ಷಡಕ್ಷರಿ
Tag: Tirukana Kanasu, Tirukanorvanoora munde
Tag: Tirukana Kanasu, Tirukanorvanoora munde
ಕಾಮೆಂಟ್‌ಗಳು