ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಗೀತಾ ದತ್


 ಗೀತಾ ದತ್


ಗೀತಾದತ್ ಖ್ಯಾತ ಹಿನ್ನೆಲೆ ಗಾಯಕಿ ಮತ್ತು ಕಲಾವಿದೆ.

ಗೀತಾದತ್ 1930ರ ನವೆಂಬರ್ 23ರಂದು ಜನಿಸಿದರು. ಶ್ರೀಮಂತ ಜಮೀನ್ದಾರಿಕೆ ಕುಟುಂಬದಿಂದ ಬಂದ ಅವರ ಊರು ಈಗಿನ ಬಾಂಗ್ಲಾದೇಶದ ಭಾಗವಾಗಿರುವ ಶರಿಯತ್ಪುರ ಜಿಲ್ಲೆಯ ಇದಿಲ್ಪುರ್. ಮುಂದೆ 1942ರಲ್ಲಿ ಆ ಕುಟುಂಬ ಈಗಿನ ಮುಂಬೈಗೆ ವಲಸೆ ಬಂತು. 

ಗೀತಾರವರಲ್ಲಿದ್ದ  ಹಾಡುಗಾರಿಕೆ ಕಲೆಯನ್ನು ಗುರುತಿಸಿದ ಅಂದಿನ ಯುಗದ ಸಂಗೀತ ಸಂಯೋಜಕರಾದ ಕೆ. ಹನುಮಾನ್ ಪ್ರಸಾದ್ ಹೆಚ್ಚಿನ ತಾಲೀಮು ನೀಡಿದರು.  ಅವರು ಸಂಗೀತ ನೀಡಿದ 1946ರಲ್ಲಿ ತೆರೆಕಂಡ 'ಭಕ್ತ್ ಪ್ರಹ್ಲಾದ್' ಚಿತ್ರದಲ್ಲಿ ಗೀತಾ ಹಾಡಿದ್ದು ಎರಡು ಹಾಡುಗಳಲ್ಲಿನ ಎರಡೇ ಸಾಲಾದರೂ ಅಂದಿನ ಸಿನಿಮಾಸಕ್ತರಿಗೆ ಅತ್ಯಂತ ಆನಂದ ತಂದಿತ್ತು.
ಇದಾದ ಕೆಲವೇ ದಿನಗಳಲ್ಲಿ, 'ದೋ ಭಾಯಿ' ಚಿತ್ರದಲ್ಲಿ ಹಿನ್ನೆಲೆ ಗಾಯಕಿಯಾಗಿ ಹಾಡಲು ಅವರಿಗೆ ಕರೆಬಂತು.  ಹೀಗೇ ಅವರ 'ಗೀತಪಯಣ' ಮುಂದುವರೆದಿತ್ತು. 

ಎಸ್.ಡಿ.ಬರ್ಮನ್ ದ 1951 ವರ್ಷದಲ್ಲಿ 'ಬಾಝೀ' ಚಿತ್ರದಲ್ಲಿ ಗೀತಾ ಅವರ ಧ್ವನಿಯಲ್ಲಿ ಜಾಸ್ ಮಾದರಿಯ ಹೊಸತನವನ್ನು  ತಂದರು. ಪಾಶ್ಚಿಮಾತ್ಯ ಸಂಗೀತ ಶೈಲಿಯಲ್ಲಿ ಮೂಡಿಬಂದ ಈ ಚಿತ್ರದ ಪ್ರಣಯಗೀತೆಗಳು  ರಸಿಕರ ಮನಸ್ಸನ್ನು ಗೆದ್ದವು.  ಇಲ್ಲಿಂದ ಮೊದಲುಗೊಂಡು 'ಕ್ಲಬ್ ಸಾಂಗ್' ಮತ್ತು 'ಡಾನ್ಸ್' ಗಳಿಗೆ ಗೀತಾ ಅವರ ಕಂಠ ಅನಿವಾರ್ಯ ಎಂಬಂತೆ ಅಪಾರ ಬೇಡಿಕೆ ಸೃಷ್ಠಿಗೊಂಡಿತು.

