ಸತ್ಯಕಾಮ ಅವರ ‘ತಂತ್ರಯೋನಿ’
‘ಸತ್ಯಕಾಮ’ ಅವರು ಕನ್ನಡದ ಮಹತ್ವದ
ಕಥೆ – ಕಾದಂಬರಿಕಾರರಲ್ಲೊಬ್ಬರು. ಇತ್ತೀಚೆಗೆ
ಅವರ ‘ತಂತ್ರಯೋನಿ’ ಪುಸ್ತಕವನ್ನು ಓದಿದೆ. ಈ
ಕಾದಂಬರಿಯನ್ನು ಅವರು ಹಿಮಾಲಯದ ತಪ್ಪಲಲ್ಲಿ ಬರೆದರಂತೆ.
ಅಂದರೆ ಅವರ ಈ ಬರವಣಿಗೆಯ ಹಿಂದೆ ಅಪಾರ ಸಿದ್ಧಿ ಇರುವುದು ಕೂಡಾ ಈ ಕೃತಿಯನ್ನು
ಓದುತ್ತಿದ್ದ ಹಾಗೆ ನಮ್ಮ ಗಮನಕ್ಕೆ ಬರುತ್ತದೆ.
ಸತ್ಯಕಾಮರು ಆಗಮವನ್ನು ಬಲ್ಲವರು,
ತಂತ್ರದ ಅನುಭವವೂ ಅವರಿಗಿದೆ. ಅಲ್ಲದೆ ಅವರದು
ಯುಕ್ತಿ ಯುಕ್ತವಾದ ಬರವಣಿಗೆ. ತಂತ್ರವಿದ್ಯೆ
ಯೋಗಶಾಸ್ತ್ರದಂತೆ ನಮ್ಮ ಸಂಸ್ಕೃತಿಯ ಒಂದು ಮಹತ್ವದ ಅಂಗವಾಗಿದ್ದರೂ ಕೂಡ ಅದು ಐತಿಹಾಸಿಕ
ಕಾರಣಗಳಿಂದಾಗಿ ನಮಗೇ ಅಪರಿಚಿತವಾದ ವಿದ್ಯೆಯಾಗಿದೆ.
ಒಂದು ಕಾಲಕ್ಕೆ ಸಾಮಾಜಿಕರಿಗೆ ಭಯವನ್ನು ಹುಟ್ಟಿಸಿದ್ದ ವಿದ್ಯೆ ಅದಾಗಿತ್ತು. ಸತ್ಯಕಾಮರ ಈ ‘ತಂತ್ರಯೋನಿ’ ಗ್ರಂಥದಲ್ಲಿ ‘ತಂತ್ರ
ಪ್ರದಕ್ಷಿಣೆ’ ಎಂಬ ಅಧ್ಯಾಯ ಒಂದಿದೆ. ಅದರಲ್ಲಿ
ಕರ್ನಾಟಕದಲ್ಲಿಯ ಕೆಲವು ತಾಂತ್ರಿಕರ ಬಗ್ಗೆ ಉಲ್ಲೇಖವಿದೆ.
ಶರೀಫಸಾಹೇಬ, ಗರಗದ ಮಡಿವಾಳಪ್ಪನವರು, ನವಿಲುಗುಂದದ ನಾಗಲಿಂಗಯತಿ ಇವರೆಲ್ಲ ತಾಂತ್ರಿಕರು ಎಂಬ
ಸಂಗತಿ ಒಂದು ಮಹತ್ವದ ಸತ್ಯವನ್ನು ಬಯಲು ಮಾಡುತ್ತದೆ.
‘ತಂತ್ರಯೋನಿ’ ಗ್ರಂಥ ತಂತ್ರದ ಶಾಸ್ತ್ರವನ್ನು
ಕುರಿತು ವಿವರವಾಗಿ ಹೇಳುತ್ತದೆ. ತಂತ್ರ ಒಂದು
ರಹಸ್ಯ ವಿದ್ಯೆ. ಈ ವಿದ್ಯೆಯನ್ನು ಗುರುವಿನಿಂದ
ಪಡೆಯಲು ಶಿಷ್ಯ ಅಧಿಕಾರಿಯಾಗಿರಬೇಕು.
