ಪಾರ್ವತಿ ಜಿ. ಐತಾಳ
ಡಾ. ಪಾರ್ವತಿ ಐತಾಳ ಅವರು ಬರಹಗಾರರಾಗಿ, ಹಲವು ಭಾಷಾ ಪ್ರವೀಣರಾಗಿ ಮತ್ತು ಬೋಧಕರಾಗಿ ಸಾಧನೆ ಮಾಡಿರುವವರು.
ಪಾರ್ವತಿ ಐತಾಳ ಅವರು ಕಾಸರಗೋಡು ಜಿಲ್ಲೆಯ ಧರ್ಮತ್ತಡ್ಕ ಎಂಬ ಹಳ್ಳಿಯಲ್ಲಿ 1957ರ ಜುಲೈ 23ರಂದು ಜನಿಸಿದರು.
ತಮ್ಮ ಪದವಿಯವರೆಗಿನ ಶಿಕ್ಷಣವನ್ನು ಕಾಸರಗೋಡಿನಲ್ಲಿ ನಡೆಸಿದ ಪಾರ್ವತಿ ಅವರು 1981ರಲ್ಲಿ ಮೈಸೂರಿನ ಮಾನಸಗಂಗೋತ್ರಿಯಿಂದ ಇಂಗ್ಲಿಷ್ ಸಾಹಿತ್ಯದಲ್ಲಿ ಎಂ.ಎ. ಪದವಿ ಪಡೆದರು. 2012ರಲ್ಲಿ ಕಣ್ಣೂರು ವಿಶ್ವವಿದ್ಯಾನಿಲಯದಿಂದ ಪಿಎಚ್.ಡಿ ಸಾಧನೆ ಮಾಡಿದರು.
ಮುಲ್ಕಿಯ ವಿಜಯಾ ಕಾಲೇಜಿನಲ್ಲಿ ಏಳು ವರ್ಷಗಳವರೆಗೆ ಪ್ರಾಧ್ಯಾಪಕಿಯಾಗಿದ್ದ ಪಾರ್ವತಿಯವರು, ಗಂಗಾಧರ ಐತಾಳರೊಡನೆ ವಿವಾಹವಾದ ಬಳಿಕ 1988ರಲ್ಲಿ ಕುಂದಾಪುರದ ಭಂಡಾರ್ಕರ್ಸ್ ಕಾಲೇಜಿನಲ್ಲಿ ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದರು.
ಪಾರ್ವತಿ ಅವರದ್ದು ಸಾಹಿತ್ಯದಲ್ಲಿ ವೈವಿಧ್ಯಮಯ ಸಾಧನೆ. ಸಣ್ಣ ಕಥೆ, ಕವನ, ನಾಟಕ ಇತ್ಯಾದಿಗಳಲ್ಲದೆ ಅನುವಾದ ಕ್ಷೇತ್ರದಲ್ಲಿ ಅವರದ್ದು ಪ್ರಧಾನ ಸಾಧನೆ. ಪಾರ್ವತಿ ಅವರ ಬರಹಗಳು ಪ್ರಾರಂಭದಲ್ಲಿ ಉದಯವಾಣಿ, ಮುಂಗಾರು ಇತ್ಯಾದಿ ಪತ್ರಿಕೆಗಳಲ್ಲಿ ಮೂಡಿಬರುತ್ತಿದ್ದವು.
ಮಾತೃಭಾಷೆ ಕನ್ನಡ ಹಾಗೂ ಅಧ್ಯಯನದ ಇಂಗ್ಲಿಷ್ ಅಲ್ಲದೆ ಮಲಯಾಳಂ, ಹಿಂದಿ, ತುಳು ಭಾಷೆಗಳನ್ನು ಶ್ರದ್ಧೆಯಿಂದ ಶಾಸ್ತ್ರೀಯವಾಗಿ ಅಭ್ಯಾಸ ಮಾಡಿರುವುದು ಅವರ ಅನುವಾದ ಕಾರ್ಯದಲ್ಲಿ ಮಹತ್ವದ ಪಾತ್ರವಹಿಸಿದೆ.