ಎಸ್.ಡಿ. ಬರ್ಮನ್ ಅವರ ಸಂಗೀತದ 'ದೊ ಭಾಯಿ', ‘ದೇವ್ ದಾಸ್’, ‘ಪ್ಯಾಸ’ ಮುಂತಾದ ಚಿತ್ರಗಳಲ್ಲಿನ ಗೀತಗಳು ಜನಪ್ರಿಯಗೊಂಡವು. ಆಜ್ ಸಾಜನ್ 'ಮೊಹೆ ಅಂಗ್ ಲಾಗಾ ಲೊ' ಬೆಂಗಾಲಿ ಕೀರ್ತನೆ ಹಿಂದಿ ಚಿತ್ರದಲ್ಲಿ ಬಂದು ಸೇರಿಕೊಂಡಿತು.  ಓ.ಪಿ. ನಯ್ಯರ್ ತಮ್ಮ ನಿರ್ದೇಶನದ ಚಿತ್ರಗಳಲ್ಲಿ  ಗೀತಾ ಅವರಿಂದ ಎಲ್ಲಾ ತರಹದ ಹಾಡಿಸುತ್ತಿದ್ದರು. ಗೀತಾದತ್ ಧ್ವನಿ, ಚಿತ್ರರಸಿಕರನ್ನು ಹುಚ್ಚೆಬ್ಬಿಸಿತ್ತು. ಗೀತಾದತ್ ತಮ್ಮ ಕಾಲದ ಇತರ ಪ್ರತಿಭಾವಂತ ಸಂಗೀತ ನಿರ್ದೇಶಕರಾದ ಹೇಮಂತ್ ಕುಮಾರ್, ಶಂಕರ್ ಜೈಕಿಶನ್,ಚಿತ್ರಗುಪ್ತ್, ಬುಲೊ ಸಿ. ರಾನಿ, ಹಂಸ್ ರಾಜ್ ಬೆಹ್ಲ್, ಹುಸನ್ಲಾಲ್ ಭಗತ್ ರಾಮ್, ಮದನ್ ಮೋಹನ್ ಮುಂತಾದವರೊಂದಿಗೆ ಸಹಾ ಜನಪ್ರಿಯ ಗೀತೆಗಳಿಗೆ ಧ್ವನಿಯಾದರು. ಹಿಂದಿ, ಬಂಗಾಳಿ ಚಿತ್ರಗಳ ಸುಮಾರು 1200 ಗೀತೆಗಳನ್ನು ಹಾಡಿದ್ದ ಅವರು ಕೆಲವೊಂದು ಇತರ ಭಾಷೆಗಳಲ್ಲೂ ಹಾಡಿದ್ದರು ಮತ್ತು ಕೆಲವು ಚಿತ್ರಗಳಲ್ಲಿ ಅಭಿನಯಿಸಿದ್ದರು.  

ಗೀತಾ 'ಬಾಝೀ' ಚಿತ್ರದಲ್ಲಿ ಹಾಡುತ್ತಿದ್ದ ಸಮಯದಲ್ಲಿ 'ಗುರುದತ್' ಅವರನ್ನು ಸಂಧಿಸಿ ಮುಂದೆ ಅವರನ್ನು ಪ್ರೇಮಿಸಿ ವಿವಾಹವಾದರು.  ಗುರುದತ್ ಅವರ ಚಿತ್ರಗಳಲ್ಲಿ ಹಲವಾರು ಮರೆಯಲಾರದ ಗೀತೆಗಳನ್ನು ಕೂಡಾ ಹಾಡಿದರು. 1957ರಲ್ಲಿ ಗೀತಾದತ್ ಅವರನ್ನು ನಾಯಕಿ ಪಾತ್ರದಲ್ಲಿ ಇರಿಸಿ 'ಗೌರಿ'ಎಂಬ ಚಿತ್ರವನ್ನು ಗುರುದತ್ ನಿರ್ಮಿಸಲು ಪ್ರಾರಂಭಿಸಿದರು.  ಆದರೆ ಆ ಚಿತ್ರ ಪೂರ್ಣಗೊಳ್ಳಲಿಲ್ಲ. ಈ ಮಧ್ಯೆ ಈ ಜೋಡಿಯ ಬದುಕಿನಲ್ಲಿ ಬಿರುಕು ಸಂಭವಿಸಿ ಈ ಇಬ್ಬರ ಬದುಕೂ ದುರಂತದೆಡೆಗೆ ಮುಖಮಾಡತೊಡಗಿತ್ತು.  ಬದಲಾದ ಬದುಕನ್ನು ಸ್ವೀಕರಿಸಲು ಹೆಣಗಿ ಮಾನಸಿಕವಾಗಿ ಆಘಾತಗೊಂಡಿದ್ದ ಗೀತಾದತ್ ಅವರಿಗೆ ಬೇಡಿಕೆ ಕೂಡಾ ಇಳಿಮುಖವಾಗತೊಡಗಿತು. 

1964ರಲ್ಲಿ ಗುರುದತ್ ಮೃತರಾದರು. ಗೀತಾದತ್ ಮಾನಸಿಕವಾಗಿ ಬಹಳ ಬಳಲಿದರು. ಹಣದ ಸಮಸ್ಯೆ ಹೆಚ್ಚಾಯಿತು. ಅಲ್ಲಲ್ಲಿ ಒಂದಿನಿತು ಹಾಡಿ ಅಭಿನಯಿಸಿದರು. 

'ಲಿವರ್ ಕ್ಯಾನ್ಸರ್'ಗೆ ತುತ್ತಾದ ಗೀತಾದತ್ 1972ರ ಜುಲೈ 20ರಂದು ನಿಧನರಾದಾಗ ಅವರಿಗೆ ಇನ್ನೂ 41ರ ವಯಸ್ಸು. ಗೀತಾದತ್ ಮತ್ತು ಗುರುದತ್ ಇಬ್ಬರೂ ಚಿತ್ರರಂಗದ ಮಹಾನ್ ಪ್ರತಿಭೆಗಳಾಗಿ, ಈ ರಂಗದ ಸೋಲು-ಗೆಲುವು, ನೋವು-ನಲಿವು ಮತ್ತು ಮಾಯೆ-ವಿಷಾದತೆಗಳ ದಂತ ಕತೆಗಳಂತೆ ಅಮರರಾಗಿ ಲೋಕದ ಕಣ್ಮುಂದೆ ಬಂದುಹೋದವರು. 

On the birth anniversary of playback singer and actress Geeta Dutt 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