ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಡಾ. ವಿವೇಕ್‌ ಹಲ್ಲೆಗೆರೆ ಮೂರ್ತಿ



ಡಾ. ವಿವೇಕ್‌ ಹಲ್ಲೆಗೆರೆ ಮೂರ್ತಿ 

ಮಂಡ್ಯ ಜಿಲ್ಲೆಯ ಹಲ್ಲೆಗೆರೆ ಮೂಲದ ವ್ಯಕ್ತಿಯೊಬ್ಬರು ಈಗ ಅಮೆರಿಕದ ಮಾಧ್ಯಮಗಳಲ್ಲಿ ಪ್ರಮುಖ ಸುದ್ದಿಯಾಗಿ ಮಿಂಚುತ್ತಿದ್ದಾರೆ. ಅಮೆರಿಕದ  ಮುಖ್ಯ ಸರ್ಜನ್ (ಸರ್ಜನ್ ಜನರಲ್) ಆಗಿ ನೇಮಕ­ಗೊಳ್ಳ­ಲಿರುವ   ಡಾ. ವಿವೇಕ್ ಎಚ್. ಮೂರ್ತಿಯವರೇ ಆ ವ್ಯಕ್ತಿ.

ಅಮೆರಿಕದ ಆರೋಗ್ಯ ಸೇವೆಯ (ಒಬಾಮ ಕೇರ್‌) ಅತ್ಯುನ್ನತ ಹುದ್ದೆಗೆ (ಸರ್ಜನ್‌ ಜನರಲ್‌) ಮಂಡ್ಯ ಜಿಲ್ಲೆಯ ಹಲ್ಲೆಗೆರೆ ಮೂಲದ ಅಮೆರಿಕದ ವೈದ್ಯ ಡಾ.ವಿವೇಕ್‌ ಹಲ್ಲೆಗೆರೆ ಮೂರ್ತಿ (37) ಅವರನ್ನು ನೇಮಕ ಮಾಡುವುದಾಗಿ ಅಧ್ಯಕ್ಷ ಬರಾಕ್‌ ಒಬಾಮ ಘೋಷಿಸಿದ್ದಾರೆ.

ಬ್ರಿಗ್ಯಾಂ ಎಂಬಲ್ಲಿ ವೈದ್ಯರಾಗಿರುವ ಡಾ. ಮೂರ್ತಿ ಅವರ ನೇಮಕವನ್ನು ದೇಶದ ಸೆನೆಟ್‌ ದೃಢೀಕರಿಸಿದಲ್ಲಿ, ಮೂರ್ತಿ ಅವರು  ಅಮೆರಿಕದ ಇತಿಹಾಸದಲ್ಲಿಯೇ ಪ್ರಧಾನ ಸರ್ಜನ್‌ ಸ್ಥಾನವನ್ನು ಅಲಂಕರಿಸಿದ ಅತಿ ಚಿಕ್ಕ ವಯಸ್ಸಿನವರಾಗಲಿದ್ದಾರೆ.

2009ರಲ್ಲಿ ಅಧಿಕಾರವಹಿಸಿಕೊಂಡ ರೆಜಿನಾ ಬೆಂಜಮಿನ್‌ ಅವರ ಸ್ಥಾನದಲ್ಲಿ ಡಾ. ಮೂರ್ತಿ ಅವರನ್ನು ನೇಮಕ ಮಾಡಲಾಗುತ್ತಿದೆ. 

ಲಂಡನ್‌ನಲ್ಲಿ ಜನಿಸಿರುವ ವಿವೇಕ್, ಅಮೆರಿಕದಲ್ಲಿ  ನೆಲೆಸಿದ್ದಾರೆ. ಅವರನ್ನು ಅಮೆರಿಕದ ಸರ್ಜನ್ ಜನರಲ್ ಆಗಿ ನೇಮಕ ಮಾಡಲು ಅಧ್ಯಕ್ಷ ಬರಾಕ್ ಒಬಾಮ ಅವರು ನಾಮನಿರ್ದೇಶನ ಮಾಡಿದ್ದಾರೆ. ಅಮೆರಿಕದ ಸೆನೆಟ್ ಅನುಮೋದನೆ ನೀಡಿದ ಕೂಡಲೇ ಮೂರ್ತಿ ಅವರು, ಹಂಗಾಮಿ ಸರ್ಜನ್ ಜನರಲ್ ರೇರ್ ಅಡ್ಮಿರಲ್ ಬೋರಿಸ್ ಡಿ. ಲಷ್ನಿಕ್ ಅವರಿಂದ ಅಧಿಕಾರ ಸ್ವೀಕರಿಸುವರು.

