ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಕ್ಯಾಮರಾವನ್ನು ಆಪ್ತವಾಗಿಸುವ ‘ಕ್ಲಿಕ್ ಮಾಡಿ ನೋಡಿ’

ಕ್ಯಾಮರಾವನ್ನು ಆಪ್ತವಾಗಿಸುವ ‘ಕ್ಲಿಕ್ ಮಾಡಿ ನೋಡಿ’

ಇಂದು ಕ್ಯಾಮರಾ ಬಹುತೇಕ ಎಲ್ಲರ ಬಳಿ ಇದೆ.  ಎಲ್ಲರೂ ಒಂದಿಲ್ಲೊಂದು ವೇಳೆ ಕ್ಯಾಮರಾ ಮುಂದೆಯಂತೂ ನಿಂತವರೇ.  ಹೀಗೆ ಕ್ಯಾಮರಾದೊಂದಿಗೆ ಇದ್ದರೂ ಕ್ಯಾಮರಾವನ್ನು ಅರ್ಥೈಸಿ ಅದರೊಂದಿಗಿರುವವರು ಕಡಿಮೆ.  ಈ ಕುರಿತು ಅರ್ಥ ಮಾಡಿಕೊಳ್ಳಲಿಕ್ಕೆ ಹೊರಟವರೆಲ್ಲಾ ಹಲವೊಂದು ಪಾಶ್ಚಾತ್ಯ ಮೂಲದ ಕ್ಲಿಷ್ಟ ಬರಹಗಳನ್ನು ಅರ್ಥೈಸಿಕೊಂಡಿರುವವರೋ, ಇಲ್ಲವೇ ಸಾಹಸಪೂರ್ಣ ಚಟುವಟಿಕೆಗಳಲ್ಲಿದ್ದು ಛಾಯಾಗ್ರಹಣವನ್ನೂ ತಮ್ಮ ಸಾಹಸಮಯ ಬದುಕಿನ ಒಂದು ಭಾಗವಾಗಿಸಿಕೊಂಡಿರುವವರೋ, ಇಲ್ಲವೇ ಛಾಯಾಗ್ರಹಣವನ್ನೇ ತಮ್ಮ ತೀವ್ರ ಆಸಕ್ತಿಯ ಸಂಗಾತಿಯನ್ನಾಗಿಯೋ ಮಾಡಿಕೊಂಡು ಬದುಕುತ್ತಿರುವವರೋ ಆಗಿರುತ್ತಾರೆ.

ಇಂತಹ ಕ್ಯಾಮರಾದ ಕುರಿತಾಗಿ ನಮ್ಮ ಕನ್ನಡ ಭಾಷೆಯಲ್ಲಿ ಸುಲಲಿತವಾಗಿ ಮೂಡಿಬಂದಿರುವ ಪುಸ್ತಕ, ಇತ್ತೀಚಿನ ಪ್ರಮುಖ  ಯುವ ತಂತ್ರಜ್ಞಾನಿ ಬರಹಗಾರರಲ್ಲಿ ಒಬ್ಬರೆನಿಸಿರುವ ಟಿ. ಜಿ. ಶ್ರೀನಿಧಿ ಅವರ ‘ಡಿಜಿಟಲ್ ಕ್ಯಾಮೆರಾ ಮೋಡಿ ಕ್ಲಿಕ್ ಮಾಡಿ ನೋಡಿ!’.   ಕ್ಯಾಮರಾದ ಚರಿತ್ರೆಯನ್ನೂ ಒಳಗೊಂಡಂತೆ ಅವುಗಳ ಇಂದಿನವರೆಗಿನ ಕಾರ್ಯ ವೈಖರಿ, ತಂತ್ರಜ್ಞಾನ, ಕೌಶಲ್ಯತೆಗಳ ಆಳ, ಪರಿಕರಗಳ ವ್ಯಾಪ್ತಿ, ಉಪಯುಕ್ತತೆ, ಮಿತಿ ಇವೆಲ್ಲವುಗಳನ್ನೂ ಈ ಪುಸ್ತಕ ಒಳಗೊಂಡಿದೆ.  ಜೊತೆಗೆ ಛಾಯಾಗ್ರಹಣವನ್ನು ಇನ್ನೂ ಕ್ಲಿಕ್ ಮಾಡಿ ಸಂತೋಷಿಸುತ್ತಿರುವ ಪ್ರಾರಂಭಿಕ ಹಂತದಲ್ಲಿರುವ ನನ್ನಂತಹ ಹವ್ಯಾಸಿ ಆಸಕ್ತರಿಗೆ, ಅದನ್ನೇ ಒಂದಷ್ಟು ತಿಳುವಳಿಕೆಯಿಂದ ಮಾಡುವಂತಹ ಮತ್ತೊಂದು ಮೆಟ್ಟಿಲಮೇಲೆ ನಿಂತ ಅನುಭವವನ್ನೂ ನೀಡುವಂತದ್ದಾಗಿದೆ.

