ಲಿಯೋ ಟಾಲ್‌ಸ್ಟಾಯ್
ಲಿಯೋ ಟಾಲ್‌ಸ್ಟಾಯ್
ಜಗತ್ತಿನ ಬಹು ದೊಡ್ಡ ಸಾಹಿತಿಗಳ ಸಾಲಿನಲ್ಲಿ ಕೌಂಟ್ ಲಿಯೋ ಟಾಲ್‌ಸ್ಟಾಯ್ ಅವರ ಹೆಸರು ಎದ್ದು ಕಾಣುವಂಥದು. ಸಾಹಿತಿ, ವಿಚಾರವಂತ ಹಾಗೂ ಸಂತ ಎಂದು ಪರಿಗಣಿತರಾಗಿರುವ ಟಾಲ್‌ಸ್ಟಾಯ್ ಹತ್ತೊಂಬತ್ತನೆಯ ಶತಮಾನದ ನೈತಿಕ ಸತ್ವದ ಪ್ರಮುಖ ಪ್ರತಿನಿಧಿಯಂತೆ ತೋರಿದರು. ಜಗತ್ತಿನ ಎಷ್ಟೋ ವಿಚಾರವಂತರಿಗೆ, ಸುಧಾರಕರಿಗೆ ಸ್ಫೂರ್ತಿಯಾದರು. ಮಹಾತ್ಮಗಾಂಧಿಯವರು ಟಾಲ್‌ಸ್ಟಾಯ್ ಅವರನ್ನು ತಮ್ಮ ಮಾರ್ಗದರ್ಶಕರಲ್ಲಿ ಒಬ್ಬರು ಎಂದು ಕರೆದರು; ಸೇವೆ, ಕಾಯಕ, ಅಸಹಕಾರ ತತ್ವ ಮತ್ತು ಅನುಕಂಪೆಯ ಪ್ರತಿನಿಧಿ ಎಂದು ಗೌರವಿಸಿದರು. ಉಚ್ಚವಾದ ಶ್ರೀಮಂತ ಕುಟುಂಬದಲ್ಲಿ ಹುಟ್ಟಿದ್ದರೂ, ಇನ್ನೂ ಲೌಕಿಕವಾಗಿ ಮೇಲೇರಲು ಸಮಸ್ತ ಅನುಕೂಲ ಹಾಗೂ ಅವಕಾಶಗಳಿದ್ದರೂ, ಸಾಮಾನ್ಯ ಜನತೆಯ ಮೇಲಿನ ಅಪಾರವಾದ ಅನುಕಂಪದಿಂದ, ಅದೆಲ್ಲವನ್ನೂ ಬಿಟ್ಟುಕೊಟ್ಟು ಸಾಮಾನ್ಯರಲ್ಲಿ ಸಾಮಾನ್ಯರಾಗಿ ಬದುಕಲು ಶ್ರಮಿಸಿದ ಅಪೂರ್ವ ವ್ಯಕ್ತಿ ಟಾಲ್‌ಸ್ಟಾಯ್.
ಟಾಲ್‌ಸ್ಟಾಯ್ ಹುಟ್ಟಿದ್ದು ಕ್ರಿ.ಶ. 1828ನೇ ಸೆಪ್ಟೆಂಬರ್ 9ನೇ ತಾರೀಕು ಯಸ್ನಾಯಾ ಪೋಲಾಯ್ನಾ ಎಂಬ ಹಳ್ಳಿಯಲ್ಲಿ. ಯಸ್ನಾಯಾ ಪೋಲಾಯ್ನಾ ಮಾಸ್ಕೋ ನಗರಕ್ಕೆ ಕೇವಲ 230 ಕಿಲೋಮೀಟರ್ ದೂರದಲ್ಲಿದೆ. ಇದು ದಟ್ಟವಾದ ಹಸುರಿನ ಏರಿಳಿವುಗಳಿಂದ ತುಂಬಿದ ಪರಿಸರದ ಒಂದು ಗ್ರಾಮ. ಟಾಲ್‌ಸ್ಟಾಯ್ ಮನೆತನದ ಹಿರಿಯೊಬ್ಬರು ರಷ್ಯಾದ ಚಕ್ರವರ್ತಿ ‘ಪೀಟರ್ ದಿ ಗ್ರೇಟ್’ನ ಆಪ್ತರಲ್ಲಿ ಒಬ್ಬರಾಗಿದ್ದರಂತೆ. ಟಾಲ್‌ಸ್ಟಾಯ್ ಹುಟ್ಟಿದ್ದು ಈ ಪರಂಪರೆಗೆ ಸೇರಿದ್ದ ಶ್ರೀಮಂತ ಕುಟುಂಬದಲ್ಲಿ. ಎಳೆಯಂದಿನಲ್ಲೇ ತಂದೆ-ತಾಯಂದಿರನ್ನು ಕಳೆದುಕೊಂಡ ಟಾಲ್‌ಸ್ಟಾಯ್ ದೂರದ ಬಂಧುವಾದ ಚಿಕ್ಕಮ್ಮನ ಆಸರೆಯಲ್ಲಿ ಬೆಳೆದರು. ಈ ಚಿಕ್ಕಮ್ಮನಿಗೆ ಸಾಧು ಸಂತರನ್ನು ಕಂಡರೆ, ಯಾತ್ರಿಕರನ್ನು ಕಂಡರೆ, ವಿಶೇಷ ಆಸಕ್ತಿ, ಗೌರವ. ಹೀಗಿರುವಾಗ ಮನೆಗೆ ಬಂದು ಹೋಗುವ ಈ ಯಾತ್ರಿಕರು, ಸಾಧು ಸಂತರು ಟಾಲ್‌ಸ್ಟಾಯ್ ಪಾಲಿಗೆ ಯಾವುದೋ ಅವ್ಯಕ್ತದ ಅನ್ವೇಷಣೆಗೆ ಹೊರಟ ಸಂಕೇತಗಳಂತೆ ತೋರಿದರು; ಅವರು ಹೇಳುತ್ತಿದ್ದ ಕತೆಗಳು ಈ ಹುಡುಗನ ಎಳೆಯಮನಸ್ಸಿನ ಮೇಲೆ ವಿಲಕ್ಷಣವಾದ ಪರಿಣಾಮವನ್ನು ಮಾಡಿದ್ದಲ್ಲದೆ, ಆತನಲ್ಲಿ ಒಂದು ಬಗೆಯ ಆನುಭಾವಿಕ ರುಚಿಯನ್ನು ಹುಟ್ಟಿಸಿದವು. ಎಳೆಯಂದು ಮೊಳೆತ ಈ ಹಗಲುಗನಸುತನ ಮತ್ತು ರಹಸ್ಯಾನ್ವೇಷಕ ಪ್ರವೃತ್ತಿಗಳು, ಟಾಲ್‌ಸ್ಟಾಯ್ ಅವರ ಬದುಕಿನ ಕೊನೆಯ ತನಕವೂ ಅಂಟಿಕೊಂಡವು.