ಇದು ಭಾರತೀಯ ಮೂಲದ ವ್ಯಕ್ತಿಯೊಬ್ಬರಿಗೆ ಅಮೆರಿಕ­ದಲ್ಲಿ ಸಿಗುತ್ತಿರುವ ಉನ್ನತ ಮಟ್ಟದ ಗೌರವವಾಗಿದೆ. ಅಧಿಕಾರ ಸ್ವೀಕರಿಸಿದ ನಂತರ ಒಟ್ಟು ನಾಲ್ಕು ವರ್ಷಗಳವರೆಗೆ ಅವರು ಈ ಹುದ್ದೆಯಲ್ಲಿ ಕಾರ್ಯ ನಿರ್ವಹಿಸುವರು. ಕಳೆದ  ಜುಲೈನಲ್ಲಿ ರೆಗಿನಾ ಬೆಂಜಮಿನ್ ಅವರ ಅಧಿಕಾರಾವಧಿ ಮುಗಿದ ನಂತರ ಲಷ್ನಿಕ್ ಹಂಗಾಮಿ ಸರ್ಜನ್ ಜನರಲ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

2011ರಲ್ಲಿ ಡಾ.ಮೂರ್ತಿ ಅವರು ಅಮೆರಿಕದ ಅತ್ಯುನ್ನತ ಆರೋಗ್ಯ ಸಮಿತಿಯ ಸದಸ್ಯರಾಗಿ ಆಯ್ಕೆಯಾ­ಗಿದ್ದರು. ಸಮಿತಿಯಲ್ಲಿ 20 ಮಂದಿ ತಜ್ಞ ವೈದ್ಯರಿದ್ದರು. ವಿವೇಕ್ ಅದರಲ್ಲಿರುವ ಭಾರತೀಯ ಮೂಲದ ಏಕೈಕ ವ್ಯಕ್ತಿ. ಅವರ ಸಮಿತಿ ನೀಡಿದ ವರದಿಯು, ಸೆನೆಟ್‌ನಲ್ಲಿ ಅಂಗೀಕಾರವಾಗಿತ್ತು. ಅವರು ಯಾಲೆ ಸ್ಕೂಲ್‌ ಆಫ್‌ ಮೆಡಿಸಿನ್‌ನಲ್ಲಿ ಎಂ.ಡಿ. ಪದವಿ ಪಡೆದುಕೊಂಡಿದ್ದಾರೆ. 37 ವಯಸ್ಸಿನ ವಿವೇಕ್, ಅಮೆರಿಕ ಡಾಕ್ಟರ್‌ ಅಸೋಸಿಯೇಷನ್‌ ಸಂಸ್ಥಾಪಕ ಅಧ್ಯಕ್ಷರೂ ಆಗಿದ್ದಾರೆ.

