ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಖುಷ್ವಂತ್ ಸಿಂಗ್ ಇನ್ನಿಲ್ಲ

ಖುಷ್ವಂತ್ ಸಿಂಗ್  ಇನ್ನಿಲ್ಲ

ಹಿರಿಯ ಪತ್ರಕರ್ತ, ಅಂಕಣಕಾರ ಮತ್ತು  ಕಥೆಗಾರರಾದ  ಖುಷ್ವಂತ್ ಸಿಂಗ್ ಇಂದು (ಮಾರ್ಚ್ 20, 2014ರಂದು) ನಿಧನರಾಗಿದ್ದಾರೆ.  ತೊಂಬತ್ತೊಂಬತ್ತು ತುಂಬಿ ನೂರರ ಹುಟ್ಟಿದ ವರ್ಷದಲ್ಲಿದ್ದ  ಖುಷ್ವಂತ್ ಸಿಂಗರು  ಜನಿಸಿದ್ದು 2ನೆ ಫೆಬ್ರವರಿ 1915ರಂದು.  ಖುಷ್ವಂತರು ನಮಗೆಲ್ಲ ತಿಳಿದಿರುವ ಹಾಗೆ  ನಮ್ಮ ದೇಶದ ಹೆಸರಾಂತ ಕಥೆಗಾರ, ಪತ್ರಕರ್ತ ಮತ್ತು ಅಂಕಣಕಾರ.  ಅವರ ಪ್ರಸಿದ್ಧ ಧಾರಾವಾಹಿ ಅಂಕಣ  ‘with malice towards one and all’ ಭಾರತದ ಬಹುತೇಕ ದೈನಿಕಗಳಲ್ಲಿ ಆವರ್ತನಗೊಂಡು ಅವರಿಗೆ ಬೃಹತ್ ಓದುಗ ಬಳಗವನ್ನು  ಸೃಷ್ಟಿಸಿತು. 

ಭಾರತದ ಆಂಗ್ಲ ಭಾಷಾ ಸಾಹಿತಿಯಾಗಿ ಬಹಳಷ್ಟು ವರ್ಷಗಳಿಂದ ಆ ಕೃಷಿಯಲ್ಲಿ ತೊಡಗಿದ್ದ ಖುಷ್ವಂತ್ ಸಿಂಗರು, ಜಾತ್ಯಾತೀತತೆ, ಹಾಸ್ಯ ಮತ್ತು ಪ್ರೇಮಕಾವ್ಯಗಳಿಗೆ ಜನಪ್ರಿಯರಾದವರು.  ಭಾರತೀಯರು ಮತ್ತು ವಿದೇಶಿಯರನ್ನು ಪಕ್ಕಪಕ್ಕದಲ್ಲಿ ನಿಲ್ಲಿಸಿ ಈ ವಿಭಿನ್ನ ಪ್ರವೃತ್ತಿಗಳಿಗೆ ಅವರು ಕೊಡುವ ಹಾಸ್ಯ ಲೇಪನ ಮುದಕೊಡುವಂತದ್ದು.  ಹಲವಾರು ಜನಪ್ರಿಯ ಸಾಹಿತ್ಯಕ ಪತ್ರಿಕೆಗಳು ಮತ್ತು ನಿಯತಕಾಲಿಕಗಳಿಗೆ ವರದಿಗಾರರಾಗಿ ಕಾರ್ಯ ನಿರ್ವಹಿಸಿರುವ ಖುಷ್ವಂತ್ ಸಿಂಗ್,  ‘The Illustrated Weekly’ ಮತ್ತು ‘The National Herald’ ಮತ್ತು ‘Hinustan Times’  ಪತ್ರಿಕೆಗಳಿಗೆ 1970-80ರ ದಶಕಗಳಲ್ಲಿ ಗಣನೀಯವಾಗಿ ಕಾರ್ಯ ನಿರ್ವಹಿಸಿದವರು.  ಅವರು ಆ ಪತ್ರಿಕೆಗಳ ಸಂಪಾದಕೀಯ ಕೂಡಾ ನಡೆಸಿದರು.  ಅವರಿದ್ದ ದಿನಗಳಲ್ಲಿ ‘The Illustrated Weekly of India’ ಪತ್ರಿಕೆ ಅತ್ಯಂತ ಜನಪ್ರಿಯವಾಗಿದ್ದು, ಖುಷ್ವಂತ್ ಸಿಂಗ್ ಅವರ ನಿರ್ಗಮನದೊಂದಿಗೆ ಆ ಪತ್ರಿಕೆ ನಿಧಾನವಾಗಿ ಪಾತಾಳಕ್ಕೆ ಸೇರಿತು.  ಇದಕ್ಕೆ ಮೊದಲು ಖುಷ್ವಂತ್ ಸಿಂಗರು  ಭಾರತ ಸರ್ಕಾರದ ಯೋಜನ ಎಂಬ ಪತ್ರಿಕೆಯ ಸಂಪಾದಕರಾಗಿ ಸಹಾ ಕೆಲಸ ಮಾಡಿದ್ದರು.

