ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಕಾದಂಬಿನಿ ಗಂಗೂಲಿ


 ಕಾದಂಬಿನಿ ಗಂಗೂಲಿ 


ಕಾದಂಬಿನಿ ಗಂಗೂಲಿ ಬ್ರಿಟಿಷ್ ಭಾರತದ ಸಾಮ್ರಾಜ್ಯದಲ್ಲಿನ ಇಬ್ಬರು ಪ್ರಥಮ ಮಹಿಳಾ ಪದವಿಧರೆಯಲ್ಲಿ ಒಬ್ಬರು ಮತ್ತು ದಕ್ಷಿಣ ಏಷ್ಯಾದಲ್ಲಿಯೇ ಪಾಶ್ಚತ್ಯ ವೈದ್ಯ ತರಬೇತಿ ಪಡೆದ ಪ್ರಥಮ ವೈದ್ಯೆ.

ಕಾದಂಬಿನಿ ಗಂಗೂಲಿ ಬ್ರಹ್ಮ ಸಮಾಜದ ಕಾರ್ಯಕರ್ತರಾಗಿದ್ದ ಬ್ರಜ ಕಿಶೋರ್ ಬಸು ಅವರ ಪುತ್ರಿಯಾಗಿ 1861ರ ಜುಲೈ  18ರಂದು ಭಾಗಲ್ಪುರದಲ್ಲಿ  ಜನಿಸಿದರು. ಅವರ ಕುಟುಂಬದವರು ಈಗ ಬಾಂಗ್ಲಾದೇಶದಲ್ಲಿರುವ ಬಾರಿಸಲ್ ಪ್ರದೇಶದ ಚಾಂದ್ಸಿ ಮೂಲದವರು. ಬ್ರಜ ಕಿಶೋರ್ ಬಸು  ಭಾಗಲ್ಪುರದ ಶಾಲೆಯ ಮುಖ್ಯೋಪಾಧ್ಯಾಯರಾಗಿದ್ದರು. ಬ್ರಜ ಕಿಶೋರ್ ಬಸು  ಅವರು  ಅಭಯ್ ಚರಣ್ ಮಲ್ಲಿಕ್ ಅವರ ಜೊತೆಗೂಡಿ ಮಹಿಳೆಯರ ಅಭಿವೃದ್ಧಿಗಾಗಿ "ಭಾಗಲ್ಪುರ ಮಹಿಳಾ ಸಮಿತಿ"ಯನ್ನು 1893ರಲ್ಲಿ ಸ್ಥಾಪನೆ ಮಾಡಿದರು.

ಕಾದಂಬಿನಿಯವರು ತಮ್ಮ ವಿದ್ಯಾಭ್ಯಾಸವನ್ನು ಭಂಗ ಮಹಿಳಾ ವಿದ್ಯಾಲಯದಲ್ಲಿ ಪ್ರಾರಂಭ ಮಾಡಿ, ಬೆಥುನೆ ಶಾಲೆಯಲ್ಲಿರುವಾಗ 1878ರಲ್ಲಿ ಕೋಲ್ಕತ್ತಾ ವಿಶ್ವವಿದ್ಯಾಲಯದ ಪ್ರವೇಶ ಪರೀಕ್ಷೆಯಲ್ಲಿ ತೇರ್ಗಡೆಯಾದ ಪ್ರಥಮ ಮಹಿಳೆ ಎನಿಸಿದರು. ಅವರ ಶ್ರಮದ ಫಲವಾಗಿ ಬೆಥುನೆ ಶಾಲೆಯವರು ಮೊದಲ ಬಾರಿಗೆ ಲಲಿತ ಕಲೆಯನ್ನು ಹಾಗೂ ನಂತರ ಪದವಿ ಶಿಕ್ಷಣಗಳನ್ನು 1883ರಲ್ಲಿ ಜಾರಿಗೆ ತಂದರು. ಕಾದಂಬಿನಿ ಮತ್ತು ಚಂದ್ರಮುಖಿ ಬಸು  ಬೆಥುನೇ ಶಾಲೆಯಿಂದ ತೇರ್ಗಡೆ ಹೊಂದಿದ ಪ್ರಥಮ ವಿದ್ಯಾರ್ಥಿಗಳಾದರು.  ಈ ಈರ್ವರು ಭಾರತದಲ್ಲಿ ಮತ್ತು ಸಮಸ್ತ ಬ್ರಿಟಿಷ್ ಸಾಮ್ರಾಜ್ಯದಲ್ಲೇ ಪದವಿ ಪಡೆದ ಪ್ರಥಮ ಮಹಿಳೆಯರು. 