ಶಾಸ್ತ್ರದಲ್ಲಿ ಯಾವುದೂ ರಹಸ್ಯವಿಲ್ಲವಾದರೂ, ರಹಸ್ಯವೆನ್ನುವುದು ವಿದ್ಯೆಯ ವೈಯಕ್ತಿಕ
ಅನುಭವದಲ್ಲಿ ಅದರ ಅನುಭಾವದಲ್ಲಿದೆ. ‘ಶಕ್ತಿಪಾತ’ವೆನ್ನುವುದು
ಇಂಥ ಒಂದು ರಹಸ್ಯವಾದ ಅನುಭವ. ರಾಮಕೃಷ್ಣ
ಪರಮಹಂಸರು ಮತ್ತು ವಿವೇಕಾನಂದರ ನಡವೆ ಇಂಥ ಒಂದು ರಹಸ್ಯಾನುಭಾವದ ಸಂಕ್ರಮಣ ನಡೆಯಿತೆಂದು
ಹೇಳುತ್ತಾರೆ. ‘ತಂತ್ರಯೋನಿ’ಯಲ್ಲಿ ಒಂದು ಅಧ್ಯಾಯ
ಗುರು-ಶಿಷ್ಯರ ಸಂಬಂಧದ ಬಗ್ಗೆ ಮೀಸಲಾಗಿದೆ. ಗುರು
ತಾನಾಗಿ ಶಿಷ್ಯನನ್ನು ಹುಡುಕಿಕೊಂಡು ಹೋಗುವ ಮತ್ತು ಅವನ ಬರವಿಗಾಗಿ ಕಾಯುತ್ತಿರುವ ಒಂದು ಕತೆ ಕೂಡ
ಇಲ್ಲಿದೆ. ಗುರು-ಶಿಷ್ಯರ ಸಂಬಂಧದ ವಿಲಕ್ಷಣತೆ
ನಮ್ಮ ದೇಶಕ್ಕೆ ಮಾತ್ರ ವಿಶಿಷ್ಟವಾದದ್ದು.
ವಿದ್ಯೆಯ ಸಂವಹನ ನಮ್ಮಲ್ಲಿ ಅನುಭಾವದಂತೆ ಒಂದು ರಹಸ್ಯ ಅನುಬಂಧವಾಗಿದೆ. ತಂತ್ರವಿದ್ಯೆಯಲ್ಲಿ ಈ ರಹಸ್ಯಮಯತೆ ಇನ್ನೂ
ಹೆಚ್ಚಾಗುತ್ತದೆ. ಒಂದು ರೀತಿಯಲ್ಲಿ ಇದು
ವ್ಯಕ್ತಿತ್ವದ ಸಂಕ್ರಮಣವಾಗಿದೆ. ಅನುಭಾವ, ಸಂಗೀತ
ಮೊದಲಾದ ವಿದ್ಯೆಗಳು ಗುರುವಿನಿಂದ ಶಿಷ್ಯನಿಗೆ ಇದೇ ರೀತಿಯಲ್ಲಿ ಸಂಕ್ರಮಿತವಾಗುತ್ತದೆ.
ದೀಕ್ಷೆ, ಧ್ಯಾನ, ಜಪ, ಮಂತ್ರ
ಮೊದಲಾದವುಗಳು ಕೂಡ ತಂತ್ರವಿದ್ಯೆಯ ಅಂಗಗಳಾಗಿರುವುದರಿಂದ ಅವುಗಳನ್ನು ಕುರಿತು ಸಾಮಾನ್ಯರಿಗೂ
ಉಪಯೋಗವಾಗುವಂತೆ ಸಾಕಷ್ಟು ವಿವರಗಳನ್ನು ಈ ಗ್ರಂಥದಲ್ಲಿ ನೀಡಲಾಗಿದೆ. ಸಾಧನೆಯ ಮಾರ್ಗದಲ್ಲಿರುವ ಎಲ್ಲ ಸಮಸ್ಯೆಗಳನ್ನು
ಚರ್ಚಿಸಿ ಪರಿಹಾರವನ್ನು ಸೂಚಿಸುವಾಗ ಸತ್ಯಕಾಮರು ಗೀತೆ ಮತ್ತು ಉಪನಿಷತ್ತುಗಳಿಂದ ವಿಪುಲವಾದ
ಸಹಾಯವನ್ನು ಪಡೆದಿದ್ದಾರೆ. ತಂತ್ರವಿದ್ಯೆ
ವೇದಗಳಿಂದ ಭಿನ್ನವಾದದ್ದಲ್ಲ, ಅವೆರಡರ ನಡುವೆ ವಿರೋಧವೂ ಇಲ್ಲ ಎನ್ನುವುದನ್ನು ಸಾಧಕವಾಗಿ ತೋರಿಸಿದ್ದಾರೆ.
