ಶಬ್ದಮಣಿದರ್ಪಣಂ
ಕೇಶಿರಾಜ ಮತ್ತು ಶಬ್ದಮಣಿದರ್ಪಣಂ
ಕೇಶಿರಾಜ ಕವಿಯ ಕಾಲ ಸುಮಾರು 1260. ಈತ "ಶಬ್ದಮಣಿದರ್ಪಣಂ" ಎಂಬ ಪ್ರಸಿದ್ಧವಾದ ಹಳಗನ್ನಡ ವ್ಯಾಕರಣ ಗ್ರಂಥವನ್ನು ಬರೆದ ಶಾಸ್ತ್ರಕಾರ. ಅದೇ ಗ್ರಂಥದ ಕೊನೆಯ ಒಂದು ಪದ್ಯದಿಂದ ಈ ಶಾಸ್ತ್ರಕಾರ ಚೋಲಪಾಲಕ ಚರಿತಂ. ಶ್ರೀ ಚಿತ್ರಮಾಲೆ, ಸುಭದ್ರಾಪಹರಣಂ, ಪ್ರಬೋಧಚಂದ್ರಂ, ಕಿರಾತಂ ಎಂಬ ಬೇರೆ ಐದು ಗ್ರಂಥಗಳನ್ನೂ ಬರೆದಿರುವಂತೆ ತಿಳಿದು ಬಂದಿದೆ. ಆದರೆ ಶಬ್ದಮಣಿದರ್ಪಣದ ಹೊರತು ಈತನ ಬೇರೆ ಯಾವ ಗ್ರಂಥವೂ ಈ ವರೆಗೆ ದೊರೆತಿಲ್ಲ. ಆ ಕೃತಿಗಳ ಕೆಲವು ಪದ್ಯಗಳಾದರೂ ಕವಿಯ ತಂದೆ ಚಿದಾನಂದ ಮಲ್ಲಿಕಾರ್ಜುನ ಕವಿಯ (ಸು.1245) ಸೂಕ್ತಿಸುಧಾರ್ಣವಂ ಎಂಬ ಸಂಕಲನಗ್ರಂಥದಲ್ಲಿ ಸೇರಿಕೊಂಡಿರುವ ಸಾಧ್ಯತೆಯಿದೆಯೆಂದು ವಿದ್ವಾಂಸರು ಸಕಾರಣವಾಗಿಯೇ ಊಹಿಸಿದ್ದಾರೆ. ಹೊಯ್ಸಳ ಇಮ್ಮಡಿ ನರಸಿಂಹನಿಗೆ (1220-1235) ಸಂಬಂಧಿಸಿದ ಅಲ್ಲಿಯ ಕೆಲವು ಪದ್ಯಗಳು ಕೇಶಿರಾಜನ ಚೋಲಪಾಲಕ ಚರಿತೆಯದಾಗಿರಬಹುದು ಎಂಬುದೂ ಅಲ್ಲಿಯೇ ದೊರೆಯುವ ಆತನ ಸ್ತುತಿರೂಪವಾದ ಒಂದು ಪದ್ಯ ಆತನೇ ಬರೆದುದಾಗಿರಬಹುದು ಎಂಬುದೂ ಅವರ ಊಹೆಗೆ ಅವಕಾಶ ಮಾಡಿಕೊಟ್ಟಿರುವ ಕಾರಣಗಳಲ್ಲಿ ಮುಖ್ಯವಾದುವು.
ಕೇಶಿರಾಜ ಕನ್ನಡ ಸಾಹಿತ್ಯದ ಇತಿಹಾಸದಲ್ಲಿ, ವೈಯಾಕರಣನಾಗಿ ಪ್ರಸಿದ್ಧನಾಗಿದ್ದಾನೆ.