ಕಾದಂಬಿನಿಯವರಿಗೆ ವೈದ್ಯಕೀಯ ಓದುವ ತೀವ್ರ ಹಂಬಲವಿತ್ತು. 1875ರಲ್ಲಿ ಮದ್ರಾಸ್ ಮೆಡಿಕಲ್ ಕಾಲೇಜು ಮಹಿಳೆಯರಿಗೆ ಪ್ರವೇಶ ತೆರೆಯಲು ನಿರ್ಧರಿಸಿತಾದರೂ ಕೊಲ್ಕತ್ತಾ ಮೆಡಿಕಲ್ ಕಾಲೇಜು ಮಹಿಳೆಯರ ಪ್ರವೇಶವನ್ನು ಒಪ್ಪಿರಲಿಲ್ಲ. ಕಾದಂಬಿನಿ ತಮ್ಮ ಪತಿ ದ್ವಾರಕಾನಾಥ್ ಗಂಗೂಲಿ ಅವರೊಡನೆ ಸತತ ಪ್ರಯತ್ನ ನಡೆಸಿ ಕೊಲ್ಕತ್ತಾ ಮೆಡಿಕಲ್ ಕಾಲೇಜಿನಲ್ಲಿ ಅವಕಾಶ ಪಡೆದೇಬಿಟ್ಟರು.  

ಕಾದಂಬಿನಿ ಎಲ್ಲ ಮಹಿಳಾ ವಿರೋಧಗಳನ್ನು ಎದುರಿಸಿಯೂ 1883ರ ಜೂನ್ 23ರಂದು ಕೊಲ್ಕತ್ತಾ ಮೆಡಿಕಲ್ ಕಾಲೇಜು ಸೇರಿದರು.‍ ಎರಡು ವರ್ಷಗಳ ಕಾಲ ಅವರಿಗೆ ತಿಂಗಳಿಗೆ 15 ರೂಪಾಯಿ ಪ್ರತಿಭಾ ವಿದ್ಯಾರ್ಥಿ ವೇತನ ದೊರಕಿತು.  1886ರಲ್ಲಿ ಅವರಿಗೆ ವೈದ್ಯಕೀಯ ಪದವಿ ಸಂದಿತು. ಅವರು ದಕ್ಷಿಣ ಏಷ್ಯಾದಲ್ಲೇ ಪಾಶ್ಚಿಮಾತ್ಯ ವೈದ್ಯಕೀಯ ಶಿಕ್ಷಣ ಪಡೆದ ಪ್ರಥಮರಾದರು. 
ಮತ್ತೋರ್ವ ಭಾರತೀಯ ಮಹಿಳೆ ಆನಂದಿ ಗೋಪಾಲ್ ಜೋಶಿ ಅವರೂ  ಅದೇ ವರ್ಷ 1886ರಲ್ಲಿ ಅಮೆರಿಕದಲ್ಲಿ ವೈದ್ಯರಾಗಿ ಉತ್ತೀರ್ಣರಾದರು.

1888ರಲ್ಲಿ ಕಾದಂಬಿನಿ ಅವರ ಈ ಸಾಧನೆ ಫ್ಲಾರೆನ್ಸ್ ನೈಟಿಂಗೇಲ್ ಅವರನ್ನು ಆಕರ್ಷಿಸಿತು. ಆಕೆ ತಮ್ಮ ಗೆಳತಿಗೆ ಬರೆದ ಪತ್ರದಲ್ಲಿ ಕದಂಬಿನಿ ಅವರ ಕುರಿತು ಹೆಚ್ಚು ವಿವರ ತಿಳಿಸಲು ಕೋರಿದರು.  