ಈಗ ಪಾಕಿಸ್ಥಾನದ ಭಾಗವಾಗಿರುವ ಪಂಜಾಬಿನ ಹಡಲಿ ಎಂಬಲ್ಲಿ ಸಿಖ್ ಮತಸ್ಥ ಕುಟುಂಬದಲ್ಲಿ ಖುಷ್ವಂತ್ ಸಿಂಗರು ಜನಿಸಿದರು.  ದೆಹಲಿಯ ಮಾಡರ್ನ್ ಶಾಲೆ, ಲಾಹೋರಿನ ಸರ್ಕಾರಿ ಕಾಲೇಜು, ದೆಹಲಿಯ ಸೈಂಟ್ ಸ್ಟೀಫನ್ ಕಾಲೇಜು, ಲಂಡನ್ನಿನ ಕಿಂಗ್ಸ್ ಕಾಲೇಜುಗಳಲ್ಲಿ ಅವರ ವಿದ್ಯಾಭ್ಯಾಸ ಜರುಗಿತು.  ಮುಂದೆ ಅವರು ಕಾನೂನಿನಲ್ಲಿ ಬಾರ್ ಪದವಿಯನ್ನು ಕೂಡಾ ಗಳಿಸಿದರು.

ದೇಶದ ವಿಭಜನೆಯ ಸಂದರ್ಭದಲ್ಲಿ ಲಾಹೋರಿನ ನ್ಯಾಯಾಲಯದಲ್ಲಿ ವಕೀಲಿ ವೃತ್ತಿ ನಡೆಸುತ್ತಿದ್ದ ಖುಷ್ವಂತರು, ತಮ್ಮ ಸಂಸಾರದೊಡನೆ ಹಿಮಾಲಯದ ಪದತಳದಲ್ಲಿರುವ ಕಸೌಲಿ ಎಂಬ ಸ್ಥಳಕ್ಕೆ   ವಲಸೆ ಬಂದರು.  ಅಲ್ಲಿಂದ ಇನ್ನೂರು ಮೈಲಿ ದೂರದಲ್ಲಿರುವ ದೆಹಲಿಗೆ ಅವರು  ಶಸ್ತ್ರಸಜ್ಜಿತ ಸಿಖ್ ಯೋಧರ ಜೊತೆ ಜೀಪಿನಲ್ಲಿ  ಆಗಮಿಸಿದರು.  ಈ ಅನುಭವವನ್ನು ಅವರು  1956ರಲ್ಲಿ ಬರೆದ ಟ್ರೈನ್ ಟು ಪಾಕಿಸ್ಥಾನ್ ಎಂಬ ಕಾದಂಬರಿಯಲ್ಲಿ ಪ್ರಸ್ತಾಪಿಸಿದ್ದಾರೆ.  ಅದೊಂದು ಪ್ರಖ್ಯಾತ ಪುಸ್ತಕವಾಗಿದೆ.

1980 ರಿಂದ 1986ರ ಅವಧಿಯಲ್ಲಿ ಖುಷ್ವಂತ್ ಸಿಂಗರು ರಾಜ್ಯ ಸಭೆಯ ಸದಸ್ಯರಾಗಿದ್ದರು.  1974ರಲ್ಲಿ ಅವರಿಗೆ ಪದ್ಮಭೂಷಣ ಪ್ರಶಸ್ತಿ ನೀಡಲಾಗಿತ್ತು.  ಅಚ್ಚರಿ ಎಂಬಂತೆ ಅವರು ಇಂದಿರಾಗಾಂಧಿ ದೇಶದ ಮೇಲೆ ಹೇರಿದ್ದ ತುರ್ತುಪರಿಸ್ಥಿತಿಯನ್ನು ಬೆಂಬಲಿಸಿ ವಿಶ್ವದೆಲ್ಲೆಡೆ ಅಚ್ಚರಿ ಮೂಡಿಸಿದ್ದರು.   1984ರಲ್ಲಿ ಸ್ವರ್ಣ ಮಂದಿರದಲ್ಲಿ ಭಾರತೀಯ ಸೈನ್ಯಾಚರಣೆ ನಡೆದ ಬಗ್ಗೆ ಅಸಮಾಧಾನ ಹೊಂದಿದ ಖುಷ್ವಂತರು ತಮಗೆ ಸಂದಿದ್ದ ಪದ್ಮಭೂಷಣ ಪ್ರಶಸ್ತಿಯನ್ನು ಸರ್ಕಾರಕ್ಕೆ  ಹಿಂದಿರುಗಿಸಿದ್ದರು.  2007ರ ವರ್ಷದಲ್ಲಿ ಅವರಿಗೆ ಪದ್ಮ ವಿಭೂಷಣ ಪ್ರಶಸ್ತಿಯಿತ್ತು ಗೌರವಿಸಲಾಯಿತು.

