ಪದುಮನಾಭನ ಹೃದಯ ವಿಹಾರಿಣಿ
ಪದುಮನಾಭನ ಹೃದಯ ವಿಹಾರಿಣಿ ಮುದದ ಮಹಾಲಕ್ಷ್ಮಿ ನಿನಗಾರತಿ
ತ್ರಿದಶಾಲಯದೊಳು ಹದುಳವ ನೆಲೆಗೊಳಿಸಿದ ಪುರುಷೋತ್ತಮ ನಿನಗಾರತಿ
ಸೆರೆಮನೆಯೊಳೆ ಹುಟ್ಟಿ ಸೆರೆಗಳೆವ ಧೀರಗೆ ಅಳಲಿಗರಾಪ್ತಗೆ ಸೊಗದಾರತಿ
ಮುರಹರ ನರಕಾಂತಕನೆಂಬ ಬಿರುದಿನ ಬಲ್ಲಹ ನಿನಗೆಮ್ಮ ಮುದದಾರತಿ
ತಿರೆಯಿರವಿದು ಹದಗೆಡಲಡಿಗಡಿಗೆ ಅವತರಿಸುವ ಶಿವವೆ ನಿನಗಾರತಿ
ಪರಿಹಾರವೆಂದೆಂದು ದುರ್ಮದರ ಭೀತಿಯೊಳಗಡಗಿಹರಾಸೆಯೆ ನಿನಗಾರತಿ
ಮನುಕುಲ ಹೃನ್ಮಣಿ ಖಲತಮದಿನಮಣಿ ಧರಣೀಜ ವರದ ನಿನಗಾರತಿ
ವಿನತಾಸುತಧೃತ ಸತ್ಯಧರ್ಮವ್ರತ ಶರಣರ ಪೊರೆವನೆ ನಿನಗಾರತಿ
ಸಾಹಿತ್ಯ: ಪು. ತಿ. ನರಸಿಂಹಾಚಾರ್
ಕವಿ ಪು.ತಿ.ನ ಅವರ ಈ ಗೀತೆಯನ್ನು
ವಿದುಷಿ ಡಾ. ಟಿ. ಎಸ್. ಸತ್ಯವತಿಯವರು ಸುಂದರವಾದ ಅರ್ಥವಿವರಣೆಯೊಂದಿಗೆ ವಿದ್ಯಾರ್ಥಿಗಳಿಗೆ
ಗಾಯನವನ್ನು ಹೇಳಿಕೊಡುತ್ತಿರುವ ವಿಡಿಯೋ ಇಲ್ಲಿದೆ
Tag: Padumanabhana Hrudaya Viharini
ಕಾಮೆಂಟ್‌ಗಳು