ಕಾದಂಬಿನಿ ಅವರಿಗೆ ಮಹಿಳೆ ಎಂಬ ಕಾರಣಕ್ಕೆ ಓದುವಾಗ ಅಪಾರ ಕಷ್ಟ ನೀಡಲಾಯಿತು.  ಹಲವಾರು ವೈದ್ಯ ಪ್ರಾಧ್ಯಾಪಕರಿಗೆ ಮಹಿಳೆಯರನ್ನು ವೈದ್ಯಕೀಯ ವಿದ್ಯಾಲಯದೊಳಗೆ ಬಿಟ್ಟಿದ್ದಕ್ಕೆ ತೀವ್ರ ಅಸಮಾಧಾನವಿತ್ತು.  ಒಬ್ಬ ಅಧ್ಯಾಪಕ ಕಾದಂಬಿನಿ ಅವರನ್ನು ಒಂದು ಪರೀಕ್ಷೆಯಲ್ಲಿ ಪಾಸು ಮಾಡಲು ಒಪ್ಪದ ಕಾರಣ ಇವರಿಗೆ ಸಲ್ಲಬೇಕಾದ ಎಂಬಿ ಪದವಿ ಸಲ್ಲದೆ ಗ್ರಾಜುಯೇಟ್ ಆಫ್ ಮೆಡಿಕಲ್ ಕಾಲೇಜ್ ಆಫ್ ಬೆಂಗಾಲ್ (ಜಿಎಮ್‍ಸಿಬಿ) ಪದವಿ ನೀಡಲಾಯಿತು.

ಹೀಗೆ ಅಮೆರಿಕದಲ್ಲಿ ವೈದ್ಯ ಪದವಿ ಪಡೆದ ಆನಂದಿ ಗೋಪಾಲ್ ಜೋಶಿ  ಮತ್ತು ಕಾದಂಬಿನಿ  ಭಾರತದ ಪ್ರಥಮ ಮಹಿಳಾ ವೈದ್ಯರಾದರು. 1881ರಲ್ಲಿ ಅಬಲ ಬೋಸ್ ಎಂಬುವರು ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡರೂ, ಕೊಲ್ಕತ್ತಾ ವೈದ್ಯಕೀಯ ಕಾಲೇಜಿನಲ್ಲಿ ಪ್ರವೇಶ ದೊರಕದ ಕಾರಣ ವೈದ್ಯಕೀಯ ವ್ಯಾಸಂಗ ಮಾಡಲು ಮದ್ರಾಸಿಗೆ ಬಂದರು.  ಅಲ್ಲಿಯೂ ಅವರು ತೇರ್ಗಡೆಯಾಗಲಿಲ್ಲ.

ಕಾದಂಬಿನಿಯವರು ಸಾಕಷ್ಟು ಕಾಲ ಶಿಕ್ಷಕರು ಹಾಗೂ ಸಂಪ್ರದಾಯಸ್ಥ ಸಮಾಜಗಳಿಂದ ಉಂಟಾದ ವಿರೋಧವನ್ನು ಧೈರ್ಯವಾಗಿ ಎದುರಿಸಿದರು. ಪದವಿ ಪಡೆದ ನಂತರ ಲೇಡಿ ದಫ್ಫ್ರಿನ್ ಆಸ್ಪತ್ರೆಯಲ್ಲಿ  ಕೆಲಸ ಮಾಡಲಾರಂಭಿಸಿದರು. ಅಲ್ಲಿದ್ದ ವಿಶೇಷ ತಜ್ಞರು, ಇವರಿಗೆ ಎಂಬಿ ಪದವಿ ದೊರಕಿಲ್ಲವೆಂದು ಗೌರವ ತೋರದ ಹಾಗೆ ವರ್ತಿಸಿದರು. ತಾವು ವೈದ್ಯಕೀಯದಲ್ಲಿ ಗೌರವ ಗಳಿಸಲು ಇನ್ನೂ ಹೆಚ್ಚಿನದನ್ನು ಸಾಧಿಸಬೇಕೆಂದು ಬೇಗ ಅರಿತ ಕದಂಬಿನಿ 1893ರಲ್ಲಿ ಇಂಗ್ಲೆಂಡಿಗೆ ತೆರಳಿ, ಎಲ್ ಅರ್ ಸಿ ಪಿ (ಎಡಿಂಬರ್ಗ್),  ಎಲ್ ಆರ್ ಸಿ ಎಸ್  (ಗ್ಲಾಸ್‍ಗೌ), ಮತ್ತು ಎಲ್ ಎಫ್ ಪಿ ಎಸ್  (ಡಬ್ಲಿನ್) ಪರೀಕ್ಷೆಗಳಲ್ಲಿ  ಉತ್ತರ್ಣತೆ ಸಾಧಿಸಿ ಭಾರತಕ್ಕೆ ಮರಳಿದರು. ಹೀಗೆ ಬಂದ ಅವರು ಸೀನಿಯರ್ ಸ್ಪೆಷಲಿಸ್ಟ್ ಸ್ಥಾನ ಗಳಿಸಿದ್ದೇ ಅಲ್ಲದೆ ಪ್ರಸಿದ್ಧರಾಗಿ ಖಾಸಗಿ ವೈದ್ಯಕೀಯ ವ್ಯವಹಾರವನ್ನೂ ಯಶಸ್ವಿಯಾಗಿ ನಡೆಸಲಾರಂಭಿಸಿದರು. 