ಪ್ರತಿದಿನ ಬೆಳಿಗ್ಗೆ ನಾಲ್ಕು ಗಂಟೆಗೆ ಎದ್ದು ತಮ್ಮ ಬರಹಗಳನ್ನು ಸಿದ್ಧಪಡಿಸುವುದು ಖುಷ್ವಂತ್ ಸಿಂಗರು ನಿರಂತರವಾಗಿ ನಡೆಸಿಕೊಂಡು ಬಂದ ದಿನಚರಿ.  ರಾಜಕೀಯ ವ್ಯಾಖ್ಯಾನಗಳ ಬರವಣಿಗೆಗಳೂ ಸೇರಿದಂತೆ, ಸಿಖ್ಖರ ಧಾರ್ಮಿಕ ಚಿಂತನೆಗಳು ಮತ್ತು ಉರ್ದು ಕಾವ್ಯಗಳ ಸುಂದರ ಅನುವಾದಗಳನ್ನು ನೀಡುವವರೆಗೆ ಅವರ ಗಂಭೀರ ಬರವಣಿಗೆಯ ಕ್ಷೇತ್ರ ವ್ಯಾಪಿಸಿದೆ. ಸಿಖ್ಖರ ಚರಿತ್ರೆಯ ಕುರಿತಾದಂತೆ ಹಲವಾರು ಶತಮಾನಗಳ ಇತಿಹಾಸವನ್ನು ಹಲವು ಸಂಪುಟಗಳೋಪಾದಿಯಲ್ಲಿ ಸಂಪಾದಿಸಿ ಒಂದು ಸಮಗ್ರ ದರ್ಶನವನ್ನೇ ಲಿಖಿಸಿದ್ದಾರೆ. 

ಅವರ ಅಂಕಣದ ತಲೆಬರಹ "With Malice Towards One and All" ಎಂಬುದು ‘Malice’ ಎಂಬ ವೈರುಧ್ಯವನ್ನು ಸೂಚಿಸುವುದಾದರೂ ಅವರ ಪ್ರತಿ ಬರಹದಲ್ಲೂ ಸಾರ್ವಜನಿಕ ಜೀವನದಲ್ಲಿನ ಶಾಂತಿ ಪ್ರಕ್ರಿಯೆಯ ಚಿಂತನೆಗಳು ನಿರಂತರವಾಗಿ ಮೂಡಿ ಬಂದಿವೆ.  ಪಂಜಾಬ್ ಮತ್ತು ಉರ್ದುಭಾಷೆಯ ಶ್ರೇಷ್ಠ  ಲೇಖಕರನ್ನು ಅವರಷ್ಟು ವೈಯಕ್ತಿಕವಾಗಿ ಮತ್ತು ವಸ್ತುನಿಷ್ಠವಾಗಿ ಬಲ್ಲವರು ಇಲ್ಲವೆಂದೇ ಪ್ರತೀತಿ ಇದೆ.   ಅವರ ಬರಹಗಳ ವಿಶೇಷತೆಯೆಂದರೆ ಅದರಲ್ಲಿ ಹೊರಹೊಮ್ಮುವ ಪ್ರಾಮಾಣಿಕತೆ ಅವರ ವೈಯಕ್ತಿಕ ಮಿತಿ, ತಪ್ಪುಗಳು ಮತ್ತು ದೌರ್ಬಲ್ಯಗಳ ಬಗೆಗೆ ಕೂಡಾ ಅವರು ಯಾವಾಗಲೂ ತಮ್ಮನ್ನು ಮುಕ್ತವಾಗಿ ತೆರೆದಿಟ್ಟುಕೊಂಡವರು. 