ಸ್ವಗ್ರಾಮದ ನಂಟು: ಡಾ.ಮೂರ್ತಿಯವರು ತಮ್ಮ ಸಾಮಾಜಿಕ ಕಾರ್ಯಗಳ ಮೂಲಕ ಸ್ವಗ್ರಾಮದ ನಂಟು ಉಳಿಸಿಕೊಂಡಿದ್ದಾರೆ. ವಿವೇಕ್ ಅವರ ತಾತ ದಿವಂಗತ ಎಚ್.ಸಿ. ನಾರಾಯಣಮೂರ್ತಿ ಅವರು ವಿಕ್ರಾಂತ್ ಟಯರ್ಸ್ ಮತ್ತು ಮೈಸೂರು ಷುಗರ್ಸ್ ನಿರ್ದೇಶಕರಾಗಿದ್ದರು. ವಿವೇಕ್ ತಂದೆ ಡಾ.ಎಚ್.ಎನ್. ಲಕ್ಷ್ಮೀನರಸಿಂ ಹಮೂರ್ತಿ ಅವರು ಫ್ಲಾರಿಡಾದಲ್ಲಿ ನೆಲೆಸಿದ್ದಾರೆ. ಅವರು ಮೈಸೂರು ವೈದ್ಯಕೀಯ ಮಹಾವಿದ್ಯಾಲಯದ (ಎಂಎಂಸಿ) ಹಳೆಯ ವಿದ್ಯಾ ರ್ಥಿಯೂ ಹೌದು. ಮಂಡ್ಯದ ಅಸಿಟೇಟ್ ಫ್ಯಾಕ್ಟರಿ ಆಸ್ಪತ್ರೆಯಲ್ಲಿ ಸ್ವಲ್ಪ ಕಾಲ ವೈದ್ಯರಾಗಿ ಕರ್ತವ್ಯ ನಿರ್ವಹಿಸಿದ್ದ ಅವರು, ನಂತರ ಉನ್ನತ ಶಿಕ್ಷಣಕ್ಕಾಗಿ ಲಂಡನ್‌ಗೆ ತೆರಳಿದ್ದರು. 

ತಂದೆ ಮತ್ತು ಮಗ ಇಬ್ಬರೂ ನಮ್ಮ ಹಳ್ಳಿಗೆ ಉತ್ತಮ ನೆರವು ನೀಡಿದ್ದಾರೆ. ನಮ್ಮ ಗ್ರಾಮವೂ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳ ಸುಮಾರು  ಸರ್ಕಾರಿ ಶಾಲೆಗಳಿಗೆ 100 ಕಂಪ್ಯೂಟರ್‌ಗಳನ್ನು ದೇಣಿಗೆ ಕೊಟ್ಟಿದ್ದಾರೆ. ಡಾ.ಮೂರ್ತಿ ಅವರೇ ಸ್ವತಃ ಆಗಮಿಸಿ ವೈದ್ಯರ ತಂಡ ದೊಂದಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಿದ್ದರು. ಡಿಸೆಂಬರ್ 8ರಂದು ಪ್ರತಿಷ್ಠಾನದ ವತಿಯಿಂದ ನೇತ್ರ ತಪಾಸಣೆ ಶಿಬಿರ ಆಯೋಜಿಸಲಾಗುತ್ತಿದೆ. ಶಿಬಿರದಲ್ಲಿ ಅವಶ್ಯಕತೆ ಇದ್ದವರಿಗೆ ಉಚಿತ ಕನ್ನಡಕಗಳನ್ನೂ ವಿತರಿಸಲಾಗುತ್ತಿದೆ.

ಈ ಶಿಬಿರದಲ್ಲಿ ಡಾ.ಮೂರ್ತಿ ಅವರು ಬರುವುದು ಖಚಿತವಾಗಿಲ್ಲ. ಆದರೆ, ಅವರ ತಂದೆಯವರು ಹಾಜರಿರುವರುಎಂದು ಲೋಕೋಪಯೋಗಿ ಇಲಾಖೆಯ ನಿವೃತ್ತ ಮುಖ್ಯ ಎಂಜಿನಿಯರ್ ಹಾಗೂ ವಿವೇಕ್ ಅವರ ದೊಡ್ಡಪ್ಪ ಎಚ್.ಎನ್. ಸತ್ಯನಾರಾಯಣ ಹೇಳುತ್ತಾರೆ.
ಡಾ.ವಿವೇಕ್ ಸರಳ ವ್ಯಕ್ತಿಯಾಗಿದ್ದು ಎಲ್ಲರೊಂದಿಗೂ ಉತ್ತಮ ಸಂಬಂಧ ಹೊಂದಿದ್ದಾರೆ. ಅಮೆರಿಕದಲ್ಲಿ ಇಷ್ಟು ದೊಡ್ಡ ಸಾಧನೆ ಮಾಡಿದ್ದರೂ ಇಲ್ಲಿಯ ನಂಟು ಕಡಿದುಕೊಂಡಿಲ್ಲ. ಇಲ್ಲಿಯ ಜನರ ಕಲ್ಯಾಣದ ಕುರಿತು ಚಿಂತಿಸುತ್ತಾರೆಎಂದು ಅವರ ಸಂಬಂಧಿಕರೂ ಆಗಿರುವ ಮೈಸೂರು ವಿವಿ ಮಾಜಿ ಸೆನಟ್‌ ಸದಸ್ಯ ಎಚ್.ಎ. ವೆಂಕಟೇಶ್ ಹೇಳುತ್ತಾರೆ.

