ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಬಾಗಿಲಲಿ ನಿಂತವರು ಯಾರವರು ಯಾರೊ!

ಬಾಗಿಲಲಿ ನಿಂತವರು ಯಾರವರು ಯಾರೊ!

ಅಮೆರಿಕದ ಸಣ್ಣ ಹೋಟೆಲೊಂದರಲ್ಲಿ ಜಾರ್ಜ್ಎಂಬ ಮೇಲ್ವಿಚಾರಕ  ಅಂದಿನ ದಿನ ರಾತ್ರಿ ಪಾಳಯದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ.  ಹೊತ್ತು ಮೀರಿತ್ತು.  ಹೊರಗೆ ಧಾರಾಕಾರವಾಗಿ ಮಳೆ. ಚಳಿಯೋ ಚಳಿ.  ಬಾಗಿಲು ತಟ್ಟಿದ ಶಬ್ದಕ್ಕೆ ಕಿವಿ ನೆಟ್ಟಗಾಗಿ ಜಾರ್ಜ್ ಚಿಲಕ ತೆಗೆದ.  ವೃದ್ಧರೊಬ್ಬರು ತಮ್ಮ ಪತ್ನಿಯ ಜೊತೆ ಮಳೆಯಲ್ಲಿ ತೊಯ್ದು ನಡುಗುತ್ತಾ ನಿಂತಿದ್ದಾರೆ.

ಸಂಭಾವಿತನಾದ ಜಾರ್ಜ್ ಮೆಲುನುಡಿದ, "ಏನಾಗಬೇಕಿತ್ತು ಸಾರ್". 

ವೃದ್ಧರು ನುಡಿದರು.  ನಾವು ನ್ಯೂಯಾರ್ಕಿನವರು.  ಒಂದು ಕೆಲಸದ ಮೇಲೆ ಇಲ್ಲಿಗೆ ಬಂದಿದ್ದೆವು.  ಕೆಲಸ ಮುಗಿಯುವುದು ವಿಳಂಬವಾಗಿ ಹೊರಡಬೇಕು ಎನ್ನುವಷ್ಟರಲ್ಲಿ ಕತ್ತಲಾಗಿ ಮಳೆಗೆ ಸಿಲುಕಿದ್ದೇವೆ.  ಇಂದು ರಾತ್ರಿ ಇಲ್ಲಿ ತಂಗಲಿಕ್ಕೆ ಒಂದು ಉತ್ತಮವಾದ ಕೊಠಡಿ ಬೇಕಿತ್ತು.” 

ಸರ್ಇಲ್ಲಿ ಈಗ ಯಾವ ಕೊಠಡಿಗಳು ಖಾಲಿ ಇಲ್ಲ.  ಸಾಮಾನ್ಯವಾಗಿ ಇಲ್ಲಿ ಮುಂಗಡವಾಗಿ ಕಾದಿರಿಸದೆ ಕೊಠಡಿಗಳು ಸಿಗುವ ಸಾಧ್ಯತೆಗಳು ಕಡಿಮೆ. ನನ್ನನ್ನು ಮನ್ನಿಸಿಎಂದ ಜಾರ್ಜ್.    ಈತನ ಮಾತನ್ನು ಕೇಳುತ್ತಲೇ ಆ ವೃದ್ಧ ದಂಪತಿಗಳು ಚಿಂತೆಗೀಡಾದರು.

ಆ ಹಿರಿಯರು ಈ ಮಳೆಯಲ್ಲಿ ನಾವು ಎಲ್ಲಿಗೆ ಹೋಗುವುದೂ ಕಷ್ಟ.  ದಯವಿಟ್ಟು ಹೇಗಾದರೂ ಸಹಾಯ ಮಾಡಿಎಂದು ದೈನ್ಯರಾದರು.

