ನಿರ್ಮಲಾನಂದನಾಥ
ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ
ಆದಿಚುಂಚನಗಿರಿ ಮಹಾಸಂಸ್ಥಾನದ ಪ್ರಸಕ್ತ ಮಠಾಧೀಶರಾದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ವಿಜ್ಞಾನ ಮತ್ತು ಆಧ್ಯಾತ್ಮಿಕ ಭಾವಗಳ ಸೇತುವೆಯಂತಿರುವವರು. ಒಂದೆಡೆ ವೇದಶಾಸ್ತ್ರಗಳ ಪಾಂಡಿತ್ಯ ಸಾಧಿಸಿದ್ದರೆ ಮತ್ತೊಂದೆಡೆ ಐಐಟಿಯಲ್ಲಿ ಎಂ.ಟೆಕ್ ಸಾಧಿಸಿದವರು. ವಿಜ್ಞಾನ ಮತ್ತು ಆಧ್ಯಾತ್ಮಿಕ ಸಂಯೋಗಭರಿತ ಅವರ ಉಪನ್ಯಾಸಗಳು ಕೇಳುವುದಕ್ಕೆ ಬಲು ಸೊಗಸು.
ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ನಾಥ ಪರಂಪರೆಯ 72ನೇ ಪೀಠಾಧ್ಯಕ್ಷರಾದ ಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿಯವರು 1969ರ ಜುಲೈ 20ರಂದು, ತುಮಕೂರು ಜಿಲ್ಲೆಯ, ಗುಬ್ಬಿ ತಾಲೂಕಿನ, ಸಿ.ಎಸ್.ಪುರ ಹೋಬಳಿಯ, ಚೀರನಹಳ್ಳಿಯಲ್ಲಿ ಜನಿಸಿದರು.
ತಂದೆ ನರಸೇಗೌಡರು ಮತ್ತು ತಾಯಿ ನಂಜಮ್ಮನವರು. ಶ್ರೀಗಳವರ ಪೂರ್ವಾಶ್ರಮದ ಹೆಸರು ನಾಗರಾಜು ಎಂದಿತ್ತು.
ಪ್ರಾಥಮಿಕ ಶಿಕ್ಷಣವನ್ನು ಸ್ವಗ್ರಾಮದಲ್ಲಿಯೇ ಪೂರೈಸಿದ ಶ್ರೀಗಳು, ಮಾಧ್ಯಮಿಕ ಶಿಕ್ಷಣವನ್ನು ನೆಟ್ಟೇಕೆರೆಯಲ್ಲಿ ನಡೆಸಿದರು. ಮಾವಿನಹಳ್ಳಿಯಲ್ಲಿ ಪ್ರೌಢಶಿಕ್ಷಣ ಪೂರೈಸಿದರು. ತುಮಕೂರಿನ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಡಿಪ್ಲೊಮಾ ಪದವಿ ಪಡೆದು, ಏಳನೇ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಕ್ಕಾಗಿ ಜಿಂದಾಲ್ ಸಂಸ್ಥೆ ನೀಡುವ ಸ್ಕಾಲರ್ ಶಿಪ್ ಪಡೆದುಕೊಂಡಿದ್ದರು. ಮುಂದೆ ಮೈಸೂರಿನ ಹಿಂದುಳಿದ ವರ್ಗದ ವಸತಿ ನಿಲಯದಲ್ಲಿದ್ದುಕೊಂಡು ಎನ್.ಐ.ಇ ಕಾಲೇಜಿನಲ್ಲಿ ಎಂಜಿನಿಯರಿಂಗ್ ಅಭ್ಯಾಸ ಮಾಡಿದರು. ಚೆನ್ನೈನ ಐಐಟಿಯಲ್ಲಿ ಎಂ.ಟೆಕ್ ಪದವಿ ಪಡೆದುಕೊಂಡರು. ಪುಣೆಯ ಭಾರತ ಸರ್ಕಾರದ ಸಂಶೋಧನಾ ಕೇಂದ್ರಕ್ಕೆ ವಿಜ್ಞಾನಿಯಾಗಿ ಆಯ್ಕೆಯಾಗಿದ್ದರು. ಆದರೆ, ರಾಮನಗರದ ಬಳಿ ಇರುವ ಆದಿಚುಂಚನಗಿರಿ ಅಂಧರ ಶಾಲೆಯಲ್ಲಿ ಬೋಧಿಸುವ ವೃತ್ತಿಯನ್ನು ಆಯ್ದುಕೊಂಡರು. ಅಧ್ಯಾತ್ಮದ ಸೆಳೆತ ಹೊಂದಿದ್ದ ಇವರು ಶ್ರೀಮಠದ ಸಂಸ್ಕೃತ ವೇದಾಗಮ ಮಹಾವಿದ್ಯಾಲಯದಲ್ಲಿ ಅದ್ವೈತ ವೇದಾಂತ ವಿದ್ವದುತ್ತಮ ಮತ್ತು ಶೈವಾಗಮದಲ್ಲಿ ಸ್ನಾತಕೋತ್ತರ ಪದವಿ ಪಡೆದುಕೊಂಡರು.
