ನೀ ಹೀಂಗ ನೋಡಬ್ಯಾಡ ನನ್ನ
ನೀ ಹೀಂಗ ನೋಡಬ್ಯಾಡ ನನ್ನ
ನೀ ಹೀಂಗ ನೋಡಿದರ ನನ್ನ, ತಿರುಗಿ ನಾ ಹ್ಯಾಂಗ
ನೋಡಲೇ ನಿನ್ನ ? ||ಪ ||
ಸಂಸಾರಸಾಗರದಾಗ, ಲೆಕ್ಕವಿರದಷ್ಟು ದುಃಖದ ಬಂಡಿ
ನಾ ಬಲ್ಲೆ ನನಗ ಗೊತ್ತಿಲ್ಲದಿದ್ದರು ಎಲ್ಲಿ ಆಚೆಯಾ ದಂಡಿ
ಮಲಗಿರುವ ಕೂಸು ಮಲಗಿರಲಿ ಅಲ್ಲಿ, ಮುಂದಿನದು
ದೇವರ ಚಿತ್ತ
ನಾ ತಡೀಲಾರೆ ಅದು, ಯಾಕ ನೋಡತೀ ಮತ್ತ ಮತ್ತ ನೀ
ಇತ್ತ ?
ತಂಬಲs ಹಾಕದs ತುಂಬ
ಕೆಂಪು ಗಿಣಿಗಡಕ ಹಣ್ಣಿನ ಹಾಂಗ
ಇದ್ದಂಥ ತುಟಿಯ ಬಣ್ಣೆತ್ತ ಹಾರಿತು ? ಯಾವ
ಗಾಳಿಗೆ ಹೀಂಗ
ಈ ಗದ್ದ, ಗಲ್ಲ, ಹಣಿ, ಕಣ್ಣು, ಕಂಡು
ಮಾರೀಗೆ ಮಾರಿಯ ರೀತಿ
ಸಾವನs ತನ್ನ ಕೈ ಸವರಿತಿಲ್ಲಿ, ಬಂತೆನಗ ಇಲ್ಲದ ಭೀತಿ.
ಧಾರೀಲೆ ನೆನೆದ ಕೈ ಹಿಡಿದೆ ನೀನು, ತಣ್ಣsಗ ಅಂತನ ತಿಳಿದು
ಬಿಡವೊಲ್ಲಿ ಇನ್ನುನೂ, ಬೂದಿ ಮುಚ್ಚಿದ ಕೆಂಡ
ಇದಂತ ಹೊಳೆದು
ಮುಗಿಲನ ಕಪ್ಪರಿಸಿ ನೆಲಕ ಬಿದ್ದರ ನೆಲಕ ನೆಲಿ ಎಲ್ಲಿನ್ನs
ಆ ಗಾದಿ ಮಾತು ನಂಬಿ, ನಾನು ದೇವರಂತ ತಿಳಿದಿಯೇನ
ನೀ ನನ್ನ ?
ಇಬ್ಬನಿ ತೊಳೆದರೂ ಹಾಲು ಮೆತ್ತಿದಾ ಕವಳಿಕಂಟಿಯಾ ಹಣ್ಣು
ಹೊಳೆಹೊಳೆವ ಹಾಂಗ ಕಣ್ಣಿರುವ ಹೆಣ್ಣ, ಹೇಳು
ನಿನ್ನವೇನ ಈ ಕಣ್ಣು?
ದಿಗಿಲಾಗಿ ಅನ್ನತದ ಜೀವ ನಿನ್ನ ಕಣ್ಣಾರೆ ಕಂಡ ಒಮ್ಮಿಗಿಲs
ಹುಣ್ಣವೀ ಚಂದಿರನ ಹೆಣಾ ಬಂತೊ ಮುಗಿಲಾಗ ತೇಲತ ಹಗಲ
!
ನಿನ ಕಣ್ಣಿನ್ಯಾಗ ಕಾಲೂರಿ ಮಳೆಯು, ನಡನಡಕ
ಹುಚ್ಚನಗಿ ಯಾಕ
ಹನಿ ಒಡೆಯಲಿಕ್ಕೆ ಬಂದಂಥ ಮೋಡ ತಡಧಾಂಗ ಗಾಳಿಯ ನೆವಕ
ಅತ್ತಾರೆ ಅತ್ತು ಬಿಡು, ಹೊನಲು ಬರಲಿ, ನಕ್ಕ್ಯಾಕ ಮರಸತೀ ದುಕ್ಕ ?
ಎವೆ ಬಡಸಿ ಕೆಡವು, ಬಿರಿಗಣ್ಣು ಬ್ಯಾಡ, ತುಟಿಕಚ್ಚಿ ಹಿಡಿಯದಿರು ಬಿಕ್ಕ.
ಸಾಹಿತ್ಯ: ಅಂಬಿಕಾತನಯದತ್ತ
ವಿವರಣೆ: ತನ್ನ ಮಗುವನ್ನು ಕಳೆದುಕೊಂಡ ಕಳೆದುಕೊಂಡ ಸತಿಯೊಬ್ಬಳು ಆಸನ್ನಮರಣ ಶಿಶುವನ್ನು ನೋಡಲು
ಬಂದ ಪತಿಯನ್ನು ಕುರಿತು, ಅನಿರ್ವಚನೀಯ ದುಃಖದಿಂದ ಅರ್ಥಪೂರ್ಣವಾಗಿ ನೋಡಿದಾಗ, ಅವನ ಎದೆಯಲ್ಲಿ
ಹುಟ್ಟಿದ ಹಾಡು ಇದು.
ಸಂಗೀತ ಮತ್ತು ಗಾಯನ: ಸಿ. ಅಶ್ವಥ್
Tag: Nee Heenga Nodabyada Nanna
ಕಾಮೆಂಟ್‌ಗಳು