ಶಾಲೆಯಲ್ಲಿ ಟಾಲ್‌ಸ್ಟಾಯ್ ತೀರ ದಡ್ಡನಾಗಿದ್ದ. ಶಾಲೆಯಲ್ಲಿ ಕಲಿಯುವ ಹಾಗೂ ತಿಳಿಯುವ ಬಗ್ಗೆ ಆತನಿಗೆ ಆಸಕ್ತಿಯೇ ಇರಲಿಲ್ಲ. ಓದಿಗಿಂತ ಸುತ್ತಣ ಬದುಕಿನ ಬಗ್ಗೆ ಆತನಿಗೆ ಕಳಕಳಿ. ಕೇವಲ ಐದು ವರ್ಷದ ಬಾಲಕನಾಗಿದ್ದಾಗಲೇ ಆತನಿಗೆ ಈ ಜೀವನ ಎಂಬುದು ಕೇವಲ ವಿನೋದವಲ್ಲ, ಅದೊಂದು ಗಂಭೀರವಾದ ಸಮಸ್ಯೆ ಎಂದು ಅನ್ನಿಸಿತ್ತು. ಹದಿನಾರನೆಯ ವಯಸ್ಸಿನ ವೇಳೆಗೆ, ಸಾಂಪ್ರದಾಯಿಕವಾದ ಧಾರ್ಮಿಕ ಸಂಸ್ಥೆ-ಚರ್ಚಿನ ಬಗ್ಗೆ, ನಂಬಿಕೆ ಹೊರಟುಹೋಗಿತ್ತು. ಯೌವನದ ಅವಧಿಯೆಲ್ಲ ಒಂದು ಬಗೆಯ ತಾತ್ವಿಕ ಅನ್ವೇಷಣೆಯಲ್ಲಿ ಕಳೆಯಿತು -ಧರ್ಮದಿಂದ ಆಜ್ಞೇಯತಾವಾದಕ್ಕೆ, ಆಜ್ಞೇಯತಾವಾದದಿಂದ ಶೂನ್ಯತಾವಾದಕ್ಕೆ, ಕಡೆಕಡೆಗೆ ನಿರಾಶೆಯ ಅಂಚಿಗೆ. ಹೀಗೆ ತಾಕಲಾಡಿತು ಅವನ ಮನಸ್ಸು. ಆಗಿನ್ನೂ ಟಾಲ್‌ಸ್ಟಾಯ್‌ಗೆ ಹತ್ತೊಂಬತ್ತು ವರ್ಷ.
ಹುಡುಗ ಟಾಲ್‌ಸ್ಟಾಯ್ ನೋಡಲು ಚೆಲುವನಲ್ಲ. ಎಲ್ಲರೂ ತನ್ನನ್ನು ಮೆಚ್ಚಬೇಕು ಎಂದು ಬಯಸಿದ ಈ ಹುಡುಗನಿಗೆ, ತನ್ನ ಕುರೂಪದ ಕಾರಣ ಯಾರೂ ತನ್ನನ್ನು ಪ್ರೀತಿಸುವುದಿಲ್ಲ ಅನ್ನಿಸಿತು. ಸಣ್ಣ ಸಣ್ಣ ಕಣ್ಣುಗಳು, ಬಾಗಿದ ಹಣೆ; ದಪ್ಪ ತುಟಿಗಳು; ಅಗಲವಾದ ಹೊಳ್ಳೆಯ ಮೂಗು; ಬಹು ದೊಡ್ಡ ಕಿವಿಗಳು. ತನ್ನ ಈ ರೂಪದ ಬಗ್ಗೆ ಜಿಗುಪ್ಸೆಗೊಂಡು ಒಮ್ಮೆ ಹತ್ಯೆ ಮಾಡಿಕೊಳ್ಳಲು ಮನಸ್ಸು ಮಾಡಿದ. ಆದರೆ ಸುದೈವದಿಂದ ಮನಸ್ಸು ಬದಲಾಯಿಸಿದ; ಸಾಯುವ ಚಿಂತೆಯಲ್ಲಿದ್ದ ಮನಸ್ಸನ್ನು ದುರ್ವ್ಯಸನಗಳಲ್ಲಿ ಮುಳುಗಿಸಿ ಬದುಕಿಗೆ ಅಂಟಿಕೊಂಡ. ಹೀಗಿರುವಾಗ ಸುಪ್ರಸಿದ್ಧ ತತ್ವಜ್ಞಾನಿ ರೂಸೋವಿನ ಬರಹಗಳು ಕಣ್ಣಿಗೆ ಬಿದ್ದುವು. ಚರ್ಚನ್ನು, ಧರ್ಮವನ್ನು ನಿರಾಕರಿಸಿದ್ದ ಟಾಲ್‌ಸ್ಟಾಯ್‌ಗೆ ರೂಸೋವಿನ ತಾತ್ವಿಕ ಚಿಂತನೆಗಳು ಆಕರ್ಷಕವಾಗಿ ಕಂಡವು. ಅವನೊಳಗಿನ ಸಾಹಿತಿಯನ್ನು ತಟ್ಟಿ ಎಚ್ಚರಿಸಿದುವು.
ರಷ್ಯನ್ ಜಮೀನ್ದಾರ (A Russian Land Lord) ಎಂಬ ಚೊಚ್ಚಲು ಕೃತಿಯನ್ನು ಟಾಲ್‌ಸ್ಟಾಯ್ ಬರೆದ. ಇದರಲ್ಲಿ ಟಾಲ್‌ಸ್ಟಾಯ್ ಎತ್ತಿದ ಸಮಸ್ಯೆ, ಅವನ ಬದುಕಿನ ಸ್ಥಾಯೀ ಸಮಸ್ಯೆಯಾಯಿತು. ಪ್ರವಾದಿಯ ಆದರ್ಶಕ್ಕೂ ಸಾಮಾನ್ಯ ಜನತೆಯ ಅಜ್ಞತೆಗೂ ನಿರಂತರವಾಗಿ ನಡೆಯುವ ಘರ್ಷಣೆಯೇ ಈ ಕೃತಿಯ ವಸ್ತು. ಈ ಕಾದಂಬರಿಯ ನಾಯಕ ರಾಜಕುಮಾರ ನೆಕ್ಲುದೋವ್ ವಿಶ್ವವಿದ್ಯಾಲಯದ ಶಿಕ್ಷಣಕ್ಕೆ ತಿಲಾಂಜಲಿ ಕೊಟ್ಟು, ರೈತರನ್ನು ಉದ್ಧಾರ ಮಾಡಲೆಂದು ಹಳ್ಳಿಗೆ ಬರುತ್ತಾನೆ. ಆದರೆ ಆತನ ರೈತರಿಗೆ ಸರ್ವಾಧಿಕಾರಿಯ ಒದೆತ, ಕಿರುಕುಳಗಳ ಪರಿಚಯವಿತ್ತೆ ಹೊರತು, ದಯಾಮಯನಾದ ಒಡೆಯನೊಬ್ಬನ ಮರುಕ ಮಾನವೀಯತೆಗಳ ಪರಿಚಯವಿರಲಿಲ್ಲ. ಹೀಗಾಗಿ ತಮ್ಮ ಬಗ್ಗೆ ಸೌಜನ್ಯದಿಂದ ನಡೆದುಕೊಂಡ ಒಡೆಯನ ನಡವಳಿಕೆಯನ್ನು ಶಂಕಿಸಿದರು; ಅವನ ನಡವಳಿಕೆಯ ಹಿಂದೆ ಏನೋ ಪಿತೂರಿ ಇದೆ ಎಂಬಂತೆ ಸಂದೇಹಿಸಿದರು; ಅವನೊಬ್ಬ ಮೂರ್ಖನೋ, ದುಷ್ಟನೋ ಎಂದು ಭಾವಿಸಿದರು. ನೆಕ್ಲುದೋವ್ ನಿರಾಶನಾಗಿ ಬದುಕಿಗೆ ಇಳಿಸಲಾರದ ಕನಸನ್ನು, ನಿರಾಶೆಯನ್ನು ಪಿಯಾನೋ ಬಾರಿಸುವ ನೆಪದಲ್ಲಿ ತೋಡಿಕೊಳ್ಳುತ್ತಾ ಕುಳಿತ.