ಆ ವೃದ್ಧರ ಮಾತನ್ನಾಲಿಸಿದ ಜಾರ್ಜ್ ಹೃದಯ ಸಂವೇದನೆಯಿಂದ ಒಂದು ಕ್ಷಣ ಮೂಖನಾದ.  ಮೊದಲು ಆ ವೃದ್ಧ ದಂಪತಿಗಳನ್ನು ಒಳಕ್ಕೆ ಬರಮಾಡಿಕೊಂಡು ಸ್ವಾಗತ ಕೊಠಡಿಯಲ್ಲಿ ಕುಳ್ಳಿರಿಸಿ ಅವರಿಗೆ ಮೈ ಒರೆಸಿಕೊಳ್ಳುವುದಕ್ಕೆ ವಸ್ತ್ರ ಕೊಟ್ಟ.  ಮೈ ನಡುಕ ನಿಲ್ಲುವಂತೆ ಹೀಟರ್ ಆನ್ ಮಾಡಿದ.  ಬಿಸಿ ಬಿಸಿಯಾಗಿ ಹಬೆಯಾಡುತ್ತಿರುವ ಕಾಫಿಕೊಟ್ಟು ಉಪಚರಿಸಿದ.   ಆ ವೃದ್ಧ ದಂಪತಿಗಳ ಹೃದಯದಲ್ಲಿ ಆನಂದ ತುಂಬಿತು.  ಜಾರ್ಜ್ ನುಡಿದ.  ದಯವಿಟ್ಟು ನನ್ನನ್ನು ನಂಬಿ, ನಮ್ಮಲ್ಲಿ ಯಾವ ಕೊಠಡಿಯೂ ಖಾಲಿ ಇಲ್ಲ.  ಆದರೂ ನಿಮ್ಮನ್ನು ಈ ಮಳೆಯ ರಾತ್ರಿಯಲ್ಲಿ ಹೊರಗೆ ಕಳುಹಿಸಲು ಮನಸ್ಸಾಗುತ್ತಿಲ್ಲ.  ನಿಮಗೆ ಅಭ್ಯಂತರವಿಲ್ಲದಿದ್ದರೆ ನನ್ನದೊಂದು ಪುಟ್ಟ ಸಲಹೆ ಇದೆ.  ರಾತ್ರಿ ಪಾಳಯದಲ್ಲಿ ನನಗೆ ನಡುನಡುವೆ ವಿಶ್ರಾಂತಿ ಪಡೆಯಲು ಒಂದು ಸಣ್ಣ ಕೋಣೆಯಿದೆ.  ಅದರಲ್ಲಿ ಸುಮಾರಾದ ವ್ಯವಸ್ಥೆಗಳೂ ಇವೆ.  ತಾವು ತಪ್ಪು ತಿಳಿಯುವುದಿಲ್ಲವಾದರೆ, ನನ್ನ ಈ ಕೋಣೆಯಲ್ಲಿ ಈ ರಾತ್ರಿ ಕಳೆಯಬೇಕೆಂದು ನಿಮ್ಮನ್ನು ಕೋರುತ್ತೇನೆ.  ಈ ನನ್ನ ಕೋಣೆಗೆ ತಾವೇನೂ ಬಾಡಿಗೆ ತೆರಬೇಕಾಗಿಲ್ಲ.  ಆಗಬಹುದೆ?”. 

ಆ ವೃದ್ಧ ದಂಪತಿಗಳಿಗೆ ತುಂಬಾ ಸಂತೋಷವಾಯಿತು.  ನೀನು ಬಹಳ ಒಳ್ಳೆಯವನಪ್ಪ.  ಆ ಭಗವಂತ ನಿನಗೆ ಒಳ್ಳೆಯದನ್ನು ಮಾಡಲಿಎಂದರು.  ಜಾರ್ಜ್ ತನ್ನ ಕೋಣೆಯಲ್ಲಿ  ಹಾಸಿಗೆಗೆ ಶುಭ್ರವಾದ ವಸ್ತ್ರ, ತಲೆದಿಂಬು, ಉಣ್ಣೆ ಹೊದಿಕೆ ಇತ್ಯಾದಿಗಳಿಂದ ಸೂಕ್ತಗೊಳಿಸಿದ.  ಹಸಿದಿದ್ದ ಆ ವೃದ್ಧ ದಂಪತಿಗಳಿಗೆ ಸಾಧ್ಯವಿದ್ದ ಒಂದಷ್ಟು ಬ್ರೆಡ್ ಇತ್ಯಾದಿ ಆಹಾರ ಕೂಡಾ ಒದಗಿಸಿದ.  ಆ ವೃದ್ಧ ದಂಪತಿಗಳು ಹೃದಯ ತುಂಬಿಬಂದ ಸಾರ್ಥಕ್ಯ ಭಾವದಲ್ಲಿ ಆ ರಾತ್ರಿಯನ್ನು ಕಳೆದು ಮುಂಜಾನೆಯಲ್ಲಿ ಜಾರ್ಜ್ ನಿನ್ನ ಉಪಕಾರವನ್ನು ನಾವೆಂದೂ ಮರೆಯೆವುಎಂದು ಹರಸಿ ಹೊರಟರು.

