ವಂಶವೃಕ್ಷ
ವಂಶವೃಕ್ಷ
ಎಸ್. ಎಲ್.
ಭೈರಪ್ಪನವರ ಬಹಳಷ್ಟು ಕೃತಿಗಳನ್ನು ಓದಿದ್ದರೂ ‘ವಂಶವೃಕ್ಷ’ ಓದಿರಲಿಲ್ಲ. ಬಹುಷಃ ದೂರದರ್ಶನದಲ್ಲಿ ಆಗೊಮ್ಮೆ ಈಗೊಮ್ಮೆ ಆ ಚಿತ್ರದ
ಕೆಲವು ತುಣುಕುಗಳ ಕಣ್ಣಿಗೆ ಬಿದ್ದದ್ದರಿಂದ ಹಾಗೂ ಅದರ ಕುರಿತು ಹಲವಾರು ಚಿಂತನೆಗಳನ್ನು ನನ್ನ
ಬಾಲ್ಯದ ದಿನಗಳಲ್ಲಿ ಕೇಳಿದ್ದರಿಂದ ಅದು ನನಗೆ ಗೊತ್ತು ಎಂಬ ಯಾವುದೋ ಅನಿಸಿಕೆಯಿಂದ ಹಾಗೆ
ಮಾಡಿದ್ದಿರಬೇಕು ಅನಿಸುತ್ತದೆ. ಮುಂದೆ ಬದುಕಿನ
ಹಲವು ಕಾರ್ಯನಿಮಿತ್ತದ ಸಬೂಬಿನಲ್ಲಿ ಬಹಳಷ್ಟು ಉತ್ತಮ ಹವ್ಯಾಸಗಳು, ಅದರಲ್ಲೂ ಓದು ಬಹಳಷ್ಟು
ಹಿನ್ನೆಡೆ ಪಡೆದ ನಿಟ್ಟಿನಲ್ಲಿ ಈ ಕಾದಂಬರಿ ಓದಬೇಕೆಂಬ ಇಚ್ಛೆ ಕಾರ್ಯರೂಪಕ್ಕೆ ಬಂದಿರಲಿಲ್ಲ. ಕಳೆದ ವಾರ ಜಸ್ಟ್ ಬುಕ್ಸ್ ಗ್ರಂಥಾಲಯದಲ್ಲಿ ಓದಿದ್ದ ಪುಸ್ತಕ ಕೊಟ್ಟು ಮತ್ತೊಂದು
ತರೋಣ ಎಂದು ಹೊರಟಾಗ ಸಿಕ್ಕದ್ದು ‘ವಂಶವೃಕ್ಷ’.
ಪ್ರಾರಂಭದಲ್ಲಿ
ಓದಿನ ಕುರಿತಾದ ಆಲಸ್ಯ ಇಣುಕಿದರೂ ಪುಸ್ತಕದ ಬಹುತೇಕ ಭಾಗವನ್ನು ನಿನ್ನೆ ಇಂದು
ಮುಗಿಸಿದ್ದೆ. ಭೈರಪ್ಪನವರ ನಿರೂಪಣ ಶೈಲಿ ಅಂತಹ
ಅಪ್ಯಾಯಮಾನತೆಯುಳ್ಳದ್ದು. ಒಂದು ಕಥೆಯ ವಾತಾವರಣ,
ಪಾತ್ರಗಳಲ್ಲಿನ ಸ್ವಭಾವ ನಿರ್ಮಾಣ, ಮನುಷ್ಯ
ಸ್ವಭಾವಗಳಲ್ಲಿ ಕಾಣುವ ಪರಿಮಿತಿ, ಅದನ್ನು ಮೀರುವ ಪ್ರಯತ್ನಕ್ಕಿರುವ ಮಿತಿ, ಅಸಹಾಯಕತೆ, ಪಾತ್ರಗಳ ಮಾನಸಿಕ ಸ್ವರೂಪಕ್ಕೆ ಸೂಕ್ತವಾದ ಭಾಷೆ, ಕಣ್ಣಿಗೆ
ಕಟ್ಟುವಂತ ಸಂಭಾಷಣಾ ಮೋಹಕತೆ, ಯಾವ ಪಾತ್ರದ ಪರವಾಗಿ ನಾನು ಹೋಗುತ್ತಿದ್ದೇನೆ ಎಂಬ ಕುರಿತು ಓದುಗನ
ಮನದಲ್ಲಿ ಹುಟ್ಟಿಸುವ ದ್ವಂದ್ವ ಇವೆಲ್ಲಾ ಒಂದಕ್ಕಿಂತ ಒಂದು ಅಚ್ಚರಿಯದು.
