ಕೆ. ಆರ್. ಸಂಧ್ಯಾರೆಡ್ಡಿ
ಕೆ. ಆರ್. ಸಂಧ್ಯಾ ರೆಡ್ಡಿ
ಡಾ. ಕೆ. ಆರ್. ಸಂಧ್ಯಾ ರೆಡ್ಡಿ ಜಾನಪದ ಸಂಶೋಧಕರೂ, ಕತೆಗಾರರೂ ಆಗಿ ಹೆಸರಾಗಿದ್ದಾರೆ.
ಸಂಧ್ಯಾ ರೆಡ್ಡಿ 1953ರ ಜೂನ್ 22ರಂದು ಚಿತ್ರದುರ್ಗದಲ್ಲಿ ಜನಿಸಿದರು. ತಂದೆ ಕೆ.ರಾಮ ರೆಡ್ಡಿ ಶಿಕ್ಷಕರಾಗಿದ್ದರು. ತಾಯಿ ಹಿಂದಿ ಶಿಕ್ಷಕಿ ಮತ್ತು ಕತೆ-ಕಾದಂಬರಿಗಾರ್ತಿಯಾಗಿ ಹೆಸರಾದ ಅನಸೂಯಾ ರಾಮರೆಡ್ಡಿ.
ಪ್ರಾರಂಭದಿಂದ ಹಿಡಿದು ಬಿ.ಎಸ್ಸಿ. ಪದವಿಯವರೆಗೆ ಚಿತ್ರದುರ್ಗದಲ್ಲಿ ವಿದ್ಯಾಭ್ಯಾಸ ಪಡೆದ ಸಂಧ್ಯಾ ರೆಡ್ಡಿ ಅವರು ಮೈಸೂರು ವಿಶ್ವವಿದ್ಯಾಲಯದಿಂದ 1973ರಲ್ಲಿ ಎಂ.ಎ. ಪದವಿ ಹಾಗೂ 1980ರಲ್ಲಿ 'ಕನ್ನಡ ಜನಪದ ಕಥೆಗಳು’ ಪ್ರೌಢ ಪ್ರಬಂಧಕ್ಕೆ ಡಾಕ್ಟರೇಟ್ ಪದವಿ ಗಳಿಸಿದರು.
ಸಂಧ್ಯಾ ರೆಡ್ಡಿ ಅವರು ಕರ್ನಾಟಕ ಸರಕಾರದ ಉದ್ದಿಮೆಯಾದ ಎನ್.ಜಿ.ಇ.ಎಫ್ ಕಾರ್ಖಾನೆಯಲ್ಲಿ ಭಾಷಾಂತರ ಮತ್ತು ಕಲ್ಯಾಣಾಧಿಕಾರಿಗಳಾಗಿ ಇಪತ್ತು ವರ್ಷ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಪಡೆದರು.
ಹಿಂದಿ ಶಿಕ್ಷಕಿಯಾಗಿದ್ದರೂ ಕನ್ನಡ ಸಾಹಿತ್ಯದಲ್ಲಿ ಅನೇಕ ಕೃತಿ ರಚಿಸಿದ್ದ ತಾಯಿ ಅನಸೂಯಾದೇವಿ ಅವರು ಸಂಧ್ಯಾ ಅವರಿಗೆ ಸಾಹಿತ್ಯಿಕ ಪ್ರೇರಣೆ ಆದರು. ಧಾರವಾಡದ ಮನೋಹರ ಗ್ರಂಥಮಾಲೆಯ ಸದಸ್ಯೆಯಾಗಿದ್ದ ತಾಯಿಯವರಿಗೆ ಬರುತ್ತಿದ್ದ ಹಲವಾರು ಪುಸ್ತಕಗಳು ಹಾಗೂ ಕನ್ನಡದ ಅಗ್ರಗಣ್ಯ ಸಾಹಿತಿಗಳೆಲ್ಲರ ಓದು ಸಂಧ್ಯಾ ರೆಡ್ಡಿ ಅವರಿಗೆ ಓದಿನ ದಿನಗಳಲ್ಲೇ ದಕ್ಕಿದ್ದವು.
