ಬೊಂಬೆ ಮನೆ
ತನ್ನ ಮೈಮೇಲಿನ ಅರಿಶಿನ – ಚಂದನದಿಂದ ಒಂದು ಮುದ್ದು ಬೊಂಬೆ ಮಾಡಿ ಅದಕೆ ಜೀವ ತುಂಬಿ ಮುದ್ದಿಸಿ, ತನ್ನ ಕಾವಲಿಗೆ ನಿಲ್ಲಿಸಿದಳು ದೇವಿ ಪಾರ್ವತಿ. ಬೊಂಬೆ, ಮಗನಾದ; ಬೊಂಬೆ, ವಿನಾಯಕನಾದ; ಬೊಂಬೆ, ದೇವನಾದ. ಈ ಗಣೇಶನೇ ಪ್ರಾಯಶಃ ಜಗತ್ತಿನ ಮೊದಲ ಬೊಂಬೆ.
ಅಕ್ಕರೆಯ ಅನುಭೂತಿಯಿಂದ ಉದ್ಭವಿಸಿದ ಬೊಂಬೆ ಬಿಂಬಗಳು ಸಹಚಾರಿಗಳಾಗಿ ಯುಗಗಳೇ ಕಳೆದಿವೆ. ಸಮಾಧಾನ ಸೂಸುವ ಈ ಶಾಂತಚಿತ್ತಮೂರ್ತಿಗಳ ಪ್ರೀತಿಪೂರ್ವಕ ಆರಾಧನೆಗೆ ಹತ್ತಾರು ಸಂದರ್ಭಗಳು, ಹಲವಾರು ಕಾರಣ ಪ್ರಾಂತ್ಯಗಳು, ಕಾರಣಗಳು ವಿಭಿನ್ನವಾದಂತೆ ಬೊಂಬೆ ಸಂಪ್ರದಾಯಗಳೂ ಹತ್ತು ಹಲವು ರೀತಿಗಳಲ್ಲಿ ಬೆಳೆದಿವೆ. ಹೀಗೆ ಬೆಳೆದು ಬಂದಿರುವ ಮೈಸೂರಿನ ಬೊಂಬೆ ಪೂಜೆಗೊಂದು ರೋಚಕ ಇತಿಹಾಸವೇ ಇದೆ.
ಭೋಜ ತನಗೆ ದೊರೆತ ಈ ಸಿಂಹಾಸನದ ಮೇಲೇರಲು ಉದ್ಯುಕ್ತನಾದ. ಸುಮೂಹೂರ್ತದಲ್ಲಿ ಅದರ ಮೊದಲ ಮೆಟ್ಟಿಲು ಏರಿದ. ಮರುಕ್ಷಣವೇ ಸಿಂಹಾಸನದ ಬೊಂಬೆಗಳು ಜೀವ ತಳೆದು, ಆತನನ್ನು ತಡೆದವು. ಆ ದಿವ್ಯ ಸಿಂಹಾಸನದ ಮೇಲೆ ಕೂರಲು ಯೋಗ್ಯ ರಾಜನ ಲಕ್ಷಣಗಳನ್ನು ತಿಳಿಸಿದವು. ಕ್ಷಮತೆ ಧೀಮಂತಿಕೆ, ದಕ್ಷತೆ, ವೀರತ್ವ, ಔದಾರ್ಯ, ಬುದ್ಧಿವಂತಿಕೆ, ನ್ಯಾಯಪರತೆ, ಸತ್ಯನಿಷ್ಠೆ, ಧಾರ್ಮಿಕತೆ, ವಿವೇಚನೆ, ಕೌಶಲ್ಯ, ಜ್ಞಾನ ಮುಂತಾದವುಗಳ ಬಗ್ಗೆ ಒಂದೊಂದು ಬೊಂಬೆಯೂ ಒಂದೊಂದು ಕಥೆಯ ಮೂಲಕ ತಿಳಿಹೇಳಿ ಹಾರಿಹೋದವು.
