ನಾಡಿಗ ಕೃಷ್ಣಮೂರ್ತಿ
ನಾಡಿಗ ಕೃಷ್ಣಮೂರ್ತಿ
ನಾಡಿಗ ಕೃಷ್ಣಮೂರ್ತಿ ಪತ್ರಿಕೋದ್ಯಮ, ಶಿಕ್ಷಣ ಮತ್ತು ಬರಹಗಳಿಗೆ ಪ್ರಸಿದ್ಧರಾದವರು.
ನಾಡಿಗ ಕೃಷ್ಣಮೂರ್ತಿ ಅವರು 1921 ವರ್ಷದ ಜನವರಿ 25ರಂದು ಶಿವಮೊಗ್ಗ ಜಿಲ್ಲೆಯ ಆನವಟ್ಟಿ ಗ್ರಾಮದಲ್ಲಿ ಜನಿಸಿದರು. ತಂದೆ ನರಸಿಂಗರಾವ್ ನಾಡಿಗ. ತಾಯಿ ಕಮಲಾಬಾಯಿ.
ನಾಡಿಗರ ಪ್ರಾಥಮಿಕ ಮತ್ತು ಮಾಧ್ಯಮಿಕ ವಿದ್ಯಾಭ್ಯಾಸ ಆನವಟ್ಟಿಯಲ್ಲಿ ನಡೆಯಿತು. ಶಿವಮೊಗ್ಗದಲ್ಲಿ ಪ್ರೌಢಶಾಲಾ ವಿದ್ಯಾಭ್ಯಾಸ ಪೂರೈಸಿದ ಅವರು ಕಾಲೇಜಿಗೆ ಸೇರಿದ್ದು ಮೈಸೂರಿನಲ್ಲಿ. ಅಮೆರಿಕಕ್ಕೆ ತೆರಳಿ ಸ್ನಾತಕೋತ್ತರ ಪದವಿ ಪಡೆದರು. ಮೈಸೂರು ವಿಶ್ವವಿದ್ಯಾಲಯದಲ್ಲಿ “ಪತ್ರಿಕೋದ್ಯಮ ಇತಿಹಾಸ” ಮಹಾಪ್ರಬಂಧ ಮಂಡಿಸಿ ಪಿಎಚ್.ಡಿ ಪದವಿ ಗಳಿಸಿದರು.
ಉತ್ಸಾಹಿಗಳಾದ ನಾಡಿಗ ಕೃಷ್ಣಮೂರ್ತಿ ಅವರದ್ದು ಕಾಲಿಗೆ ಚಕ್ರ ಧರಿಸಿದಂತೆ ಒಂದೆಡೆ ನಿಲ್ಲದ ಬದುಕು. ಅಮೆರಿಕ, ಇಂಗ್ಲೆಂಡ್, ರಷ್ಯ, ಫ್ರಾನ್ಸ್, ಜರ್ಮನಿ, ಜಪಾನ್, ಚೀನಾ, ಯುಗೋಸ್ಲಾವಿಯಾ, ಥೈಯ್‌ಲ್ಯಾಂಡ್, ಫಿಲಿಪೈನ್ಸ್, ದೇಶಗಳಲ್ಲಿ ಸತ್ತಾಡಿದರು. ಹಲವಾರು ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಪ್ರಾಧ್ಯಾಪನ ನಡೆಸಿ ಬಂದರು. ಪುನಃ ಮೈಸೂರಿಗೆ ಹಿಂದಿರುಗಿದಾಗ ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ಪ್ರಾರಂಭಗೊಂಡು ಆ ವಿಭಾಗದ ಮುಖ್ಯಸ್ಥರ ಹೊಣೆ ನಿರ್ವಹಿಸಿ ಮುಂದೆ ಪ್ರಿನ್ಸಿಪಾಲರಾಗಿ ಕಾರ್ಯನಿರ್ವಹಿಸಿದರು.
