ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಮಣ್ಣೆತ್ತಿನ ಅಮವಾಸ್ಯೆ



ಮಣ್ಣೆತ್ತಿನ ಅಮವಾಸ್ಯೆ

ಮಣ್ಣೆತ್ತಿನ ಅಮವಾಸ್ಯೆ ಮುಂಗಾರಿನ ಆರಂಭದ ಹಬ್ಬ. ಮಣ್ಣೆತ್ತಿನ ಅಮಾವಾಸ್ಯೆ ಬಸವನ ಅಮಾವಾಸ್ಯೆ ಎಂದೂ ಕರೆಯಲ್ಪಡುತ್ತದೆ. ಕಾರ ಹುಣ್ಣಿಮೆಯ ನಂತರ ಬರುವ ಈ ಹಬ್ಬ, ರೈತಾಪಿ ಜನರು ತಮ್ಮ ಬದುಕಿಗೆ ಆಸರೆಯಾಗಿರುವ ಎತ್ತುಗಳನ್ನು ಪೂಜಿಸಿ ಸಂಭ್ರಮಪಡುವ ಹಬ್ಬ. ಮಣ್ಣು ಒಕ್ಕಲುಮಕ್ಕಳಿಗೆ ಅತ್ಯಂತ ಪವಿತ್ರವಾದದ್ದು. ಕೃಷಿಕರಲ್ಲದವರ ಮನೆಯಲ್ಲೂ ಮಣ್ಣಿನ ಎತ್ತುಗಳನ್ನು ಮಾಡಿ ಪೂಜಿಸುವ ವಾಡಿಕೆಯಿದೆ.

ಇಡೀ ವರ್ಷದಲ್ಲಿ ಪ್ರಾರಂಭದಿಂದಲೂ ಮುಖ್ಯವಾಗಿ ಐದು ರೀತಿ ಮಣ್ಣಿನ ಪೂಜೆಯನ್ನು ಮಾಡಿ ನೆರವೇರಿಸುವ ಸಂಪ್ರದಾಯವಿದೆ. ಆಶಾಡ ಶ್ರಾವಣ ಮತ್ತು ಭಾದ್ರಪದ ಮಾಸಗಳು ಮಣ್ಣು ಪೂಜೆಯ ದ್ಯೋತಕವಾಗಿದೆ. 

ಮಣ್ಣೆತ್ತು, ಗುಳ್ಳವ್ವ, ಹುತ್ತಪ್ಪ, ಗಣಪ್ಪ ಹಾಗೂ ಜೋಕುಮಾರ ಎಂಬ  5 ಮಣ್ಣಿನಿಂದ ಮಾಡಿದ ದೈವಗಳನ್ನು ಮೂರು ಮಾಸಗಳಲ್ಲಿ ಪೂಜಿಸುತ್ತಾರೆ. ಒಡನಾಡಿಯಾಗಿರುವ ದನಕರುಗಳನ್ನು ಕಾರಹುಣ್ಣಿಮೆಯಲ್ಲಿ ವಿಶೇಷವಾಗಿ ಮೈತೊಳೆದು ಬಣ್ಣ ಹಚ್ಚಿ ವಿವಿಧ ಪರಿಕರಗಳಿಂದ ಸಿಂಗರಿಸಿ, ಹೋಳಿಗೆ ಕಡುಬು ಸಿಹಿತಿನಿಸುಗಳನ್ನು ಮಾಡಿ ನೈವೇದ್ಯ ಮಾಡುತ್ತಾರೆ.‍ ಸಂಜೆಗೆ ಕರಿ ಹರಿಯುವ ಸಂಭ್ರಮ ಜೋರಾಗಿ ನಡೆಯುತ್ತದೆ. ವಿಶ್ರಾಂತಿಯಲ್ಲಿದ್ದ ದನಕರುಗಳನ್ನು ಕೃಷಿ ಕಾಯಕಕ್ಕೆ ಸಜ್ಜುಗೊಳಿಸುವ ಸಂಭ್ರಮ ಇದು.

