ಯುಗಾದಿ
ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ
ಬರುತಿದೆ
ಹೊಸ ವರುಷಕೆ ಹೊಸ ಹರುಷವ
ಹೊಸತು ಹೊಸತು ತರುತಿದೆ
ಹೊಂಗೆ ಹೂವ ತೊಂಗಲಲ್ಲಿ
ಭೃಂಗದ ಸಂಗೀತ ಕೇಳಿ
ಮತ್ತೆ ಕೇಳ ಬರುತಿದೆ
ಬೇವಿನ ಕಹಿ ಬಾಳಿನಲ್ಲಿ
ಹೂವಿನ ನಸುಗಂಪು ಸೂಸಿ
ಜೀವಕಳೆಯ ತರುತಿದೆ
ವರುಷಕೊಂದು ಹೊಸತು ಜನ್ಮ
ಹರುಷಕೊಂದು ಹೊಸತು ನೆನೆಯು
ಅಖಿಲ ಜೀವ ಜಾತಕೆ
ಒಂದೆ ಒಂದು ಜನ್ಮದಲ್ಲಿ
ಒಂದೆ ಬಾಲ್ಯ ಒಂದೆ ಹರೆಯ
ನಮಗದಷ್ಟೆ ಏತಕೋ..
ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ
ಬರುತಿದೆ
ಹೊಸ ವರುಷಕೆ ಹೊಸ ಹರುಷವ
ಹೊಸತು ಹೊಸತು ತರುತಿದೆ
ಸಾಹಿತ್ಯ: ಅಂಬಿಕಾತನಯದತ್ತ
ಈ ಗೀತೆಯ ಕುರಿತಾಗಿ ರಾಷ್ಟ್ರಕವಿ ಜಿ. ಎಸ್.
ಶಿವರುದ್ರಪ್ಪನವರ ವಿಶ್ಲೇಷಣೆ ಇಂತಿದೆ:
‘ಯುಗ ಯುಗಾದಿ
ಕಳೆದರೂ ಯುಗಾದಿ ಮರಳಿ ಬರುತಿದೆ’ ಎಂದು ಮೊದಲಾಗುವ ಕವಿತೆಯೊಳಗೆ ಒಂದು
ವಿಲಕ್ಷಣ ಭಾವದ ಅಭಿವ್ಯಕ್ತಿಯಿದೆ: ಈ ಯುಗಾದಿ ಪ್ರತಿವರ್ಷವೂ
ಬಂದು ಈ ಸಸ್ಯಪ್ರಪಂಚವನ್ನು ತನ್ನ ಮಾಂತ್ರಿಕ ಸ್ಪರ್ಶದಿಂದ ಹೊಸ ಹೊಸತನ್ನಾಗಿ ಮಾಡುತ್ತಿದೆಯಲ್ಲ,
ಅದು ತನ್ನ ಸ್ಪರ್ಶದಿಂದ ನಮ್ಮನ್ನೂ ಯಾಕೆ ಹೊಸ
ಹೊಸತನ್ನಾಗಿ ಮಾಡಬಾರದು. ‘ನಿದ್ದೆಗೊಮ್ಮೆ ನಿತ್ಯ ಮರಣ| ಎದ್ದ ಸಲ ನವೀನ ಜನನ, ನಮಗೆ ಏಕೆ ಬಾರದೋ ‘ಒಂದೆ ಒಂದು ಜನ್ಮದಲ್ಲಿ, ಒಂದೆ ಬಾಲ್ಯ ಒಂದೆ ಹರೆಯ ನಮಗದಷ್ಟೆ
ಏತಕೆ?’ ನಿಸರ್ಗದ ಹಾಗೆ ಪ್ರತಿ ಯುಗಾದಿಯಲ್ಲೂ ಈ ಮನುಷ್ಯಜೀವಿತವೂ
ನಿರಂತರ ಪರಿವರ್ತನೆಯಿಂದ ಹೊಸತಾಗಬಾರದು ಏಕೆ? ಯುಗಾದಿಯೇನೋ
ಪ್ರತಿವರ್ಷವೂ ಬರುತ್ತದೆ. ಹೊಸ ವರುಷಕೆ ಹೊಸ ಹರುಷವನ್ನು ತರುತಿದೆ. ಆದರೆ ಈ
ಯುಗಾದಿ ‘ನಮ್ಮನಷ್ಟೆ ಮರೆತಿದೆ’-ಇದೊಂದು
ರೀತಿಯಲ್ಲಿ ಸೃಜನಶೀಲತೆಯಿಂದ ನವನವೀನವಾಗುವ ಉತ್ಕಟತೆಯ ಹಂಬಲ. ಒಂದು ಕಡೆ ಪ್ರತಿವರ್ಷವೂ