ಸಾರ್ವಜನಿಕ ಜೀವನದಲ್ಲಿ ಪ್ರಖ್ಯಾತರಾದ ಅವರು ದೇಶದ ಆಳುವಪಕ್ಷ ಕಾಂಗ್ರೆಸ್ಸಿನ, ಅದರಲ್ಲೂ ಇಂದಿರಾ ಗಾಂಧಿ ಅವರ ಪರವಾದ ಧೋರಣೆ ತಳೆದಿದ್ದರು.   ಇಂದಿರಾ ಗಾಂಧಿ ಹತ್ಯೆಯ ನಂತರದಲ್ಲಿ ಕಾಂಗ್ರೆಸ್ ಪಕ್ಷದ ಬೆಂಬಲದಿಂದ ನಡೆಯಿತೆಂದು ಭಾವಿಸಲಾಗಿರುವ  ಸಿಖ್ಖರ ಹತ್ಯಾಖಾಂಡ ಅವರಲ್ಲಿ ಆಘಾತ ಮೂಡಿಸಿತಾದರೂ, ಭಾರತದ ಪ್ರಜಾಪ್ರಭುತ್ವದಲ್ಲಿ ಅವರು ನಿರಂತರವಾದ ಭರವಸೆ ಹೊಂದಿದವರು.  ಹೀಗಾಗಿ ದೆಹಲಿಯ ಹೈ ಕೋರ್ಟಿನಲ್ಲಿದ್ದ ಹೆಚ್ ಎಸ್ ಫೂಲ್ಕ ಅವರು ಹುಟ್ಟು ಹಾಕಿದ  ನಾಗರೀಕ ಹಿತಾಸಕ್ತಿಗಾಗಿನ ನ್ಯಾಯ ಸಮಿತಿಯಲ್ಲಿ  ಖುಷ್ವಂತ್ ಸಿಂಗರು ಹಲವಾರು ವರ್ಷಗಳವರೆಗೆ ಸಕ್ರಿಯರಾಗಿ ಭಾಗವಹಿಸುತ್ತಿದ್ದರು. 

ಭಾರತ ಸರ್ಕಾರದ ಪದ್ಮವಿಭೂಷಣ ಪ್ರಶಸ್ತಿಯಲ್ಲದೆ ಪಂಜಾಬ್ ರತ್ನ ಪ್ರಶಸ್ತಿ, ಸುಲಭ್ ಅಂತರರಾಷ್ಟ್ರೀಯ ಸಂಸ್ಥೆಯ ಪ್ರಾಮಾಣಿಕ ವ್ಯಕ್ತಿ ಪ್ರಶಸ್ತಿ ಹಾಗೂ ಇತೀಚಿನ  ವರ್ಷದಲ್ಲಿ ಭಾರತೀಯ ಸಾಹಿತ್ಯ ಅಕಾಡೆಮಿಯ ಫೆಲೋಶಿಪ್ ಪ್ರಶಸ್ತಿ ಮುಂತಾದ ಗೌರವಗಳು ಖುಷ್ವಂತ್ ಸಿಂಗ್ ಅವರಿಗೆ ಸಂದಿವೆ. 

ವಿವಿಧ ಕಥೆ, ಚರಿತ್ರೆ, ಸ್ವ-ಅನುಭವ, ಚಿಂತನೆಗಳೇ ಅಲ್ಲದೆ  ಹಲವಾರು ಹಾಸ್ಯ ಸನ್ನಿವೇಶಗಳ ಬರಹಗಳು ಕೂಡ ಖುಷ್ವಂತ್ ಸಿಂಗ್ ಅವರ  ವಿಶಾಲ ಬರಹ ವ್ಯಾಪ್ತಿಯಲ್ಲಿ ಸೇರಿವೆ.    2012ರ ವರ್ಷದಲ್ಲಿ ಸಹಾ ಅವರ ಪುಸ್ತಕವೊಂದು ಹೊರಬಂದಿದಯೆಂದರೆ ಅವರಿಗಿದ್ದ  ಕ್ರಿಯಾಶೀಲ ಉತ್ಸಾಹವನ್ನು ಊಹಿಸಬಹುದು.  ಬದುಕಿನಲ್ಲಿ ಆಸಕ್ತಿಪೂರ್ಣರಾಗಿದ್ದ ಖುಷ್ವಂತ್ ಸಿಂಗರು ತಮ್ಮ ಸುದೀರ್ಘ ಆಯುಷ್ಯವನ್ನು ಭಾರ ಎನಿಸಿದಂತೆ ಕಳೆದವರಲ್ಲ.  ಆದರೂ ದೇಹ ಒಂದು ದಿನ ಬಿಟ್ಟುಹೋಗುವಂತದ್ದು.  ತಾವು ಬದುಕಿದ ವರ್ಷಗಳನ್ನು  ಈ ವಯೋವೃದ್ಧ ಸಾಹಸಪೂರ್ಣ ವಿದ್ವತ್ಪೂರ್ಣ ವರ್ಣರಂಜಿತ ವ್ಯಕ್ತಿತ್ವದ ಖುಷ್ವಂತ್ ಸಿಂಗರು ಉಲ್ಲಾಸದಿಂದ ಕಳೆದು ತಮ್ಮ ನೆನಪನ್ನು ಉಳಿಸಿಹೋಗಿದ್ದಾರೆ. ಈ ಮಹಾನ್ ಚೇತನಕ್ಕೆ ನಮ್ಮ ನಮನಗಳು.

Tag: Khushwant Singh

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