ಕೆ. ಎ. ದಯಾನಂದ
ಕೆ. ಎ. ದಯಾನಂದ
ಇಂದು ನಾಡು ಕಾಣುತ್ತಿರುವ ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿಗಳಲ್ಲಿ ಎದ್ದು ಕಾಣುವ ಕೆ.ಎ. ದಯಾನಂದ ಅವರ ಜನ್ಮದಿನ.
ದಯಾನಂದರು ಸರ್ಕಾರದ ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸಿ, ಚಿಕ್ಕಮಗಳೂರು, ಬೆಂಗಳೂರು ಮತ್ತು ಶಿವಮೊಗ್ಗ ನಗರ ಜಿಲ್ಲಾಧಿಕಾರಿಗಳಾಗಿದ್ದು, ಪ್ರಸಕ್ತದಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವಿಶೇಷಾಯುಕ್ತರು (ಆಡಳಿತ) ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಆಯುಕ್ತರು ಜವಾಬ್ದಾರಿಗಳನ್ನು ನಿರ್ವಹಿಸುತ್ತಿದ್ದಾರೆ ( ಇಷ್ಟು ಹೊತ್ತಾಗಿ ಬೇರೆ ಬದಲಾಗಿದ್ದರೆ ಬೈಕೊಬೇಡಿ.😊😊😊)
ದಯಾನಂದ್ ಪ್ರಾಮಾಣಿಕತೆ, ಕಾರ್ಯಾಸಕ್ತಿ ಮತ್ತು ಸಜ್ಜನಿಕೆಗಳಿಗೆ ಹೆಸರಾದವರು. ಅವರ ಮಾತುಗಳನ್ನು ಕೇಳುವಾಗ, ಅದರಲ್ಲಿರುವ ಕಾಳಜಿಗಳನ್ನು ಗಮನಿಸುವಾಗ ನಾವು ಕೆಟ್ಟು ಹೋಗಿದೆ ಎಂದು ಭಾವಿಸುವ ವ್ವವಸ್ಥೆಗಳ ನಡುವೆಯೂ ಯಾವುದೋ ಒಂದು ಆಶಯದ ಮಿನುಗು ಹುಟ್ಟುತ್ತದೆ.
ದಯಾನಂದ್ ಅವರು ಕನ್ನಡ ಸಂಸ್ಕೃತಿ ಇಲಾಖೆಯ ನಿರ್ದೇಶಕರಾಗಿದ್ದಾಗ ಸ್ವತಃ ನಾನೇ ಕಂಡಂತೆ ಕಲಾಕ್ಷೇತ್ರಗಳ ಕಾದಿರಿಸುವಿಕೆ, ಕಲಾವಿದರಿಗೆ ಸಲ್ಲಬೇಕಾದ ಸಂಭಾವನೆ ಇತ್ಯಾದಿ ಅನೇಕ ವಿಚಾರಗಳಲ್ಲಿ ಅಂತರ್ಜಾಲದ ಮುಖೇನ ಆಡಳಿತವನ್ನು ಸ್ಥಾಪಿಸಿ ಅನವಶ್ಯಕ ಹಸ್ತಕ್ಷೇಪ ಅಳಿಸಿ, ಶುದ್ಧತೆಗಳಿಗೆ ಆಸ್ಪದ ನೀಡಿದ್ದ ಅವರ ಕಾರ್ಯಗಳು ಪ್ರಶಂಸನೀಯವಾಗಿವೆ.