ಸಂಧ್ಯಾ ಅವರು ಆರು ವರ್ಷದ ಹುಡುಗಿಯಾಗಿದ್ದಾಗಲೇ ಇವರ ಕಂಠ ಮಾಧುರ್ಯಕ್ಕೆ ಬೆರಗಾದ ಅಜ್ಜಿ, ಸಂಗೀತ ಕಲಿಯಲು ಏರ್ಪಾಡುಮಾಡಿ, ಚಿತ್ರದುರ್ಗದ ಗುಡ್ಡದ ಬಳಿ ಇದ್ದ ಏಕನಾಥೇಶ್ವರಿ ಕಲಾಮಂದಿರಕ್ಕೆ ಸೇರಿಸಿದ್ದರು. ಇವರಿಗೆ ಸಂಗೀತದ ಮೇಲೆ ಎಷ್ಟೊಂದು ಪ್ರೀತಿ ಇತ್ತೆಂದರೆ ಸೀನಿಯರ್ ವಿದ್ಯಾರ್ಥಿಗಳಿಗೆ ಕಲಿಸುವ ವರ್ಣ, ಕೀರ್ತನೆಗಳನ್ನು ಜ್ಯೂನಿಯರ್ ಪರೀಕ್ಷೆಗೆ ಮುಂಚೆಯೇ ಕಲಿತಿದ್ದರಂತೆ.
ಸಂಧ್ಯಾ ರೆಡ್ಡಿ ಅವರು ಬರೆದ ಮೊದಲ ಕವನ ‘ನೆನಪುಗಳು’ ಪ್ರಜಾವಾಣಿಯ ಸಾಪ್ತಾಹಿಕದಲ್ಲಿ ಪ್ರಕಟವಾಯಿತು. ಮುಂದೆ ಇವರು ಬರೆದ ಹಲವಾರು ಕವನಗಳು ನಾಡಿನ ಪ್ರಮುಖ ಪತ್ರಿಕೆಗಳಲ್ಲೆಲ್ಲಾ ಪ್ರಕಟಗೊಂಡು ‘ಮೂವತ್ತೈದರ ಹೊಸ್ತಿಲು’, ‘ಈ ಪ್ರೀತಿಯೊಳಗೆ’, ‘ಇದು ಇನ್ನೊಂದು ಲೋಕ’ ಸಂಗ್ರಹಗಳಲ್ಲದೆ ‘ಇನ್ನೊಂದು ದನಿ’ ಎಂಬ ಅನುವಾದಿತ ಸಂಕಲವೂ ಪ್ರಕಟವಾಯಿತು. ‘ಬೇರೊಂದು ದಾರಿ’ ಇವರ ಪ್ರಸಿದ್ಧ ಕಥಾ ಸಂಕಲನ.
ಜಾನಪದ ಕ್ಷೇತ್ರದಲ್ಲಿ ಬಹಳಷ್ಟು ದುಡಿದಿರುವ ಸಂಧ್ಯಾರೆಡ್ಡಿ ಅವರು ಸಂಪಾದಿಸಿದ ಕೃತಿ ಮೂವತ್ತು ಜನಪದ ಕಥೆಗಳು. ಕನ್ನಡ ಜನಪದ ಕಥೆಗಳು ಇವರ ಪಿಎಚ್.ಡಿ. ಪ್ರಬಂಧ. ಇದಲ್ಲದೆ
ಹಳ್ಳಿಯ ಹಾಡುಗಳು, ರಿಚರ್ಡ್ ಎಂ. ಡಾರ್ಸನ್, ಜನಪದ ಸಾಹಿತ್ಯದಲ್ಲಿ ಮಹಿಳೆ, ಜನಪದವರ್ಷ, ಜಾನಪದ ಪರಿಶೀಲನೆ ಮುಂತಾದ ಕೃತಿಗಳನ್ನು ರಚಿಸಿದರು. ಫಿನ್‌ಲೆಂಡಿನ ಜಾನಪದ ಮಹಾಕಾವ್ಯವಾದ ‘ಕಲೇವಲ’ವನ್ನು ಕನ್ನಡಕ್ಕೆ ತಂದರು. ಇದಲ್ಲದೆ ಹಲವಾರು ಜಾನಪದ ಕೃತಿಗಳನ್ನೂ ಇತರರೊಡನೆ ಸೇರಿ ಸಂಪಾದಿಸಿದರು. ಜೊತೆಗೆ ಹಲವಾರು ಕೃತಿಗಳ ಭಾಷಾಂತರ, ಮೈಸೂರು ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ಕ್ಯಾಸಂಬಳ್ಳಿ ಚಂಗಲರಾಯರೆಡ್ಡಿ ಜೀವನ ಚರಿತ್ರೆ, ಮುಲ್ಕಾ ಗೋವಿಂದ ರೆಡ್ಡಿಯವರ ಜೀವನಚರಿತ್ರೆ ‘ಪ್ರಿಯಬಂಧು’, ಅನಸೂಯ ರಾಮರೆಡ್ಡಿ
ಜೀವನ ಚರಿತ್ರೆ ಮುಂತಾದವುಗಳೂ ಪ್ರಕಟಗೊಂಡಿವೆ.
