ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಆರ್ ಎಸ್ ರಾಜಾರಾಂ



ಆರ್ ಎಸ್ ರಾಜಾರಾಂ


ರಂಗಭೂಮಿಯ ಪ್ರಖ್ಯಾತ ಕಲಾವಿದರಾದ ರಾಜಾರಾಂ ಅವರು ಕೋಲಾರ ಜಿಲ್ಲೆಯ ಕೆ.ಜಿ.ಎಫ್‌ ನಲ್ಲಿ 1938ರ ಜುಲೈ 10ರಂದು ಜನಿಸಿದರು. ತಂದೆ ಜಿ.ಎಸ್‌. ರಘುನಾಥರಾವ್‌ ಅವರು ಮತ್ತು ತಾಯಿ ಶಾರದಾಬಾಯಿಯವರು. ರಾಜಾರಾಂ ಅವರು ಕರ್ನಾಟಕ ಸರ್ಕಾರದ ಸಚಿವಾಲಯದಲ್ಲಿ ಉದ್ಯೋಗಕ್ಕೆ ಸೇರಿ ಅಧೀನ ಕಾರ್ಯದರ್ಶಿ ಹುದ್ದೆಗೇರಿ ನಿವೃತ್ತಿ ಹೊಂದಿದವರು.

ರಂಗಭೂಮಿಯಲ್ಲಿ ಆಸಕ್ತರಾದ ರಾಜಾರಾಂ ಅವರು ಮಲ್ಲೇಶ್ವರದ ಸ್ನೇಹಿತರೊಡನೆ ‘ರಸಿಕ ರಂಜನಿ ಕಲಾವಿದರು’ ಸ್ಥಾಪಿಸಿದರು. ಪರ್ವತವಾಣಿ, ಕೈಲಾಸಂ, ದಾಶರಥಿ ದೀಕ್ಷಿತ್‌, ಕೆ. ಗುಂಡಣ್ಣ ಮುಂತಾದವರ ನಾಟಕಗಳಲ್ಲಿ ಅಭಿನಯಿಸಿದರು. ಹಣ ಹದ್ದು, ಮಗು ಮದ್ವೆ, ಪಂಚಭೂತ, ಹೋಂರೂಲು, ‘ಅವರೇ ಇವರು- ಇವರೇ ಅವರು’ ಮೊದಲಾದವು ಇವರ ಅಂದಿನ ಕೆಲವು ನಾಟಕಗಳು.

ರಾಜಾರಾಂ ಸರಸ್ವತಿ ಕಲಾ ನಿಕೇತನ, ಪ್ರಧಾನ ಮಿತ್ರ ಮಂಡಲಿ, ಸುಪ್ರಭಾತ ಕಲಾವಿದರು, ಕಮಲ ಕಲಾ ಮಂದಿರ ಮುಂತಾದ ಸಂಸ್ಥೆಗಳೊಡನೆ ನಿರಂತರ ಒಡನಾಟ ಹೊಂದಿದ್ದರು.

ರಾಜಾರಾಂ ಅವರು 1964ರಲ್ಲಿ ಸಚಿವಾಲಯ ಉದ್ಯೋಗಿಗಳೊಡನೆ 'ಸಚಿವಾಲಯ ಸಾಂಸ್ಕೃತಿಕ ಸಂಘ' ಸ್ಥಾಪಿಸಿದರು. ಆ ಮೂಲಕ ಕೋಲ್ಕತ್ತದಲ್ಲಿ ನಡೆದ ಸಚಿವಾಲಯ ಕ್ಲಬ್‌ ನೌಕರರ ನಾಟಕ ಸ್ಪರ್ಧೆಗಳಲ್ಲಿ ಭಾಗಿಯಾದರು. ಕರ್ನಾಟಕ ಸರಕಾರದ ವಾರ್ತಾ ಮತ್ತು ಪ್ರಚಾರ ಇಲಾಖೆಯ ಸಂಗೀತ ಮತ್ತು ನಾಟಕ ವಿಭಾಗದ ಅನೇಕ ನಾಟಕಗಳಲ್ಲಿಯೂ ನಟಿಸಿದರು.

ರಾಜಾರಾಂ ಅವರು 1972ರಿಂದ 'ನಟರಂಗ' ಮತ್ತು 1983ರಿಂದ 'ವೇದಿಕೆ'ಯ ರಂಗ ಚಟುವಟಿಕೆಗಳಲ್ಲಿ ತೊಡಗಿ ಸಿ.ಆರ್. ಸಿಂಹ ಅವರ ನಿರ್ದೇಶನದಲ್ಲಿ ಹಲವಾರು ನಾಟಕಗಳಲ್ಲಿ ಅಭಿನಯಿಸಿ ಖ್ಯಾತಿ ಪಡೆದರು. ಇದಲ್ಲದೆ ಬಿ.ವಿ. ಕಾರಂತ, ಎಂ.ಎಸ್‌. ಸತ್ಯು, ಶ್ರೀನಿವಾಸ್‌ ಜಿ. ಕಪ್ಪಣ್ಣ, ಜಯತೀರ್ಥ ಜೋಶಿ, ಸಿ.ಎಚ್‌. ಲೋಕನಾಥ್‌, ಆರ್. ನಾಗೇಶ್‌, ಪ್ರಕಾಶ್‌ ಬೆಳವಾಡಿ ಇವರ ನಿರ್ದೇಶನದ ಮಂಡೋದರಿ, ವಿಗಡವಿಕ್ರಮರಾಯ, ಎಚ್ಚಮನಾಯಕ, ಟಿಪ್ಪುಸುಲ್ತಾನ್‌, ಕಿತ್ತೂರು ಚೆನ್ನಮ್ಮ, ರಕ್ತಾಕ್ಷಿ, ಸದಾರಮೆ, ಕಾಕನ ಕೋಟೆ, ತುಘಲಕ್, ಮೃಚ್ಛಕಟಿಕ, ಸಂಕ್ರಾಂತಿ, ಅಗ್ನಿ ಮತ್ತು ಮಳೆ ಮುಂತಾದ ನಾಟಕಗಳಲ್ಲಿ ಅಭಿನಯಿಸಿದ ಖ್ಯಾತಿ ರಾಜಾರಾಂ ಅವರದ್ದು . ಹೈದರಾಬಾದ್‌, ಚೆನ್ನೈ, ಕೋಲ್ಕತ್ತಾ, ಕಾಶ್ಮೀರ ಮುಂಬಯಿ, ಚಂಡಿಗರ್ ಮುಂತಾದೆಡೆ ನಾಟಕ ಪ್ರದರ್ಶನದಲ್ಲಿ ಭಾಗಿಯಾದರು.

ರಾಜಾರಾಂ ಹಲವು ಚಲನಚಿತ್ರಗಳು ಮತ್ತು ಕಿರುತೆರೆಯ ಕಥಾನಕಗಳಲ್ಲೂ ಅಭಿನಯಿಸಿದ್ದಾರೆ. ರಾಜಾರಾಂ ಅವರಿಗೆ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿಯೂ ಸೇರಿದಂತೆ ಅನೇಕ ಸಂಘ ಸಂಸ್ಥೆಗಳು ಮತ್ತು ಪ್ರತಿಷ್ಠಾನಗಳ ಗೌರವಗಳು ಸಂದಿವೆ..

ಈ ಹಿರಿಯ ರಂಗ ಕಲಾವಿದರಿಗೆ ಹುಟ್ಟು ಹಬ್ಬದ ಶುಭ ಹಾರೈಕೆಗಳನ್ನು ಹೇಳೋಣ.

On the birth day theatre artiste R. S. Rajaram Sir

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