ಗಾಂಧೀ ಸ್ಮರಣೆ
ತಿಳಿ ನೀಲದಲ್ಲಿ ತಾ ಲೀನವಾಗಿ ಅವ ಹೋದ
ದೂರ ದೂರ
ಬೆಳಗಿಹುದು ಇಲ್ಲಿ ಅವ ಬಿಟ್ಟ ಬೆಳಕು:
ಇನ್ನೊಮ್ಮೆ ಏಕೆ ಬಾರ?
ಅಂದು ಸಂಜೆ ಪ್ರಾರ್ಥನೆಗೆ ದೇವಮಂದಿರದ
ದಾರಿಯಲ್ಲಿ
ಆಚೆ ಈಚೆ ಮೊಮ್ಮಕ್ಕಳಿಬ್ಬರಲಿ ಮೈಯಭಾರ
ಚೆಲ್ಲಿ
ಜಗದ ಕರುಣೆ ನಡೆವಂತೆ ನಡೆದು ಮಂದಿರದ
ಪೀಠವೇರಿ
ನಿಂದನಲ್ಲೊ! ಜಡವುಳಿದು ಜೀವವೊಂದಾಯ್ತು
ದೇವನಲ್ಲಿ.
ಎಸೆದ ಗುಂಡಿಗಾ ಕುಸಿದ ದೇಹದಲಿ ವಿಮಲ
ರಕ್ತ ಚೆಲ್ಲಿ
ಮೀಯಿಸಿತ್ತು ಈ ಜಗದ ಮನವನೇ ಶೋಕ
ಜಲಧಿಯಲ್ಲಿ
ಮುಗಿದ ಕೈಯು ಮುಗಿದಂತೆ ಇತ್ತು:
ನೆಲಸಿತ್ತು ಕ್ಷಮೆಯು ಮೊಗದಿ
ಎದೆಯೊಳೆಂಥ ತಿಳಿಭಾವವಿತ್ತು! ಅದನಾವ
ಬಲ್ಲ ಜಗದಿ?
ಹೋದ ಹೋದನವ ತ್ಯಾಗಜೀವನದ ತುತ್ತ
ತುದಿಯನೇರಿ
ಏರಿ ಏರಿದೊಲು ಅಂತರಂಗದೈಸಿರಿಯ ಜಗಕೆ
ತೂರಿ
ಸತ್ಯ ಪ್ರೇಮಗಳ ಸತ್ವವನ್ನೆ ಕಣ್ಣೆದುರು
ಎತ್ತಿ ತೋರಿ
ಬೇರೆ ಲೋಕದನುಭಾವ ಬೀರಿ ಹೋದನಾವ ದಾರಿ?
ಎನಿತು ಸರಳ ನುಡಿ,
ಎಷ್ಟು ಸಹಜ ನಡೆ ಮನದ ಮಹತಿಯೇನು!
ಅವನ ಎದೆಯ ಉನ್ನತಿಯ ನಿಲುಕುವುದು ಯಾವ
ಗಿರಿಯ ಸಾನು?
ಇಹುದೆ ಅವನ ಕರುಣೆಯನು ಧರೆಗೆ ಕರೆವಂಥ
ಕಾಮಧೇನು?
ಅವನು ಗೈದ ಲೀಲೆಯಲಿ ಲಯಸಿತೆಂಥವರ
"ನಾನು-ನಾನು ".
ತಿಳಿದಿಹುದು ಚಿತ್ತ,
ಹರಿದಿಹುದು ನೋಟ ಮೇಲಕ್ಕೆ ಬಾನಿನೆಡೆಗೆ
ಆ ಜಾಡ ಹಿಡಿದು ಇಳಿದಂತೆ ಇಹುದು
ಬೆಳಕೊಂದು ಕೆಳಗೆ ಇಳೆಗೆ
"ಏನಷ್ಟು ಭ್ರಾಂತಿ? ಕಾಣದೆಯೆ ಜ್ಯೋತಿ?" ಎಂಬರುಹು ಮೂಡಲೊಡನೆ
ಬೆಳಕ ನಂಬಿ ನಿಂದಿಹನು ಧೀರ ಎದೆ ತೆರೆದು
ನಾಡ ಕರೆಗೆ.
ಸಾಹಿತ್ಯ: ಡಿ. ಎಸ್. ಕರ್ಕಿ
(ಹಚ್ಚೇವು ಕನ್ನಡದ ದೀಪದಂತಹ
ಗೀತೆಯನ್ನು ಬರೆದ ಕರ್ಕಿಯವರು ಮಹಾತ್ಮ ಗಾಂಧಿಯವರು ಹಂತಕನ ಗುಂಡಿನೇಟಿನಿಂದ ಈ ಲೋಕದಿಂದ
ವಿರಮಿಸಿದ ಸಂದರ್ಭದಲ್ಲಿ ಮೂಡಿಸಿದ ಭಕ್ತಿಭಾವವಿದು).
Photo Courtesy: http://www.flickr.com/photos/vinothchandar/7506238944/sizes/z/in/photostream
Tag: Ghandhi Smarane
ಕಾಮೆಂಟ್‌ಗಳು