ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಸುಭದ್ರಮ್ಮ ಮನ್ಸೂರ್


 ಸುಭದ್ರಮ್ಮ ಮನ್ಸೂರ್ 


ಮಹಾನ್ ರಂಗಭೂಮಿ ಮತ್ತು ಸಂಗೀತ ಕಲಾವಿದೆ ಸುಭದ್ರಮ್ಮ ಮನ್ಸೂರ್.  ಸುಭದ್ರಮ್ಮನರು 2020ರ ಜುಲೈ 15ರಂದು ಈ ಲೋಕವನ್ನಗಲಿದರು.  

ಸುಭದ್ರಮ್ಮ ಮನ್ಸೂರ್ ಏಳು ದಶಕಗಳ ಕಾಲ ನಿರಂತರವಾಗಿ ವೃತ್ತಿ ನಟಿಯಾಗಿ ತಮ್ಮ ಜೀವನವನ್ನೇ ರಂಗಭೂಮಿಗೆ ಸಮರ್ಪಿಸಿಕೊಂಡಿದ್ದವರು.

ಸುಭದ್ರಮ್ಮ ಮನ್ಸೂರ್  1939ರಲ್ಲಿ ಬಳ್ಳಾರಿಯಲ್ಲಿ ಸುಭದ್ರಾ ಆಗಿ ಜನಿಸಿದರು.  ತಾಯಿ ಭಾಗ್ಯಮ್ಮ. ತಂದೆ ಮೆಕಾನಿಕ್ ಜ್ವಾಲಾಪತಿ.   ಸುಭದ್ರಾ ಅವರು ತಮ್ಮ ಹನ್ನೊಂದನೇ ವಯಸ್ಸಿಗೆ ಬಳ್ಳಾರಿಯಲ್ಲಿ ಕ್ಯಾಂಪ್ ಮಾಡಿದ್ದ ಶ್ರೀ ಸುಮಂಗಲಿ ನಾಟ್ಯಸಂಘ ಎಂಬ ನಾಟಕ ಕಂಪನಿ ಸೇರಿ ಬಾಲ ನಟಿಯಾಗಿ ಬಣ್ಣ ಹಚ್ಚಿದರು. ಒಂದೊಂದಾಗಿ ಹಾಡುಗಳನ್ನು ಕಲಿತರು. ಕ್ರಮೇಣ ಎಲ್ಲ ರೀತಿಯ ಪಾತ್ರಗಳಲ್ಲಿ ನಟಿಸುವ ಅವಕಾಶ ಪಡೆದರು. ಅಭಿನಯ, ಹಾಡುಗಾರಿಕೆ ಒಟ್ಟೊಟ್ಟಿಗೆ ಕಲಿಯುತ್ತ 'ಹಾಡು ನಟಿ'ಯಾದರು. ನಾಟಕ ಕಂಪನಿ ಕರ್ನಾಟಕ ಮತ್ತು ಆಂಧ್ರದ ಹಲವು ಪಟ್ಟಣಗಳಲ್ಲಿ ಎರಡು ವರ್ಷ ಕ್ಯಾಂಪ್ ಮುಂದುವರಿಸಿತು. ಸುಭದ್ರ ಅದೇ ಕಂಪನಿಯ ಹಿರಿಯ ನಟರಾಗಿದ್ದ ಲಿಂಗರಾಜ ಮನ್ಸೂರ್ ಅವರನ್ನು  1952ರಲ್ಲಿ  ವರಿಸಿ ಸುಭದ್ರಾ ಮನ್ಸೂರ್ ಆದರು. ಮಲ್ಲಿಕಾರ್ಜುನ ಮನ್ಸೂರರ ಸಂಬಂಧಿಗಳಾಗಿದ್ದ ಲಿಂಗರಾಜ ಮನ್ಸೂರ್ ಅವರು ಅದಾಗಲೇ ವೃತ್ತಿ ರಂಗಭೂಮಿಯ ಪ್ರಖ್ಯಾತ ನಟರೆನಿಸಿಕೊಂಡಿದ್ದರು. 

ಸುಭದ್ರಾ- ಮನ್ಸೂರು ದಂಪತಿಗಳು 17 ವರ್ಷಗಳ ಕಾಲ ಏಣಗಿ ಬಾಳಪ್ಪನವರ ಕಲಾವೈಭವ ನಾಟ್ಯಸಂಘ, ಮಾಸ್ಟರ್ ಹಿರಣ್ಣಯ್ಯ ಮಿತ್ರಮಂಡಳಿ ಹಾಗೂ ಮಾಚ ಮತ್ತು ಹನುಮಂತರ ಬೆನಕಟ್ಟಿ ನಾಟಕ ಕಂಪನಿಗಳಲ್ಲಿ ನಟ ನಟಿಯರಾಗಿ ಸೇವೆ ಸಲ್ಲಿಸಿದರು.

