ಯುಗಾದಿ ಸ್ವಾಗತ
ಬಾ ಬಾ ಯುಗಾದಿ ಬಾ
ನಮ್ಮ ಊರಿಗೆ
ಸುಸ್ವಾಗತ ನಿನಗೆ
ನೀರಿರದ ಕೇರಿಗೆ
ಸಿಗಲಿಲ್ಲವೆ ಸಿಟಿ ಬಸ್ಸು
ನಿರಾಶನಾದೆಯ?
ಆಟೋ ರೇಟನು ಕೇಳಿ
ಹೌಹಾರಿ ಹೋದೆಯ?
ನಡೆದೇ ಬಂದೆಯ ಕೊನೆಗೆ
ಬಿರುಬಿಸಿಲಲಿ ಮನೆಗೆ?
ಅಂತೂ ಬಂದೆಯಲ್ಲ
ಧನ್ಯವಾದ ನಿನಗೆ
ಅನ್ನವ ಕಂಡು ನಗಬೇಡ
ಸೊಸೈಟಿ ಅಕ್ಕಿ
ಗೋಡಂಬಿ ಸಿಕ್ಕೀತೆ ಖೀರಲ್ಲಿ?
ನೀನೇ ಲಕ್ಕಿ
ಫ್ಯಾನು ಹಾಕುವೆನು ಕೂತು ತಿನ್ನು
ಬಿಸಿ ಒಬ್ಬಟ್ಟು
ಬೇಕಾದ್ದನ್ನು ನೀ ಕೇಳು
ತುಪ್ಪವೊಂದು ಬಿಟ್ಟು
ಹಬ್ಬದ ದಿನವೆಂದು
ಹೋಗಿಲ್ಲ ಕರೆಂಟು
ರೇಡಿಯೋ, ಟೀವಿಯಲಿ
ವಿಶೇಷಗಳುಂಟು
ಕೋಗಿಲೆ ಹಾಡನು ಕೇಳು
ಆಕಾಶವಾಣಿಯಲಿ
ಕಂಡು ಧನ್ಯನಾಗು
ಹೂ ಚಿಗುರು ಟೀವಿಯಲ್ಲಿ
ಹೋಗಿ ಬಾರೋ ಯುಗಾದಿ
ಶುಭವಾಗಲಿ ನಿನಗೆ
ಹರಸಿ ಹೋಗು ನಮಗೆ
ಆಗಾಗ ಕೊಂಚ ನಗೆ.
ಸಾಹಿತ್ಯ: ಬಿ. ಆರ್. ಲಕ್ಷ್ಮಣರಾವ್
ಕಾಮೆಂಟ್‌ಗಳು