ತಂತ್ರ ಒಂದು ರೀತಿಯಲ್ಲಿ ವೇದೋಪನಿಷತ್ತುಗಳ ಮುಂದುವರಿಕೆಯಾಗಿದೆಯೆಂದೇ ಅವರು ಅಭಿಪ್ರಾಯ
ಪಡುತ್ತಾರೆ. ಬೌದ್ಧ ಹಾಗೂ ಜೈನ ದರ್ಶನಗಳಲ್ಲಿ
ಕೂಡ ನಿಹಿತವಾಗಿರುವ ತಂತ್ರವಿದ್ಯೆಯ ಬಗ್ಗೆಯೂ ಚರ್ಚಿಸಿದ್ದಾರೆ. ಸಾಧಕನ ಮನಸ್ಸು ಯಾವ ಪೂರ್ವಾಗ್ರಹದಿಂದಲೂ
ದೂಷಿತವಾಗಬಾರದೆಂಬ ಎಚ್ಚರಿಕೆಯನ್ನೂ ನೀಡಿದ್ದಾರೆ.
ತಂತ್ರ ಪ್ರಕ್ರಿಯೆಯನ್ನು ಅನುವಾದ ಮಾಡುವಾಗ ಸತ್ಯಕಾಮರ ಭಾಷೆ ಯಾವಾಗಲೂ ಪರಿಭಾಷೆಯಾಗದಂತೆ
ನೋಡಿಕೊಂಡಿರುವುದು ಮಹತ್ವದ ಮಾತಾಗಿದೆ.
‘ತಂತ್ರಯೋನಿಯ’ ಮುಖ್ಯ ಉದ್ದೇಶವೆಂದರೆ ತಂತ್ರಮಾರ್ಗವನ್ನು
ಪರಿಚಯಿಸುವುದು. ತಂತ್ರಮಾರ್ಗದ ಬಗ್ಗೆ
ಕನ್ನಡದಲ್ಲಿ ಬಂದಿರುವ ಮೊದಲ ಶಾಸ್ತ್ರಗ್ರಂಥ ಇದಾಗಿದೆ.
ಸತ್ಯಕಾಮರ ಪರಿಣತಿಯಲ್ಲಿ ‘ತಂತ್ರಯೋನಿ’ ಒಂದು ಸಾಹಿತ್ಯದ ಗ್ರಂಥವೂ ಆಗಿದೆ. ಸತ್ಯಕಾಮರು ತಮ್ಮ ಸ್ವಂತದ ಅನೇಕ ತಾಂತ್ರಿಕ
ಅನುಭವಗಳನ್ನು ಇಲ್ಲಿ ಉಪಯೋಗಿಸಿಕೊಂಡಿದ್ದಾರೆ.
ತಂತ್ರಮಾರ್ಗದ ಕೆಲ ವಿವರಗಳನ್ನು ವಿಶದಗೊಳಿಸಲು ಉಪನಿಷತ್ತಿನ ಅನೇಕ ಕತೆಗಳನ್ನು ಇಲ್ಲಿ
ಮೂಡಿಸಿದ್ದಾರೆ. ಶ್ರಾವಸ್ತಿನಗರದ ಹತ್ತಿರದ
ವಿಹಾರದಲ್ಲಿ ವಾಸಿಸುತ್ತಿದ್ದ ಸಂತಪಾ ಎನ್ನುವಿನ ಭಿಕ್ಷುವಿನ ಕತೆ ತನ್ನ ಉದ್ದೇಶವನ್ನೂ ಮೀರಿ
ಅರ್ಥಪೂರ್ಣವಾಗಿದೆ. ಇಂದ್ರಿಯನಿಗ್ರಹವನ್ನು ಅದರ
ಅಭಿದಾರ್ಥದಲ್ಲಿ ಮಾತ್ರ ಗ್ರಹಿಸಿ ಬಂಧನಕ್ಕೊಳಗಾಗಿದ್ದ ಭಿಕ್ಷುವಿನ ಕರುಣ, ವ್ಯಂಗ್ಯ ಕತೆ
ಅದಾಗಿದೆ. ಇದರ ಜೊತೆಗೆ ವಾಮಾಚರಣ ಗೌರಿಯರ
ಸತ್ಯಕತೆ ತಂತ್ರವಿದ್ಯೆಗೆ ಒಂದು ಮಾನವೀಯವಾದ ಆಯಾಮವನ್ನು ಕಲ್ಪಿಸುತ್ತದೆ. ಈ ಕತೆಯಲ್ಲಿ ಶಾಸ್ತ್ರೀಯವಾದ ಸತ್ಯವೇನೋ ಇದೇ. ನಿಯಮಭಂಗದ ಪರಿಣಾಮವೆಂದರೆ ಸಾವು ಎಂಬ ನಿಷ್ಠುರವಾದ ಸತ್ಯವನ್ನು