ಒಂದು ಸ್ವಾರಸ್ಯವೆಂದರೆ ಟಾಲ್‌ಸ್ಟಾಯ್ ಬರೆದ ಮೊದಲ ಕೃತಿಯ ನಾಯಕನ ಹೆಸರು ನೆಕ್ಲುದೋವ್; ಆತ ಬರೆದ ಕಡೆಯ ಕಾದಂಬರಿ ‘ಪುನರುತ್ಥಾನ’ದ ನಾಯಕನ ಹೆಸರೂ ನೆಕ್ಲುದೋವ್. ಮೊದಲ ಕಾದಂಬರಿಯ ಮಹತ್ವಾಕಾಂಕ್ಷಿಯಾದ, ಕನಸುಗಾರನಾದ ನೆಕ್ಲುದೊವ್, ಕಡೆಯ ಕಾದಂಬರಿಯಲ್ಲಿ ತನ್ನ ಅಪೂರ್ವವಾದ ಆತ್ಮಶೋಧನೆಯಿಂದ ಒಂದು ನೈತಿಕ ಪರಿವರ್ತನೆಯ ಮೂಲಕ ಮಹಾವ್ಯಕ್ತಿಯಾಗುತ್ತಾನೆ. ಟಾಲ್‌ಸ್ಟಾಯ್ ಕಟ್ಟಿಕೊಂಡ ಕನಸಿಗೆ, ಸಾಧಿಸಬೇಕೆಂದ ಆದರ್ಶಗಳಿಗೆ ಮೂಲ-ಚೂಲಗಳಂತಿವೆ ಈ ಎರಡು ಕಾದಂಬರಿಗಳ ವಸ್ತು.
1851ರ ವೇಳೆಗೆ ತನ್ನ ಇಪ್ಪತ್ಮೂರನೆಯ ವಯಸ್ಸಿನಲ್ಲಿ ಟಾಲ್‌ಸ್ಟಾಯ್ ಹಣವನ್ನೆಲ್ಲಾ ಜೂಜಾಡಿ ಕಳೆದುಕೊಂಡು, ಸಾಲಗಾರರ ಕಾಟದಿಂದ ತಪ್ಪಿಸಿಕೊಳ್ಳಲು ಕಾಕ್‌ಸಸ್‌ಗೆ ಓಡಿಹೋದ; ಸೈನ್ಯಕ್ಕೆ ಸೇರಿದ. ಆ ಹೊತ್ತಿಗೆ ಅವನ ಅಣ್ಣ ಸೈನ್ಯದಲ್ಲಿ ಒಬ್ಬ ಅಧಿಕಾರಿಯಾಗಿದ್ದ. ಹತ್ತೊಂಬತ್ತರ ಹರೆಯದಲ್ಲಿ ಆತ್ಮಹತ್ಯೆಗೆ ಪ್ರಯತ್ನಿಸಿದ ಟಾಲ್‌ಸ್ಟಾಯ್, ಇಪ್ಪತ್ಮೂರನೆ ವಯಸ್ಸಿನಲ್ಲಿ, ಬದುಕಿನ ಬಗ್ಗೆ ಬಲವಾದ ನಂಬಿಕೆಯುಳ್ಳವನಾಗಿದ್ದ. ತನ್ನ ತಾತ್ವಿಕ ಚಿಂತನೆಗಳನ್ನೂ, ಪಾಪಪುಣ್ಯಗಳ ಪ್ರಜ್ಞೆಯನ್ನೂ ಗಾಳಿಗೆ ತೂರಿದ. ರಹಸ್ಯಾನ್ವೇಷಕ ಬುದ್ಧಿಯ ಜತೆಗೆ ರಮಣಿಯರ ವಿಲಾಸ ಈತನನ್ನು ಸೆಳೆಯಿತು. ಬದುಕು ರಂಜನೆಯ ರಂಗವಾಯಿತು. ಒಂದೊಂದು ಪ್ರಮತ್ತವಾದ ಅನುಭವವೂ ಪ್ರಿಯವಾಯಿತು. ‘ಚೆಲುವೆಯರೊಂದಿಗೆ ಬೆರೆಯುವುದು ಪಾಪ ಕಾರ್ಯವೇನಲ್ಲ, ಒಳ್ಳೆಯ ಆರೋಗ್ಯದ ಲಕ್ಷಣ’ ಎಂದು ತನ್ನ ಕೊಸ್ಸಾಕ್ಸ್ ಎಂಬ ಕೃತಿಯಲ್ಲಿ ಬರೆದು ತನ್ನನ್ನು ಸಮರ್ಥಿಸಿಕೊಂಡ!
ಪರ್ವತಾರಣ್ಯಗಳಲ್ಲಿ ಸುತ್ತಿದ; ರಣರಂಗದಲ್ಲಿ ಕಾದಾಡಿದ; ಜೂಜಾಡಿದ; ಕಂಡ ಕಂಡ ಹೆಣ್ಣುಗಳೊಂದಿಗೆ ರಮಿಸಿದ; ವಾಸ್ತವತೆಯ ಉಸಿರಾಡುವ ಕೃತಿಗಳನ್ನು ಬರೆದ. ಎಳೆಯಂದಿನ ಕತೆಗಳು, ಯುದ್ಧದ ಕತೆಗಳು, ಪ್ರಬಂಧ, ಪತ್ರ ಸಾಹಿತ್ಯ ಒಂದರ ಹಿಂದೊಂದು ಪುಂಖಾನುಪುಂಖವಾಗಿ ಹೊರಬಂದವು. ಸಾಹಿತ್ಯ ನಿರ್ಮಿತಿಯ ಈ ಕಾವಿನಲ್ಲಿ ತನ್ನ ಸೈನಿಕ ಕರ್ತವ್ಯಗಳ ಕಡೆಗೆ ಸರಿಯಾಗಿ ಗಮನ ಕೊಡಲಿಲ್ಲ. ಮಿಲಿಟರಿಯ ಸಮವಸ್ತ್ರ ಆತನಿಗೊಂದು ಹೆಮ್ಮೆಯ ವಸ್ತುವಾಗಿತ್ತು. ಅದರ ಹೊಳೆ ಹೊಳೆಯುವ ಕಂಚಿನ ಗುಂಡಿಗಳು, ತಗುಲಿಸಿಕೊಂಡ ಪದಕಗಳು ಇತ್ಯಾದಿಗಳ ಬಗ್ಗೆ ಇದ್ದ ಹೆಮ್ಮೆ, ಯುದ್ಧದ ಸ್ವರೂಪವನ್ನು ದಿನದಿಂದ ದಿನಕ್ಕೆ ಕಂಡಂತೆ ಜುಗುಪ್ಸೆಗೆ ತಿರುಗತೊಡಗಿತು. 23ನೆ ವಯಸ್ಸಿನಲ್ಲಿ ಯುದ್ಧದ ಅನುಭವವನ್ನು ಕುರಿತು ಆತ ಬರೆದ ‘ಧಾಳಿ’ ಎಂಬ ಕೃತಿಯಲ್ಲಿ ಮೊಟ್ಟಮೊದಲಿಗೆ ಸೈನಿಕ ಕಾರ್ಯಾಚರಣೆಗಳ ಬಗೆಗೆ ಆತನಿಗೆ ಹುಟ್ಟಿದ ಜುಗುಪ್ಸೆ ಹಾಗೂ ಪ್ರತಿಭಟನೆಯ ದನಿ ಕಾಣಿಸಿಕೊಂಡಿದೆ.
ಈ ಜಗತ್ತು ಎಷ್ಟು ಸುಂದರವಾಗಿದೆ! ಅಸೀಮವಾದ ನಕ್ಷತ್ರ ಖಚಿತವಾದ ಈ ಸುಂದರ ಪೃಥ್ವಿಯ ಮೇಲೆ ಜನ ಯಾಕೆ ಶಾಂತರಾಗಿ ಬದುಕಬಾರದು; ಇಂಥ ರೋಷ. ಇಂಥ ಹಗೆತನ, ಒಬ್ಬರನ್ನೊಬ್ಬರು ಕೊಲ್ಲುವ ದಾಹ, ಇರುವಾಗ-ಶಾಂತವಾಗಿ ಹೇಗೆ ಬದುಕಿಯಾರು? ಸೌಂದರ್ಯದ, ಶಿವದ ಅಭಿವ್ಯಕ್ತಿಯಾದ ಈ ನಿಸರ್ಗದ ಚೆಲುವಿನ ಸಾನ್ನಿನಿಧ್ಯದಿಂದ, ಸ್ಪರ್ಶದಿಂದ ಮಾನವ ಹೃದಯದ ದೌಷ್ಟ ಮಾಯವಾಗಬೇಕು. ಆದರೆ, ಆಗುತ್ತಿಲ್ಲವಲ್ಲ! -ಎಂದು ಕೊರಗಿದ.