ಪಾರ್ವತಿ ಅವರ ಸ್ವತಂತ್ರ ಕೃತಿಗಳಲ್ಲಿ ಹೊನ್ನ ಬೆಳಕೆ ಬಾ ಕವನ ಸಂಕಲನ, ಅಚಲಾ ಮತ್ತು ಸುಟ್ಟಗಾಯದ ಕಲೆಗಳು ಕಥಾ ಸಂಕಲನಗಳು, ಒಡಲ ಬೆಂಕಿ ಕಾದಂಬರಿ, ಸಮಕ್ಷಮ, ಸಮಕಾಲಿಕ, ಕಡಲ ತೀರದ ಮರಳು, ಭಾಷಾಂತರ ಜಗತ್ತು, ಮಹಿಳಾ ಚಿಂತನೆಯ ವಿಭಿನ್ನ ನೆಲೆಗಳು, ಭಾಷಾಂತರ ಕೃತಿ ಸಂಚಯ ಮೊದಲಾದ ವೈಚಾರಿಕ ಲೇಖನ ಸಂಕಲನಗಳು, ತಂತ್ರಗಾರ್ತಿ, ಮಳೆಬಿಲ್ಲು, ಮಹಾಬೆಳಗು ಮತ್ತು ಇತರ ನಾಟಕಗಳು ಮೊದಲಾದ ನಾಟಕಗಳು ಸೇರಿವೆ. 'ಭಾಷಾಂತರ ಜಗತ್ತು : ಅನುವಾದ ಜಗತ್ತಿನಲೊಂದು ಸುತ್ತು' ಎಂಬುದು ಪಾರ್ವತಿ ಐತಾಳರ ಮತ್ತೊಂದು ಮಹತ್ವದ ಕೃತಿ. ನವಕರ್ನಾಟಕದ ವಿಶ್ವಮಾನ್ಯರು ಮಾಲಿಕೆಯಲ್ಲಿ 9 ಮಂದಿ ವಿಶ್ವಮಾನ್ಯ ವ್ಯಕ್ತಿಗಳ ಬದುಕು ಬರಹಗಳ ಕುರಿತು ಕೃತಿಗಳನ್ನು ರಚಿಸಿದ್ದಾರೆ.
'ಜೀವಿಕ್ಯಾನ ಮರನ್ನು ಪೋಯ ಸ್ತ್ರೀ' ಎಂಬ ಕಾದಂಬರಿಯನ್ನು ' ಬದುಕಲು ಮರೆತ ಸ್ತ್ರೀ 'ಎಂದು ಕನ್ನಡ ಕೃತಿಯಾಗಿಸಿದ್ದಾರೆ. ಇವರ ಮಲಯಾಳಂನ ಅನುವಾದಗಳಲ್ಲಿ ಎಂ.ಟಿ.ವಾಸುದೇವನ್ ನಾಯರ್ ಅವರ (ಕಾದಂಬರಿಗಳು) ದುರ್ಬೀಜ, ಮಂಜು, ಯುಗಾಂತ ಮತ್ತು ಇತರ ಕತೆಗಳು (ಸಣ್ಣ ಕತೆಗಳು); ಜ್ಞಾನಪೀಠ ಪುರಸ್ಕೃತ ಕವಿ ಒಎನ್‍ವಿ ಕುರುಪ್ ಅವರ 'ಸ್ವಯಂವರಂ' ಅನುವಾದ ‘ಮಾಧವಿ-ಕಥನ ಕಾವ್ಯ', ಸಿ. ಹೆಚ್. ಮಾರಿಯತ್ ಅವರ 'ಕಾಲವು ಅಳಿಸಿದ ಕಾಲ ಗುರುತುಗಳು, ಶ್ರೀದೇವಿ ಕೆ.ನಾಯರ್ ಅವರ ಮಲಯಾಳದ 10 ಕಥೆಗಾರ್ತಿಯರು ಮುಂತಾದ ಕೃತಿಗಳು ಪ್ರಕಟಗೊಂಡಿವೆ. ಕೆ. ವಿ. ತಿರುಮಲೇಶ್ ಅವರ ಆಯ್ದ ಕವಿತೆಗಳನ್ನೂ ನಿಸಾರ್ ಅಹಮದರ ಕವಿತೆಗಳನ್ನೂ ಮಲಯಾಳಕ್ಕೆ ಅನುವಾದಿಸಿದ್ದಾರೆ. ಇವರ ಆಯ್ದ ಕೃತಿಗಳ ಪರಿಚಯ 'ಭಾಷಾಂತರ ಕೃತಿ ಸಂಚಯ' ಎಂದು ಪ್ರಕಟಗೊಂಡಿದೆ.