ನಾಡಿಗ ಕೃಷ್ಣಮೂರ್ತಿ ಅವರು ಕರ್ನಾಟಕ ರಾಜ್ಯ ಪತ್ರಿಕಾ ಅಕಾಡಮಿಯ ಪ್ರಥಮಾಧ್ಯಕ್ಷರಾಗಿ 1982 - 1983 ಅವಧಿಯಲ್ಲಿ ಸೇವೆ ಸಲ್ಲಿಸಿದರು. ಅಖಿಲ ಭಾರತ ಪತ್ರಿಕೋದ್ಯಮ ಶಿಕ್ಷಣ ಸಂಘ ಸ್ಥಾಪನೆಯಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು.
ನಾಡಿಗ ಕೃಷ್ಣಮೂರ್ತಿ ಅವರು 40ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದರು. ಶಾಂತಿ ಸಾರ್ವಭೌಮರು, ಕಮಲಾ ನೆಹರು, ಭಾರತದ ವೀರರಮಣಿಯರು ಮುಂತಾದವರ ಜೀವನ ಚರಿತ್ರೆಗಳನ್ನು ರಚಿಸಿದರು. ಭಾರತೀಯ ಪತ್ರಿಕೋದ್ಯಮ, ಪತ್ರಿಕೋದ್ಯಮ ಪರಿಚಯ ಮೊದಲಾದವು ಪತ್ರಿಕೋದ್ಯಮಕ್ಕೆ ಸಂಬಂಧಿಸಿದ ಕೃತಿಗಳು. ‘ಸಾಗರದಾಚೆ ’ ಪ್ರವಾಸ ಸಾಹಿತ್ಯ ಕೃತಿ. ಅಮೇರಿಕನ್ ಜರ್ನಲಿಜಮ್ ಅನುವಾದ ಕೃತಿ. ಇಂಗ್ಲಿಷಿನಲ್ಲಿಯೂ ಅವರು ಹಲವಾರು ಕೃತಿಗಳನ್ನು ರಚಿಸಿದರು. 'ಮಾನಸ ಗಂಗೋತ್ರಿ’ ಇವರು ಸಂಪಾದಿಸುತ್ತಿದ್ದ ಪ್ರಾಯೋಗಿಕ ಪತ್ರಿಕೆ.
ನಾಡಿಗ ಕೃಷ್ಣಮೂರ್ತಿ ಅವರಿಗೆ ಮೈಸೂರು ವಿಶ್ವವಿದ್ಯಾಲಯದ ಸುವರ್ಣ ಮಹೋತ್ಸವ ಪ್ರಶಸ್ತಿ, ಕರ್ನಾಟಕ ಸರ್ಕಾರದ ಪ್ರಶಸ್ತಿ, ಲೋಕಶಿಕ್ಷಣ ಟ್ರಸ್ಟ್ ಪ್ರಶಸ್ತಿ, ಕೇಂದ್ರ ಶಿಕ್ಷಣ ಮತ್ತು ಸಂಸ್ಕೃತಿ ಇಲಾಖೆಯ ಬಹುಮಾನ, ಹಿಂದಿ ಸಾಹಿತ್ಯ ಪರಿಷತ್‌ನಿಂದ ‘ಪತ್ರಕಾರ ಶಿರೋಮಣಿ ’ ಬಿರುದು ಮುಂತಾದ ಅನೇಕ ಗೌರವಗಳು ಸಂದಿದ್ದವು.
ಟೆನಿಸ್, ತೋಟಗಾರಿಕೆ ಮತ್ತು ಸದಾ ಪ್ರವಾಸಗಳ ಪ್ರಿಯರಾಗಿದ್ದ ನಾಡಿಗ ಕೃಷ್ಣಮೂರ್ತಿ ಅವರು 1983 ವರ್ಷದಲ್ಲಿ ನಿಧನರಾದರು.
On the birth anniversary of Nadig Krishnamurthy
Nadig Krishnamurthy
ಕಾಮೆಂಟ್‌ಗಳು