ಇನ್ನು. ಮಣ್ಣಿನ ಎತ್ತುಗಳನ್ನು ತಯಾರಿಸುವ ಸಂಭ್ರಮವೂ ವಿಶೇಷ ಬಗೆಯದೇ.  ಹೊಲಗಳಲ್ಲಿ ಸಿಗುವ ಜಿಗಟು ಮಣ್ಣಿನಿಂದ ಎತ್ತುಗಳನ್ನು ತಯಾರಿಸುತ್ತಾರೆ. ಇದು ಉಳುವ ಎತ್ತುಗಳ ಸಾಂಕೇತಿಕ ರೂಪ. ಇದಲ್ಲದೆ ಊರ ಕುಂಬಾರರ ಮನೆಗಳಿಂದ ತಯಾರಿಸಿದ ಜೋಡಿ ಎತ್ತುಗಳನ್ನೂ  ಹಣ ಕೊಟ್ಟು ಖರೀದಿಸಿ ಜೊತೆಗೆ ಒಂದಿಷ್ಟು ಹಸಿಮಣ್ಣೂ ತರುತ್ತಾರೆ. ಮಣ್ಣಿನಲ್ಲಿ ದನಗಳಿಗೆ  ಗ್ವಾದಲಿ ಮಾಡುತ್ತಾರೆ. ಬಣ್ಣಗಳ ಬ್ಯಾಗಡಿ ಚೂರು, ಬಣ್ಣದಲ್ಲಿ ಜೋಳ ಕುಸುಬಿ ಕಾಳುಗಳಿಂದ ಎತ್ತುಗಳಿಗೆ ಕೊಂಬೆಣಸು, ಇಣೆಗವಚ ಜೂಲು ತೊಡೆ ಗಂಟಿಸರಗಳಿಂದ ಸಿಂಗರಿಸುತ್ತಾರೆ. ಮನೆಯ ಹೆಣ್ಣುಮಕ್ಕಳು ಎತ್ತುಗಳಿಗೆ ಆರತಿ ಎತ್ತಿ ಪೂಜಿಸುತ್ತಾರೆ.  ಸಂಭ್ರಮದ ಅಡುಗೆ ತಯಾರಿಸುತ್ತಾರೆ.‍ ಮನೆಮನೆಗೆ ಹೆಣ್ಣುಮಕ್ಕಳು ತೆರಳಿ ತಮ್ಮ ಪೂಜಾ ಸಂಭ್ರಮ ಬೆಳಗಿಸಿ ಬರುತ್ತಾರೆ.

ಮರುದಿನ ಮಣ್ಣಿನ ಎತ್ತುಗಳನ್ನು ತೆಗೆದುಕೊಂಡು ಅದರಲ್ಲಿ ಒಂದರ ಕಾಲು ಮುರಿದು ತಟ್ಟೆಯಲ್ಲಿ ಇಟ್ಟುಕೊಂಡು ಮನೆ ಮನೆ ತಿರುಗಿ “ಎಂಟೆತ್ತಿನ್ಯಾಗ  ಒಂದ ಕುಂಟೆತ್ತ ಬಂದೈತಿ ಜ್ಜ್ವಾಳ ನೀಡಿರಿ "ಎಂದು ಹೇಳುತ್ತಾ ತಿರುಗುತ್ತಾರೆ. ಮನೆಯವರು ದವಸದಾನ್ಯ ಕೊಟ್ಟು ಹಣ ನೀಡಿ ಕಳುಹಿಸುತ್ತಾರೆ.

ಸಂಗ್ರಹಿಸಿದ ದವಸಧಾನ್ಯಗಳನ್ನು ಊರ ಅಂಗಡಿಗೆ ಹಾಕಿ ಪೂಜಾ ಪರಿಕರಗಳನ್ನು ಖರೀದಿಸುತ್ತಾರೆ. ಎತ್ತುಗಳನ್ನು ಹೊಳೆದಂಡೆಗೆ ತೆಗೆದುಕೊಂಡು ಹೋಗಿ ಪೂಜಿಸಿ ಊರು ಸಮೃದ್ಧಿಯಾಗಿ ಬೆಳೆಯಲಿ ಎಂದು ಪ್ರಾರ್ಥಿಸಿ ಎತ್ತುಗಳನ್ನು ಹೊಳೆಗೆ ಬಿಡುತ್ತಾರೆ. ಇದನ್ನು ಹೆಣ್ಣುಮಕ್ಕಳು 'ಅರಳಲೇ ಬಸವನ ಪೂಜೆ' ಎಂದು  ಭಕ್ತಿ ಸಂಭ್ರಮಗಳಿಂದ ಆಚರಿಸುತ್ತಾರೆ. ಮಣ್ಣೆತ್ತಿನ ಅಮವಾಸ್ಯೆ ಬಸವನನ್ನು ಎಲೆ ಮಂಟಪದಲ್ಲಿ ಪೂಜಿಸಿ ಹಾಡುತ್ತಾರೆ. 

ಜಾನಪದ ಸಂಶೋಧನಾ ಪ್ರಬಂಧಕಾರ ಬಾದಾಮಿ ತಾಲೂಕು ಕೆರೂರಿನ ಡಾ.ಬಿ.ಎಸ್,ಗದ್ದಗಿಮಠರು ಸಂಗ್ರಹಿಸಿದ ಹೆಣ್ಣು ಮಕ್ಕಳು ಹಾಡುವ ಅರಳೆಲೆ ಬಸವನ ಪದ ಹೀಗಿದೆ.