ಹಿಂದಿಯಿಂದ ಉಪೇಂದ್ರನಾಥ ಅಶ್ಕ ಅವರ ಕಥೆಗಳು 'ಅಶ್ಕರ ಕಥೆಗಳು' ಹೆಸರಿನಲ್ಲಿ; ಡಾ| ಧರ್ಮೇಂದ್ರ ಗುಪ್ತ ಅವರ ಕಾದಂಬರಿ 'ಬರುವೆ ನಾ ಮತ್ತೊಮ್ಮೆ ಎಂದಾದರೂ' ಹೆಸರಿನಲ್ಲಿ; ಜಿ.ಜೆ.ಹರಿಜಿತ ಅವರ ನಾಟಕ ‘ಪ್ರಿನ್ಸಿಪಾಲ್ ಪರಶುರಾಮ’ ಎಂಬ ಹೆಸರಿನಲ್ಲಿ ಅನುವಾದಗೊಂಡಿವೆ. ಇದಲ್ಲದೆ ಪಾರ್ವತಿ ಅವರು ಜಿ.ಜೆ.ಹರಿಜಿತ ಅವರ ಇಂಗ್ಲಿಷ್ ಮೂಲದ ನಾಟಕವನ್ನು ‘ಇದು ಯೂನಿವರ್ಸಿಟಿ’ ಎಂದೂ ಇಂಗ್ಲಿಷಿನ ರೂಪರ್ಟ ಬ್ರೂಕ್ ಅವರ ನಾಟಕವನ್ನು ‘ಬಿನ್ನೆ’ ಎಂದು ತುಳುವಿಗೂ ಅನುವಾದಿಸಿದ್ದಾರೆ. ಮಲೆಯಾಳದಲ್ಲೂ ಇಂಗ್ಲಿಷಿನಲ್ಲೂ ಕೃತಿರಚನೆ ಮಾಡಿದ್ದಾರೆ.
ಪಾರ್ವತಿ ಐತಾಳ ಅವರಿಗೆ ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ಮಲ್ಲಿಕಾ ದತ್ತಿನಿಧಿ ಪ್ರಶಸ್ತಿ, ಗೋವಿಂದರಾವ್ ಸ್ಮಾರಕ ಕಾದಂಬರಿ ವಿಮರ್ಶಾ ಬಹುಮಾನ, ಎಚ್.ವಿ. ಸಾವಿತ್ರಮ್ಮ ದತ್ತಿನಿಧಿ ಪ್ರಶಸ್ತಿ, ಡಾ.ಶಿವರಾಮಕಾರಂತ ಸಾಹಿತ್ಯ ಪ್ರಶಸ್ತಿ, ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಗೌರವ ಪ್ರಶಸ್ತಿ, ಕಾಳಿಯುತ್ತ್ ದಾಮೋದರನ್ ಮೆಮೋರಿಯಲ್ ಅವಾರ್ಡ್, ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಪ್ರತಿಷ್ಠಾನದ ಸಾಹಿತ್ಯ ಪ್ರಶಸ್ತಿ, ವಸುದೇವ ಭೂಪಾಲಂ ದತ್ತಿ ಪ್ರಶಸ್ತಿ, ಶಿವಮೊಗ್ಗ ಕರ್ನಾಟಕ ಸಂಘದ ಎಸ್.ವಿ.ಪರಮೇಶ್ವರ ಭಟ್ ಅನುವಾದ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸಾಹಿತ್ಯಶ್ರೀ ಪ್ರಶಸ್ತಿಯೂ ಸೇರಿದಂತೆ ಅನೇಕ ಗೌರವಗಳು ಸಂದಿವೆ.
ಆತ್ಮೀಯರೂ, ಸಾಧಕರೂ ಆದ ಪಾರ್ವತಿ ಐತಾಳರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.
Happy birthday Parvathi Aithal🌷🙏🌷

ಕಾಮೆಂಟ್‌ಗಳು