ನೀ ನುಡಿಯದಿರಲೇನು?
ನೀ ನುಡಿಯದಿರಲೇನು, ಬಯಲಾಗಿಹುದು ಎಲ್ಲ
ಕಣ್ಣಂಚಿನಕೊನೆಯ ಭಾವದಲ್ಲಿ;
ಬಗೆ ನೋವ ಭಾರಕ್ಕೆ ಬಳಲಿರುವ ಮೊಗವಿಹುದು
ಕಾರ್ಮೋಡದಾಗಸದ ರೀತಿಯಲ್ಲಿ.
ದೇಹವಿಡಿ ಕಣ್ಣಾಗಿ ಕಾದಿರಲು ಹಂಬಲಿಸಿ
ನಲವಿರದ ನಗೆಯಿಂದ ಮನವ ಮುರಿದೆ;
ಮಹದಾಸೆಗಳ ತುಳಿದು, ವಿಕಟಾಟ್ಟಹಾಸದಲಿ
ಮೆರೆದಿರುವ ನೋಟದಲಿ ನನ್ನನಿರಿದೆ.
ನೀ ನುಡಿಯದಿರಲೇನು...
ಬಾಡಿರುವ ಮೊಗದಲ್ಲಿ ಕಳೆಯಿರದ ಕಣ್ಣಲ್ಲಿ
ನಿನ್ನ ಸಿರಿವಂತಿಕೆಯ ಕಾಣುವಾಸೆ;
ಸೊಗವಿರದ ತುಟಿಯಲ್ಲಿ ತೂಗಿರುವ ನಗೆಯಲ್ಲಿ
ಚೆಲುಗನಸಿನಿರುಳುಗಳ ಹುಡುಕುವಾಸೆ
ನೀ ನುಡಿಯದಿರಲೇನು...
“ನಿನ್ನ ನಗೆ ಮಲ್ಲಿಗೆಯ ನನ್ನೊಲವ ರಸದಲ್ಲಿ;
ಬೆಳೆಸುವೆನು ಎಂದೆಂದು” ಎಂದೆ ನೀನು;
ಇಂದೇಕೆ ಈ ವಿರಸ, ಏಕಯ್ಯೋ ಆಭಾಸ-
ನಂಬದೆಯೆ ಶಂಕಿಸಿದೆ ಹೃದಯ ತಾನು.
ನೀ ನುಡಿಯದಿರಲೇನು...
ಅರೆ ಗಳಿಗೆ ಸ್ವಪ್ನ ಬರಲಾರದೆಮ್ಮೊಡನೆ,
ವಾಸ್ತವತೆ ಗಹಗಹಿಸಿ ಸೆಳೆಯಲಿಹುದು.
ಮರೆತೆಲ್ಲ ಕೊನೆಗೊಮ್ಮೆ ಮನಬಿಚ್ಚಿ ನಕ್ಕುಬಿಡು-
ಬೇರೆ ಹಾದಿಯ ನಾವು ಹಿಡಿಯಬಹುದು.
ನೀ ನುಡಿಯದಿರಲೇನು...
ಸಾಹಿತಿ: ಕೆ. ಎಸ್. ನಿಸಾರ್ ಅಹಮದ್
Tag: Nee nudiyadiralenu
Tag: Nee nudiyadiralenu
ಕಾಮೆಂಟ್‌ಗಳು