ಇದು ಪ್ರಜಾವಾಣಿಯಲ್ಲಿ ಬಂದ ಸುದ್ಧಿ.  ಇದನ್ನು ಓದಿದಾಗ ಒಂದು ಕ್ಷಣದಲ್ಲಿ ಸಂತೋಷ, ಹೊಟ್ಟೆಕಿಚ್ಚು, ಖೇದ ಮೂರು ಒಟ್ಟಿಗೆ ಆಗುತ್ತಿದೆ.  ಸಂತೋಷ ನಮ್ಮ ದೇಶದ ರಕ್ತದ ಸಹೃದಯರೊಬ್ಬರು ಇಂಥಹ ಪ್ರತಿಷ್ಠಿತ ಸ್ಥಾನ ಗಳಿಸುತ್ತಿರುವುದು.  ಹೊಟ್ಟೆಕಿಚ್ಚು ಅಮೆರಿಕದಲ್ಲಿರುವ ಒಂದು ದೊಡ್ಡ ಗುಣದ ಬಗ್ಗೆ.  ಎಲ್ಲವನ್ನೂ ಬದಿಗಿಟ್ಟು ಸಾಮರ್ಥ್ಯವನ್ನು ಮಾತ್ರ ಪರಿಗಣಿಸುವ ಶ್ರೇಷ್ಠತೆಯಿಂದಲೇ ಅದು ದೊಡ್ಡದಾಗಿ ಎನ್ನುವುದು.  ಇನ್ನು ಖೇದದ ಭಾವನೆ ನಮ್ಮ ವ್ಯವಸ್ಥೆ ಬಗ್ಗೆ.  ನಮ್ಮ ದೇಶದಲ್ಲಿ ಒಂದು ಸಣ್ಣ ಭಡ್ತಿ ಬರಬೇಕಾದರೂ ಆತ ಯಾರು, ಆತ ಯಾವ ಜಾತಿ, ಯಾವ ಪಕ್ಷಕ್ಕೆ ಹತ್ತಿರವಾದವನು, ಯಾವ ಮಠದ ಶಿಫಾರಸ್ಸು ಪತ್ರ ಆತನ ಬಳಿ ಇದೆ,  ಅವನು ನಿವೃತ್ತಿ ಅಥವಾ ನಿರ್ವೃತ್ತಿಗೆ ಎಷ್ಟು ಹತ್ತಿರದಲ್ಲಿದ್ದಾನೆ ಇತ್ಯಾದಿ ಇತ್ಯಾದಿ ನೂರೆಂಟು ವಿಚಾರಗಳು ಮಾತ್ರ ಕಾಣಬರುತ್ತವೆ.  ನಮ್ಮವರು ವಿದೇಶದಲ್ಲಿ ಪ್ರಸಿದ್ಧಿ ಪಡೆಯುತ್ತಿದ್ದಾರೆ ಎಂದು ಸಂತೋಷಿಸುವುದಷ್ಟೇ ನಮ್ಮ ದೌರ್ಭಾಗ್ಯ!

ನಮ್ಮ ದೇಶದ ಉನ್ನತಪ್ರತಿಭೆಗಳ ಪ್ರತೀಕರಾದ ಡಾ. ವಿವೇಕ್ ಹಲ್ಲೆಗೆರೆ ಮೂರ್ತಿಯವರಿಗೆ ನಮ್ಮ ಹೃದಯಪೂರ್ವಕ ಅಭಿನಂದನೆಗಳು.

Tag: Dr. Vivek Hallegere Murthy

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