ಈ
ಕಾದಂಬರಿಯ ಪ್ರಾರಂಭಿಕ ಹಾಳೆಯಲ್ಲಿ ಇರುವ ಕೃತಿ ಪರಿಚಯ ಇಂತಿದೆ: “ಬದುಕಿನ ಸೂಕ್ಷ್ಮ, ಸಂಕೀರ್ಣ ನೆಲೆಗಳ, ಆಳಕ್ಕಿಳಿದು
ಪ್ರಖರವಾದ ವೈಚಾರಿಕ, ತಾತ್ತ್ವಿಕ, ಮಾನವೀಯ ಅಂಶಗಳನ್ನು ಸಂವೇದನಾಶೀಲತೆಯಿಂದ ಶೋಧಿಸುವ ಕಾದಂಬರಿ
‘ವಂಶವೃಕ್ಷ’. ಇದು ಹಿಂದಿ, ಮರಾಠಿ, ಗುಜರಾತಿ, ತೆಲುಗು,
ಉರ್ದು, ಇಂಗ್ಲಿಷ್ ಮೊದಲಾಗಿ ಹಲವು ಭಾಷೆಗಳಿಗೆ ಅನುವಾದಿತವಾಗಿ ಭಾರತದ ಶ್ರೇಷ್ಠ
ಕಾದಂಬರಿಗಳಲ್ಲೊಂದು ಎಂಬ ಮನ್ನಣೆಯನ್ನು ಗಳಿಸಿಕೊಂಡಿದೆ.
ಬದುಕಿನ ಬೇರುಗಳನ್ನು ಶೋಧಿಸುವ ಈ ಸಾಹಿತ್ಯಕೃತಿಯನ್ನು ಓದುವುದೇ ಒಂದು ವಿಶಿಷ್ಟ
ಅನುಭವ.”
ಮತ್ತೊಂದು ಮಹತ್ವವೆಂದರೆ ಒಂದು ಕಾದಂಬರಿಯನ್ನು ರಚಿಸುವಾಗ ಭೈರಪ್ಪನವರು ಆ ವಿಷಯದ ಕುರಿತಾಗಿ ಕೈಗೊಳ್ಳುವ ಸಂಶೋಧನಾತ್ಮಕ ಸಾಂಸ್ಕೃತಿಕ ಅಧ್ಯಯನದ ಆಳ. ಅವರು ತತ್ವಶಾಸ್ತ್ರದ ಕುರಿತು ಓದುಗನನ್ನು ಕರೆದುಕೊಂಡು ಹೋಗುವ ಆಳ ಅಪಾರವಾದದ್ದು. ನಮಗರಿವಿಲ್ಲದಂತೆ, ಈ ಬದುಕು, ಅದರಲ್ಲಿನ ವಿವಿಧ ಸಂದಿಗ್ಧಗಳು, ನಮ್ಮ ಪರಂಪರೆ - ತಲೆಮಾರುಗಳು ಎಷ್ಟರಮಟ್ಟಿಗೆ ಮೌಲ್ಯಯುತವಾದದ್ದು, ಹಿಂದಿನದನ್ನು ಜೊತೆಗಿಟ್ಟುಕೊಳ್ಳಬೇಕೆ ಬೇಡವೇ, ಬದುಕನ್ನು ಯಾಕೆ ನನಗೆ ತಿಳಿದಂತೆ ನನ್ನಿಷ್ಟಕ್ಕೆ ಎಂದು ಬದುಕಿರಬಾರದು, ಎಲ್ಲರೂ ಹಾಗೆ ಬದುಕಿದರೆ ಒಂದು ವ್ಯವಸ್ಥೆ ಇರುತ್ತದೆಯೇ, ಇವೆಲ್ಲದರ ಹೊರತಾಗಿ ಬದುಕಿಗೆ ಅರ್ಥ ಏನಾದರೂ ಇದೆಯೇ, ಆ ಅರ್ಥ ಎಂಬುದಾದರೂ ನಮಗೆ ಬೇಕೇ ಬೇಕೇ, ಪ್ರಾಣಿಗೂ ಮನುಷ್ಯನಿಗೂ ಇರುವ ವೆತ್ಯಾಸ ಯಾವ ನಿಟ್ಟಿನದು, ಅದಕ್ಕಿರುವ ವಿಶೇಷತೆ ಮತ್ತು ಮಿತಿ ಏನು, ಹಾಗೇನಾದರೂ ವಿಶೇಷತೆ ಎಂಬುದಿದ್ದರೆ ಅದನ್ನು ಬಳಸಿಕೊಳ್ಳುವುದು ಹೇಗೆ, ಹೀಗೆ ಅನೇಕ ವಿಚಾರಗಳೊಂದಿಗೆ ಈ ಪುಸ್ತಕದ ಓದಿನ ಯಾತ್ರೆಯಲ್ಲಿ ನನ್ನ ಮನಸ್ಸು ಹಾದುಹೋಗಿದೆ.
