ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಮುದ್ದಣ್ಣ ಶಿರಹಟ್ಟಿ


 ಮುದ್ದಣ್ಣ ಶಿರಹಟ್ಟಿ


ಮುದ್ದಣ್ಣ ಶಿರಹಟ್ಟಿ ರಂಗವಿನ್ಯಾಸಕಾರರಾಗಿ, ಬೆಳಕು ಸಂಯೋಜನೆ ತಜ್ಞರಾಗಿ ಮತ್ತು ರಂಗಶಂಕರದ ತಾಂತ್ರಿಕ ಮುಖ್ಯಸ್ಥರಾಗಿ ರಂಗಭೂಮಿಯ ದೊಡ್ಡ ಹೆಸರು.

ಮುದ್ದಣ ಶಿರಹಟ್ಟಿ 1960ರ ಜುಲೈ 23ರಂದು ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲ್ಲೂಕಿನ ರಟ್ಟೀಹಳ್ಳಿಯಲ್ಲಿ ಜನಿಸಿದರು. ತಂದೆ ವೀರಪ್ಪ ಶಿರಹಟ್ಟಿ. ತಾಯಿ ಸುನಂದಮ್ಮ. 

ಮುದ್ದಣ ಶಿರಹಟ್ಟಿ ರಂಗಭೂಮಿಯ ಕಡೆಗೆ ಆಕರ್ಷಿತರಾಗಿ ರಂಗತಜ್ಞರಾದ ಪ್ರಸನ್ನ, ವಿ. ರಾಮಮೂರ್ತಿ, ಸಿಜಿಕೆ, ಪದ್ದಣ್ಣ, ಕಪ್ಪಣ್ಣ, ಆರ್. ನಾಗೇಶ್‌, ಶಂಕರನಾಗ್‌, ಪರೇಶ್‌ ಕುಮಾರ್, ಚಂದ್ರಕುಮಾರ್ ಸಿಂಗ್‌ ಅವರೊಡನೆ ಕಲಿಯುತ್ತ ಬೆಳೆದರು. ಸಿಕ್ಕು, ಟಿಂಗರ ಬುಡ್ಡಣ್ಣ, ತಾಯಿ,  ಸಂಕ್ರಾಂತಿ, ಹಿಟ್ಟಿನ ಹುಂಜ, ಹುಚ್ಚು ಕುದುರೆ, ಶೋಕಚಕ್ರ, ಹೀಗೆ ಹಲವು ನೂರು ನಾಟಕಗಳಿಗೆ ರಂಗವಿನ್ಯಾಸ, ಬೆಳಕು ಸಂಯೋಜನೆ ಹೊಣೆಗಾರಿಕೆ ನಿರ್ವಹಿಸುತ್ತಾ ಬಂದರು.  ಇದಲ್ಲದೆ ಕರ್ನಾಟಕ ನಾಟಕ ಅಕಾಡಮಿ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ, ಮಧುರೆಯ ನಾಟಕೋತ್ಸವ, ಶಿವಮೊಗ್ಗದ ಕುವೆಂಪು ನಾಟಕೋತ್ಸವ, ವಾರ್ತಾ ಮತ್ತು ಪ್ರಚಾರ ಇಲಾಖೆಯ ಸ್ವಾತಂತ್ರ‍್ಯೋತ್ಸವ ಕಾರ್ಯಕ್ರಮಗಳು, ಗಿರೀಶ ಕಾರ್ನಾಡರ ನಾಟಕೋತ್ಸವ, ಮುಂತಾದ ಅನೇಕ ನಾಟಕೋತ್ಸವಗಳಿಗೆ, ಸಾಂಸ್ಕೃತಿಕ ಉತ್ಸವಗಳಿಗೆ ಬೆಳಕು ಸಂಯೋಜನೆಯ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿದರು. ರಂಗಶಂಕರದ ತಾಂತ್ರಿಕ ನಿರ್ದೇಶಕರಾಗಿ ಅಲ್ಲಿನ ವ್ಯವಸ್ಥಾ ನಿರ್ವಹಣೆಗಳಲ್ಲಿ ಇವರ ಪಾತ್ರ ಹಿರಿದಿದೆ.

