ದೀನಗಿಂತ ದೇವ ಬಡವ!
ಹರಿಗೆ ಎಂದು ಗುಡಿಯನೊಂದ
ಕಟ್ಟುತಿರುವೆಯಾ?
ಹರಿಯ ಒಲುಮೆ ಪಡೆದು ಪುಣ್ಯ
ಗಳಿಸುತಿರುವೆಯಾ?
ಹುಚ್ಚ! ನೀನು ಹಳ್ಳಿಗೋಡು
ದೀನ ಜನರ ಪಾಡ ನೋಡು
ಇರಲು ಗುಡಿಯು ಇಲ್ಲವಲ್ಲ
ಹೊಟ್ಟೆ ತುಂಬ ಅನ್ನವಿಲ್ಲ!
ಹರಿಗೆ ಎಂದು ಗುಡಿಯನೊಂದ
ಕಟ್ಟುತಿರುವೆಯಾ?
ದೀನಗೊಂದು ಗೂಡು ಸಾಕು
ದೇವಗೊಂದು ವಿಶ್ವ ಬೇಕು
ಮಣ್ಣ ಹುಲ್ಲ ಸಣ್ಣ ಗೂಡು
ಬಡವಗದುವೆ ಸಿರಿಯ ಬೀಡು
ಹರಿಗೆ ಎಂದು ಗುಡಿಯನೊಂದ
ಕಟ್ಟುತಿರುವೆಯಾ?
ಜಗಕೆ ಗೋಡೆ ಹಾಕಿ ಗುಡಿಯ ಕಟ್ಟಬಲ್ಲೆಯಾ?
ಹರಿಗೆ ಎಂದು ಗುಡಿಯನೊಂದ
ಕಟ್ಟುತಿರುವೆಯಾ?
ಹರಿಯ ವಿಶ್ವರೂಪವನ್ನು ಮರೆತುಬಿಟ್ಟೆಯಾ?
ದೀನಗಿಂತ ದೇವ ಬಡವನೆಂದು ಬಗೆದೆಯಾ?
ಸಾಹಿತ್ಯ: ದಿನಕರ ದೇಸಾಯಿ
ಇದೇ ಕುರಿತು ಕವಿ ಪು.ತಿ.ನ ಹೀಗೆ ಕವಿತೆ ರಚಿಸಿದ್ದಾರೆ:
ಹರಿಗೆ ಎಂದು ಗುಡಿಯನೊಂದ
ಕಟ್ಟುತಿರುವೆನು
ದೀನಗಿಂತ ದೇವ ಬಡವ
ನೆಂದು ಬಗೆವೆನು
ನಿಜವು ವಿಷ್ಣು ವಿಶ್ವದರಸು, ವಿಶ್ವಧಾಮನು
ಒಂದೇ ಹೆಜ್ಜೆಯಿಟ್ಟು ಭುವಿಯ ನಾಕವಳೆದನು
ಎರಡು ಚಿಕ್ಕದೆನ್ನ ಹೃದಯ; ಏನು
ಹೊಲಸದು!
ಇಲ್ಲೂ ನೆಲೆಯ ಬೇಡುವವನ ದೈನ್ಯವೆಂಥದು!
ಬೆಳ್ಳಿಬೆಟ್ಟದೊಡೆಯ ಶಿವನು, ಚಂದ್ರಮೌಳಿಯು
ಪ್ರೇಮಮೂರ್ತಿ ಗಿರಿಜೆ ಅವನ ಪ್ರಣಯಕಾಂತೆಯು
ಆದರವನ ಬೀಡು ಮಸಣ, ಲೇಪ ಬೂದಿಯು
ಚರ್ಮ ಉಡುಗೆ, ಹಾವು ತೊಡಿಗೆ, ಬದುಕು ಬಿಕ್ಕೆಯು.
ದೀನಗೊಂದು ವಿಶ್ವಸಾಲದಾಸೆ ತಣಿಸಲು
ದೇವಗೆದೆಯ ಗುಡಿಲೆ ಸಾಕು ನಲಿದು ನೆಲೆಸಲು
ಹರಿಗೆ ಎದೆಯೊಳೊಂದು ಗುಡಿಯ ಕಟ್ಟುತಿರುವೆನು
ದೀನಗಿಂತ ದೇವ ಬಡವನೆಂದು ಬಗೆವೆನು
ಸಾಹಿತ್ಯ: ಪು. ತಿ. ನರಸಿಂಹಾಚಾರ್
ಕಾಮೆಂಟ್‌ಗಳು