ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಹೆಂಡತಿ ಒಬ್ಬಳು


ಹೆಂಡತಿ ಒಬ್ಬಳು ಮನೆಯೊಳಗಿದ್ದರೆ 
ನನಗದು ಕೋಟಿ ರೂಪಾಯಿ
ಹೆಂಡತಿ ಒಬ್ಬಳು ಹತ್ತಿರವಿದ್ದರೆ
ನಾನೂ ಒಬ್ಬ ಸಿಪಾಯಿ

ಹೆಂಡತಿ ಒಬ್ಬಳು ಮನೆಯೊಳಗಿದ್ದರೆ
ಹುಣ್ಣಿಮೆ ಹೋಳಿಗೆ ದೀಪ
ಹೆಂಡತಿ ತವರಿಗೆ ಹೊರಡುವೆನೆಂದರೆ
ನನಗಿಲ್ಲದ ಕೋಪ.

ಕೈಹಿಡಿದವಳು ಕೈಬಿಡದವಳು
ಮಾಡಿದ ಅಡುಗೆಯ ಚಂದ
ನಾಗರಕುಚ್ಚಿನ ನಿಡುಜಡೆಯವಳು
ಈಕೆ ಬಂದುದು ಎಲ್ಲಿಂದ?

ಹಬ್ಬಿಗನೂರಿಗೆ ದಾರಿಯು ಇದ್ದರೆ
ಕನಸೇ ಇರಬೇಕು
ಅಲ್ಲಿಯ ದೊರೆತನ ಸಿಗುವಂತಿದ್ದರೆ
ನನಗೇ ಸಿಗಬೇಕು.

ತಾರೆಯ ಬೆಳಕಿನ ತುಂಬಿದ ಸಭೆಯಲಿ
ಸುಂದರಿ ಮೆರೆದಾಳು
ನನ್ನೊಡನವಳು ಸಿಂಹಾಸನದಲಿ 
ಮೆಲ್ಲನೆ ನಕ್ಕಾಳು

ಚಂದಿರನೂರಿನ ಅರಮನೆಯಿಂದ
ಬಂದವರೀಗೆಲ್ಲಿ
ಬೆಳ್ಳಿಯ ಕೋಟೆಯ ಬಾಗಿಲಿನಿಂದ
ಬಂದವರೀಗೆಲ್ಲಿ

ಹೆಂಡತಿಯೊಂದಿಗೆ ಬಡತನ ದೊರೆತನ
ಏನೂ ಭಯವಿಲ್ಲ
ಹೆಂಡತಿ ಒಲುಮೆಯ ಭಾಗ್ಯವನರಿಯದ
ಗಂಡಿಗೆ ಜಯವಿಲ್ಲ.  

ಸಾಹಿತ್ಯ: ಕೆ. ಎಸ್. ನರಸಿಂಹಸ್ವಾಮಿ

Photo Courtesy: http://www.indianartideas.com/artwork_details.php?artworkid=2812

Tag: Hendati obbalu

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