ಒಂದು ಸುತ್ತಿನ ಕ್ವಾಟಿ
ಅದರೊಳು ಹೊಂದಿ ನಿಂತನು ಬಸವ
ಬಸವಕ ಬಸವೆನ್ನಿರೆ
ಬಸವನ ಪಾದಕ ಶರಣನ್ನಿರೆ
ಎರಡು ಸುತ್ತಿನ ಕ್ವಾಟಿ
ಅದರೊಳು ಸೊಡರು ತೂಗುವ ಬಸವ
ಬಸವಕ ಬಸವೆನ್ನಿರೆ
ಬಸವನ ಪಾದಕ ಶರಣನ್ನಿರೆ
ಮೂರು ಸುತ್ತಿನ ಕ್ವಾಟಿ
ಅದರೊಳು ಮೂರ್ತಗೊಂಡನ ಬಸವ
ಬಸವಕ ಬಸವೆನ್ನಿರೆ
ಬಸವನ ಪಾದಕ ಶರಣನ್ನಿರೆ
ನಾಲ್ಕು ಸುತ್ತಿನ ಕ್ವಾಟಿ
ಅದರೊಳು ನ್ಯಾಯಮೂರ್ತಿಯು ಬಸವ
ಬಸವಕ ಬಸವೆನ್ನಿರೆ
ಬಸವನ ಪಾದಕ ಶರಣನ್ನಿರೆ
ಐದು ಸುತ್ತಿನ ಕ್ವಾಟಿ
ಅದರೊಳು ಐಕ್ಯಮೂರ್ತಿಯು ಬಸವ
ಬಸವಕ ಬಸವೆನ್ನಿರೆ
ಬಸವನ ಪಾದಕ ಶರಣನ್ನಿರೆ
ಆರು ಸುತ್ತಿನ ಕ್ವಾಟಿ
ಅದರೊಳು ಅರಳಿ ನಿಂತಾನ ಬಸವ
ಬಸವಕ ಬಸವೆನ್ನಿರೆ
ಬಸವನ ಪಾದಕ ಶರಣನ್ನಿರೆ
ಏಳು ಸುತ್ತಿನ ಕ್ವಾಟಿ
ಅದರೊಳು ಜಗವನಾಳುವ ಬಸವ
ಬಸವಕ ಬಸವೆನ್ನಿರೆ
ಬಸವನ ಪಾದಕ ಶರಣನ್ನಿರೆ
ಎಂಟು ಸುತ್ತಿನ ಕ್ವಾಟಿ
ಶಿವನಿಗೆ ಕಂಟಲೆತ್ತೇನೋ ಬಸವ
ಬಸವಕ ಬಸವೆನ್ನಿರೆ
ಬಸವನ ಪಾದಕ ಶರಣನ್ನಿರೆ
ಒಂಭತ್ತು ಸುತ್ತಿನ ಕ್ವಾಟಿ
ಅದರೊಳು ತುಂಬಿ ಬಂದಾನೊ ಬಸವ
ಬಸವಕ ಬಸವೆನ್ನಿರೆ
ಬಸವನ ಪಾದಕ ಶರಣನ್ನಿರೆ
ಹತ್ತು ಸುತ್ತಿನ ಕ್ವಾಟಿ
ಅದರೊಳು ಸುತ್ತ ನೋಡಲು ಬಸವ
ಬಸವಕ ಬಸವೆನ್ನಿರೆ
ಬಸವನ ಪಾದಕ ಶರಣನ್ನಿರೆ

ಕೃಷಿಕರಿಗೆ ಒಕ್ಕಲುತನ ಮೂಲಾಧಾರ ಬಸವಣ್ಣ. ಅವನನ್ನು ನಂಬಿ ಬದುಕುಕಟ್ಟಿಕೊಂಡವರು. "ಎತ್ತು ಎತ್ತಲ್ಲ ಹತ್ತು ದಿಕ್ಕಿಗೆ ಸಲವೋನೆ ಬಸವಣ್ಣ
ಬಿತ್ತಿದ ಬೆಳವಲಕೆಬೆಳಗ್ಗ್ಯಾನೊ" ಎಂದು ನಂಬಿ ತಮ್ಮ ಜೀವನದುದ್ದಕ್ಕೂ ಅನ್ನದಾತ ಬಸವಣ್ಣನನ್ನು ಗೌರವಿಸುವ ಹಬ್ಬವಾಗಿ ನಮ್ಮ ನಾಡಿನ ಸಂಸ್ಕೃತಿಯ ದ್ಯೋತಕವಾಗಿದೆ.

ಕೊಡುಗೆ: ಡಾ. ಸರ್ವಮಂಗಳ ಶಾಸ್ತ್ರಿ 
Mannettina Amavasye a festival of farming community 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