ಆರು ಹಿತವರು ನಿನಗೆ
ಆರು ಹಿತವರು ನಿನಗೆ ಈ ಮೂವರೊಳಗೆ
ನಾರಿಯೋ ಧಾರುಣಿಯೋ ಬಲುಧನದ ಸಿರಿಯೋ.
ಅನ್ಯರಲಿ ಜನಿಸಿದ ಅಂಗನೆಯ ಕರೆತಂದು
ತನ್ನಮನೆಗವಳ ಯಜಮಾನಿಯೆನಿಸಿ
ಭಿನ್ನವಿಲ್ಲದಲರ್ಧ ದೇಹವೆನಿಸುವ ಸತಿಯು
ಕಣ್ಣಿನಲಿ ನೋಡಲಂಜ್ವಳು ಕಾಲವಶದಿ.
ಮುನ್ನಶತಕೋಟಿರಾಯರುಗಳಾಳಿದಾ ನೆಲವ
ತನ್ನದೆಂದೆನುತ ಶಾಸನವ ಬರೆಸಿ
ಭಿನ್ನಣದ ಮನೆಕಟ್ಟಿ ಕೋಟೆಕೊತ್ತಳವಿಕ್ಕಿ
ಚೆನ್ನಿಗನ ಅಸುವಳಿಯೆ ಹೊರಗೆ ಹಾಕುವರೊ.
ಶೋಕವನು ಗೈಯುವರು ಸತಿಸುತರು ಬಾಂಧವರು
ಜೋಕೆತಪ್ಪಿದ ಬಳಿಕ ಅರ್ಥವ್ಯರ್ಥ
ಲೋಕದೊಳು ಗಳಿಸಿದ ಪಾಪಪುಣ್ಯಗಳೆರಡು
ಸಾಕಾರವಾಗಿ ಸಂಗಡ ಬರುವವಲ್ಲದೆ.
ಅಸ್ಥಿರದ ದೇಹವನು ನೆಚ್ಚಿನಂಬಿರಬೇಡ
ಸ್ವಸ್ಥದಲಿ ನೆನೆಕಂಡ್ಯ ಹರಿಪಾದವ
ಚಿತ್ತದೊಳು ಶುದ್ಧಿಯಿಂ ಪುರಂದರ ವಿಠ್ಠಲನ
ಉತ್ತಮೋತ್ತಮನೆಂದು ಸುಖಿಯಾಗಿ ಮನುಜ.
ಸಾಹಿತ್ಯ: ಪುರಂದರದಾಸರು
Tag: Aaru hitavaru ninage, Yaru hitavaru ninage, Yaaru hitavaru ninage
ಕಾಮೆಂಟ್‌ಗಳು