ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ನೂಲೇನೂರು ಶಂಕರಪ್ಪ



ನೂಲೇನೂರು ಶಂಕರಪ್ಪ

ನೂಲೇನೂರು ಶಂಕರಪ್ಪ ಅವರು ವಾಗ್ಗೇಯಕಾರರಾಗಿ ಮತ್ತು ಗಮಕಿಗಳಾಗಿ ನಾಡಿನಲ್ಲಿ ಪ್ರಸಿದ್ಧರಾಗಿದ್ದವರು.

ನೂಲೇನೂರು ಶಂಕರಪ್ಪನರು ಚಿತ್ರದುರ್ಗ ಜಿಲ್ಲೆಯ ಹೊಳೆಲ್ಕೆರೆ ತಾಲ್ಲೂಕಿನ ರಾಮಗಿರಿಯ ಬಳಿಯ ನೂಲೇನೂರಿನಲ್ಲಿ 1892ರ ಜುಲೈ 30ರಂದು ಜನಿಸಿದರು. ತಂದೆ ಕೃಷ್ಣಶರ್ಮ ಅವರು ಮತ್ತು ತಾಯಿ ಸುಬ್ಬಮ್ಮನವರು. ಚಿಕ್ಕಂದಿನಲ್ಲೇ ತಂದೆಯ ಪ್ರೀತಿಯಿಂದ ವಂಚಿತರಾದ ಶಂಕರಪ್ಪನವರು ಬಂಧುಗಳ ಸಹಾಯದಿಂದ ವಿದ್ಯಾಭ್ಯಾಸ ನಡೆಸಿದರು.

ನೂಲೇನೂರು ಶಂಕರಪ್ಪನರು ಲೋಯರ್ ಸೆಕೆಂಡರಿಯ ನಂತರ ಉಪಾಧ್ಯಾಯವೃತ್ತಿ ಆರಂಭಿಸಿದರು.‍ ಅವರು ಪ್ರತಿದಿನ ಸಂಜೆ ಭರಮಸಾಗರದಲ್ಲಿ ನಡೆಸುತ್ತಿದ್ದ ಕಾವ್ಯವಾಚನದಿಂದ ಪ್ರಸಿದ್ಧಿ ಪಡೆದರು. ಮೊಳಕಾಲ್ಮೂರು ಶಾಲೆಗೆ ಬಡ್ತಿ ಪಡೆದರು.
ಜೈಮಿನಿ ಭಾರತ ವಾಚನದಿಂದ ಪುರಸಭೆಯ ವತಿಯಿಂದ ಪೌರರು ಜೋಡಿಶಾಲು, ರೇಷ್ಮೆ ಪಂಚೆ ಸನ್ಮಾನ ನೀಡಿದರು.

ಪ್ರೌಢ ಶಿಕ್ಷಣ ತರಬೇತಿಗಾಗಿ ಶಂಕರಪ್ಪನರು ಮೈಸೂರಿಗೆ ಬಂದರು. ಮೈಸೂರಿನಲ್ಲೂ ಜೈಮಿನಿಭಾರತ ವಾಚನದಿಂದ ಸನ್ಮಾನ ಸಂದಿತು. ಹೊನ್ನಾಳಿ ಶಾಲೆಗೆ ವರ್ಗವಾದಾಗಾಗ ಅಲ್ಲಿಯೂ ಶಂಕರ ಜಯಂತಿ, ರಾಮನವಮಿ, ಮಧ್ವನವಮಿ, ಕೃತ್ತಿಕೋತ್ಸವ ಸಂದರ್ಭಗಳಲ್ಲಿ ತೊರವೆ ರಾಮಾಯಣ, ಶಂಕರವಿಜಯ, ಮಧ್ವವಿಜಯ ಕಾವ್ಯವಾಚನದಿಂದ ಪ್ರಸಿದ್ಧಿ ಪಡೆದರು.

ಅಧ್ಯಾತ್ಮಿಕ, ವಿಜ್ಞಾನ, ಧಾರ್ಮಿಕ ಕ್ಷೇತ್ರಗಳಲ್ಲಿ ನೂಲೇನೂರು ಶಂಕರಪ್ಪನವರದು ಮಹತ್ಸಾಧನೆ. ಅನಂತಸುಬ್ಬರಾಯರೊಡನೆ ಟೈಪರೈಟರ್ ವಿನ್ಯಾಸ ಕಾರ್ಯದಲ್ಲಿ ಭಾಗವಹಿಸಿದರು. ಸೂರ್ಯಸಿದ್ಧಾಂತ ಓದಿ ಗ್ರಿಗೋರಿಯನ್‌ ಕ್ಯಾಲೆಂಡರಿಗೆ ತಾಳೆ ಹಾಕಿ ಸರ್ವ ಸ್ವೀಕೃತ ಕ್ಯಾಲೆಂಡರ್ ಸಂಶೋಧನೆಯ ಕೆಲಸ ಮಾಡುತ್ತಿದ್ದರು. ಆದರೆ ಅದು ಅಪೂರ್ಣವಾಗಿ ನಿಂತಿತು.

ನೂಲೇನೂರು ಶಂಕರಪ್ಪನವರು ಗಮಕ ಕಲೆಯಲ್ಲಿ ಬೆಳೆದ ಆಸಕ್ತಿಯಿಂದ ರಂಗ ವಿಠಲದಾಸ ಅಂಕಿತದಲ್ಲಿ ನೂರಾರು ಕೀರ್ತನೆಗಳನ್ನು ರಚಿಸಿದರು. ಇದಲ್ಲದೆ ಶಂಕರಲಿಂಗ ಭಗವಾನರ ಸಂಕ್ಷಿಪ್ತ ಚರಿತ್ರೆ (ಲಾವಣಿ ಕಾವ್ಯ), ಚಿಂತನಾಮೃತ (ವಚನಗಳು), ಜೀವನ ಚರಿತ್ರೆ, ಕನ್ನಡ ಗಣಿತಕೋಶ (ಸಂಶೋಧನೆ) ಮುಂತಾದ ಕೃತಿಗಳನ್ನು ರಚಿಸಿದರು.

ನೂಲೇನೂರು ಶಂಕರಪ್ಪನವರು ಸೂರ್ಯ ಸಿದ್ಧಾಂತ ಪರಾಮರ್ಶೆ (ಕ್ಯಾಲೆಂಡರ್ ಸಂಶೋಧನೆಗೆ) ಶಾಸ್ತ್ರಗ್ರಂಥ ಮುಂತಾದ ಪ್ರಸಿದ್ಧ ಗ್ರಂಥಗಳ ಸಂಶೋಧನೆಯಲ್ಲಿ ತೊಡಗಿದ್ದಾಗಲೇ 1954 ವರ್ಷದ ಮೇ 12ರಂದು ಈ ಲೋಕವನ್ನಗಲಿದರು.

Nulenur Shankarappa

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