ಕೇಶಿರಾಜ ಪ್ರಸಿದ್ಧ ಕವಿಗಳ ಹಾಗೂ ಪ್ರತಿಷ್ಠಿತ ವಿದ್ವಾಂಸರ ಮನೆತನಕ್ಕೆ ಸೇರಿದವ. ತಂದೆ ಶ್ರೇಷ್ಠ ಹಾಗೂ ಆದ್ಯ ಹಳಗನ್ನಡ ಸಂಕಲನಗ್ರಂಥ ಸೂಕ್ತಿಸುಧಾರ್ಣವದ ಕರ್ತೃ ಚಿದಾನಂದ ಮಲ್ಲಿಕಾರ್ಜುನ; ತಾಯಿಯ ತಂದೆ ಹೊಯ್ಸಳ ಇಮ್ಮಡಿ ನರಸಿಂಹನಲ್ಲಿ ಕಟಕೋಪಾಧ್ಯಾಯನೂ ಜೈನ ಪುರಾಣಕರ್ತೃವೂ ಆಗಿದ್ದ ಕವಿಸುಮನೋಬಾಣ; ಸೋದರಮಾವ ಜನ್ನ ಕವಿ. ಈತ ಎಂಥ ಒಳ್ಳೆಯ ವಿದ್ವಾಂಸನಾಗಿದ್ದನೆಂಬುದನ್ನೂ ವಿದ್ವಾಂಸನಾಗಿಯೂ ಎಷ್ಟರಮಟ್ಟಿಗೆ ಉತ್ಕೃಷ್ಟ ಕವಿಮನೋಧರ್ಮವನ್ನು ಹೊಂದಿದ್ದ ರಸಿಕನಾಗಿದ್ದನೆಂಬುದನ್ನೂ ಶಬ್ದಮಣಿದರ್ಪದಿಂದಲೇ ತಿಳಿಯಬಹುದಾಗಿದೆ. ಈತ ತನಗೆ ಹಿಂದಿನ ಪ್ರಾಚೀನ ಕನ್ನಡ ಕಾವ್ಯಪುರಾಣಗಳನ್ನೂ ವ್ಯಾಕರಣಾದಿ ಶಾಸ್ತ್ರಗ್ರಂಥಗಳನ್ನು ಚೆನ್ನಾಗಿ ಅಭ್ಯಾಸ ಮಾಡಿದ್ದುದ್ದಕ್ಕೆ ಇವನ ವ್ಯಾಕರಣ ಗ್ರಂಥ ಒಳ್ಳೆಯ ಸಾಕ್ಷ್ಯವಾಗಿದೆ. ಲಾಕ್ಷಣಿಕವಾಗಿ ಇವನ ಖ್ಯಾತಿಯನ್ನು ಕವಿಮಲ್ಲ (ಸು.1400) `ನಿರುತಂ ಕರ್ನಾಟಕದೊಳ್ | ಪರಿಕಿಸೆ ಶಬ್ದಗ್ನ ನಾವನೊರ್ವನೇ ಲೋಕ || ಕ್ಕರಿದಲ್ತೆ ಭಾಪು ಕವಿ ಕುಂ |ಜರ ಕೇಶವರಾಜ ಗೋಚರಿಸು ಮನ್ಮನದೊಳ್ ಎಂದೂ ಈಶ್ವರಕವಿ (ಸು.1450) `ಲಕ್ಷಣ ಶಿಕ್ಷಾಚಾರ್ಯ ಸು | ಲಕ್ಷಣಿ ಕೇಶವ ' ಎಂದೂ ಕೊಂಡಾಡಿದ್ದಾರೆ. ನಿಟ್ಟೂರು ನಂಜಯ್ಯ(ಸು.1725) ಬರೆದ ಟೀಕೆಯೂ ಲಿಂಗಣಾರಾಧ್ಯ ಬರೆದ ವೃತ್ತಿಯೂ ಕೆಲವು ಪ್ರಾಚೀನ ಅರ್ವಾಚೀನ ವ್ಯಾಖ್ಯಾನಗಳು ಕನ್ನಡ ವ್ಯಾಕರಣದ ಅಭ್ಯಾಸದಲ್ಲಿ ಶಬ್ದಮಣಿದರ್ಪಣದ ಉಪಯುಕ್ತತೆಯನ್ನು ಸಾರಿ ಹೇಳತಕ್ಕವಾಗಿವೆ.