ಒಂದೆರಡು ವರುಷ ಉರುಳಿತು.  ಅಮೆರಿಕದ ಶ್ರೀಮಂತರೆನಿಸಿದ್ದ ಜಾನ್ ಆಸ್ಟರ್ ಅವರು ನ್ಯೂಯಾರ್ಕಿನಲ್ಲಿ ವಾಲ್ಡಾಫ್ ಅಸ್ಟೋರಿಯಾಎಂಬ ಅತ್ಯಾಧುನಿಕ ಪಂಚತಾರಾ ಹೋಟೆಲನ್ನು ನಿರ್ಮಿಸಿದರು.  ಈ ಹೋಟೆಲಿನ ಆರಂಭಕ್ಕೆ ಮೊದಲು, ಈ ಪ್ರತಿಷ್ಠಿತ ಹೋಟೆಲಿನ ಉಸ್ತುವಾರಿ ಜವಾಬ್ಧಾರಿ ಹೊತ್ತಿದ್ದ ಅಧಿಕಾರಿಯು, ಜಾನ್ ಆಸ್ಟರ್ ಅವರ ಸಲಹಾ ಸಮಿತಿ ಸಭೆಯಲ್ಲಿ,  “ಸಾರ್, ಮ್ಯಾನೇಜರ್ ಹುದ್ದೆಗೆ ಸೂಕ್ತ ಅಭ್ಯರ್ಥಿಯ ಆಯ್ಕೆಗಾಗಿ ಜಾಹೀರಾತು ನೀಡಬೇಕಾಗಿದೆಎಂದು ಪ್ರಸ್ತಾಪ ಮಂಡಿಸಿದ. 

ಜಾನ್ ಆಸ್ಟರ್ ನಕ್ಕು ನುಡಿದರು. ನಮ್ಮ ಈ ಹೋಟೆಲಿನ ಮ್ಯಾನೇಜರ್ ಹುದ್ದೆಗೆ ಈಗಾಗಲೇ ನಾನು ಒಬ್ಬ ವ್ಯಕ್ತಿಯನ್ನು ಆಯ್ಕೆ ಮಾಡಿದ್ದೇನೆ.  ಆತನನ್ನು ಕರೆತರಲು ನಮ್ಮವರನ್ನು ಆಗಲೇ ಕಳುಹಿಸಿದ್ದೇನೆ.  ಆತ ಶೀಘ್ರದಲ್ಲೇ ಬಂದು ಈ ಮ್ಯಾನೇಜರ್ ಹುದ್ದೆಯನ್ನು ಅಲಂಕರಿಸಲಿದ್ದಾನೆ.  ನೀವು ಆತನಿಗೆ ಸಹಕಾರ ಕೊಟ್ಟು ಬೆಂಬಲಿಸಿಎಂದರು.

ಅಂದು ಆ ರಾತ್ರಿ ತಮ್ಮ ಪತ್ನಿಯ ಜೊತೆ ಆ ಪುಟ್ಟ ಹೋಟೆಲಿನಲ್ಲಿ ಜಾರ್ಜ್ ಎಂಬ ಹೃದಯವಂತ ಹುಡುಗನ ಔದಾರ್ಯಕ್ಕೆ ಮರುಳಾದವರು ಮತ್ತ್ಯಾರೂ ಅಲ್ಲ.  ಅಮೆರಿಕದ ಈ ಪ್ರಸಿದ್ಧ ಉದ್ಯಮಿ ಜಾನ್ ಆಸ್ಟರ್.  ತಮ್ಮ ಬೃಹತ್ ಹೋಟೆಲಿಗೆ ಜಾರ್ಜ್ ಅಂತಹ  ಹೃದಯವಂತ ವ್ಯಕ್ತಿಯೇ ಸೂಕ್ತನಾದ   ಮ್ಯಾನೇಜರ್ ಎಂಬುದರ ಬಗ್ಗೆ ಅವರಲ್ಲಿ ಯಾವುದೇ ಸಂದೇಹವಿರಲಿಲ್ಲ.

ನಮ್ಮ ಮನೆ ಬಾಗಿಲು ಬಡಿದಾಗ ಅಲ್ಲಿ ಸಹಾಯದ ಅಪೇಕ್ಷೆಯಿಂದ  ದೇವರು ಯಾವ ರೂಪದಲ್ಲಿ ಯಾರನ್ನು ಕಳುಹಿರುವನೋ ಅಥವಾ ತಾನೇ ಯಾವ ರೂಪದಲ್ಲಿ ನಿಂದಿರುವನೋ ನಾವು ಅರಿಯಲಾರೆವು ಆಲ್ಲವೆ!” 


(ಆಧಾರ: ಎಸ್. ಷಡಾಕ್ಷರಿ ಅವರ ಕ್ಷಣ ಹೊತ್ತು ಅಣಿ ಮುತ್ತು’)

Tag: Bagilali nintavaru yaravaru yaro

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