ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಎಸ್. ವಿ. ಪ್ರಭಾವತಿ


 ಎಸ್. ವಿ. ಪ್ರಭಾವತಿ


ಡಾ. ಎಸ್. ವಿ. ಪ್ರಭಾವತಿ ಚಿಂತನಶೀಲ ಬರಹಗಾರ್ತಿಯಾಗಿ ಹೆಸರಾಗಿದ್ದಾರೆ.

ಪ್ರಭಾವತಿಯವರು 1950ರ ಜುಲೈ 25ರಂದು ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆ ತಾಲ್ಲೂಕಿನ ಹೊಸಹೊಳಲು ಗ್ರಾಮದಲ್ಲಿ ಜನಿಸಿದರು. ತಂದೆ ವೆಂಕಟಸುಬ್ಬಯ್ಯ, ತಾಯಿ ರತ್ನಮ್ಮ. ಪ್ರಾರಂಭಿಕ ಶಿಕ್ಷಣ ಹುಟ್ಟಿದ ಊರಿನಲ್ಲಿ ನಡೆದು, ಮಂಡ್ಯದಲ್ಲಿ
ಹೈಸ್ಕೂಲಿಗೆ ಸೇರಿದರು. ಮೈಸೂರು ಮಹಾರಾಣಿ ಕಾಲೇಜಿನಲ್ಲಿ ಬಿ.ಎ. ಮತ್ತು ಮಾನಸ ಗಂಗೋತ್ರಿಯಲ್ಲಿ ಎಂ.ಎ. ಪದವಿ ಪಡೆದರು. ಬೆಂಗಳೂರು ವಿಶ್ವವಿದ್ಯಾಲಯಕ್ಕೆ ‘ಕನ್ನಡ ಸಾಹಿತ್ಯದಲ್ಲಿ ದ್ರೌಪದಿ’ ಎಂಬ ಮಹಾಪ್ರಬಂಧ ಮಂಡಿಸಿ ಪಿಎಚ್.ಡಿ.ಪದವಿ. ಗಳಿಸಿದರು.

ಪ್ರಭಾವತಿ ಅವರು ಭಾರತೀಯ ಸಂಸ್ಕೃತಿ ವಿದ್ಯಾಪೀಠ ಮಹಿಳಾ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಸೇರಿದರು. ವಿದ್ಯಾರ್ಥಿ ದೆಸೆಯಿಂದಲೇ ಇವರ ಸಾಹಿತ್ಯ ರಚನೆ ಪ್ರಾರಂಭಗೊಂಡಿತ್ತು. ಇವರ ಮೊದಲ ಕವನ ಪ್ರಕಟವಾದುದು ಕನ್ನಡ ಪ್ರಭ ಪತ್ರಿಕೆಯಲ್ಲಿ. ನಂತರ ಇವರ ಕಥೆ, ಕವನಗಳು ನಾಡಿನ ಎಲ್ಲ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟಗೊಂಡವು. ನಾಲ್ಕು ಕಿರು ಕಾದಂಬರಿಗಳು ಮುಂಬಯಿಯ ‘ಕರ್ನಾಟಕ ಮಲ್ಲ’ ಪತ್ರಿಕೆಯಲ್ಲಿ ಪ್ರಕಟವಾದವು. ಕನ್ನಡಿಗರ ಕನ್ನಡಿ, ಬಹುಜನ ಕನ್ನಡಿಗರು, ಕನ್ನಡದ ಮನೆಯಿಂದ ಹಾಗೂ ಉಷಾಕಿರಣ ಪತ್ರಿಕೆಗಳಿಗೆ ಸ್ತ್ರೀಪರ ಚಿಂತನೆಗಳ  ಅಂಕಣಗಾರ್ತಿಯಾದರು. 

ಪ್ರಭಾವತಿ ಅವರ ಹಲವಾರು ಕಾದಂಬರಿ, ಕವನ ಸಂಕಲನ ಮತ್ತು ಸಂಶೋಧನಾ ಕೃತಿಗಳು ಪ್ರಕಟಗೊಂಡಿವೆ. ಮಳೆ ನಿಂತ ಮೇಲಿನ ಮರ, ಉಳಿದದ್ದು ಆಕಾಶ, ಭೂಮಿ ಇವರ ಕವನ ಸಂಕಲಗಳಲ್ಲಿ ಸೇರಿವೆ. ದ್ರೌಪದಿ, ಕುಂತಿ, ಅಹಲ್ಯಾ, ಯಶೋಧರಾ, ಸೀತಾ, ಶಕುಂತಲಾ, ಗಾರ್ಗಿ ಇವರ ಕಾದಂಬರಿಗಳಲ್ಲಿ ಸೇರಿವೆ. ಕನ್ನಡ ಸಾಹಿತ್ಯದಲ್ಲಿ ದ್ರೌಪದಿ ಇವರ ಸಂಶೋಧನಾ ಕೃತಿ. ಸ್ತ್ರೀವಾದದ ಪ್ರಸ್ತುತತೆ, ಕನ್ನಡ ಸಾಹಿತ್ಯದಲ್ಲಿ ಸ್ತ್ರೀವಾದಿ ನೆಲೆಗಳು, ಕನ್ನಡ ರಾಮಾಯಣಗಳು, ಹೊರಳುನೋಟ, ಜಾಗತೀಕರಣ ಮತ್ತು ಮಹಿಳೆ, ಸಮನ್ವಯ, ಚಿತ್ತ-ಭಿತ್ತಿ ಮುಂತಾದವು ಇವರ ಚಿಂತನಶೀಲ ಬರಹಗಳಲ್ಲಿ ಸೇರಿವೆ. ‘ಎನ್ನ ಪಾಡೆನಗಿರಲಿ' ಅವರ ಆತ್ಮಕಥನ.

‘ಭೂಮಿ’ ಕವನ ಸಂಕಲನಕ್ಕೆ ಮುದ್ದಣ ಕಾವ್ಯ ಪ್ರಶಸ್ತಿ, ‘ದ್ರೌಪದಿ’ ಕಾದಂಬರಿಗೆ ಅತ್ತಿಮಬ್ಬೆ ಸಾಹಿತ್ಯ ಪ್ರಶಸ್ತಿ, ‘ಯಶೋಧರಾ’ ಕಾದಂಬರಿಗೆ ಗೀತಾದೇಸಾಯಿ ದತ್ತಿನಿಧಿ ಪ್ರಶಸ್ತಿ, ‘ಸ್ತ್ರೀವಾದದ ಪ್ರಸ್ತುತತೆ’ ಪ್ರಬಂಧ ಸಂಕಲನಕ್ಕೆ ಕಾವ್ಯನಂದ ಪುರಸ್ಕಾರ, ‘ಸಮನ್ವಯ’ ವಿಮರ್ಶಾ ಕೃತಿಗೆ ಗೋಕಾಕ್ ವಿಮರ್ಶಾ ಪ್ರಶಸ್ತಿ ಮುಂತಾದ ಅನೇಕ ಗೌರವಗಳು ಡಾ. ಪ್ರಭಾವತಿ ಅವರಿಗೆ ಸಂದಿವೆ. 

ಹಿರಿಯರಾದ ಡಾ. ಎಸ್. ವಿ. ಪ್ರಭಾವತಿ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.

On the birthday of writer Dr. S. V. Prabhavati 


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