ಕಾದಂಬಿನಿ ಅವರು 1883ರಲ್ಲಿ ಬ್ರಹ್ಮ ಸಮಾಜದ  ಕಾರ್ಯಕರ್ತರೂ ಹಾಗೂ ಮಹಿಳಾ ಅಭಿವೃದ್ಧಿ ಚಳುವಳಿಯ ನಾಯಕರೂ ಆದ ದ್ವಾರಕಾನಾಥ್ ಗಂಗೂಲಿಯವರನ್ನು ವಿವಾಹವಾಗಿದ್ದರು. ಗಂಡ ಹೆಂಡತಿಯರಿಬ್ಬರೂ ಹೆಣ್ಣು ಮಕ್ಕಳ ಕ್ಷೇಮಾಭಿವೃದ್ಧಿ ಹಾಗೂ ಪೂರ್ವಭಾರತದಲ್ಲಿನ ಕಲ್ಲಿದ್ದಲು ಗಣಿಗಳಲ್ಲಿ ಕೆಲಸ ಮಾಡುತ್ತಿದ್ದ ಸ್ತ್ರೀಯರ ಏಳಿಗೆಗಾಗಿ ನಡೆದ ಸಾಮಾಜಿಕ ಚಳುವಳಿಗಳಲ್ಲಿ ಅತ್ಯಂತ ಕಾಳಜಿಯಿಂದ ತಮ್ಮನ್ನು ತೊಡಗಿಸಿಕೊಂಡಿದ್ದರು. 

1889ರಲ್ಲಿ ನಡೆದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‍ನ ಐದನೇ ಅಧಿವೇಶನದಲ್ಲಿ ಪಾಲ್ಗೊಂಡ ಆರು ಮಹಿಳೆಯರಲ್ಲಿ ಕಾದಂಬಿನಿ ಅವರೂ ಒಬ್ಬರಾಗಿದ್ದರು. 1906ರಲ್ಲಿ ಬಂಗಾಳ ವಿಭಜನೆಗೊಂಡ ಸಂದರ್ಭದಲ್ಲಿ ಇವರು ಮಹಿಳೆಯರ ಅಧಿವೇಶನವನ್ನು ನಡೆಸಿದರು.  1908ರಲ್ಲಿ ದಕ್ಷಿಣ ಆಫ್ರಿಕಾದ ಟ್ರಾನ್ಸ್ವಾಲ್ ಪ್ರದೇಶದ ಭಾರತೀಯ ಕಾರ್ಮಿಕರ ಆಂದೋಲನಕ್ಕೆ ಸಹಾನುಭೂತಿ ವ್ಯಕ್ತಪಡಿಸುವ ಸಲುವಾಗಿ ಕೋಲ್ಕತ್ತಾದಲ್ಲಿ ಸಭೆಯನ್ನು ಸಂಯೋಜಿಸದ್ದೇ ಅಲ್ಲದೆ, ಅದರ ಅಧ್ಯಕ್ಷತೆಯನ್ನು ಕೂಡ ವಹಿಸಿದ್ದರು. ಕಾರ್ಮಿಕರಿಗೆ ಹಣದ ಸಹಾಯ ಮಾಡಲು ಸಂಘವನ್ನೂ ಕಟ್ಟಿದರು. ಕೊಲ್ಕತ್ತಾ ಮೆಡಿಕಲ್ ಕಾಲೇಜಿನಲ್ಲಿ ಮಹಿಳಾ ವಿದ್ಯಾರ್ಥಿಗಳಿಗೆ ಹೆಚ್ಚು ಅವಕಾಶ ನೀಡಬೇಕೆಂದು ಒತ್ತಾಯ ತಂದು ಯಶಸ್ವಿಯಾದರು.

