ಕಂದನ ಕಾವ್ಯ ಮಾಲೆ
ಜಿ.ಪಿ. ರಾಜರತ್ನಂ ಅವರ ಕೆಲವು ಮಕ್ಕಳ
ಪದ್ಯಗಳು
ನಾಯಿಮರಿ ನಾಯಿಮರಿ
ನಾಯಿ ಮರಿ ನಾಯಿ ಮರಿ ತಿಂಡಿ ಬೇಕೆ?
ತಿಂಡಿ ಬೇಕು ತೀರ್ಥ ಬೇಕು ಎಲ್ಲ ಬೇಕು
ನಾಯಿ ಮರಿ ನಾಯಿ ಮರಿ ತಿಂಡಿ ತಿಂದು ಏನು
ಮಾಡುವೆ?
ತಿಂಡಿ ತಿಂದು ಗಟ್ಟಿಯಾಗಿ ಮನೆಯ ಕಾಯುವೆ
ನಾಯಿ ಮರಿ ನಾಯಿ ಮರಿ ಕಳ್ಳಬಂದರೇನು
ಮಾಡುವೆ?
ಲೋಳ್ ಲೋಳ್ ಬೌ ಎಂದು ಕೂಗಿಯಾಡುವೆ ।।
-----
ಬಣ್ಣದ ತಗಡಿನ ತುತ್ತೂರಿ
ಬಣ್ಣದ ತಗಡಿನ ತುತ್ತೂರಿ
ಕಾಸಿಗೆ ಕೊಂಡನು ಕಸ್ತೂರಿ
ಸರಿಗಮ ಪದನಿಸ ಊದಿದನು
ಸನಿದಪ ಮಗರಿಸ ಊದಿದನು
ತನಗೇ ತುತ್ತೂರಿ ಇದೆಯೆಂದ
ಬೇರಾರಿಗೂ ಅದು ಇಲ್ಲೆಂದ
ಕಸ್ತೂರಿ ನಡೆದನು ಬೀದಿಯಲಿ
ಜಂಭದ ಕೋಳಿಯ ರೀತಿಯಲಿ
ತುತ್ತುರಿಯೂದುತ ಕೊಳದ ಬಳಿ
ನಡೆದನು ಕಸ್ತೂರಿ ಸಂಜೆಯಲಿ
ಜಾರಿತು ನೀರಿಗೆ ತುತ್ತೂರಿ
ಗಂಟಲು ಕಟ್ಟಿತು ನೀರೂರಿ
ಸರಿಗಮ ಊದಲು ನೋಡಿದನು
ಗಗಗಗ ಸದ್ದನು ಮಾಡಿದನು
ಬಣ್ಣವು ನೀರಿನ ಪಾಲಾಯ್ತು
ಬಣ್ಣದ ತುತ್ತೂರಿ ಬೋಳಾಯ್ತು
ಬಣ್ಣದ ತುತ್ತೂರಿ ಹಾಳಾಯ್ತು
ಜಂಭದ ಕೋಳಿಗೆ ಗೋಳಾಯ್ತು
----
ಊಟದ ಆಟ
ಒಂದು ಎರಡು ಬಾಳೆಲೆ ಹರಡು
ಮೂರು ನಾಕು ಅನ್ನ ಹಾಕು
ಐದು ಆರು ಬೇಳೆ ಸಾರು
ಏಳು ಎಂಟು ಪಲ್ಯಕೆ ದಂಟು
ಒಂಬತ್ತು ಹತ್ತು ಎಲೆ ಮುದುರೆತ್ತು
ಒಂದರಿಂದ ಹತ್ತು ಹೀಗಿತ್ತು
ಊಟದ ಆಟವು ಮುಗಿದಿತ್ತು
-------
ಹತ್ತು ಹತ್ತು ಇಪ್ಪತ್ತು
ಹತ್ತು ಹತ್ತು ಇಪ್ಪತ್ತು,