ಆದರೆ ಮತ್ತೆ ಯುದ್ಧ ಕರೆಯಿತು. 1853 ರಲ್ಲಿ ರಷ್ಯಾಕ್ಕೂ ಟರ್ಕಿಗೂ ಯುದ್ಧ ಶುರುವಾಯಿತು. ಟಾಲ್‌ಸ್ಟಾಯ್ ಯುದ್ಧದಲ್ಲಿ ಭಾಗವಹಿಸಬೇಕಾಯಿತು. ದೇಶಭಕ್ತಿಯ ಅಮಲನ್ನೇರಿಸಿಕೊಂಡು ಟಾಲ್‌ಸ್ಟಾಯ್ ರಣರಂಗದಲ್ಲಿ ಶತ್ರುಗಳನ್ನು ತರಿದು ಹಾಕಿದ. ಈ ಕೊಲೆಯ ಉರುಬು ತಗ್ಗಿದ ಮೇಲೆ ಕೂತು ಮತ್ತೆ ಯೋಚಿಸಿದ. ದೇಶಭಕ್ತಿಯ ಹೆಸರಿನಲ್ಲಿ ಶಿಸ್ತಿನಿಂದ ನಡೆಯುವ ಈ ಕೊಲೆಪಾತಕ ಕಾರ್ಯಗಳನ್ನು ಯುದ್ಧ ಎಂದು ಗಂಭೀರವಾದ ಹೆಸರಿನಿಂದ ಕರೆಯಬೇಕೆ ಅನ್ನಿಸಿತು. ಯುದ್ಧದ ಬಗ್ಗೆ ಹಿಂದೆಯೇ ಮೊಳೆತ ತಿರಸ್ಕಾರ ಈ ವೇಳೆಗೆ ಹಣ್ಣಾಯಿತು. 1855 ಮಾರ್ಚಿ 5ನೇ ತಾರೀಖು ತನ್ನ ದಿನಚರಿ ಪುಸ್ತಕದಲ್ಲಿ ಹೀಗೆ ಬರೆದುಕೊಂಡ: ‘ಈಗ ನನಗೊಂದು ಬಹು ದೊಡ್ಡ ವಿಚಾರ ಹೊಳೆದಿದೆ; ಇದಕ್ಕಾಗಿ ನಾನು ನನ್ನ ಇಡೀ ಜೀವಮಾನವನ್ನು ಮುಡಿಪಾಗಿಡುತ್ತೇನೆ. ಇದು ಹೊಸಧರ್ಮವೊಂದರ ಮೂಲಾಧಾರವಾಗಿದೆ. ಅದೆಂದರೆ ಪ್ರತಿಭಟನಾರಾಹಿತ್ಯ ಧರ್ಮ’ ‘ಅಂತರ್ ರಾಷ್ಟ್ರೀಯ ಭ್ರಾತೃತ್ವ, ವಿಶ್ವಶಾಂತಿ.’
1856ರಲ್ಲಿ ಟಾಲ್‌ಸ್ಟಾಯ್ ಸೈನ್ಯಕ್ಕೆ ರಾಜೀನಾಮೆ ಕೊಟ್ಟು ಸೆಯಿಂಟ್ ಪೀಟರ‍್ಸ್‌ಬರ್ಗ್ (ಇಂದಿನ ಲೆನಿನ್‌ಗ್ರಾಡ್)ಗೆ ಬಂದ. ಈ ವೇಳೆಗಾಗಲೇ ಒಳ್ಳೆಯ ಯೋಧನೆಂದೂ, ಸಾಹಿತಿಯೆಂದೂ ಟಾಲ್‌ಸ್ಟಾಯ್ ಹೆಸರಾಗಿದ್ದ. ಅಂದಿನ ಹೆಸರಾಂತ ಲೇಖಕರು, ಕಲಾವಿದರು ಈತನನ್ನು ಗೌರವದಿಂದ ಬರಮಾಡಿಕೊಂಡರು; ತಮ್ಮ ಅಂತರಂಗದ ವಲಯಕ್ಕೆ ಸೇರಿಸಿಕೊಂಡರು. ಆದರೆ ಅವರು ಟಾಲ್‌ಸ್ಟಾಯ್ ಪಾಲಿಗೆ, ಒಂದಿಷ್ಟೂ ಹೊಂದಿಕೆಯಿಲ್ಲದ, ಪ್ರತಿಷ್ಠೆಯ ಪೂಜಕರಂತೆ ತೋರಿದರು. ಅವರು ತಾವೇ ಒಂದು ವಿಶಿಷ್ಟ ವರ್ಗಕ್ಕೆ ಸೇರಿದವರಂತೆ, ತಮ್ಮ ಕಾಲದ ಬುದ್ಧಿಮತ್ತೆಯ ಅತಿ ಮಾನುಷ ವ್ಯಕ್ತಿಗಳೆಂಬಂತೆ, ಸೃಷ್ಟಿಯ ವೈಭವ ಹಾಗೂ ಕಿರೀಟಗಳೆಂಬಂತೆ ಭ್ರಮೆಯಲ್ಲಿದ್ದರು. ತಾವು ಬರೆಯುವುದು ಬುದ್ಧಿವಂತರಾದ ಕೆಲವರಿಗೆ ಮಾತ್ರವೇ ಎಂದುಕೊಂಡು, ಇನ್ನಿತರ ಜನ ತಮ್ಮ ಉಜ್ವಲ ಭಾವನೆಗಳಲ್ಲಿ ಪಾಲುಗೊಳ್ಳಲು ಅಸಮರ್ಥರಾದ ದಡ್ಡರೆಂದೂ, ಅಯೋಗ್ಯರೆಂದೂ ಭಾವಿಸಿದರು. ಸಾಹಿತ್ಯದ ಬಗ್ಗೆ ಟಾಲ್‌ಸ್ಟಾಯ್ ತಾಳಿದ ನಿಲುವಿಗೂ, ಅಂದಿನ ಸಮಕಾಲೀನರಾದ ಕೆಲವು ಲೇಖಕರ ನಿಲುವಿಗೂ ಹೊಂದಿಕೆಯಾಗಲಿಲ್ಲ. ಟಾಲ್‌ಸ್ಟಾಯ್ ಪಾಲಿಗೆ ಸಾಹಿತ್ಯ ಎಂಬುದೊಂದು ಧಾರ್ಮಿಕ ಕ್ರಿಯೆ. ಸೌಂದರ್ಯ ಮತ್ತು ತಿಳಿವುಗಳು ಎಲ್ಲರ ನಿಲುವಿಗೂ ಎಟುಕುವಂತಿರಬೇಕು ಎಂಬುದು ಆತನ ಹಂಬಲ. ಕೆಲವರಿಗಾಗಿ ಅಲ್ಲ; ಎಲ್ಲರಿಗಾಗಿ, ಎಲ್ಲರ ಶ್ರೇಯಸ್ಸಿಗಾಗಿ, ಶಿಕ್ಷಣಕ್ಕಾಗಿ ತಾನು ಬರೆಯುತ್ತೇನೆ ಎಂದುಕೊಂಡ.