ಶಬ್ದಮಣಿದರ್ಪಣದ ರಚನೆಯ ಕಾಲವನ್ನು ಆ ಗ್ರಂಥದಲ್ಲಿ ನೇರವಾಗಿ ಸೂಚಿಸಿಲ್ಲವಾದ್ದರಿಂದ ಕವಿಯ ಕಾಲವನ್ನು ಬೇರೆ ಆಧಾರಗಳಿಂದ ಗುರುತಿಸಬೇಕಾಗಿದೆ. ಸೂಕ್ತಿ ಸುಧಾರ್ಣವಾದ ಮಲ್ಲಿಕಾರ್ಜುನ ಕವಿ 1233ರಿಂದ 1254ರ ವರೆಗೆ ಆಳಿದ ಹೊಯ್ಸಳ ಸೋಮೇಶ್ವರನ ಕಾಲದಲ್ಲಿ ಇದ್ದುದರಿಂದ, ಆತನ ಮಗನಾದ ಕೇಶಿರಾಜನ ಕಾಲವನ್ನು ಸುಮಾರು 1260 ಎಂಬುದಾಗಿ ಕವಿಚರಿತೆಕಾರರು ಸೂಚಿಸಿದ್ದಾರೆ.
ಇದು ಹಳಗನ್ನಡ ಭಾಷೆಗೆ ಬರೆದ ವ್ಯಾಕರಣ ಗ್ರಂಥವಾಗಿದ್ದು, 13ನೆಯ ಶತಮಾನಕ್ಕೆ ಮೊದಲು ಹಳಗನ್ನಡ ಭಾಷೆಯ ಸ್ಥಿತಿಗತಿಗಳು ಹೇಗಿದ್ದವೆಂಬ ಬಗೆಗೆ ಸವಿಸ್ತಾರವೂ ಸಪ್ರಮಾಣವೂ ಆದ ವಿವೇಚನೆಯನ್ನು ಒಳಗೊಂಡಿದೆ. ಪೂರ್ವಕವಿಪ್ರಯೋಗಗಳ ಪರಿಶೀಲನೆಯಿಂದ ಭಾಷೆಯ ಸಾಮಾನ್ಯ ನಿಯಮಗಳನ್ನು ಇಲ್ಲಿ ಗುರುತಿಸಿ ಸೂತ್ರೀಕರಿಸಲಾಗಿದೆ. ಗ್ರಂಥದಲ್ಲಿ ಸಂಧಿ, ನಾಮ, ಸಮಾಸ, ತದ್ಧಿತ, ಅಖ್ಯಾತ, ಧಾತು, ಅಪಭ್ರಂಶ, ಅವ್ಯಯ-ಎಂಬ 8 ಪ್ರಕರಣಗಳಿವೆ. ಗ್ರಂಥದ ಆದಿಯಲ್ಲಿ ಮುಖ್ಯವಾಗಿ ಗ್ರಂಥ-ಗ್ರಂಥಕಾರ ಪರಿಚಯಾತ್ಮಕವಾದ ಒಂದು ಪೀಠಿಕೆಯ ಭಾಗವೂ ಅಂತ್ಯದಲ್ಲಿ ಪ್ರಯೋಗಸಾರವೆಂಬ ಒಂದು ಚಿಕ್ಕ ಶಬ್ಧಾರ್ಥನಿರ್ಣಯ ಭಾಗವೂ ಸೇರಿಕೊಂಡಿದೆ. ಆಯಾ ಪ್ರಕರಣಕ್ಕೆ ಸಬಂಧಿಸಿದ ವ್ಯಾಕರಣಾಂಶಗಳಲ್ಲಿ ಒಂದೊಂದನ್ನು ಮೊದಲು ಸೂತ್ರ ರೂಪವಾಗಿ ಕಂದಪದ್ಯದಲ್ಲಿ ಸಂಗ್ರಹಿಸಿ, ಅನಂತರದಲ್ಲಿ ಸೂತ್ರಾರ್ಥದ ವಿವರಣೆಗೆ ಸ್ವಕೀಯವಾದ ವೃತ್ತಿಯನ್ನು ಗದ್ಯರೂಪದಲ್ಲಿ ಬರೆದು, ಕೊನೆಗೆ ಸೂತ್ರ ವೃತ್ತಿಗಳಲ್ಲಿ ಉಕ್ತವಾದ ವ್ಯಾಕರಣಾಂಶಗಳನ್ನು ಅಧೀಕರಿಸಿಕೊಂಡ ಪೂರ್ವಕವಿ ಪ್ರಯೋಗಗಳನ್ನು ಉಚಿತಕ್ಕೆ ತಕ್ಕಷ್ಟುಮಟ್ಟಿಗೆ ಉದಾಹರಿಸುವ ಕ್ರಮವನ್ನು ಇಲ್ಲಿ ಅನುಸರಿಸಿದೆ.
