ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಸಿ. ಅನ್ನಪೂರ್ಣಮ್ಮ


 ಡಾ. ಸಿ. ಅನ್ನಪೂರ್ಣಮ್ಮ


ಡಾ. ಸಿ. ಅನ್ನಪೂರ್ಣಮ್ಮ ಖ್ಯಾತ ಪ್ರಸೂತಿ ಹಾಗೂ ಸ್ತ್ರೀರೋಗ ತಜ್ಞೆ  ಮತ್ತು ವೈದ್ಯಸಾಹಿತಿ.

ಅನ್ನಪೂರ್ಣಮ್ಮನವರು 1928ರ ಜುಲೈ 7 ರಂದು ಸಂಸ್ಕೃತ ಗ್ರಾಮವೆಂದು ಪ್ರಖ್ಯಾತವಾದ  ಮತ್ತೂರಿನಲ್ಲಿ ಜನಿಸಿದರು.  ತಂದೆ ವೇದಪಾರಂಗತರಾದ ಚನ್ನಕೇಶವ ಶಾಸ್ತ್ರಿಗಳು. ತಾಯಿ ಮೀನಾಕ್ಷಮ್ಮನವರು. 

ಅನ್ನಪೂರ್ಣಮ್ಮ ಅವರ ಪ್ರಾರಂಭಿಕ ಶಿಕ್ಷಣ ಹುಟ್ಟಿದೂರಿನಲ್ಲಿ ನಡೆಯಿತು.  ಮುಂದೆ ಬೆಂಗಳೂರಿನ ವಾಣಿವಿಲಾಸ ಹೈಸ್ಕೂಲು, ಮಹಾರಾಣಿ ಕಾಲೇಜುಗಳಲ್ಲಿ ಓದಿ ಇಂಟರ್ ಮೀಡಿಯೆಟ್ ಪರೀಕ್ಷೆಯಲ್ಲಿ  ಶೇ. 98ರಷ್ಟು ಅಂಕಗಳಿಸಿ ಮೈಸೂರು ಮೆಡಿಕಲ್ ಕಾಲೇಜಿನಲ್ಲಿ ಓದುವ ಅವಕಾಶ ಗಳಿಸಿಕೊಂಡರು. ಉನ್ನತ ದರ್ಜೆಯಲ್ಲಿ ಎಂ.ಬಿ.ಬಿ.ಎಸ್. ಪದವಿ ಪಡೆದ ಅನ್ನಪೂರ್ಣಮ್ಮನವರು, ವೆಲ್ಲೂರಿನಿಂದ ಡಿ.ಜಿ.ಓ., ನಾಗಪುರ ವಿಶ್ವವಿದ್ಯಾಲಯದಿಂದ ಪಡೆದ ಸ್ನಾತಕೋತ್ತರ (ಎಂ.ಎಸ್.) ಪದವಿಗಳನ್ನೂ ಗಳಿಸಿದರು. 

ಪ್ರತಿಷ್ಠಿತ ವೆಲ್ಲೂರಿನ ಕ್ರಿಶ್ಚಿಯನ್ ಮೆಡಿಕಲ್ ಕಾಲೇಜಿನಲ್ಲಿ ಪ್ರಾಧ್ಯಾಪಕಿಯಾಗಿ, ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆಯಾಗಿ 30 ವರ್ಷಕಾಲ ಸೇವೆ ಸಲ್ಲಿಸಿದ ಡಾ. ಅನ್ನಪೂರ್ಣಮ್ಮ  ಅವರು ಸಮಾಜ ಸೇವೆಯಲ್ಲಿ ಮುಂಚೂಣಿ ಕಾರ‍್ಯಕರ್ತೆ. ಕ್ಯಾನ್ಸರ್, ಏಡ್ಸ್, ಆಹಾರ, ನೈರ್ಮಲ್ಯ, ತಂಬಾಕು, ಸಿಗರೇಟು, ಮಾದಕ ದ್ರವ್ಯಗಳ ದುಷ್ಪರಿಣಾಮದ ಬಗ್ಗೆ ಆರೋಗ್ಯ ಸಂವಾದ, ಭಾಷಣ ಕಾರ‍್ಯಕ್ರಮಗಳನ್ನು ಅನೇಕ ಬಾರಿ ನಡೆಸಿದರು. ಅನ್ನಪೂರ್ಣಮ್ಮ ಅವರು ಅಮೆರಿಕಾ ಸಂಸ್ಥಾನದ ಉದ್ದಗಲಕ್ಕೂ ಸಂಚರಿಸಿದ್ದಲ್ಲದೆ ಜಪಾನ್, ಹಾಂಕಾಂಗ್, ಬ್ಯಾಂಕಾಕ್, ಸಿಂಗಾಪುರ್, ಫಿಲಿಫೈನ್ಸ್ ಮತ್ತು ಶ್ರೀಲಂಕಾಗಳಲ್ಲಿ ವ್ಯಾಪಕ ಪ್ರವಾಸ ಮಾಡಿದರು. ಅವರಿಗೆ ಸಂಗೀತದಲ್ಲೂ ಅಪಾರ ಆಸಕ್ತಿ.