ಜನ ಸಾಮಾನ್ಯರಿಗಾಗಿ ತಾನು ಬರೆಯುತ್ತೇನೆ ಎಂದುಕೊಂಡ ಮಾತ್ರಕ್ಕೆ ಆ ಜನಸಾಮಾನ್ಯರೆಲ್ಲ ಬೃಹಸ್ಪತಿಗಳೆಂದೇನೂ ಟಾಲ್‌ಸ್ಟಾಯ್ ಭಾವಿಸಿರಲಿಲ್ಲ. ಅವರು ಏನು-ಎತ್ತ ಎಂಬುದನ್ನು ಎಲ್ಲರಿಗಿಂತ ಮಿಗಿಲಾಗಿ ಆತ ಬಲ್ಲವನಾಗಿದ್ದ. ಅವರ ಬದುಕಿನ ಪಶುಪ್ರವೃತ್ತಿಗಳ, ವಿಕೃತ ಮುಖಗಳ ಪರಿಚಯ ಅವನಿಗಿತ್ತು. ಆದರೂ ಅವರೆಲ್ಲ ಬೆಳಕಿಗೆ ಹಾರೈಸುವವರು; ದಾರಿ ತೋರಿಸುವ ನಿರ್ದೇಶಕನೊಬ್ಬನಿಗಾಗಿ ಅವರು ಕಾಯುತ್ತಿದ್ದಾರೆ, ಎಂದು ಟಾಲ್‌ಸ್ಟಾಯ್ ಭಾವಿಸಿದ. ಜನದ ಹತ್ತಿರ ತಾನು ಹೋಗಬೇಕು, ಅವರೊಂದಿಗೆ ಬೆರೆಯಬೇಕು, ಅವರಿಗೇನು ಬೇಕು ಎಂಬುದನ್ನು ಸ್ವತಃ ತಿಳಿಯಬೇಕು; ಅವರಿಗೆ ಸಹಾಯ ಮಾಡಬೇಕು; ಅವರ ಅಂತರಂಗದ ಆಶಯಗಳ ಪೂರೈಕೆಗೆ ಸಾಧ್ಯವಾದಷ್ಟು ಪ್ರಯತ್ನಿಸಬೇಕು ಎಂದು ಸಂಕಲ್ಪಿಸಿದ.
ನಗರದಿಂದ ತನ್ನ ಹಳ್ಳಿ ಯಾಸ್ನಾಯಾ ಪೋಲಾಯ್ನಾಕ್ಕೆ ಹಿಂದಿರುಗಿದ. ತನ್ನ ರೈತರಿಗೆ ಶಿಕ್ಷಣ ಕೊಡಲೆಂದು ಶಾಲೆಯೊಂದನ್ನು ತೆರೆದ. ಅವರಿಗೆ ತಾನು ಗುರು ಅಲ್ಲ ಸಹೋದ್ಯೋಗಿ ಎಂಬುದನ್ನು ಮನದಟ್ಟು ಮಾಡಿಕೊಡಲು ಪ್ರಯತ್ನಿಸಿದ. ಅವರೆಲ್ಲರೂ ಕಲಿಯಲು ನಿಂತ ಮಕ್ಕಳಂತೆ, ಜೀವನದ ರಹಸ್ಯ ಪುಸ್ತಕದ ಮೊದಲಕ್ಷರಗಳನ್ನು ತೊದಲುತ್ತಿದ್ದಾರೆ ಎಂದು ಭಾವಿಸಿದ.
ಆದರೆ ಪೋಲೀಸಿನವರು ಬಂದು ಬಲವಂತವಾಗಿ ಶಾಲೆಯನ್ನು ಮುಚ್ಚಬೇಕಾಯಿತು! ರೈತರನ್ನು ಅವರ ಅಜ್ಞಾನದಲ್ಲಿ ನೆಮ್ಮದಿಯಾಗಿರಲು ಬಿಡಿ ಎಂದು ಟಾಲ್‌ಸ್ಟಾಯ್‌ಗೆ ಬುದ್ಧಿ ಹೇಳಲಾಯಿತು. ಆನಂತರ ಟಾಲ್‌ಸ್ಟಾಯ್‌ಗೆ ಹತಾಶೆಯ ದಿನಗಳು. ಇಬ್ಬರು ತಮ್ಮಂದಿರು ಕ್ಷಯರೋಗದಿಂದ ತೀರಿಕೊಂಡರು; ತನಗೂ ಅದೇ ಖಾಯಿಲೆಯೋ ಏನೋ ಎಂಬ ಅನುಮಾನ ಬಂತು. ಒಳ್ಳೆಯದರಲ್ಲಿ ಮಾತ್ರ ಅಲ್ಲ, ಎಲ್ಲದರಲ್ಲೂ ಟಾಲ್‌ಸ್ಟಾಯ್‌ಗೆ ನಂಬಿಕೆ ಕುಸಿಯಿತು. ಆತ್ಮಹತ್ಯೆಯನ್ನೇಕೆ ಮಾಡಿಕೊಳ್ಳಬಾರದು ಎಂಬ ವಿಚಾರ ಮತ್ತೆ ತಲೆಯಲ್ಲಿ ಸುಳಿದಾಡಿತು.
ಆದರೆ ಹದಿನೇಳರ ಚೆಲುವೆ, ಸೋಫಿಯಾ ಅಂದ್ರೆಯೇವಾ ಬೆಹ್ರನ್ ಎಂಬಾಕೆ ಟಾಲ್‌ಸ್ಟಾಯ್‌ನ ಕಣ್ಣನ್ನು ಸೆಳೆದಳು. ಅವಳ ವಯಸ್ಸಿನ ಎರಡರಷ್ಟು ವಯಸ್ಸಾಗಿತ್ತು ಆಗ ಟಾಲ್‌ಸ್ಟಾಯ್‌ಗೆ. ಆದರೂ ಆಕೆಯನ್ನು ಮದುವೆಯಾದ. ಮುಂದೆ ಐವತ್ತು ವರ್ಷಗಳಷ್ಟು ದೀರ್ಘಕಾಲ ಸೋಫಿಯಾ ಆತನ ಬಾಳಸಂಗಾತಿಯಾದಳು. ಆಕೆ ಲೇಖಕನಿಗೆ ನಿಜವಾದ ಪತ್ನಿಯಾದಳು. ಟಾಲ್‌ಸ್ಟಾಯ್ ಹೇಳಿಕೊಂಡು ಹೋದದ್ದನ್ನು ಬೇಸರಿಸದೆ ಕೂತು ಹಸ್ತಪ್ರತಿ ತಯಾರಿಸಿದಳು. ಅವನ ಕಾದಂಬರಿಗಳಲ್ಲಿ ನಿರ್ಮಿಸಿದ ಎಷ್ಟೋ ಪಾತ್ರಗಳಿಗೆ ಮಾದರಿಯಾದಳು.
ಈ ಸುಖದ ದಿನಗಳಲ್ಲಿ ಎರಡು ಮಹತ್ ಕೃತಿಗಳನ್ನು ಬರೆದ: ‘ಅನಾಕೆರಿನೀನಾ’ ಮತ್ತು ‘ವಾರ್ ಅಂಡ್ ಪೀಸ್’- ಕಾದಂಬರಿಗಳು ಅವು. ಮೊದಲನೆಯದು ಒಂದು ಅದಮ್ಯ ಪ್ರಣಯದ ದುರಂತ ಕತೆ; ಎರಡನೆಯದು ಇಡೀ ಮಾನವ ಜನಾಂಗದ ಹೋರಾಟದ ಕತೆ. ಬರ್ಬರತೆಯಿಂದ ನಾಗರಿಕತೆಗೆ, ರಕ್ತಪಾತದಿಂದ ಸಾಮರಸ್ಯಕ್ಕೆ, ಹಗೆತನದಿಂದ ಪ್ರೇಮಕ್ಕೆ-ಮಾನವತೆಗೆ ಹೋರಾಡುತ್ತಾ ಸಾಗಿದ ಪರಿಯನ್ನು ಮಹಾಕಾವ್ಯ ಸದೃಶವಾದ ಈ ಕಾದಂಬರಿಯಲ್ಲಿ ಕಾಣಬಹುದು.