ಒಂದು ತಾಂತ್ರಿಕ ವಿಷಯವನ್ನು ಕನ್ನಡದಲ್ಲಿ ಹೇಳುವಾಗ ಅದನ್ನು ಅಪ್ತವಾಗಿ ಹೇಳುವಂತಹ ಶ್ರೀನಿಧಿ ಅವರ ಕಲೆ ಮೆಚ್ಚುವಂತದ್ದಾಗಿದ್ದು, ಇದನ್ನು ಅವರು ಈಗಾಗಲೇ ತಮ್ಮ ಪ್ರಶಸ್ತಿ ವಿಜೇತ ಕೃತಿಯಾದ ‘ತಿನ್ನಲಾಗದ ಬಿಸ್ಕತ್ತು, ನುಂಗಲಾರದ ಟ್ಯಾಬ್ಲೆಟ್ಟು’ ಕೃತಿ ಹಾಗೂ ಇನ್ನಿತರ ಎಂಟು ವಿವಿಧ ಕೃತಿಗಳಲ್ಲಿ ತೋರ್ಪಡಿಸಿರುವಂತೆ, ತಮ್ಮ ಈ ಹತ್ತನೇ ಕೃತಿಯಾದ ಕ್ಲಿಕ್ ಮಾಡಿ ನೋಡಿ’ ಕೃತಿಯಲ್ಲೂ ಮುಂದುವರೆಸಿದ್ದಾರೆ.  ಅವರ ಭಾಷೆಯಲ್ಲಿರುವ ಸರಾಗ ಹರಿಯುವಿಕೆ ಈ ಪುಸ್ತಕವನ್ನು, ಎಲ್ಲೂ ತಂತ್ರಜ್ಞಾನ ಓದುತ್ತಿದ್ದೇವೆ ಎಂಬ ಭಾವ ಹುಟ್ಟಿಸದೆ, ಕಥಾನಕವಾದ ಆಪ್ತಭಾಷೆಯೊಂದಿಗೆ ನಮ್ಮನ್ನು ಹಿತವಾಗಿ ಓದಿಸಿಕೊಂಡು ಹೋಗುವಂತಿದೆ.

ಪ್ರಸಿದ್ಧ ಛಾಯಾಗ್ರಹಣ ತಜ್ಞರಾದ ಕೆ. ಎಸ್. ರಾಜಾರಾಮ್ ಅವರು ತಮ್ಮ ಹಿನ್ನುಡಿಯಲ್ಲಿ ಈ ಪುಸ್ತಕವನ್ನು ಹೀಗೆ ಬಣ್ಣಿಸಿದ್ದಾರೆ:  “ಡಿಜಿಟಲ್ ಛಾಯಾಗ್ರಹಣದ ಕ್ಷೇತ್ರವನ್ನು ಪರಿಚಯಿಸಿಕೊಳ್ಳಲು ಪ್ರಯತ್ನಿಸುವ ಸಾಮಾನ್ಯ ಓದುಗನ ಕುತೂಹಲ ತಣಿಸಲು ಶ್ರೀನಿಧಿಯವರ ಈ ಕೃತಿ ಒಂದು ಉತ್ತಮ ಕನ್ನಡಿ.  ಇದರ ವಿವಿಧ ಆಯಾಮಗಳನ್ನು ಗಮನಿಸಿದಾಗ ಪ್ರತಿ ವಿಷಯದಲ್ಲೂ ಶ್ರೀನಿಧಿಯವರದೇ ಆದ ಸಹಜ ಸುಲಭ ನಿರೂಪಣೆ, ಸುಲಲಿತ ಬರವಣಿಗೆ, ಕ್ಲಿಷ್ಟವಾದ ತಾಂತ್ರಿಕ ವಿಷಯಗಳನ್ನೂ ಸರಳವಾಗಿ ಬಿಡಿಸಿ ಹೇಳುವ ಶೈಲಿ ಅನನ್ಯವಾಗಿವೆ.  ಇಂಗ್ಲಿಷಿನಲ್ಲಿ ಪ್ರಚಲಿತವಾಗಿರುವ ಹಲವಾರು ಶಬ್ದಗಳನ್ನು ಹಾಗೆಯೇ ಇಟ್ಟು ವಿವರಿಸುವ ಅವರ ಚಾಕಚಕ್ಯತೆ ಗಮನಾರ್ಹ.  ದಿನನಿತ್ಯದ ಭಾಷಾ ಶೈಲಿಯಲ್ಲಿ ಸೂಕ್ಷ್ಮ ವಿಷಯಗಳನ್ನೂ ಸವಿಸವಿಯಾಗಿ ನಿರೂಪಿಸಿರುವ ರೀತಿ ಶ್ರೀನಿಧಿಯವರ ಸೃಜನಶೀಲ ಮನಸ್ಸು, ಭಾಷಾ ಸಾಮರ್ಥ್ಯ, ನಿರೂಪಣಾ ಕೌಶಲ್ಯ ಮತ್ತು ಹೊಸ ವಿಷಯಗಳ ಬಗೆಗೆ ಅವರಿಗಿರುವ ಪ್ರೌಢಿಮೆಯನ್ನು ಪ್ರಚುರಪಡಿಸಿವೆ.”

ನವಕರ್ನಾಟಕ ಪ್ರಕಾಶನದವರು ಈ ಪುಸ್ತಕವನ್ನು ವರ್ಣದಲ್ಲಿ ಉತ್ತಮ ಮುದ್ರಣ ಮತ್ತು ಆಕರ್ಷಕ ವಿನ್ಯಾಸದಲ್ಲಿ ಹೊರತಂದಿದ್ದು, ಇದರಲ್ಲಿ ಮೂಡಿಬಂದಿರುವ ಶ್ರೀನಿಧಿಯವರೇ ಮೂಡಿಸಿರುವ  ಚಿತ್ರಗಳ ಜೊತೆಗೆ ಹಲವಾರು ಶ್ರೇಷ್ಠ ಛಾಯಾಗ್ರಾಹಕರ ಚಿತ್ರಗಳು ಈ ಪುಸ್ತಕವನ್ನು ಮತ್ತಷ್ಟು ಆಪ್ತವಾಗಿಸುವಲ್ಲಿ ನೆರವಾಗಿವೆ.

Tag: Digital Photography,  Click Maadi Nodi

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