ತೋಟಕೆ ಹೋದನು ಸಂಪತ್ತು
ಇಪ್ಪತ್ತು ಹತ್ತು ಮೂವತ್ತು,
ಕೈಯಲಿ ಒಂದು ಕಲ್ಲಿತ್ತು ।।
ಮೂವತ್ತು ಹತ್ತು ನಲವತ್ತು,
ಎದುರಲಿ ಮಾವಿನ ಮರವಿತ್ತು
ನಲವತ್ತು ಹತ್ತು ಐವತ್ತು,
ಮರದಲಿ ಕಾಯಿ ತುಂಬಿತ್ತು ।।
ಐವತ್ತು ಹತ್ತು ಅರವತ್ತು,
ಕಲ್ಲನು ಬೀರಿದ ಸಂಪತ್ತು|
ಅರವತ್ತು ಹತ್ತು ಎಪ್ಪತ್ತು,
ಕಾಯಿಗಳೆಲ್ಲ ಉದುರಿತ್ತು ।।
ಎಪ್ಪತ್ತು ಹತ್ತು ಎಂಬತ್ತು,
ಮಾಲಿಯ ಕಂಡನು ಸಂಪತ್ತು|
ಎಂಬತ್ತು ಹತ್ತು ತೊಂಬತ್ತು,
ಕಾಲುಗಳೆರಡು ಓಡಿತ್ತು ।।
ತೊಂಬತ್ತು ಹತ್ತು ನೂರಾಯ್ತು,
ತಲುಪಿದ ಮನೆಗೆ ಸಂಪತ್ತು ।।
---
ಗಡಿಯಾರದ ಸಡಗರ
ಕೋಳಿ ಕೂಗಿತೇಳು ಕಂದ!
ಸೂರ್ಯ ಪೂರ್ವದಲಿ ಬಂದ
ಹೆಚ್ಚು ಮಲಗಲೇನು ಚಂದ?
ಬಾ! ಕಂದ ಬಾ!
ಟಿಕ್! ಟಾಕ್! ಟಿಕ್! ಟಾಕ್!
ಟಿಕ್! ಟಿಕ್! ಟಿಕ್!
ಹಲ್ಲನುಜ್ಜಿ ತಿಂಡಿ ತಿಂದು
ಪಾಠವೋದಿ ಬಳಿಕ ಮಿಂದು
ಊಟಮಾಡಿ ಶಾಲೆಗೆಂದು
ಬಾ! ಕಂದ ಬಾ!
ಟಿಕ್! ಟಾಕ್! ಟಿಕ್! ಟಾಕ್!
ಟಿಕ್! ಟಿಕ್! ಟಿಕ್!
ಶಾಲೆ ಮುಗಿದ ಬಳಿಕ ಓಟ
ಸಂಜೆವರೆಗೆ ಆಟ ಪಾಟ
ಮನೆಗೆ ಬಂದು ಸ್ತೋತ್ರಪಾಠ
ಬಾ! ಕಂದ ಬಾ!
ಟಿಕ್! ಟಾಕ್! ಟಿಕ್! ಟಾಕ್!
ಟಿಕ್! ಟಿಕ್! ಟಿಕ್!
ರಾತ್ರೆ ದೇವಗಡ್ಡ ಬಿದ್ದು
ಊಟಮಾಡಿ ನಿದ್ರಿಸಿದ್ದು
ನಾಳೆ ತಿರುಗಿ ಬೇಗನೆದ್ದು
ಬಾ! ಕಂದ ಬಾ!
ಟಿಕ್! ಟಾಕ್! ಟಿಕ್! ಟಾಕ್!
ಟಿಕ್! ಟಿಕ್! ಟಿಕ್!
ಬಾಲ್ಯದ ಸವಿನೆನಪು
ಪ್ರತ್ಯುತ್ತರಅಳಿಸಿ