1877ರಲ್ಲಿ ಅನಾಕೆರಿನೀನಾ ಕಾದಂಬರಿಯನ್ನು ಬರೆದು ಮುಗಿಸಿದ ಮೇಲೆ ಆತನ ಅಂತರಂಗದಲ್ಲಿ ಒಂದು ನೈತಿಕ ಆಂದೋಲನವೇ ನಡೆಯಿತು. 1879ರಲ್ಲಿ ಆತ ಬರೆದ ‘ತಪ್ಪೊಪ್ಪಿಗೆ’ (Confession) ಅವನ ಸಂದೇಹ ಹಾಗೂ ನಿಷ್ಠುರ ಸ್ವಾತ್ಮ ವಿಮರ್ಶೆಯ ದಾಖಲೆಯಾಗಿದೆ. ಅದರಲ್ಲಿ ಆತ ಒಪ್ಪಿಕೊಂಡಿದ್ದಾನೆ: ತನಗೆ ಸುಖವಾಗಿರಲು ಬೇಕಾದ ಎಲ್ಲ ಅನುಕೂಲಗಳೂ ಇವೆ; ಪ್ರೀತಿಯ ಹೆಂಡತಿ, ಸುಖವಾದ ಸಂಸಾರ, ಸಂಪತ್ತು, ಕೀರ್ತಿ, ಒಳ್ಳೆಯ ಆರೋಗ್ಯ ಎಲ್ಲವೂ ಇದೆ. ಹೀಗಿದ್ದೂ ತನಗೆ ಈ ಜೀವನ ಅರ್ಥಹೀನವೆಂದೂ, ಯಾರೋ ತನ್ನನ್ನು ಒಡ್ಡಿ ಆಡುವ ಒಂದು ಆಟವೆಂದೂ ಅನ್ನಿಸತೊಡಗಿದೆ. ಹೀಗೇ ಬದುಕುತ್ತಿರುವುದು ಸರಿಯೇ? ಇದಕ್ಕೊಂದು ಅರ್ಥ ಇದೆಯೇ? ಅನಿವಾರ್ಯವಾದ ಮೃತ್ಯು ನಾಶಮಾಡಲಾಗದ ಅರ್ಥವಂತಿಕೆಯೇನಾದರೂ ಇದಕ್ಕೆ ಉಂಟೆ?
ಮುಂದೆ ಕೆಲವು ವರ್ಷಗಳ ಕಾಲ ಆತ ಆಳವಾದ ಅಧ್ಯಯನದಲ್ಲಿ ಮುಳುಗಿದ. ಜಗತ್ತಿನ ವಿಚಾರವಂತರ ಒರೆಗಲ್ಲಿನ ಮೇಲೆ ತನ್ನ ಸಂದೇಹಗಳನ್ನು ಉಜ್ಜಿ ನೋಡಿದ. ಕೆಸ್ತಧರ್ಮವನ್ನು ವಿಶೇಷವಾಗಿ ಅಭ್ಯಾಸ ಮಾಡಿದ. ಅದರಿಂದೇನೂ ಪ್ರಯೋಜನವಾಗಲಿಲ್ಲ; ಪ್ರಚಲಿತ ಕೆಸ್ತ ಧರ್ಮ ಸಂಸ್ಥೆಗಳ ಮೇಲೆ ತಿರಸ್ಕಾರ ಬೆಳೆಯಿತು. ಚರ್ಚು ಕೆಸ್ತಧರ್ಮಕ್ಕೆ ಎಳ್ಳಷ್ಟೂ ಅನುಸಾರಿಯಾಗಿ ನಡೆಯುತ್ತಿಲ್ಲ. ಮನುಷ್ಯನ ಶ್ರೇಯಸ್ಸಿಗೆ ದಾರಿ ತೋರುವ ಪ್ರಯತ್ನವನ್ನು ಮಾಡುತ್ತಿಲ್ಲ. ಚರ್ಚು ಎಂಬುದೊಂದು ವ್ಯಾಪಾರ ಸಂಸ್ಥೆ. ಪಾದ್ರಿಗಳು ಆಳರಸರ ಜೀತದಾಳುಗಳೇ ಹೊರತು ಕ್ರಿಸ್ತನ ನಿಜವಾದ ಭಕ್ತರಲ್ಲ. ನಿಜವಾದ ಕ್ರಿಶ್ಚಿಯನ್ ಧರ್ಮವು ಈ ಚರ್ಚುಗಳಿಂದ ಎಂದೋ ಮೂಲೋತ್ಪಾಟನವಾಗಿದೆ ಎಂದು ಸಾರಿದ.
ಚರ್ಚನ್ನು ನಿರಾಕರಿಸಿ ಟಾಲ್‌ಸ್ಟಾಯ್ ದೇವರತ್ತ ತಿರುಗಿದ; ಹೊಸ ಧರ್ಮದ ಪ್ರವಾದಿಯಾದ. ಎಲ್ಲ ಪೂಜಾರಿಗಳನ್ನು, ಪೂಜಾಮಂತ್ರಗಳನ್ನು, ದೇಗುಲಗಳನ್ನು ನಿರಾಕರಿಸುವುದೇ ಆತನ ಹೊಸ ಸಿದ್ಧಾಂತದ ಉದ್ದೇಶವಾಯಿತು. ಟಾಲ್‌ಸ್ಟಾಯ್ ರೂಪಿಸಿಕೊಂಡ ಸಿದ್ಧಾಂತವನ್ನು ಸರಳವಾದ ಮಾತುಗಳಲ್ಲಿ ಹೀಗೆ ಹೇಳಬಹುದು: ಬದುಕಿನ ಉದ್ದೇಶ ನಮ್ಮೊಳಗಿನ ಕೀಳು ಸ್ತರದ ಪಾಶವೀ ಪ್ರವೃತ್ತಿಗಳನ್ನು ಪೋಷಿಸುವುದಲ್ಲ, ಹಿರಿದಾದದ್ದರೊಂದಿಗೆ ಈ ಬದುಕನ್ನು ಬೆಸೆಯುವುದು. ಯಾರೊಂದಿಗೂ ಹಗೆತನ ಬೇಡ; ಕ್ರೋಧಕ್ಕೆ ಅವಕಾಶ ಕೊಡುವುದು ಬೇಡ; ಮತ್ತು ಹಿಂಸೆಗೆ ಅವಕಾಶ ಬೇಡ. ಇದು ಧರ್ಮದ ನೇತ್ಯಾತ್ಮಕ ರೂಪ. ಆದರೆ ವಾಸ್ತವವಾಗಿ ಅವನದು ಪ್ರತಿಭಟನೆಯ ಧರ್ಮವಾಗಿತ್ತು. ಶ್ರೀಮಂತರ ದುಂದುಗಾರಿಕೆಯ ವಿರುದ್ಧ, ಪೂಜಾರಿಗಳ ಕುತಂತ್ರದ ವಿರುದ್ಧ, ಜಾರ್ ದೊರೆಗಳ ದಬ್ಬಾಳಿಕೆಯ ವಿರುದ್ಧ, ಪ್ರತಿಭಟಿಸಿದ. ಧರ್ಮವನ್ನು, ಪೂಜಾರಿಗಳನ್ನು ಮತ್ತು ರಾಜರನ್ನು ಹೀಗೆ ದಿಟ್ಟತನದಿಂದ ಎದುರಿಸಿದ ಟಾಲ್‌ಸ್ಟಾಯ್ ನಿಜವಾದ ಅರ್ಥದಲ್ಲಿ ಕಮ್ಯೂನಿಸ್ಟ್ ಆದ; ತನ್ನ ಕೀರ್ತಿಯನ್ನು, ಐಶ್ವರ್ಯವನ್ನು, ಸ್ಥಾನಮಾನಗಳನ್ನು, ಕಡೆಗೆ ತನ್ನ ಪ್ರಾಣವನ್ನು ಕೂಡ ಮಾನವ ಸೇವೆಗೆ ತ್ಯಜಿಸಲು ಸಿದ್ಧನಾದ. ಶ್ರೀಮಂತಿಕೆಯನ್ನು ಸೂಚಿಸುವ ಬಟ್ಟೆ ಬರೆಗಳನ್ನು ವರ್ಜಿಸಿ, ಸಾಮಾನ್ಯ ರೈತರಂತೆ ಬಟ್ಟೆ ಹಾಕಿಕೊಂಡ, ಅವರಂತೆ ಬದುಕಿದ. ಶ್ರೀಮಂತಿಕೆಯ ಸುಖಗಳನ್ನು ವರ್ಜಿಸಿ ಸಾಮಾನ್ಯರ ನಿಲುವಿಗಿಳಿದು ಅವರ ಸುಖದುಃಖಗಳಲ್ಲಿ ಪಾಲುಗಾರನಾದ. ಹೀಗೆ ನಡೆದುಕೊಂಡು ಮನುಷ್ಯತ್ವವನ್ನು ಮಹತ್ತಾದ ನೈತಿಕ ನೆಲೆಗೆ ಏರಿಸಿದ.
