ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ದೀಪಾವಳಿ - ನಕ್ಕಂತೆ ಇರುವ ಸಿರಿಮೊಗವೆ

ದೀಪಾವಳಿ

ನಕ್ಕಂತೆ ಇರುವ ಸಿರಿಮೊಗವೆ ! – ಅದಕೆ
ತಕ್ಕಂತೆ ಇರುವ ಕಣ್ ಬೆಳಕೆ ! –
ನಿಂತಂತೆ ಕಾಣುವ ನಿರಾತಂಕ ದೀಪವೆ !
ಅಂತರಂಗದ ಜೀವ ನದಿಯೆ !

ನಕ್ಕಂತೆ ಇರುವ ಸಿರಿಮೊಗವೆ ! – ಹೂಗೆನ್ನೆ-
ಗುಕ್ಕುವಂತಿರುವ ನೊರೆಹಾಲೆ !
ತಂತಿಯಲಿ ಇಂಪು ಹರಿದಂತೆ ಈ ಮನೆಯೊಳಗೆ
ಸಂತಸದ ನೆಲೆಯಾದ ಚೆಲುವೆ !

ನಕ್ಕಂತೆ ಇರುವ ಸಿರಿಮೊಗವೆ ! – ಕೆಂದುಟಿಗೆ
ಚಿಮ್ಮಿ ಬಹ ವೀಣೆಯೊಳದನಿಯೆ !
ತುಂಬು ಹೆರಳಲಿ ಹಿಡಿದ ಹಂಬಲದ ಹೊಸ ಹೂವೆ,
ಅಲ್ಲೆಲ್ಲ ನಿನ್ನ ಪರಿಮಳವೆ !

ದೀಪವನು ಹಚ್ಚಿ ಬಹ ಹೆಣ್ಣೆ! – ಆ ಬೆರಳೆ
ಮಿಂಚಿನಲಿ ಬಳ್ಳಿ ಬರೆದಂತೆ.
ಹಣತೆಗಳ ನಡುವೆ ಹೊಂಬೆರಳು ಹರಿದಾಡುತಿದೆ
ವೀಣೆಯಲಿ ಬೆರಳು ಬರುವಂತೆ.

ಎಷ್ಟೊಂದು ತಾರೆಗಳು ಮೇಲೆ, ಗಗನದಲಿ ! –
ಎಷ್ಟೊಂದು ಬೆಳಕು ಭೂಮಿಯಲಿ !
ಹಬ್ಬದಲಿ ತೊಳೆದಿಟ್ಟ ಈ ಬದುಕೆ ಬೆಳಕಾಗಿ
ಹೂವಾಯ್ತು ನಿನ್ನ ಪ್ರೇಮದಲಿ.

ಹಣತೆಯನು ಹಚ್ಚಿ ಬಿಡು, ಬಾಗಿಲಲಿ ಇಟ್ಟುಬಿಡು;
ನಿನ್ನಿಂದ ದೀಪಾವಳಿ.
ಬರುವ ಸಡಗರದಲ್ಲೆ ಮುತ್ತೊಂದ ಕೊಟ್ಟುಬಿಡು,
ಕೊಡೆನೆಂದು ನಗುತ ಹೇಳಿ.


ಸಾಹಿತ್ಯ: ಕೆ. ಎಸ್. ನರಸಿಂಹಸ್ವಾಮಿ

Tag: Deepavali, Nakkante iruva siri mogave

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