ಎಂಟು ಮಕ್ಕಳ ತಾಯಿಯಾದ ಕಾದಂಬಿನಿ ಅವರು, ಸಂಸಾರದ ಕಡೆಗೆ ಗಮನ ನೀಡಲು ಬಹಳ ಸಮಯ ನೀಡಬೇಕಾಗಿತ್ತು. ಅವರು ಕಸೂತಿಯಲ್ಲಿಯೂ ನಿಪುಣೆಯಾಗಿದ್ದರು.

ಕಾದಂಬಿನಿ ಅವರು ತಮ್ಮ ಕಾಲದಲ್ಲಿ ಸ್ತ್ರೀವಿರೋಧಿ ಸಮಾಜದ ಬಹು ನಿಂದನೆಗಳನ್ನು ಎದುರಿಸಬೇಕಾಯಿತು.  ಬಾಂಗ್ಲಭಾಷಿ ಎಂಬ ಪತ್ರಿಕೆಯ ಸಂಪಾದಕ ಸ್ರ್ರೀಪರ ಧ್ವನಿಯಾಗಿದ್ದ‍ ಕದಂಬಿನೀ ಅವರನ್ನು ನಡತೆಗೆಟ್ಟಾಕೆ ಎಂದು ಬಿಂಬಿಸಿದ.  ಕಾದಂಬಿನಿಯವರ ಪತಿ ದ್ವಾರಕಾನಾಥರು ಆತನನ್ನು ನ್ಯಾಯಾಲಯಕ್ಕೆಳೆದು ಆರು ತಿಂಗಳ ಕಾರಾಗೃಹ ಶಿಕ್ಷೆಯಾಗುವಂತೆ ಮಾಡಿದರು.

ಕಾದಂಬಿನಿ ಗಂಗೂಲಿ ಅವರು 1923ರ ಅಕ್ಟೋಬರ್ 3ರಂದು ನಿಧನರಾದರು. ಅವರ ಕುರಿತು ಹಲವು ಟಿವಿ ಧಾರಾವಾಹಿಗಳು ಮೂಡಿವೆ.

ವಿಚಿತ್ರವೆಂದರೆ ಅಮೆರಿಕದಲ್ಲಿ ಪದವಿ ಪಡೆದು ಕೇವಲ 3 ತಿಂಗಳು ವೈದ್ಯಕೀಯ ನಡೆಸಿ ಕ್ಷಯರೋಗದಿಂದ ನಿಧನರಾದ ಆನಂದಿ ಬಾಯಿ ಜೋಷಿ ಅವರಿಗೆ  ಸಿಕ್ಕಷ್ಟು ಪ್ರಚಾರ ಭಾರತದಲ್ಲಿ ಪದವಿ ಪಡೆದು ಹೆಚ್ಚುಕಾಲ ವೈದ್ಯಕೀಯ ವೃತ್ತಿ ನಡೆಸಿದ ಕಾದಂಬಿನಿ ಅವರಿಗೆ ಸಿಕ್ಕಿಲ್ಲ.

On the birth anniversary of Kadambini Ganguly, First Lady to get medical degree in South Asia

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