ಹೂ ಬಿಡುತ್ತದೆ ಹಣ್ಣುಕೊಡುತ್ತದೆ
ಹೂ ಬಿಡುತ್ತದೆ
ಹಣ್ಣುಕೊಡುತ್ತದೆ
ಸಸ್ಯಶಾಸ್ತ್ರ ಓದದೆಯೇ ಮರ;
ಮೊಟ್ಟೆಯಿಡುತ್ತದೆ ಮರಿ
ಮಾಡುತ್ತದೆ
ಜೀವಶಾಸ್ತ್ರ ಓದದೆಯೇ ಖಗ
ವ್ಯಾಕರಣ ಯಾಕೆ, ಅಲಂಕಾರ
ಬೇಕೆ
ಮಾತಿನ ಮರ್ಮ ಬಲ್ಲ ವಾಗ್ಮಿಗೆ?
ವಾತ್ಸಾಯನನ ಸೂತ್ರ
ಪಾಠವಾಗಿರಬೇಕೆ
ನಲ್ಲೆಗೆ ಬೇಯುತ್ತಿರುವ
ಪ್ರೇಮಿಗೆ?
ಫಲಿಸುವ ಮರಕ್ಕೆ ಬೇಲಿ
ಯಾತಕ್ಕೆ?
ಸಾಕು ಬೀಜದ ಪುಣ್ಯ;
ಬೆಳಕಿಗೆ, ಮಳೆಗೆ,
ಬಿಸಿಲಿಗೆ
ಎಲ್ಲಿದೆ ಯಾರ ದಾಕ್ಷಿಣ್ಯ?
ಬಾಟಲಿಯ ಹಂಗು ಯಾಕೆ ಮಗುವಿಗೆ?
ಉಕ್ಕುತ್ತಿದೆ ಧಾರೆ ತಾಯ
ಎದೆಯಿಂದ;
ಲಕ್ಷ್ಯವೆ ಪಂಡಿತನ ಅಂಕೆ? ಅವನನ್ನೇ
ಶಿಕ್ಷಸುತ್ತದೆ ಪ್ರತಿಭೆ ಹೊಸ
ಚಲನೆಗಳಿಂದ.
ತಪ್ಪಿಲ್ಲ ಕಟ್ಟಾದರೆ ಕೂದಲು
ಕ್ರಾಪ್, ಬಾಬ್,
ಕುಣಿಸುವ ಪೋನೀಟೈಲಾಗಿ,
ಬಾಧಕವೇನಲ್ಲ ಚಿನ್ನದ ಡಾಬು,
ತಬ್ಬಿದ್ದರೆ ಹೂ ಸೊಂಟವನ್ನು
ಹಗುರಾಗಿ,
ಕಿವಿಗೆ ಲೋಲಕ್, ಹಣೆಗೆ
ತಿಲಕ,
ಶೃಂಖಲೆಯಲ್ಲ ಕೈಗೆ ಬಳೆ, ಅಲಂಕಾರ
ಮಾತ್ರ.
ಸಹಜವಾಗಿದ್ದದ್ದು ಸರಿಯಾಗೂ
ಇದ್ದೀತು,
ತಾನೇ ನಿರ್ಮಿಸಿಕೊಂಡಂತೆ ನದಿ
ಪಾತ್ರ.
ಸಾಹಿತ್ಯ: ಡಾ. ಎನ್. ಎಸ್.
ಲಕ್ಷ್ಮೀನಾರಾಯಣ ಭಟ್ಟ
Tag: Hoo biduttade hannu koduttade
ಕಾಮೆಂಟ್‌ಗಳು