ಹಳೆಯದನ್ನು ಕಳಚಿಕೊಂಡು ಹೊಸ ಹೊಸತಾಗುವ ನಿಸರ್ಗ, ಮತ್ತೊಂದು ಕಡೆ ಇದರ
ಸ್ಪರ್ಶವೇ ಇಲ್ಲದೆ ದಿನದಿಂದ ದಿನಕ್ಕೆ ಹಳತಾಗುವ ನಮ್ಮ ಬದುಕಿನ ವಿಷಾದ, ಈ ವಿಲಕ್ಷಣ ಭಾವದ ಕವಿತೆಯ ಬೇರುಗಳು ಋಗ್ವೇದದ ಉಷಾಸೂಕ್ತದಲ್ಲಿವೆ ಎಂದರೆ ಓದುಗರು
ಆಶ್ಚರ್ಯಪಡಬಹುದು. ಅದರ ಕನ್ನಡ ಅನುವಾದ ಹೀಗಿದೆ:
‘ಮತ್ತೆ ಮತ್ತುದಯಿಸುತ ಈ ಚಿರಂತನ ಕನ್ಯೆ
ಸಮಾನ ವರ್ಣದಲಿ ಶೋಭಿಸುವಳು
ದ್ಯೂತ ಚತುರನು ಜನರ ಧನವ ಸೆಳೆವಂದದೊಳು
ಮರ್ತ್ಯರಾಯುವನಿವಳು ಸೆಳೆಯುತಿಹಳು!’
ಸಮಾನ ವರ್ಣದಲಿ ಶೋಭಿಸುವಳು
ದ್ಯೂತ ಚತುರನು ಜನರ ಧನವ ಸೆಳೆವಂದದೊಳು
ಮರ್ತ್ಯರಾಯುವನಿವಳು ಸೆಳೆಯುತಿಹಳು!’
ಉಷೆಯನ್ನು ಕುರಿತ ಹಲವಾರು ವರ್ಣನೆಗಳನ್ನು ಕುರಿತ ಸೂಕ್ತಗಳಲ್ಲಿ ಇದೂ ಒಂದು. ಈ
ಸೂಕ್ತದಲ್ಲಿ ಮತ್ತೆ ಮತ್ತೆ ಉದಯಿಸುತ್ತ, ಸಮಾನ
ವರ್ಣಗಳಲ್ಲಿ ಶೋಭಿಸುತ್ತಾಳೆ ಈ ಚಿರಂತನ ಕನ್ಯೆಯಾದ ಉಷೆ. ಆದರೆ ಈಕೆ ಹೀಗೆ ದಿನದಿನವೂ
ಹೊಸತಾಗುತ್ತಲೇ ಜೂಜಿನಲ್ಲಿ ನಿಪುಣನಾದವನು ತನ್ನ ಜತೆಯ ಆಟಗಾರರ ಹಣವನ್ನು ಸೆಳೆದುಕೊಳ್ಳುವ ಹಾಗೆ,
ಈಕೆ ನಮ್ಮ ಆಯುಷ್ಯವನ್ನು ಸೆಳೆದುಹಾಕುತ್ತಾಳೆ. ಹೀಗೆ ಉಷೆಯ ಚಿರಂತನವಾದ,
ನಿತ್ಯಯೌವನದ ನಿತ್ಯಾಭಿನಯದ ಹಿನ್ನೆಲೆಯಲ್ಲಿ ಹಳಬರಾಗಿ ಮೃತ್ಯುಮುಖವಾಗುವ ಈ
ಮನುಷ್ಯರ ನಶ್ವರತೆಯ ವಿಷಾದ ಈ ಅಭಿವ್ಯಕ್ತಿಯಲ್ಲಿ ಮಡುಗಟ್ಟಿದೆ. ಮಹಾ ಪಂಡಿತರಾದ
ಮ್ಯಾಕ್ಸಮುಲ್ಲರ್ ಅವರು, ಈ ಸೂಕ್ತದಲ್ಲಿರುವ ಈ ವಿಷಾದದ ಭಾವವನ್ನು
ಕುರಿತು ವ್ಯಾಖ್ಯಾನ ಬರೆದಿದ್ದಾರೆ. ಆದರೆ ಈ ಉಷಾ ಸೂಕ್ತ, ಬೇಂದ್ರೆಯವರ ‘ಯುಗಾದಿ’ ಪದ್ಯದೊಳಗೆ ಪಡೆದಿರುವ ಪುನರ್ಭವ ವಿಶೇಷ
ರೀತಿಯದಾಗಿದೆ.
Tag: Yugadi, Yuga yugadi kaledaru, Yuga yugadi kaledaroo
ಕಾಮೆಂಟ್‌ಗಳು