ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಉದಯಾನುಭವ

ಉದಯಾನುಭವ

ಹತ್ತು ರಂಗಿನಪೂರ್ವ ಸಭೆ ಪೂರ್ವ ದಿಕ್ಕಿನಲಿ 
ಸಭಿಕರೇ ಕಣ್ಣುಗಳು, ಭಾವ ಚಪ್ಪಾಳೆ. 
ನಸು ನೀಲಿ ಹಾಳೆಗಳ ಕೆಂಬರಹದಡಿಯಲ್ಲಿ 
ಬಂಗಾರ ಶಾಯಿಯಲಿ ಸಹಿಯ ಮಾಲೆ.

ಎಂಟಾದರೂ ದಿನವು ನಿದ್ದೆ ನಂಟನು ಬಿಡದೆ
ನಾಟಿನಂತಲುಗದೆಯೆ ಇದ್ದೆ ಹೊದ್ದು. 
ಇಂದಕಸ್ಮಾತ್ತಾಗಿ ಬೆಳಗೆದ್ದು ನೋಡಿದರೆ 
ದೇವರೇ, ಏನೆಂಥ ಕಣ್ಣ ಮುದ್ದು. 

ನಾ ಹೊದ್ದು ಬಿದ್ದಿದ್ದ ಬೆಚ್ಚೆನೆಯ ಈ ರಗ್ಗು
ಕಣ್ಣ ಮುಂದೆಳೆದಿರುವ ತೆರೆಯಂತಿದೆ. 
ತೆರೆಯ ಈ ಕಡೆ ಮನಸು. ತೆರೆಯ ಆ ಕಡೆ ಪುಣ್ಯ- 
ಭೇಟಿಯಾಗದೆ ಸೊರಗಿತೆಂದೆನಿಸಿದೆ. 

ಭಾಗ್ಯವಿರಬೇಕಹಹ, ಉದಯದನುಭವ ಗಳಿಗೆ
ಎಲ್ಲರಿಗು ದೊರೆಕೊಳ್ಳದಿಂಥ ಸ್ವತ್ತು.
ಏನೆಷ್ಟು ಉಪಮೆಯಗಳ ವೆಚ್ಚ ಮಾಡಿದರೆನು
ಮೂಕನಿಗೆ ತಿಳಿಯುವುದೆ ನುಡಿಯ ಗತ್ತು?

ಸಾಹಿತ್ಯ: ಕೆ. ಎಸ್. ನಿಸಾರ್ ಅಹಮದ್


Tag: Udayanubhava, Hattu ranginapurva sabhe

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