1994-95ರಲ್ಲಿ ಚಿಕ್ಕಬಳ್ಳಾಪುರ ಶಾಖಾ ಮಠದ ಪೀಠಾಧ್ಯಕ್ಷರಾದ ಸಂದರ್ಭದಲ್ಲಿ ನಾಗರಾಜು ಅವರಿಗೆ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಎಂದು ನಾಮಕರಣ ಮಾಡಲಾಯಿತು. ದಿವಂಗತ ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿಗಳ ಅಣತಿಯಂತೆ 2013ರ ಜನವರಿ 14ರಂದು ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ನೂತನ ಉತ್ತರಾಧಿಕಾರಿಗಳನ್ನಾಗಿ ನೇಮಕ ಮಾಡಲಾಯಿತು. ಶ್ರೀಗಳು ಶ್ರೀಮಠದ ಜವಾಬ್ದಾರಿಯನ್ನು ವಹಿಸಿಕೊಂಡು ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರು, ಆದಿಚುಂಚನಗಿರಿಮಠದ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳು ಹಾಗೂ ವಿಸ್ತರಣೆಯ ನಿಟ್ಟಿನಲ್ಲಿ ಅಧ್ಯಯನ ಕೈಗೊಳ್ಳಲು ದೇಶ, ವಿದೇಶಗಳನ್ನು ಸುತ್ತಿಬಂದಿದ್ದಾರೆ. ಶ್ರೀ ನಿರ್ಮಲಾನಂದನಾಥರು ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಮಠದ ಅಭಿವೃದ್ಧಿ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಧರ್ಮ ಮತ್ತು ವಿಜ್ಞಾನದ ನಡುವೆ ಅಂತರ ಇರಬಾರದು ಎಂಬುದು ಶ್ರೀಗಳ ನಿಲುವು. ಮಠದ ಆವರಣದಲ್ಲಿ ಉಚಿತ ವೈ-ಫೈ ಸೇವೆ ಒದಗಿಸುವಂತಹ ಚಿಂತನೆಗಳನ್ನೂ ಕಾರ್ಯರೂಪಕ್ಕೆ ತಂದಿದ್ದಾರೆ.
ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರ ಕೆಲವು ಉಕ್ತಿಗಳು ಇಂತಿವೆ:
ಧರ್ಮವಿಲ್ಲದೆ ವಿಜ್ಞಾನ ಇರಬಾರದು. ಹಾಗೇಯೆ ವಿಜ್ಞಾನ ಇಲ್ಲದ ಧರ್ಮವೂ ಸರಿಯಲ್ಲ. ಧರ್ಮ ಮತ್ತು ವಿಜ್ಞಾನದ ನಡುವೆ ಹೊಂದಾಣಿಕೆ ಇದ್ದರೆ ಉತ್ತಮ. ಹಾಗಾಗಿ ಇಂದಿನ ಮಕ್ಕಳು ಮುಂದೆ ವಿಜ್ಞಾನಿಗಳಾಗಿ ದೇಶವನ್ನು ಅಭಿವೃದ್ಧಿಗೊಳಿಸಬೇಕು.
ಜನರನ್ನು ಸುಜ್ಞಾನದೆಡೆಗೆ ಕರೆದೊಯ್ಯಲು ಹೊರಟಿರುವ ನಮ್ಮಂತಹ ಸಂತರಲ್ಲಿ ಒಂದೇ ಎಂಬ ಭಾವನೆ ಕೇವಲ ಸೈದ್ಧಾಂತಿಕವಾಗಿ ಇರದೇ, ಅನುಷ್ಠಾನದ ರೂಪದಲ್ಲಿ ಇದ್ದದ್ದೇ ಅದಲ್ಲಿ, ಬಹುಶಃ ಯಾವುದೇ ಒಂದು ಧರ್ಮವನ್ನು ಇನ್ನೊಂದು ಧರ್ಮದವರು, ಯಾವುದೇ ಸ್ವಾರ್ಥವನ್ನು ಇಟ್ಟುಕೊಂಡು ಒಡೆಯಲು ಸಾಧ್ಯವಿಲ್ಲ.
ಮುಕ್ತ ಮನಸ್ಸಿನಿಂದ ಅಂದು ಕೃಷ್ಣ ಕೊಟ್ಟಂತಹ ಸಂದೇಶವನ್ನು ಪಾಲಿಸಿದರೆ ನಮ್ಮ ಬದುಕಿಗೆ ಬೇಕಾದ ಜ್ಞಾನ ಪ್ರಾಪ್ತಿಯಾಗುತ್ತದೆ. ಅಂದಿನ ಸಮಾಜಕ್ಕೆ ಮಾತ್ರವಲ್ಲದೆ ಇಂದಿನ ಸಮಾಜಕ್ಕೂ ಕೃಷ್ಣ ಹೆಚ್ಚು ಪ್ರಸ್ತುತ. ಆದರೆ,ನಾವು ಕೃಷ್ಣನನ್ನು ಅರ್ಥ ಮಾಡಿಕೊಳ್ಳುವಲ್ಲಿ ಎಡವಿದ್ದೇವೆ.
ಇಂದಿನ ದಿನಗಳಲ್ಲಿ ಧರ್ಮ ಧರ್ಮಗಳ ನಡುವೆ ಸಾಕಷ್ಟು ಕ್ಲೇಷ, ವಿಭಿನ್ನ ಭಾವನೆಗಳು ಪಸರಿಸಿ ಸಮಾಜದ ಶಾಂತಿ ಮತ್ತು ಸಾಮರಸ್ಯ ಹಾಳಾಗುತ್ತಿದೆ. ಧರ್ಮಗಳ ನಡುವಿನ ಒಡಕು, ವೈಮನಸ್ಸುಗಳು ಒಂದು ಕಡೆಯಾದರೆ. ಒಂದೇ ಧರ್ಮದಲ್ಲಿರುವ ಹಲವಾರು ಸಂತರು ಮತ್ತು ಮಠಗಳ ನಡುವೆ ಸಾಕಷ್ಟು ಭಿನ್ನಾಭಿಪ್ರಾಯವಿದೆ. ಇದು ತುಂಬಾ ಅಪಾಯಕಾರಿ.
On the birth day of a blend of spirituality and science Sri Sri Nirmalanandanatha Swamiji
ಕಾಮೆಂಟ್‌ಗಳು