ಸಂಧ್ಯಾ ರೆಡ್ಡಿ ಅವರು ಕರ್ನಾಟಕ ಲೇಖಕಿಯರ ಸಂಘದ ಗೌರವ ಕಾರ್ಯದರ್ಶಿಯಾಗಿ, ಉಪಾಧ್ಯಾಕ್ಷೆಯಾಗಿ, ಅಧ್ಯಕ್ಷೆಯಾಗಿ ಕಾರ್ಯನಿರ್ವಹಿಸಿ ಹಲವಾರು ಕೃತಿಗಳನ್ನು ಸಂಪಾದಿಸಿ ಪ್ರಕಟಿಸಿದರು. ಮಹಿಳೆಯರ ಸಾಹಿತ್ಯ ಕೃತಿಗಳ ಪ್ರಕಟಣೆಗಳ ಜೊತೆಗೆ ಲೇಖಕಿಯರ ಆತ್ಮಚರಿತ್ರೆಗಳು, ಲೇಖಕಿಯರ ಮಾಹಿತಿಕೋಶ, ನಮ್ಮ ಬದುಕು ನಮ್ಮ ಬರಹ ಮುಂತಾದವುಗಳಲ್ಲದೆ ಕವಯತ್ರಿಯರ ಕವನ ಸಂಕಲನಗಳು, ಬೆಳ್ಳಿಹಬ್ಬದ ಸಂಚಿಕೆ, ಲೇಖಕಿಯರ ಸಣ್ಣ ಕಥೆಗಳು, ನಿರುಪಮ ಲೋಕ (ಡಾ. ನಿರುಪಮಾರವರ ಅಭಿನಂದನ ಗ್ರಂಥ), ಮಹಿಳಾ ಕಾವ್ಯ ಮುಂತಾದವುಗಳನ್ನೂ ಸಂಪಾದಿಸಿದರು.
ಅಮೆರಿಕಾ, ರಷ್ಯಾದ ಕವಿತೆಗಳು ಮತ್ತು ಸಣ್ಣಕತೆಗಳು, ಲಂಕೇಶ್ ಪತ್ರಿಕಾ ಬಳಗದ ಆಲ್‌ರೌಂಡರ್ ಕ್ರೀಡಾ ಪತ್ರಿಕೆಗೆ ಬರಹಗಳು, ಕೇಂದ್ರಸಾಹಿತ್ಯ ಅಕಾಡಮಿಗಾಗಿ ಸಣ್ಣಕತೆಗಳು, ಭಾರತ ಮಹಿಳೆ ಮತ್ತು ಸಂವಿಧಾನಾತ್ಮಕ ಹಕ್ಕುಗಳು, ಎಂ.ಎ. ತರಗತಿಗಳ ಚರಿತ್ರೆ ಮತ್ತು ಸಮಾಜಶಾಸ್ತ್ರದ ಪಠ್ಯಗಳು, ರಷ್ಯಾದ ಕಲಾವಿದ ಇಲ್ಯಾಪಿರೆನ್ ಬದುಕು-ಬರೆಹ ಹೀಗೆ ಹಲವು ರೀತಿಯ ಬರಹಗಳನ್ನೂ ಸಂಧ್ಯಾ ಅವರು ಮಾಡಿದ್ದಾರೆ.