ಈ ಕಥನ ಪ್ರತಿಪಾದಿಸುತ್ತದೆ. ಆದರೆ ಅದಕ್ಕಿಂತ
ಹೆಚ್ಚಾಗಿ ಸತ್ಯಕಾಮರ ಬರವಣಿಗೆಯಲ್ಲಿಯ
ಮಾಂತ್ರಿಕತೆಯಿಂದ ಮೂಡುವ ಈ ಕತೆಯ ಮಾನವೀಯ ಸತ್ಯ
ಹೆಚ್ಚು ಆಳವಾಗಿದೆ. ಮನುಷ್ಯನ ನಿಯತಿ ಅವನ
ವ್ಯಕ್ತಿತ್ವದ ಆಳದಲ್ಲಿ ಅಗೋಚರವಾದ ರೀತಿಯಲ್ಲಿ ನಿರ್ಮಾಣ ಮತ್ತು ವಿನಾಶದ ಹೊಂಚು ಹಾಕುತ್ತಿರುವ
ದರ್ಶನ ಅದ್ಭುತವಾಗಿದೆ. ತಂತ್ರ ದೊಡ್ಡದು. ಆದರೆ ತಂತ್ರಕ್ಕಿಂತ ಬದುಕು ದೊಡ್ಡದು ಎಂದು ಸತ್ಯಕಾಮರು
ಗ್ರಂಥದ ಉದ್ದಕ್ಕೂ ಹೇಳುತ್ತ ಹೋಗಿದ್ದಾರೆ. ಆದರೆ
ಈ ಸತ್ಯ ಮೂರ್ತಿಯಾಗಿ ನಿಲ್ಲುವುದು ವಾಮಾಚರಣನ ಕತೆಯಲ್ಲಿ.
ಈ ಕತೆಯಲ್ಲಿ ಮನುಷ್ಯನ ಸ್ವಾತಂತ್ರ್ಯ ಮತ್ತು ಪಾರತಂತ್ರ್ಯದ ದರ್ಶನ ಬಹಳ ಮಹತ್ವದ್ದಾಗಿದೆ. ಅದು ಸತ್ಯಕಾಮರ ಕಾವ್ಯಪ್ರತಿಭೆಯ ದರ್ಶನವಾಗಿದೆ.
ಈ ಗ್ರಂಥದಲ್ಲಿ. ತಂತ್ರಗಾರಿಕೆಯ ಸಿದ್ಧಿ, ಅದರ ಆಳ, ಜಿಜ್ಞಾಸೆ, ಉದ್ದೇಶ ಇವುಗಳನ್ನೆಲ್ಲಾ ಕಟ್ಟಕೊಡುವಂತಹ ಸತ್ಯಕಾಮರ
ಸ್ವಯಂ ಅನುಭಾವಿತ ಈ ಮಾತುಗಳು ಅಪಾರವಾಗಿ ಸೆಳೆಯುತ್ತವೆ:
“ಕಪಿಲನಾಗಿದ್ದಾಗಿನ ಕೊನೆಯ ಗಳಿಗೆ
ಇರಬೇಕು. ಕಪ್ಪತಗುಡ್ಡದಲ್ಲಿ ಇದ್ದೆ. ಎಷ್ಟೋ ದಿನ ಊಟ ಇರಲಿಲ್ಲ. ನೀರೂ ಇರಲಿಲ್ಲ. ಉಣ್ಣುವ ಮನಸ್ಸಿಲ್ಲ. ಕುಡಿಯುವ ಅಪೇಕ್ಷೆಯಾಗಿಲ್ಲ. ಕಣ್ಣು ಮುಚ್ಚಿಕೊಂಡು ಹಾಗೆಯೇ ಬಿದ್ದಿದ್ದೆ. ಏಕೋ ಏನೋ ಕಣ್ಣು ತೆರೆದೆ. ಪಕ್ಕಕ್ಕೆ ನೋಡಿದೆ. ಒಂದು ತಟ್ಟೆಯಲ್ಲಿ ಎಡೆ ಮಾಡಿಟ್ಟ ಅಡಿಗೆ
ಸಿದ್ಧವಾಗಿತ್ತು. ನಾನು ಆಗ ಬಹಳ ಉನ್ಮತ್ತನಿದ್ದೆ
ಅದನ್ನು ಕಣ್ಣೆತ್ತಿ ನೋಡಲಿಲ್ಲ. ನನ್ನ
ಮನಸ್ಸನ್ನು ಇಂತ ಕಿಳ್ಳಿಕೇತನನ ಮಾಡಿದ್ದಕ್ಕೆ ಶಿಕ್ಷಿಸಿದೆ.