ಮುದ್ದಣ ಶಿರಹಟ್ಟಿ ಅನೇಕ ಚಲನಚಿತ್ರ ಮತ್ತು ದೂರದರ್ಶದ ಧಾರಾವಾಹಿಗಳಿಗೂ ಸಂಪನ್ಮೂಲ ವ್ಯಕ್ತಿಯಾಗಿ ದುಡಿದಿದ್ದಾರೆ. ಸಾವಿತ್ರಿ (ಟಿ.ಎಸ್‌.ರಂಗ), ಅರಿವು (ಕಟ್ಟೆರಾಮಚಂದ್ರ), ಬಸವಣ್ಣ (ಪ್ರಸನ್ನರ ಹಿಂದಿ ಸೀರಿಯಲ್‌), ಅವಲೋಕನ (ಶ್ರೀನಿವಾಸ ತಾವರೆಗೇರಿ) ಮುಂತಾದವುಗಳು ಇವುಗಳಲ್ಲಿ ಸೇರಿವೆ.
 
ಡಾ. ರಾಜ್‌ ನಾಟಕೋತ್ಸವದಲ್ಲಿ ಹಿಟ್ಟಿನ ಹುಂಜ ನಾಟಕಕ್ಕೆ, ಅಂತರ ಕಾಲೇಜು ನಾಟಕ ಸ್ಪರ್ಧೆಯ ಸುಲ್ತಾನ್‌ ಟಿಪ್ಪೂ , ಉಡುಪಿ ನಾಟಕೋತ್ಸವದ ಗುಣಮುಖ ಮುಂತಾದ‍ ಅನೇಕ ನಾಟಕಗಳಿಗೆ ರಂಗ ವಿನ್ಯಾಸ, ಅತ್ಯುತ್ತಮ ಬೆಳಕು ಸಂಯೋಜನೆಯ ಪ್ರಶಸ್ತಿ ಹೀಗೆ ಅವರಿಗೆ ಸಂದ ಬಹುಮಾನಗಳು ಅನೇಕ. ಮುದ್ದಣ್ಣ ಅವರಿಗೆ ರಂಗಭೂಮಿಯ ಅನುಪಮ ಕೊಡುಗೆಗಳಿಗಾಗಿ ಸಿ.ಜಿ. ಕೃಷ್ಣಸ್ವಾಮಿ ಜೀವಮಾನ ಗೌರವ ಕೂಡಾ ಸಂದಿದೆ.

ರಂಗಶಂಕರದಲ್ಲಿ ತಂತ್ರಜ್ಞಾನ ಮುಖ್ಯಸ್ಥರಾಗಿ 18 ವರ್ಷಗಳಿಂದ‍ ಸೇವೆ ಸಲ್ಲಿಸಿರುವ ಮುದ್ದಣ ಅವರ ಕುರಿತ ಬಣ್ಣನೆ ಒಂದೆಡೆ ಹೀಗಿದೆ, “ಅವರಿಗೆ ರಂಗಶಂಕರದಲ್ಲಿನ ಪ್ರತಿಯೊಂದು ಪ್ರಕ್ರಿಯೆಯೂ ಗೊತ್ತು, ಮೆಕಾನಿಕಲ್, ಎಲೆಕ್ಟ್ರಿಕಲ್ ಅಥವಾ ಫೈನಾನ್ಷಿಯಲ್".  ಹಾಗೆ ಎಲ್ಲವೂ ಅಂತರ್ಗತವಾಗಿಸಿಕೊಂಡಿರುವುದು ಅವರ ಕಾಯಕ ತಪಸ್ಸು.

ಮುದ್ದಣ್ಣ ಶಿರಹಟ್ಟಿ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.

On the birthday of great stage maker Muddanna Shirahatti 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