ಹದಿನೇಳು ವರ್ಷದ ನಾಟಕ ಕಂಪನಿ ಜೀವನ ಸಾಕೆನಿಸಿದ ದಂಪತಿಗಳು 1966ರಲ್ಲಿ ಬಳ್ಳಾರಿಗೆ ಹಿಂದಿರುಗಿ ಬಂದು ನೆಲೆಸಿದರು. ಲಿಂಗರಾಜ ಅವರ ವಯಸ್ಸು ಐವತ್ತು ಮೀರಿತ್ತು. ಸುಭದ್ರಮ್ಮ ಅವರಿಗೆ 27ರ ಹರಯ. ಲಿಂಗರಾಜ ಅವರು ವಿಶ್ರಾಂತ ಜೀವನಕ್ಕೆ ಬಂದರೆ, ಸುಭದ್ರಮ್ಮನವರಿಗೆ  ಬಿಡುವಿಲ್ಲದ ರಂಗಪಯಣ ಸಾಗಿತು.  ಮುಂದಿನ ಐವತ್ತು ವರ್ಷಗಳ ಕಾಲ ಸುಭದ್ರಮ್ಮನವರು ಗ್ರಾಮೀಣ ಮತ್ತು ಪಟ್ಟಣಗಳ ವ್ಯಾಪ್ತಿಯಲ್ಲಿನ  ರಂಗಭೂಮಿ ವೃತ್ತಿ ನಟಿಯರ ಪೈಕಿ ಅಗ್ರಗಣ್ಯರೆನಿಸಿದರು.

ಸುಭದ್ರಮ್ಮನವರು ಪೌರಾಣಿಕ ನಾಟಕಗಳ ಕುಂತಿ, ಗಾಂಧಾರಿ, ದ್ರೌಪದಿ, ಉತ್ತರೆ, ಸೀತೆ, ಮಂಡೋದರಿ, ಮಲ್ಲಮ್ಮ, ನಂಬೆಕ್ಕ; ಸಾಮಾಜಿಕ ನಾಟಕಗಳ ನಾಯಕಿ, ಉಪನಾಯಕಿ, ಖಳನಾಯಕಿ, ಹಾಸ್ಯ ಸೇರಿದಂತೆ ಎಲ್ಲ ಬಗೆಯ ಪಾತ್ರಗಳಲ್ಲಿ ಅಮೋಘವಾಗಿ ಅಭಿನಯಿಸಿ ಹೆಸರು ಮಾಡಿದರು. ಪ್ರಯೋಗಶೀಲ ನಾಟಕಗಳಲ್ಲಿಯೂ ನಟಿಸಿದರು. ರಂಗಗೀತೆ ಗೋಷ್ಠಿ, ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು. ರಂಗಶಿಬಿರಗಳಲ್ಲಿ ಹಾಡುಗಳನ್ನು ಕಲಿಸಿದರು.

ಸುಭದ್ರಮ್ಮನವರು ತಮ್ಮ ರಂಗಗೀತೆಗಳಿಗೆ ಮತ್ತಷ್ಟು ಶಾಸ್ತ್ರೀಯತೆ ಹಿನ್ನೆಲೆ ಬೇಕಿತ್ತು ಅನಿಸಿದಾಗ ಬಳ್ಳಾರಿಯ ಚಂದ್ರಶೇಖರ ಆಚಾರಿ ಗವಾಯಿಗಳ ಬಳಿ ಶಾಸ್ತ್ರೀಯ ಸಂಗೀತವನ್ನು ಶ್ರದ್ಧೆಯಿಂದ ಕಲಿತರು. ಹೀಗೆ ಗಾಯನ, ಸಂಭಾಷಣೆ ಮತ್ತು ಅಭಿನಯಗಳ ಪ್ರತಿ ಅಂಶಗಳಲ್ಲೂ ಪರಿಪೂರ್ಣತೆ ಸಾಧಿಸಿದರು.
 
ಸುಭದ್ರಮ್ಮ ಅವರು ರಂಗಪ್ರವೇಶ ಪಡೆದ ದಿನದಿಂದ 200ಕ್ಕೂ ಅಧಿಕ ಶೀರ್ಷಿಕೆಗಳ ಸುಮಾರು ಹನ್ನೆರಡು ಸಾವಿರಕ್ಕೂ ಹೆಚ್ಚು ಪ್ರದರ್ಶನಗಳಲ್ಲಿ ನಟಿಸಿದ್ದರು. 