ಮೂರು ಮೆಟ್ಟಿಲಲ್ಲಿ ಲೋಕದ ಕಣ್ಣಿಗೆ
ಚಮತ್ಕಾರ ಎನ್ನಿಸಬಹುದಾದ ಸಂಗತಿಗಳಿವೆ.
ಅಜ್ಞಾತರು ಹಸಿಮರದ ಕಟ್ಟಿಗೆಯನ್ನು ನೆಲದ ಮೇಲೆ ಗೀಚಿದಾಗ ಬೆಂಕಿ ಹತ್ತಿ ಉರಿಯಿತು. ಗೌರಿಗೆ ಈಜು ಬಾರದು. ಮೊರೆದು ಧುಮ್ಮಿಕ್ಕುವ ಹಳ್ಳವನ್ನು ಈಜಿ, ಸಲೀಸಾಗಿ
ಬಂದಳು. ಕಪ್ಪತಗುಡ್ಡದ ನಿರ್ಜನ ಕಾಡಿನಲ್ಲಿ
ಬಿಸಿ, ಬಿಸಿ, ಅಡುಗೆ ಸಿದ್ಧವಾಗಿತ್ತು.
ಪವಾಡ! ಸಿದ್ಧಿ!!
-ಎರಡೂ ಅಷ್ಟೇ. ಅಶ್ಲೀಲ ಶಬ್ದಗಳು. ಇಂದು ಹಲವರನ್ನು ಹತ್ತು ವಿಧದಿಂದ ಹರಿದು ತಿನ್ನುವ
ಸಮಸ್ಯೆ ಇದು. ಪವಾಡಗಳು, ಸಿದ್ಧಿಗಳು ನಿಜವೇ? ಸುಳ್ಳೆ?
ತಲೆ ಕೆಟ್ಟವರಿಗೆ ನಿಜವೂ ಸುಳ್ಳಾಗುತ್ತಿದೆ.
ಸುಳ್ಳೂ ನಿಜದ ಸೋಗು ಧರಿಸುತ್ತಿದೆ.
ಒಬ್ಬ “ಪವಾಡ’ ಮಾಡಿದ
ಎಂದಿಟ್ಟುಕೊಳ್ಳಿ. ಅದರ ನಿಜ ಸುಳ್ಳಿನ ಗೊಡವೆಗೆ
ಬಿದ್ದು ನೀವು ತಲೆ ಕೆಡಿಸಿಕೊಳ್ಳಬೇಡಿ. ಪವಾಡ
ಮಾಡಲು, ಇಲ್ಲವೆ ಸಿದ್ಧಿಯನ್ನು ಪ್ರದರ್ಶಿಸಲು ನಿಮಗೂ ಸಾಧ್ಯವಿದೆ. ಮಾಡಿ ನೋಡಿ.
ಸರಿಯಾಗಿ ಮಾಡಿದರೂ ಬರದೆ ಇದ್ದರೆ ಮಾತನಾಡಿ, ಇನ್ನೊಬ್ಬರದು ‘ಬೂಟಾಟಿಕೆ’, ‘ಬೋಗಸ್’
ಎಂದು ತಮಟೆ ಬಾರಿಸುವ ಕೆಲಸ ನೀವೇಕೆ ಮಾಡುತ್ತೀರಿ?