ಅರವತ್ತನೆಯ ವಯಸ್ಸಿನಲ್ಲಿ ಟಾಲ್‌ಸ್ಟಾಯ್ ಮದ್ಯ-ಮಾಂಸ ಸೇವನೆಯನ್ನು ಸಂಪೂರ್ಣವಾಗಿ ವರ್ಜಿಸಿದ; ಮಾನವರು ನಿಶ್ಯೇಷವಾಗಿ ಇಂದ್ರಿಯ ನಿಗ್ರಹವನ್ನು ಅಭ್ಯಾಸ ಮಾಡಬೇಕು ಎಂದು ಬೋಧಿಸಿದ. ಯಸ್ನಾಯಾ ಪೋಲಾಯ್ನಾದ ಸಾಮಾನ್ಯ ರೈತರೇ ಇವನ ಪ್ರಥಮ ಶಿಷ್ಯರಾದರು. ಟಾಲ್‌ಸ್ಟಾಯ್ ಮಾತಿಗೆ ಕಟ್ಟುಬಿದ್ದು, ಒಲ್ಲದ ಮನಸ್ಸಿನಿಂದ ತಮ್ಮ ಚುಟ್ಟಾಗಳನ್ನು ಒಪ್ಪಿಸಿ, ಇನ್ನು ಮುಂದೆ ಮದ್ಯಪಾನ ಮಾಡುವುದಿಲ್ಲವೆಂದು ಆಣೆ ಮಾಡಿದರು. ಆದರೆ ಸ್ವಲ್ಪ ಕಾಲದಲ್ಲೇ ಕದ್ದು ಚುಟ್ಟ ಸೇದುವ, ಯಾರಿಗೂ ಕಾಣದಂತೆ ಕುಡಿಯುವ ಚಟಕ್ಕೆ ಇಳಿದರು! ಟಾಲ್‌ಸ್ಟಾಯ್ ಎಲ್ಲ ರೀತಿಯ ಹಿಂಸೆಗಳನ್ನೂ ವಿರೋಧಿಸಿದ. ಯುದ್ಧಗಳನ್ನು ಖಂಡಿಸಿದ; ಯುದ್ಧದ ಹಿನ್ನೆಲೆಗಿರುವ ದೇಶಪ್ರೇಮ ಎಂಬುದೊಂದು ಸುಳ್ಳು ಭಾವಾತಿರೇಕ ಎಂದು ವರ್ಣಿಸಿದ. ಅಪರಾಧಿಗಳನ್ನು ಶಿಕ್ಷಿಸುವುದರಿಂದ ಸುಧಾರಣೆ ಸಾಧ್ಯವಿಲ್ಲ ಎಂದು ವಾದಿಸಿದ. ಕೆಸ್ತಧರ್ಮವನ್ನು ಹತ್ತೊಂಬತ್ತನೆಯ ಶತಮಾನದ ಪರಿಭಾಷೆಯಲ್ಲಿ ವ್ಯಾಖ್ಯಾನ ಮಾಡಿದ. ಕ್ರಿಸ್ತ ಪ್ರಯತ್ನಪಟ್ಟದ್ದು ದೇವರ ರಾಜ್ಯದ ಸ್ಥಾಪನೆಗೆ; ಟಾಲ್‌ಸ್ಟಾಯ್ ಪ್ರಯತ್ನಪಟ್ಟದ್ದು ನಿಜವಾದ ಮಾನವರ ರಾಜ್ಯ ಸ್ಥಾಪನೆಗೆ.
ಜಗತ್ತು ಟಾಲ್‌ಸ್ಟಾಯ್ ಅನ್ನು ನೂತನ ಪ್ರವಾದಿ ಎಂದು ಕೊಂಡಾಡಿತು. ಆದರೆ ಅವನ ಮನೆ ಮಂದಿ ಅವನನ್ನು ಒಬ್ಬ ಹುಚ್ಚ ಎಂದು ಕರೆದರು. ಟಾಲ್‌ಸ್ಟಾಯ್ ಕ್ರಮೇಣ ತನ್ನ ಬುದ್ಧಿಯನ್ನು ಕಳೆದುಕೊಳ್ಳುತ್ತಿದ್ದಾನೆ ಅನ್ನಿಸಿತು ಅವನ ಹೆಂಡತಿಗೆ. ಮಾನವರೆಲ್ಲರೂ ಸಹ ಸೋದರರೆಂದು ಟಾಲ್‌ಸ್ಟಾಯ್ ಮಾತನಾಡಿದಾಗ, ಅವನ ಮಕ್ಕಳು ನಕ್ಕು ಮುಖ ತಿರುವಿದರು. ಸಂಪೂರ್ಣ ಸ್ವಾರ್ಥತ್ಯಾಗದ ಬದುಕು ಬುದ್ಧಿಗೇಡಿನ ಸೂಚನೆ ಎಂದು ಆತನ ಮನೆಯವರೆಲ್ಲ ತಿಳಿದರು: ಬೇಕಾದರೆ ಟಾಲ್‌ಸ್ಟಾಯ್ ಒಬ್ಬನೇ ಎಲ್ಲವನ್ನೂ ತ್ಯಜಿಸಿ ನಿರ್ಲಿಪ್ತನಾಗಿ ಬದುಕಲಿ, ಆದರೆ ತನ್ನ ಮನೆಮಂದಿಯೆಲ್ಲ ಅವನಂತೆ ಬದುಕಬೇಕೆಂದು ನಿರೀಕ್ಷಿಸಲು ಟಾಲ್‌ಸ್ಟಾಯ್‌ಗೆ ಏನು ಅಧಿಕಾರ ಎಂದು ಪ್ರಶ್ನಿಸಿದರು. ಹೀಗಾಗಿ ಟಾಲ್‌ಸ್ಟಾಯ್ ತನ್ನ ಮನೆಯಲ್ಲೇ ಅಪರಿಚಿತನಾದ. ಏಕಾಂಗಿಯಾದ.
ವಯಸ್ಸಾದಂತೆ ಟಾಲ್‌ಸ್ಟಾಯ್‌ನ ಉಪದೇಶಗಳಲ್ಲಿ ಒಂದು ಬಗೆಯ ವಿಲಕ್ಷಣ ಸ್ವರ ಬೆರೆಯಿತು. ತನ್ನವರಿಂದ ಪರಿತ್ಯಕ್ತನಾದ ಟಾಲ್‌ಸ್ಟಾಯ್ ಕ್ರಮೇಣ ಎಲ್ಲ ಲೌಕಿಕ ವ್ಯವಹಾರಗಳನ್ನೂ ಕಡಿದುಕೊಂಡು ಬದುಕನ್ನು ಒಂದು ಬಗೆಯ ಆನುಭಾವಿಕ ಪ್ರಭೆಯಲ್ಲಿ ಕಾಣತೊಡಗಿದ. ಅವನ ದೃಷ್ಟಿ ಅವಾಸ್ತವಿಕ ನೈತಿಕ ನೆಲೆಗೆ ಏರಿತು. ಅವನ ಕಟ್ಟಕಡೆಯ ಕಾದಂಬರಿ ‘ಪುನರುತ್ಥಾನ’ ಇದನ್ನೇ ಪ್ರತಿಪಾದಿಸಿದೆ.
