ಬಾಲಗಂಗಾಧರ ತಿಲಕ್
ಲೋಕಮಾನ್ಯ ಬಾಲ ಗಂಗಾಧರ ತಿಲಕ್
ತಿಲಕ್ ಅವರು ಭಾರತೀಯ ಶ್ರೇಷ್ಠತೆಗೆ ಒಂದು ತಿಲಕವಿದ್ದಂತೆ. ತಿಲಕರದು ಗಾಂಧೀಜಿ ಅವರನ್ನೂ ಪ್ರಭಾವಿಸಿ ಬೆಳೆಸಿದ ವ್ಯಕ್ತಿತ್ವ. ತಮ್ಮ ಕಾರ್ಯ, ಬರವಣಿಗೆ, ಸುಜ್ಞಾನಗಳಿಂದ ಸಹಸ್ರಾರು ಜನರನ್ನು ಪ್ರಭಾವಿಸಿ ಅವರುಗಳನ್ನು ಭಾರತೀಯ ಸ್ವಾತಂತ್ರ್ಯ ಹೋರಾಟದ ಆವರಣಕ್ಕೆ ತಂದು ನಿಲ್ಲಿಸಿದವರು ಬಾಲ ಗಂಗಾಧರ ತಿಲಕರು.
ಭಾರತೀಯ ರಾಷ್ತ್ರೀಯವಾದಿ, ಸಮಾಜ ಸುಧಾರಕ ಹಾಗೂ ಸ್ವಾತಂತ್ರ್ಯ ಹೋರಾಟಗಾರರಾದ ತಿಲಕರು ಬಹುಶಃ ಭಾರತದ ಸ್ವಾತಂತ್ರ್ಯ ಹೋರಾಟದ ಚಳುವಳಿಯ ಮೊದಲನೇ ಜನಪ್ರಿಯ ನಾಯಕ. ಭಾರತೀಯರ ಪ್ರಜ್ಞೆಯಲ್ಲಿ ಸಂಪೂರ್ಣ ಸ್ವರಾಜ್ಯದ ಕಿಚ್ಚು ಹಚ್ಚಿದ ತಿಲಕರು ಹಿಂದೂ ರಾಷ್ಟ್ರೀಯತಾವಾದದ ಪಿತಾಮಹ ಎಂದೂ ಹೆಸರಾಗಿದ್ದಾರೆ. "ಸ್ವರಾಜ್ಯ ನಮ್ಮ ಜನ್ಮಸಿದ್ಧ ಹಕ್ಕು, ಅದನ್ನು ನಾನು ಪಡೆದೇ ತೀರುತ್ತೇನೆ" ಎಂಬ ತಿಲಕರ ಘರ್ಜನೆ ಅಂದು ಜನಪ್ರಿಯವಾಗಿದ್ದಷ್ಟೇ ಅಲ್ಲ, ಇಂದಿಗೂ ಭಾರತೀಯ ನರನಾಡಿಗಳಲ್ಲಿ ಅಚ್ಚಳಿಯದೆ ಹರಿಯುತ್ತಿದೆ. ಸಕಲ ರೀತಿಯಲ್ಲೂ 'ಲೋಕಮಾನ್ಯ'ರೆಂದು ಗೌರವಿತರಾಗಿದ್ದ ತಿಲಕರು ಭಾರತದ ಇತಿಹಾಸ, ಸಂಸ್ಕ್ರತ , ಹಿಂದೂ ಧರ್ಮ, ಗಣಿತ ಹಾಗೂ ಖಗೋಳ ಶಾಸ್ತ್ರಗಳ ಆಳವಾದ ಅಧ್ಯಯನ ಮಾಡಿದ್ದರು
ತಿಲಕರು 1856ರ ಜುಲೈ 23ರಂದು ಮಹಾರಾಷ್ತ್ರದ ರತ್ನಾಗಿರಿಯ ಮಧ್ಯಮವರ್ಗದ ಕುಟುಂಬವೊಂದರಲ್ಲಿ ಜನಿಸಿದರು. ಚತುರ ವಿದ್ಯಾರ್ಥಿಯಾಗಿದ್ದ ತಿಲಕರಿಗೆ ಗಣಿತದಲ್ಲಿ ವಿಶೇಷ ಪ್ರತಿಭೆಯಿತ್ತು. ಆಧುನಿಕ ಕಾಲೇಜು ಶಿಕ್ಷಣ ಪಡೆದುಕೊಂಡ ನವ ಪೀಳಿಗೆಯ ಯುವಕರಲ್ಲಿ ತಿಲಕರೂ ಒಬ್ಬರಾಗಿದ್ದರು.