ಅನ್ನಪೂರ್ಣಮ್ಮನವರು   ನಿವೃತ್ತಿಯ ನಂತರ 60ನೇ ವಯಸ್ಸಿನಲ್ಲಿ ವೈದ್ಯ ಸಾಹಿತ್ಯ ಕೃಷಿ ಆರಂಭಿಸಿದರು. ಅನ್ನಪೂರ್ಣಮ್ಮನವರು ಹದಿಹರೆಯದ ಹೆಣ್ಣು, ಹೊಸ ಜೀವದ ಹುಟ್ಟು, ಋತುಚಕ್ರ, ಶಿಶುಪ್ರಾಪ್ತಿಗೆ ವಿನೂತನ ವಿಧಾನಗಳು, ಶಿಶು ನಿರೀಕ್ಷೆಯಲ್ಲಿ ಸ್ತ್ರೀರಕ್ಷೆ, ವೈದ್ಯರೊಂದಿಗೆ ಮಾತುಕತೆ 1 ಹಾಗೂ 2 ಸಂಪುಟ, ಪ್ರೌಢ ಮಹಿಳೆ, ಮಗು-ಒಂದು ಅದ್ಭುತಸೃಷ್ಟಿ, ತಾಯಿಲೋಕ, ಸ್ತನ್ಯಪಾನದ ಶ್ರೇಷ್ಠತೆ, ಗೃಹಿಣಿಯರೇ ಕುಶಲವೇ, ಕನ್ನಡ ವೈದ್ಯಕೀಯ ವಿಶ್ವಕೋಶಕ್ಕೆ ಲೇಖನಗಳು, ಮಾನವ ಸಂತಾನೋತ್ಪತ್ತಿ ಜೀವಜಗತ್ತು, ನೀವು ಮತ್ತು ನಿಮ್ಮ ಮಗು, ಸುರಕ್ಷಿತ ತಾಯ್ತನ ಮತ್ತು ಶಿಶುವಿನ ಏಳಿಗೆ ಭಾಗ-1, ಪುಟ್ಟ ಮಗು ಹೀಗಿರಲಿ ಮುಂತಾದ ಅನೇಕ ಕೃತಿಗಳನ್ನು ರಚಿಸಿದ್ದಾರೆ
ಡಾ. ಅನ್ನಪೂರ್ಣಮ್ಮನವರು ವಿಕಲಚೇತನರ (ಅಂಗವಿಕಲರ) ಶ್ರೇಯೋಭಿವೃದ್ಧಿಗಾಗಿ ‘ಅನ್ನಪೂರ್ಣಮ್ಮ ಪ್ರತಿಷ್ಠಾನ’ ಸ್ಥಾಪಿಸಿದರು.  ಪ್ರತಿವರ್ಷ ವಿಕಲಚೇತನರಿಗೆ ಕನ್ನಡಕ, ತಳ್ಳು ಕುರ್ಚಿ, ಕೃತಕ ಕಾಲುಗಳು ಮುಂತಾದ ಹಲವಾರು ಅಗತ್ಯ ಉಪಕರಣಗಳನ್ನು ನೀಡುವುದು; ವೈದ್ಯಕೀಯ ವಿಭಾಗದಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದವರಿಗೆ, ಸಮಾಜದಲ್ಲಿ ಪ್ರಸೂತಿ ವಿಭಾಗದಲ್ಲಿ ಗಣನೀಯ ಸೇವೆಗೈದ ವೈದ್ಯರಿಗೆ  ಸನ್ಮಾನ ಮುಂತಾದ  ಕಾರ‍್ಯಕ್ರಮಗಳ ವ್ಯವಸ್ಥೆ ಮಾಡಿದ್ದಾರೆ. 

ಡಾ. ಸಿ. ಅನ್ನಪೂರ್ಣಮ್ಮ ಅವರಿಗೆ ಬಿ.ಸಿ. ರಾಯ್ ಪ್ರಶಸ್ತಿ, ವಿಶ್ವ ಮಹಿಳಾ ಪ್ರಶಸ್ತಿ, ಅತ್ತಿಮಬ್ಬೆ ಪ್ರಶಸ್ತಿ, ಸದೋದಿತ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ಅನುಪಮ ಪ್ರಶಸ್ತಿ, ವಿಶ್ವೇಶ್ವರಯ್ಯ ಪ್ರಶಸ್ತಿ, ವೈದ್ಯ ಸಾಹಿತ್ಯಶ್ರೀ ಪ್ರಶಸ್ತಿ, ಪಿ.ಎಸ್. ಶಂಕರ್ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಆಳ್ವಾಸ್ ನುಡಿಸಿರಿ ಪ್ರಶಸ್ತಿ, ಡಾ. ಆಫ್ ಮಿಲೇನಿಯಂ ಮುಂತಾದ ಅನೇಕ ಗೌರವಗಳು ಸಂದಿವೆ.  ಅವರ  ಅಭಿಮಾನಿಗಳು ಅರ್ಪಿಸಿದ ಗೌರವ ಗ್ರಂಥಗಳು ‘ಸಂಜೀವಿನಿ’ ಮತ್ತು ‘ಅನ್ನಪೂರ್ಣ’.

On the birth day of Doctor and writer Dr. C. Annapurnamma

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