ಪಾಪ! ಒಬ್ಬ ಹೊಟ್ಟೆ ಹೊರೆಯಲು ತಾನು
ದೊಡ್ಡವನೆಂದು ತೋರಿಸಲು ಚಮತ್ಕಾರ ಮಾಡುತ್ತಾರೆ ಎನ್ನಿ.
ಮೋಸವನ್ನೆ ಮಾಡುತ್ತಾರೆ ಅಂದುಕೊಳ್ಳಿ. ಆ
ಲೋಕದ ಡೊಂಕು ನೀವು ಏಕೆ ತಿದ್ದುತ್ತೀರಿ? ನಿಮ್ಮ
ಮನ ‘ಸಂತೈಸಿ’ಕೊಳ್ಳಿ. ಅವರು ಮೋಸವೆಂದು
ಮಾಡಿದ್ದನ್ನು ನೀವು ಲೀಲೆಯಾಗಿ ತೋರಿಸಬಲ್ಲಿರಿ, ಸಾಧಿಸಬಲ್ಲಿರಿ.
ತಂತ್ರದ ದೇವತೆ ‘ಭಕ್ತರ’ ಶಿವ –
ಪಾರ್ವತಿಯರಂತೆ. ಲಕ್ಷ್ಮೀ – ನಾರಾಯಣರಂತೆ
‘ಶಾಶ್ವತ’ ಇಲ್ಲವೆ ಮೂಲೆ ಗುಂಪಲ್ಲ, ಅಥವಾ ‘ಪ್ರತ್ಯೇಕ’ವಲ್ಲ. ಸಾಧಕನ ಮನಃ ಪರಮಾಣುವಿನಲ್ಲಿ ಸ್ಫೋಟಕ್ಕಾಗಿ ಸದಾ
ಕಾಯ್ದಿರುವ ವಿಶಿಷ್ಟ ವಸ್ತು ಅದು.
ತಾಂತ್ರಿಕನು ಭಕ್ತನಂತೆ ತನ್ನ ದೇವರನ್ನು
‘ಹೊರಬಳಕೆಗೆ’ ಎಂದೂ ಬಳಸುವುದಿಲ್ಲ.”
ಈ ಮಾತುಗಳಲ್ಲಿ ನಿಜವಾದ ತಾಂತ್ರಿಕರಾರೂ
ತಮ್ಮ ಶಕ್ತಿಯನ್ನು ಹೀನ ಸ್ವಾರ್ಥಕ್ಕೆ ಬಳಸಿಕೊಳ್ಳುವುದಿಲ್ಲ ಎಂಬುದು ನಮ್ಮ ಅರಿವಿಗೆ
ಬರುತ್ತದೆ.
ಹೀಗೆ ‘ತಂತ್ರಯೋನಿ’ ಹಲವಾರು
ರಹಸ್ಯಗಳನ್ನು ತೆರೆದಿಡುವ ಜೊತೆಗೆ ಮನುಷ್ಯ ತನ್ನನ್ನು ಉತ್ತುಂಗಕ್ಕೆ ಪ್ರೇರಿಸಿಕೊಳ್ಳುವ ಮಹತ್ವದ
ವಿಷಯ ಮತ್ತು ಸಾಧನೆಗಳ ಹಾದಿಗಳನ್ನೊಳಗೊಂಡಿದೆ. ಇಂಥ
ಒಂದು ಮಹತ್ವದ ಗ್ರಂಥವನ್ನು ಕನ್ನಡದಲ್ಲಿ ಕೊಟ್ಟ ‘ಸತ್ಯಕಾಮ’ರಿಗೆ ನಮೋನ್ನಮಃ.
(ಈ ಬರಹದಲ್ಲಿ ‘ತಂತ್ರಯೋನಿ’ ಗ್ರಂಥದ
ಮುನ್ನುಡಿಯಲ್ಲಿ ಲ್ಲಿ ಕೀರ್ತಿನಾಥ ಕುರ್ತಕೋಟಿಯವರು ವ್ಯಕ್ತಪಡಿಸಿರುವ ಕೆಲವೊಂದು
ಅಭಿಪ್ರಾಯಗಳನ್ನೂ ಸಂಕ್ಷಿಪ್ತವಾಗಿ ಬಿಂಬಿಸಿದ್ದೇನೆ)
Tag: 'Tantrayoni' by Satyakama
Bulleteranna k p kunta
ಪ್ರತ್ಯುತ್ತರಅಳಿಸಿ