ಸಂಧ್ಯಾ ರೆಡ್ಡಿ ಅವರು ಹಲವಾರು ಶಿಕ್ಷಣ ಸಂಸ್ಥೆಗಳಲ್ಲಿ ಬೋಧನೆಯನ್ನೂ ಮಾಡಿದ್ದಾರೆ. ಜಾನಪದಕ್ಕೆ ಸಂಬಂಧಿಸಿದಂತೆ ಮದರಾಸಿನಿಂದ ಪ್ರಕಟವಾಗಿರುವ ಕನ್ನಡ ಜಾನಪದ ವಿಶ್ವಕೋಶಕ್ಕಾಗಿ ಲೇಖನಗಳು, ಕರ್ನಾಟಕ ಜಾನಪದ ಅಕಾಡಮಿ ಪ್ರಕಟಿಸಿರುವ ‘ಜಾನಪದ ನಿಘಂಟು’ವಿನ ಪ್ರಾದೇಶಿಕ, ಸ್ಥಾನಿಕ ಸಂಪಾದಕರಾಗಿ, ಕನ್ನಡ ಸಾಹಿತ್ಯ ಪರಿಷತ್ತು ಚಂದ್ರಶೇಖರ ಕಂಬಾರರ ನೇತೃತ್ವದಲ್ಲಿ ಸಂಪಾದಿಸಿರುವ ‘ಜಾನಪದ ವಿಶ್ವಕೋಶದ’ ಗೌರವ ಸಂಪಾದಕರಾಗಿಯೂ ದುಡಿದಿದ್ದಾರೆ.
ಸಂಧ್ಯಾ ರೆಡ್ಡಿ ಅವರ ಸಾಹಿತ್ಯ ಹಾಗೂ ಜಾನಪದ ಕ್ಷೇತ್ರದ ಸಾಧನೆಗಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಮಲ್ಲಿಕಾ ದತ್ತಿನಿಧಿ ಪ್ರಶಸ್ತಿ, ಶಾರದಾ ರಾಮಲಿಂಗಪ್ಪ ದತ್ತಿ ನಿಧಿ ಪ್ರಶಸ್ತಿ, ಗೊರೂರು ಸಾಹಿತ್ಯ ಪ್ರಶಸ್ತಿ, ಬಿ.ಎಸ್. ಚಂದ್ರಕಲಾರವರ ಲಿಪಿಪ್ರಾಜ್ಞೆ ಪ್ರಶಸ್ತಿ, ಕರ್ನಾಟಕ ಜಾನಪದ ಅಕಾಡಮಿಯಿಂದ ಜೀಶಂಪ ಜಾನಪದ ತಜ್ಞೆ ಪ್ರಶಸ್ತಿ, ಆಳ್ವಾಸ್ ನುಡಿ ಸಿರಿ ಗೌರವ, ಜಾನಪದ ಲೋಕದ ಜಾನಪದ ತಜ್ಞೆ ಪ್ರಶಸ್ತಿ, ಮಿಥಿಕ್ ಸೊಸೈಟಿಯಿಂದ ಅತ್ಯುತ್ತಮ ಸಂಶೋಧಕಿ ಗೌರವ, ಆರ್ಯಭಟ ಪ್ರಶಸ್ತಿ, ಶ್ರೀಮತಿ ಸಾವಿತ್ರಮ್ಮ ದೇಜಗೌ ಪ್ರಶಸ್ತಿ ಮುಂತಾದ ಅನೇಕ ಗೌರವಗಳು ಸಂದಿವೆ.
On the birth day of our writer Dr. K.R. Sandhya Reddy
ಕಾಮೆಂಟ್‌ಗಳು