ರಾಜಧರ್ಮನೀತಿ ಅರುಹಿದ ಬೊಂಬೆಗಳಿಂದ ಸಾಲಂಕೃತವಾದ ಈ ಆಸನವೇ ಮುಂದೆ ವಿಜಯನಗರದ ರಾಯರಿಂದ ಸೇವಿತಗೊಂಡು
ಮುಂದೆ ಮೈಸೂರಿನ ಒಡೆಯರಿಗೆ ಕರ್ನಾಟಕ ರತ್ನ
ಸಿಂಹಾಸನವಾಗಿ ಲಭಿಸಿತು ಎಂಬ ನಂಬಿಕೆ ಇದೆ. ಅದರ
ಸತ್ಯಾಸತ್ಯತೆ ಏನೇ ಇರಲಿ ಮೈಸೂರಿನಲ್ಲಿರುವ ರತ್ನಖಚಿತ ಸಿಂಹಾಸನವಂತೂ ಮೈಸೂರಿನ ಮುಕುಟಮಣಿ ಎಂಬ
ಬಗ್ಗೆ ಎರಡು ಮಾತಿಲ್ಲ. ಈ ಸಿಂಹಾಸನ ದಸರೆಯ
‘ಬೊಂಬೆ ಆರಾಧನೆ’ ಹಾಗೂ ‘ಬೊಂಬೆ ಹಬ್ಬ’ದ ಹುಟ್ಟಿಗೆ ಮೂಲ ಎಂದು ಭಾವಿಸಲಾಗಿದೆ. ಈ ಸಿದ್ಧಾಂತದ ಪ್ರಕಾರ ಇಂದು ಪ್ರಚಲಿತವಿರುವ ಬೊಂಬೆ
ಹಬ್ಬಕ್ಕೆ ಯುಗಾಂತರಗಳ ಭವ್ಯ ಇತಿಹಾಸವೇ ಇದೆ.
ದ್ವಾಪರಯುಗದ ಬೊಂಬೆಮಯ ರತ್ನಸಿಂಹಾಸನದ ಪ್ರತಿರೂಪವೇ ದಸರೆಯಂದು ಮೈಸೂರಿನ
ಮನೆಮನೆಗಳಲ್ಲಿ ಕಾಣುವ ಬೊಂಬೆ ಮೆಟ್ಟಿಲು.
ಪಾಂಡವರ ಸಿಂಹಾಸನವನ್ನು ಹೋಲುವಂತೆ ಮೆಟ್ಟಿಲ ಆಸನವನ್ನು ಜೋಡಿಸಿ ಅವುಗಳ ಮೇಲೆ
ಬೊಂಬೆಗಳನ್ನಿಟ್ಟು, ಮೇಲ್ ಸ್ತರದಲ್ಲಿ ರಾಜರಾಣಿಯರ ಬಿಂಬವನ್ನು ಬಿಜಯಿಸುವುದು ಮೈಸೂರಿನ
ಶರನ್ನವರಾತ್ರಿಯ ಬೊಂಬೆ ಹಬ್ಬದ ವಿಶೇಷತೆ. ಇದು
ಪಾಂಡು ನಂದನರ ಗುಣಾಢ್ಯತೆ, ಧೀಮಂತಿಕೆ ಸಾರುವ ಬೊಂಬೆ ಸೋಪಾನ. ಅಂದು ಭೋಜರಾಜನಿಗೆ ನೀತಿ ಹೇಳಿದ ದಿವ್ಯಬೊಂಬೆಗಳು ಈಗ
ಪ್ರತಿ ಮನೆಯಲ್ಲಿ ಹಲವಾರು ರೂಪ ತಳೆದು ಬೊಂಬೆ ಮೆಟ್ಟಿಲುಗಳಲ್ಲಿ ರಾರಾಜಿಸಿ ನಾಡಿನ
ಕಲಿ-ಕುವರರಿಗೆಲ್ಲಾ ಉಪದೇಶಿಸುತ್ತಿವೆ.
ಸನ್ಮಾರ್ಗ ತೋರುವ, ಧೈರ್ಯ ತುಂಬುವ, ಜಾಣ್ಮೆ ಬೆಳಸುವ ಈ ಬೊಂಬೆಗಳು ಪೂಜಾರ್ಹವೆನಿಸಿವೆ.
ಮೈಸೂರಿನ ರಾಮ್ಸನ್ಸ್ ಕಲಾ ಪ್ರತಿಷ್ಠಾನ ಕಳೆದ ಕೆಲವು ವರ್ಷಗಳಂತೆ ಈ ವರ್ಷವೂ
‘ಬೊಂಬೆ ಮನೆ’ ಪ್ರದರ್ಶನವನ್ನು ಏರ್ಪಡಿಸಿದ್ದು, ಈ ವರ್ಷದ ‘ಬೊಂಬೆ ಮನೆ’ಯಲ್ಲಿ ಬಂಗಾರದ ರತ್ನಸಿಂಹಾಸನದ
ಪುಟ್ಟ ಮಾದರಿಯ ಮೇಲೆ ಕುಳಿತ ಮೈಸೂರಿನ 25ನೆಯ ಮಹಾರಾಜ ಜಯಚಾಮರಾಜ ಒಡೆಯರ ಪುತ್ಥಳಿಯೂ ಇದೆ. ‘ಬೊಂಬೆ ಮನೆ’ಯ ಒಂಬತ್ತನೇ ಅವತರಣಿಕೆ ಇದಾಗಿದ್ದು ರತ್ನ
ಸಿಂಹಾಸನದ ಜೊತೆಗೆ ವಸಂತೋತ್ಸವ ವೈಭವದ ವಿಲಾಸವೂ ಇಲ್ಲಿ ಮೈದಳೆದಿದೆ.