ಅನೇಕ ವೈರುದ್ಧ್ಯಗಳು ತುಂಬಿ ತುಳುಕುವ ಸರ್ಕಾರಿ ವ್ಯವಸ್ಥೆಗಳ ಮಧ್ಯೆ ಹೇಗೆ ತಾನೇ ಒಳ್ಳೆಯ ಕೆಲಸ ಮಾಡಲಿಕ್ಕೆ ಸಾಧ್ಯ ಎಂಬ ಬಗ್ಗೆ ಅವರು ಒಮ್ಮೆ ಹೇಳಿದ ಮಾತು ನನಗೆ ಆಗಾಗ ನೆನಪಿಗೆ ಬರುತ್ತದೆ. “ಯಾವುದೇ ಒಂದು ಕೆಲಸ ಮಾಡುವಾಗಲೂ ಹಲವಾರು ವ್ಯವಸ್ಥೆಗಳಲ್ಲಿ ಅನೇಕ ರೀತಿಯ ಶಕ್ತಿಗಳು ಉತ್ತಮ ಪ್ರಯತ್ನಗಳನ್ನು ಕೆಳಗೆ ಎಳೆಯುವಂತೆ ಮಾಡುತ್ತಿರುತ್ತವೆ. ಇಂತಹ ಸಂದರ್ಭಗಳಲ್ಲಿ ನಾವು ಇನ್ನೂ ಹೆಚ್ಚು ಹೆಚ್ಚು ಸಮರ್ಥವಾಗಿ ಕೆಲಸ ಮಾಡುವ ರೀತಿಯನ್ನು ರೂಢಿಸಿಕೊಳ್ಳಬೇಕಾಗುತ್ತದೆ. ಭೂಮಿಯ ಗುರುತ್ವಾಕರ್ಷಣ ಶಕ್ತಿ ಎಷ್ಟೊಂದು ಬಲಯುತವೆಂದರೆ ಅದು ಯಾವುದನ್ನೂ ಹೆಚ್ಚು ಹೊತ್ತು ಮೇಲಿರುವುದಕ್ಕೆ ಬಿಡುವುದಿಲ್ಲ. ಆದರೆ, ಒಂದು ರಾಕೆಟ್, ಈ ಗುರುತ್ವಾಕರ್ಷಣ ಶಕ್ತಿಯನ್ನೇ ಮೀರುವಂತಹ ಸಾಮರ್ಥ್ಯವನ್ನು ರೂಪಿಸಿಕೊಂಡು ತನ್ನ ಎತ್ತರದ ಗುರಿಗಳನ್ನು ತಲುಪುವಂತೆ, ನಮಗೂ ಅನೇಕ ಸಾಧ್ಯತೆಗಳಿವೆ ಎಂಬುದನ್ನು ನಾವು ಮನಗಂಡರೆ ಏನನ್ನೂ ಸಾಧಿಸಬಹುದು.”
ಸಮಾಜದಲ್ಲಿ ನಾವು ಕೆಟ್ಟದ್ದನ್ನು ಗುರುತಿಸುವಷ್ಟು ಒಳ್ಳೆಯದನ್ನು ಗುರುತಿಸುವುದು ಕಡಿಮೆ. ಒಳ್ಳೆಯದನ್ನು ಗುರುತಿಸುವ ಮನೋಭಾವನೆಯನ್ನು ನಾವು ಹೆಚ್ಚಿಸಿಕೊಂಡಷ್ಟೂ ನಮ್ಮಲ್ಲಿ ಆರೋಗ್ಯಕರ ಸಮಾಜದ ಕನಸೂ ಹೆಚ್ಚು ಹೆಚ್ಚು ವಿಸ್ತರಿಸುತ್ತದೆ. ಅಂತಹ ಕನಸುಗಳು ಮಾತ್ರವೇ ಉತ್ತಮ ವ್ಯವಸ್ಥೆಗಳಿಗೆ ಹುಟ್ಟು ನೀಡಬಲ್ಲವು. ಹೀಗಾಗಿ ನಾವು ಕೆ. ಎ. ದಯಾನಂದರಂತಹ ಉತ್ತಮ ಆಶಯಗಳಿರುವ ಸರ್ಕಾರಿ ಪ್ರತಿನಿಧಿಗಳ ಉತ್ತಮ ಕೆಲಸಕ್ಕೆ ಬೆಂಬಲ ನೀಡುವುದೂ ಅತ್ಯಂತ ಅವಶ್ಯಕ.
ಯಾವುದೂ ಅಸಾಧ್ಯವಲ್ಲ ಎಂಬ ನಂಬಿಕೆಯೆ ಬದುಕಿಗಿರುವ ಬೆಲೆ. ಇಂತಹ ನಂಬಿಕೆ ನಮಗೆ ಹೆಚ್ಚಾಗಲಿ. ನಮ್ಮ ಆಡಳಿತ ಮತ್ತು ಸಮಾಜ ಇಂತಹ ದಯಾನಂದ ಅಂತಹ ಸಮರ್ಥರನ್ನು ಶುದ್ಧ ಮನಸ್ಸಿನ ಬೆಂಬಲಗಳಿಂದ ಉಪಯೋಗಿಸಿಕೊಳ್ಳುವಷ್ಟು ಸಮರ್ಥವಾಗಲಿ. ಅವರ ಆತ್ಮವೃತ್ತಾಂತ 'ಹಾದಿಗಲ್ಲು' ಜನಪ್ರಿಯವಾಗಿ ಅನೇಕ ಪ್ರಶಸ್ತಿಗಳನ್ನೂ ಗಳಿಸಿದೆ.
ದಯಾನಂದ ಅವರಿಗೆ ಹುಟ್ಟುಹಬ್ಬದ ಆತ್ಮೀಯ ಶುಭಹಾರೈಕೆಗಳು.
On the birth day of our eminent and honest Government official Dayananda Appajigowda

ಕಾಮೆಂಟ್‌ಗಳು