ಮೇಲಿನ
ಮಾತುಗಳನ್ನು ಹೇಳುವಾಗ ಒಂದು ವಿಚಾರ ಮನಸ್ಸಿನಲ್ಲಿ ಮೂಡುತ್ತದೆ. ಭೈರಪ್ಪನವರು ಅಪಾರವಾದದ್ದನ್ನು ಅರಸಿಹೊಗುತ್ತಾರೆ
ಅದರಲ್ಲಿ ಸಾಕಷ್ಟನ್ನು ಓದುಗನಿಗೆ ಕೊಡುತ್ತಾರೆ.
ಅದರಲ್ಲಿ ಓದುಗ ತನಗೆ ದಕ್ಕುವಷ್ಟನ್ನು ತೆಗೆದುಕೊಳ್ಳುತ್ತಾನೆ..... ಹೀಗೆ ಅದು ವಿವಿಧ ಅಳತೆಗಳ ಲೆಖ್ಖ. ಹಾಗಿರುವುದರಿಂದ ನಮಗೆ ಅಪ್ಯಾಯಮಾನವಾದದ್ದನ್ನು ನಾವು
ನಮಗೆ ಸಾಧ್ಯವಾದಷ್ಟು ಮೆಚ್ಚಿದೆವು ಅಂದುಕೊಳ್ಳುವುದು ನಮ್ಮ ವೈಯಕ್ತಿಕ ಸಂತೋಷಕ್ಕೆ ಸೀಮಿತವಾದ
ವಿಚಾರವೇ ವಿನಃ ಅದು ಒಬ್ಬ ಮಹತ್ವದ ಬರಹಗಾರನ ಸಾಮರ್ಥ್ಯವನ್ನು ಕಡಿಮೆ ಅಥವಾ ಹೆಚ್ಚು ಎಂದು ಅಳೆಯುವುದು ನಮ್ಮ ಯೋಗ್ಯತೆ ಎಂದುಕೊಳ್ಳುವುದು
ತಪ್ಪಾದೀತು.
ಈ
ಕಾದಂಬರಿಯನ್ನು ಇಂದು ಓದಿ ಮುಗಿಸಿದ ಮೇಲೆ ಈ ಚಿತ್ರವನ್ನೂ ಪೂರ್ತಿಯಾಗಿ ನೋಡಬೇಕೆಂಬ ಆಶಯ
ಹುಟ್ಟಿತು. ಅದನ್ನೂ ಇಂದು ಪೂರೈಸಿದೆ. ಕಾದಂಬರಿಯನ್ನು ಚಿತ್ರ ಅತ್ಯಂತ ಸರಳೀಕೃತ ಕಥೆಯಾಗಿಸಿಬಿಟ್ಟಿತೇನೋ
ಅನ್ನಿಸಿತು. ಈ ಅಳತೆ ಕೂಡಾ ನನ್ನ ವೈಯಕ್ತಿಕ
ಮಿತಿ ಸೀಮಿತ ದೃಷ್ಟಿ ಇರಲಿಕ್ಕೂ ಸಾಕು. ಒಂದು ದೊಡ್ಡ ಕಾದಂಬರಿಯನ್ನು ಕೆಲವು ಗಂಟೆಗಳ ಸೀಮಿತತೆಗೆ
ತೆಗೆದುಕೊಂಡಾಗ ಕಾದಂಬರಿಯ ವ್ಯಾಪ್ತಿಯನ್ನೇ ಬಯಸುವುದು ತಪ್ಪಾದೀತು ಎಂಬುದೂ ಅಷ್ಟೇ ನಿಜ.
ಅದೇನೇ
ಇರಲಿ ಒಂದು ಅಪ್ಯಾಯಮಾನವಾದ ಓದು ಈ ‘ವಂಶವೃಕ್ಷ’ದಲ್ಲಿ ದೊರಕಿತು. ಇದೆಲ್ಲಾ ಸರಿ, ನಾನು ಕಥೆಯ ಬಗ್ಗೆ ಏನೂ ಹೇಳುತ್ತಿಲ್ಲವಲ್ಲ ಎಂದು ಕೂಡಾ ಅನಿಸುತ್ತಿದೆ. ಯಾಕೋ ಗೊತ್ತಿಲ್ಲ, ನಾನು ಏನು ಓದಿದೆ ಎಂಬುದಕ್ಕಿಂತ, ಅದನ್ನು ಓದಿದಾಗ ನನ್ನಲ್ಲೇನಾಯಿತು ಎಂದು ಹೇಳುವುದೇ ಸರಿ ಎಂದು ಈ ಗಳಿಗೆಯಲ್ಲಿ ಅನಿಸುತ್ತಿದೆ.
Tag: Vamshavruksha
ಕಾಮೆಂಟ್‌ಗಳು