ಸುಭದ್ರಮ್ಮ ಮನ್ಸೂರ್ ಅವರಿಗೆ ಗುಬ್ಬಿ ವೀರಣ್ಣ ಪ್ರಶಸ್ತಿ, ನಾಡೋಜ ಗೌರವ, ಡಾಕ್ಟರೇಟ್ ಗೌರವ, ರಾಜ್ಯೋತ್ಸವ ಪ್ತಶಸ್ತಿ, ನಾಟಕ ಅಕಾಡೆಮಿ ಪ್ರಶಸ್ತಿ, ಆಳ್ವಾಸ್ ನುಡಿಸಿರಿ ಗೌರವಗಳೇ ಅಲ್ಲದೆ ಅನೇಕ ಪ್ರತಿಷ್ಠಾನ, ಸಂಘ, ಸಂಸ್ಥೆಗಳಿಂದ ಅನೇಕ ಮಹತ್ವದ ಗೌರವಗಳು ಸಂದಿದ್ದವು. ಅವರು ಅಮೆರಿಕದ ವಿಶ್ವ ಅಕ್ಕ ಸಮ್ಮೇಳನದಲ್ಲಿಯೂ  ಭಾಗವಹಿಸಿದ್ದರು.

ಸುಭದ್ರಮ್ಮ ಮನ್ಸೂರ್ ಅವರು ಅಭಿನಯಸಿದ ನಾಟಕ ವೀಕ್ಷಿಸಲು ಜನಸಾಗರವೇ ಹರಿದು ಬರುತ್ತಿತ್ತು. ಹಳ್ಳಿಯ ಬಯಲು ಸಾಲದಾಗಿ ಮನೆಯ ಮಾಳಿಗೆ ಮೇಲೆಲ್ಲ ಜನ ಕುಳಿತುಕೊಳ್ಳುತ್ತಿದ್ದರು. ರಾಯಚೂರು, ಕೊಪ್ಪಳ, ಬಳ್ಳಾರಿ, ದಾವಣಗೆರೆ, ಚಿತ್ರದುರ್ಗ,  ಆಂಧ್ರದ ನಾಲ್ಕು ಜಿಲ್ಲೆಗಳಲ್ಲಿ ಕಳೆದ ನಲವತ್ತು ವರ್ಷಗಳಲ್ಲಿ ಸುಭದ್ರಮ್ಮನವರು ನಟಿಸಿದ ಇಂತಹ ನೂರಾರು ನಾಟಕಗಳು ಸಾಕ್ಷಿಯಾಗಿದ್ದವು.

ಬಳ್ಳಾರಿಯ ರಂಗತೋರಣದವರು ಸುಭದ್ರಮ್ಮ ಮನ್ಸೂರ್ ಅವರ ಹಾಡಿನ ಧ್ವನಿಮುದ್ರಣ ಹೊರತಂದಿದ್ದಾರೆ. 'ಸುಭದ್ರಮ್ಮ ಮನ್ಸೂರು' ಎಂಬ ಕೃತಿಯನ್ನು  ಹಂಪಿ ಕನ್ನಡ ವಿಶ್ವವಿದ್ಯಾಲಯ ಪ್ರಕಟಿಸಿದೆ.

ನಮ್ಮ ಭಾರತೀಯ ಕಲಾವ್ಯಾಪ್ತಿ ಎಷ್ಟೊಂದು ವಿಸ್ತಾರವಾದುದೆಂದರೆ, ಸುಭದ್ರಮ್ಮ ಮನ್ಸೂರ್ ಅಂತಹ ಮಹಾನ್ ಕಲಾವಿದರು ಕೂಡಾ, ಈ ಲೋಕದಿಂದ ಹೋದಾಗಲೇ ಹೀಗೊಬ್ಬರು ಇದ್ದರೆಂದು ಬಹುಜನಕ್ಕೆ ತಿಳಿಯುವುದು. ಕಾಲ ಮತ್ತು ವಾಸ್ತವಗಳೆರಡೂ ತುಂಬಾ ನಿಷ್ಠುರವಾದದ್ದು.  ನಮ್ಮ ಬಳಿಯೇ ಇದ್ದ ಭವ್ಯತೆಗಳು ಹೊರಟುಹೋಗುವವರೆಗೂ ನಮ್ಮ ಗಮನಕ್ಕೆ ಬಂದೇ ಇರುವುದಿಲ್ಲ. ಹೋದಾಗ ಎರಡು ದಿನದ ಮಾಧ್ಯಮದ ಸುದ್ಧಿ.  ಪುನಃ ಅದ-ಅದೇ ಬೇಡದ್ದು ಮಾತ್ರಾ ದೊಡ್ಡದಾಗಿಸಿ ತೋರಿಸುವ ವಿಚಿತ್ರ ವಿಶ್ವ.

Great stage artiste and singer Subhadramma Mansur 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