ಕನ್ನಡದಲ್ಲಿಯೇ ರಚಿತವಾಗಿರುವ ಸ್ವತಂತ್ರ ಕನ್ನಡ ವ್ಯಾಕರಣಗಳಲ್ಲಿ ಶಬ್ದಮಣಿದರ್ಪಣವೇ ಮೊದಲನೆಯದು. ಇದಕ್ಕೆ ಮೊದಲು ಇಮ್ಮಡಿ ನಾಗವರ್ಮನ (ಸು.1145) ಶಬ್ದಸ್ಮೃತಿಯೂ (ಕರ್ನಾಟಕ) ಭಾಷಾ ಭೂಷಣವೂ ಕನ್ನಡ ವ್ಯಾಕರಣಗಳಾಗಿ ರಚಿತವಾಗಿದ್ದವಾದರೂ ಇವುಗಳಲ್ಲಿ ಮೊದಲನೆಯದು ಅಲಂಕಾರ ಗ್ರಂಥವಾದ ಕಾವ್ಯಾವಲೋಕನದ ಪ್ರಥಮಾದಿಕಾರಣವಾಗಿ ಸೇರಿಸಿಕೊಂಡು ಬಂದದ್ದು ಹಾಗೂ ಸಂಕ್ಷೇಪವಾದ್ದು ಎನ್ನುವುದರಿಂದಲೂ ಎರಡನೆಯದು ಸ್ವಲ್ಪ ವಿಸ್ತಾರವಾದುದಾಗಿದ್ದರೂ ಸಂಸ್ಕೃತ ಭಾಷೆಯಲ್ಲಿ ರಚಿತವಾದ್ದು ಎನ್ನುವುದರಿಂದಲೂ ಕೇಶೀರಾಜನ ಗ್ರಂಥಕ್ಕೆ ಇರುವ ಪ್ರಸಿದ್ಧಿ, ವ್ಯಾಪ್ತಿ ಅವುಗಳಿಗೆ ಇಲ್ಲವಾಗಿದೆ.
ಪ್ರಧಾನವಾಗಿ, ಶಬ್ದಮಣಿದರ್ಪಣ ವಿದ್ಯಾತ್ಮಕ ಅಥವಾ ಆದರ್ಶ(ಪ್ರಿಸ್ಕಿಪ್ಟಿವ್) ರೀತಿಯ ವ್ಯಾಕರಣ, ಆದರೆ ವಿವರಣಾತ್ಮಕ ಅಥವಾ ವರ್ಣನಾತ್ಮಕ (ಡಿಸ್ಕ್ರಿಪ್ಟಿವ್) ರೀತಿಯನ್ನು ನಿರೂಪಣಾ ದೃಷ್ಟಿಯನ್ನು ಅದು ಒಳಗೊಂಡಿದೆ.
ಕೇಶಿರಾಜನ ವ್ಯಾಕರಣವನ್ನು ಅಧ್ಯಯನ ಮಾಡಿದ ಯಾರಿಗೆ ಆಗಲಿ ಇವನು ಶುಷ್ಕ ವೈಯಾಕರಣನೆನಿಸುವುದಿಲ್ಲ. ಈತ ಬರೆದಿರುವ ಸೂತ್ರಗಳು ಶಾಸ್ತ್ರವತ್ತಾಗಿದ್ದರೆ, ಆರಿಸಿಕೊಟ್ಟಿರುವ ಪ್ರಯೋಗಗಳು ರಸವತ್ತಾಗಿವೆ. ಇದಲ್ಲದೆ, ಇವನ ಕನ್ನಡ ಪ್ರಜ್ಞೆ ತುಂಬಾ ಪ್ರಶಂಸನೀಯವಾದುದಾಗಿದೆ. ಕೇಶಿರಾಜ ಎಷ್ಟರಮಟ್ಟಿಗೆ ಸಾಂಪ್ರದಾಯಕ ವೈಯಾಕರಣನೋ ಅದಕ್ಕೂ ಮಿಗಿಲಾಗಿ ಸ್ವತಂತ್ರವಿಚಾರಪರನಾದ ಭಾಷಾ ವಿಜ್ಞಾನಿಯಾಗಿಯೂ ಗೋಚರಿಸುತ್ತಾನೆ.
ಕಾಮೆಂಟ್‌ಗಳು