ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ತಾಯಿ ಗುಬ್ಬಿ ಮರಿ ಗುಬ್ಬಿ ಸಂವಾದ


ಗುಬ್ಬಿ ಮರಿ ಪುರ್ ಪುರ್ರಂತ
ಹಾರಿ ಬಂತು ಅಮ್ಮನ ಹತ್ರ

ಅಮ್ಮಾ ಅಮ್ಮಾ ಗೋಪುರದ್ಮೇಲೆ
ಮರಿ ಪಾರಿವಾಳ ಕೂತ್ಕೊಂಡಿತ್ತೆ!
ಮಾತಾಡಿಸ್ತೆ! ರೆಕ್ಕೆ ಬಿಚ್ತೆ!
ಎಂಥ ಬಣ್ಣ ರೆಕ್ಕೆ ಮೇಲೆ

ಅದೂ ಕೂಡಾ ನಮ್ಮ ಥರಾನೆ
ನಮ್ಮ ಹಾಗೇನೆ ಕೊಕ್ಕು ರೆಕ್ಕೆ
ಆದರೆ ಅಮ್ಮ ಅದಕ್ಯಾತಕ್ಕೆ
ಅಂಥ ಚಂದ ಅಂಥ ಬಣ್ಣ?

ಅಮ್ಮ ಗುಬ್ಬಿ ಸಣ್ಣಗೆ ನಕ್ತು
ಕೊಕ್ಕನು ಮರಿಯ ಗದ್ದಕೆ ತಿಕ್ತು
ನೋಡು ಪುಟ್ಟಾ, ನೀನೂ ಹಾಗೇ
ಇದ್ದಿ ಅಂತ್ಕೊ ಏನಾಗ್ತಿತ್ತು?

ನಿನ್ ತೊಟ್ಲಲ್ಲಿ ಮರಿ ಪಾರಿವಾಳ
ತಾನೇ ಬಂದು ಮಲಕ್ಕೊಂಡ್ ಬಿಟ್ರೆ?
ನಿಮ್ಮಪ್ಪಾಜಿ ಅದರ ಕೊಕ್ಕಲ್ಲೆ
ಹಾರ್ಕೊಂಬಂದು ತಿಂಡಿ ಇಟ್ರೆ? 

ನೀನೇ ಅದು ಅಂತಂದ್ಕೊಂಡು
ನಾನು ಅದಕ್ಕೆ ಮುತ್ತು ಗಿತ್ತು ಕೊಟ್ರೆ?
ಹೌದಲ್ಲಪ್ಪ ಅಂತ ಗುಬ್ಬಿ
ಚಿವ್ ಚಿವ್ ಮಾಡಿ ಕಣ್ ಕಣ್ ಬಿಡ್ತು 

ನಾನ್ ನನ್ಹಾಗೆ ಇರ್ಬೇಕಪ್ಪ
ನಾನು ನಾನೇ ಅಂತ ನಮ್ಮ
ಅಪ್ಪ ಅಮ್ಮಂಗ್ ತಿಳೀಬೇಕಪ್ಪ
ಕನ್ನಡಿ ಗಿನ್ನಡಿ ನೋಡ್ಕೊಂಡಾಗ

ನನ್ನ ಮುಖಾನೇ ಉಳೀಬೇಕಪ್ಪ!

ಸಾಹಿತ್ಯ: ಎಚ್. ಎಸ್. ವೆಂಕಟೇಶಮೂರ್ತಿ



Tag: Thayi gubbi marigubbi samvada

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