ಹೋಳಿಯಿಂದ ರಂಗಪಂಚಮಿಯವರೆಗೆ ಐದು ದಿನಗಳು ಹುಬ್ಬಳ್ಳಿ ಸುತ್ತಮುತ್ತಲ ಊರುಗಳಲ್ಲಿ
ಬಣ್ಣದ ಓಕುಳಿ, ರಂಗಿನ ರವಳಿ, ಬೀದಿ, ಕೇರಿ ಪೇಟೆಗಳಲ್ಲಿ ಕಾಷ್ಠ –ಮೃತ್ತಿಕೆಯ ರತಿಮನ್ಮಥರ ಪುತ್ಥಳಿ ಸ್ಥಾಪನೆ ,
ಪೂಜಿಸಿ, ಉಡಿತುಂಬುವುದು ಮುಂತಾದ ವಾಡಿಕೆಗಳಿವೆ. ಬಳ್ಳಾರಿಯಿಂದ ಬೆಳಗಾವಿ ಜಿಲ್ಲೆಗಳು ಹಾಗೂ
ಮಹಾರಾಷ್ಟ್ರದ ಕೆಲ ಭಾಗಗಳಲ್ಲಿ ಯುಗಾದಿಯ ನಂತರ ಒಂದು ತಿಂಗಳು ಚೈತ್ರಗೌರಿ ಅಥವಾ ತೊಟ್ಟಿಲಗೌರಿ
ವ್ರತದ ಪದ್ಧತಿ ಇದೆ. ಅಲ್ಲಿ ಚಂದದ ಚೆಲುವೆ
ಗೌರಿಬೊಂಬೆಗೆ ಪೂಜೆ ನಡೆಯುತ್ತದೆ. ಇವೆರಡೂ
ಬೊಂಬೆ ಸಂಪ್ರದಾಯಗಳೂ ಈ ‘ಬೊಂಬೆ ಮನೆ’ಯಲ್ಲಿ ಸಾಕಾರಗೊಂಡಿವೆ. ಜೊತೆಯಲ್ಲಿ ವಸಂತ ನವರಾತ್ರಿಯ ಸ್ಮರಣೆಗಾಗಿ
ನವದುರ್ಗೆಯರ ಮೈಸೂರು ಶೈಲಿಯ ಚಿತ್ರಪಟಗಳ ಪ್ರದರ್ಶನವೂ ಇಲ್ಲಿ ಮೇಳೈಸಿದೆ.
ಶ್ರೀ ವಿಜಯ ಸಂವತ್ಸರದ ಅಶ್ವಯುಜ ದಸರೆಯ ಸಡಗರದ ಸವಾರಿಗೆ ಆನೆ – ಅಂಬಾರಿಯೊಂದಿಗೆ,
ರಾಜ್ಯ, ಹೊರರಾಜ್ಯಗಳ ಚಿತ್ರ –ವಿಚಿತ್ರ ಬೊಂಬೆಗಳೊಡನೆ ಸಜ್ಜಾಗಿದೆ ಈ ‘ಬೊಂಬೆ ಮನೆ’, ಅಂದದ ದಸರೆಗೆ ಚಂದದ ಕಳೆ ಕಟ್ಟಲು ಮೂಡಿಬಂದಿರುವ
‘ಬೊಂಬೆ ಮನೆ’ಯಲ್ಲಿ ಯುಗ ಯುಗಗಳ ಕಥೆ ಹೇಳುತ್ತಾ ನಿಂತ ಬೊಂಬೆಗಳ ಬೃಹತ್ ಮೇಳವಿದೆ.
ಈ ಪ್ರದರ್ಶನವು ಈ ವಿಳಾಸದಲ್ಲಿ
ಅಕ್ಟೋಬರ್ 20ರ ವರೆಗೆ ಲಭ್ಯವಿದೆ: ರಾಮ್ ಸನ್ಸ್ ಪ್ರತಿಷ್ಠಾನ, ಪ್ರತಿಮಾ ಗ್ಯಾಲರಿ, 91,
ಮೊದಲ ಮಹಡಿ, ಆಮ್ರಪಾಲಿ ಸೀರೆ ಮಳಿಗೆಯ ಮೇಲೆ, ನಜರ್ ಬಾದ್ ಮುಖ್ಯ ರಸ್ತೆ, ಮೈಸೂರು – 570
010. ದೂರವಾಣಿ 0821-2445220. ಸಮಯ ಬೆಳಿಗ್ಗೆ 10 ರಿಂದ ಸಂಜೆ 7 ರ ವರೆಗೆ.
Tag: Bombe Mane
ಕಾಮೆಂಟ್‌ಗಳು