ದಿನಕಳೆದಂತೆ ಕಡೆಯ ಹತ್ತು ವರ್ಷಗಳು ಸಾಮಾಜಿಕ ರಾಜಕೀಯ ನೈತಿಕ ಆದರ್ಶಗಳ ಪ್ರತಿಪಾದನೆಗೆ ಮೀಸಲಾದುವು. ಧರ್ಮದಲ್ಲಿ ನವೋದಯ, ಯುದ್ಧ, ಶಾಂತಿಸಮ್ಮೇಳನ, ನಿಶ್ಯಸ್ತ್ರೀಕರಣ, ಅಹಿಂಸೆ, ಅಪರಾಧಗಳು, ಸರ್ಕಾರದ ಧೋರಣೆಗಳು, ವಸಾಹತುಷಾಹಿ, ಪಾನನಿರೋಧ, ಧೂಮಪಾನದ ಅಪಾಯಗಳು ಕಲೆಗಳಿಂದಾಗುವ ಹಾನಿ ಇತ್ಯಾದಿ ಹಲವು ವಿಷಯಗಳನ್ನು ಕುರಿತು ಬರೆದ. ಜಗತ್ತಿನಲ್ಲಿ ಶಾಂತಿ ಸ್ಥಾಪನೆಯಾಗಬೇಕಾದರೆ ಮೊದಲು ಎಲ್ಲ ಬಗೆಯ ಸಮರ ಸಿದ್ಧತೆಗಳನ್ನೂ ಸೈನ್ಯಗಳನ್ನೂ ರದ್ದು ಮಾಡಬೇಕೆಂದು ಸಲಹೆ ಮಾಡಿದ; ಧರ್ಮಸಂಸ್ಥೆಗಳ ಸುಲಿಗೆಯನ್ನು ಖಂಡಿಸಿದ. ಇದರ ಫಲವಾಗಿ ಅವನಿಗೆ ದೊರೆತದ್ದು ಸಾಂಪ್ರದಾಯಿಕ ಧರ್ಮಸಂಸ್ಥೆಯಾದ ಚರ್ಚ್‌ನಿಂದ ಉಚ್ಚಾಟನೆ; ಮತ್ತು ಅಂದಿನ ಸರ್ಕಾರದ ಅಸಮಾಧಾನ.
ಬರುಬರುತ್ತಾ ಲೇಖಕನಾದ ಟಾಲ್‌ಸ್ಟಾಯ್ ದಾರ್ಶನಿಕನಾದ. 1910ನೆ ಅಕ್ಟೋಬರ್ 28ನೆಯ ತಾರೀಖು ಬೆಳಗಿನ ಜಾವ ಐದು ಘಂಟೆಗೆ, ತನ್ನ 82ನೆ ವಯಸ್ಸಿನಲ್ಲಿ ಮನೆಬಿಟ್ಟು ನಿರ್ಜನತೆಯಲ್ಲಿ ಶಾಂತಿಯನ್ನರಸಲು ಪಲಾಯನ ಮಾಡಿದ. ಸಾಮಾನ್ಯ ರೈತರಂತೆ ಉಡುಪು ತೊಟ್ಟು, ಹಣ್ಣಾದ ಶರೀರವನ್ನು ಬಳಲಿಸಿ ಅಲೆದಾಡಿದ. ಅನುಕಂಪೆಗೆ, ಕರುಣೆಗೆ ಬೆಲೆ ಕೊಟ್ಟ ಈ ಮನುಷ್ಯ, ಮನೆಮಂದಿಯ ಕನಿಕರವನ್ನು ತಿರಸ್ಕರಿಸಿ ದೂರ ದೂರ ಓಡಿದ. ಏಕಾಂಗಿಯಾಗಿ ಸಾಯಲು ಆಶಿಸಿದ. ಹಳ್ಳಿಯಿಂದ ಹಳ್ಳಿಗೆ ಅಲೆದ. ಒಮ್ಮೆ ದಾರಿಯಲ್ಲಿ ಕುಸಿದು ಬಿದ್ದ. ಮತ್ತೆ ಚೇತರಿಸಿಕೊಳ್ಳಲಿಲ್ಲ. ಕಡೆಯಲ್ಲಿ ಒಂದೆಡೆ ತನ್ನನ್ನು ಆರೈಕೆ ಮಾಡಿದ ವೈದ್ಯನಿಗೆ ಹೇಳಿದ “ಲಕ್ಷಾಂತರ ಜನ ನರಳುತ್ತಿದ್ದಾರೆ ಈ ಲೋಕದಲ್ಲಿ; ನನ್ನೊಬ್ಬನ ಚಿಂತೆ ನಿನಗೆ ಯಾಕೆ?”. 1910ನೇ ನವೆಂಬರ್ ಹತ್ತನೆಯ ತಾರೀಖು ಭಾನುವಾರ, ಮನೆಮಂದಿಯಿಂದ ದೂರದೂರದ ಒಂದು ಹಳ್ಳಿಯಲ್ಲಿ ಟಾಲ್‌ಸ್ಟಾಯ್ ಕೊನೆಯುಸಿರೆಳೆದ.
ಟಾಲ್‌ಸ್ಟಾಯ್‌ನ ಶರೀರವನ್ನು ಯಾಸ್ನಾಯಾ ಪೋಲಾಯ್ನಾಕ್ಕೆ ತರಲಾಯಿತು. ಆತ ಮೊದಲೇ ತನ್ನ ಮನೆಯವರಿಗೆ ಹೇಳಿದ್ದ: ತಾನು ಸತ್ತರೆ ತನ್ನ ಶರೀರವನ್ನು ಯಾವ ಚರ್ಚಿನ ಧಾರ್ಮಿಕ ವಿಧಿಯೂ ಇಲ್ಲದೆ, ತನ್ನ ಎಸ್ಟೇಟಿನ ಗುಡ್ಡದ ಓರೆಯಲ್ಲಿ ಸಮಾಧಿ ಮಾಡಬೇಕು ಎಂದು. ಮನೆ ಮಂದಿ ಈ ಕ್ರಾಂತಿಕಾರಿಯ ಮಾತನ್ನು ನಡೆಯಿಸಿಕೊಟ್ಟರು. ಮಾಸ್ಕೋಗೆ 230 ಕಿಲೋಮಿಟರು ದೂರದಲ್ಲಿರುವ ಯಾಸ್ನಾಯಾ ಪೋಲಾಯ್ನಾದ ಎಸ್ಟೇಟಿನ ಮೂಲೆಯಲ್ಲಿರುವ ಟಾಲ್‌ಸ್ಟಾಯ್ ಸಮಾಧಿ ಜಗತ್ತಿನ ವಿಚಾರವಂತರಿಗೆ ಸಾಹಿತ್ಯಪ್ರೇಮಿಗಳಿಗೆ ಒಂದು ಯಾತ್ರಾಸ್ಥಳವಾಗಿದೆ. ಮೇಲೆ ವಿಸ್ತಾರವಾದ ಆಕಾಶ; ಕೆಳಗೆ ಎತ್ತರವಾದ ಹಸುರು ತೂಗುವ ಮರಗಳು, ಅದರಡಿಗೆ ಹಸಿರು ಹುಲ್ಲು ಬೆಳೆದ ಟಾಲ್‌ಸ್ಟಾಯ್ ಸಮಾಧಿ. ಏಕಾಕಿಯಾಗಿ ಜಗತ್ತಿನ ಮತ ಮೌಢ್ಯಗಳೊಂದಿಗೆ ಉದ್ದಕ್ಕೂ ಹೋರಾಡುತ್ತಾ ವಿಶ್ವಶಾಂತಿಯ ಕನಸು ಕಂಡ ಚೇತನಕ್ಕೆ ಒಂದು ಸಂಕೇತವಾಗಿದೆ.
ಲೇಖಕರು: ರಾಷ್ಟ್ರಕವಿ ಡಾ|| ಜಿ ಎಸ್ ಶಿವರುದ್ರಪ್ಪ
On the birth anniversary of great writer and human bring Leo Tolstoy
ಕಾಮೆಂಟ್‌ಗಳು