ಪದವಿ ಪಡೆದ ಬಳಿಕ ಪುಣೆಯ ಖಾಸಗಿ ಶಾಲೆಯೊಂದರಲ್ಲಿ ಗಣಿತ ಶಿಕ್ಷಕರಾಗಿ ಸೇರಿದ್ದ ತಿಲಕರು, ನಂತರ ಅದನ್ನು ಬಿಟ್ಟು ಪತ್ರಕರ್ತರಾದರು. ಪಾಶ್ಚಿಮಾತ್ಯ ಶಿಕ್ಷಣ ಪದ್ಧತಿಯು ಭಾರತೀಯ ಪರಂಪರೆಯನ್ನು ಅವಹೇಳಿಸುವಂತದ್ದು ಹಾಗೂ ಭಾರತದ ವಿದ್ಯಾರ್ಥಿಗಳನ್ನು ಕೀಳಾಗಿ ಕಾಣುವಂತದ್ದು ಎಂಬ ನಿರ್ಧಾರಕ್ಕೆ ಬಂದ ಅವರು, ಈ ಪದ್ಧತಿಯ ತೀವ್ರ ಟೀಕಾಕಾರರಾದರು. ವಿದ್ಯಾರ್ಥಿಗಳಿಗೆ ಒಳ್ಳೆಯ ಗುಣಮಟ್ಟದ ಶಿಕ್ಷಣ ದೊರೆಯಬೇಕು ಎಂಬ ಉದ್ದೇಶದಿಂದ ಪುಣೆಯಲ್ಲಿ ಡೆಕ್ಕನ್ ಎಜುಕೇಶನ್ ಸೊಸೈಟಿಯನ್ನು ಸ್ಥಾಪಿಸಿದರು.
ತಿಲಕರು ಸ್ಥಾಪಿಸಿದ "ಕೇಸರಿ" ಮರಾಠಿ ಪತ್ರಿಕೆಯು ಬಹುಬೇಗ ಜನಸಾಮಾನ್ಯರ ಮನೆಮಾತಾಯಿತು. ಅಭಿಪ್ರಾಯ ಸ್ವಾತಂತ್ರ್ಯವನ್ನು, ಅದರಲ್ಲೂ ಮುಖ್ಯವಾಗಿ, 1905ರ ಬಂಗಾಳದ ವಿಭಜನೆಯ ವಿರೋಧವನ್ನು ಹತ್ತಿಕ್ಕಿದ; ಭಾರತದ ನಾಗರೀಕರನ್ನು, ಸಂಸೃತಿಯನ್ನು, ಪರಂಪರೆಯನ್ನು ಹೀಯಾಳಿಸುವ ಬ್ರಿಟಿಷ್ ಸತ್ತೆಯ ತೀವ್ರ ಟೀಕೆಯನ್ನು ಅವರು ಕೇಸರಿಯಲ್ಲಿ ಮಾಡುತ್ತಿದ್ದರು. ಭಾರತೀಯರಿಗೆ ಸ್ವರಾಜ್ಯದ ಹಕ್ಕನ್ನು ಬಿಟ್ಟುಕೊಡಬೇಕೆಂದು ಅವರು ಪ್ರತಿಪಾದಿಸಿದರು. ಈ ಪತ್ರಿಕೆಯ ಪ್ರಭಾವದಿಂದ ಕನ್ನಡನಾಡನ್ನೂ ಒಳಗೊಂಡಂತೆ ಅಂದಿನ ದಿನಗಳಲ್ಲಿ ಹುಟ್ಟಿಕೊಂಡ ಪತ್ರಿಕೆಗಳು ಸಾವಿರಾರು ಎಂಬುದು ತಿಲಕರ ಕಾರ್ಯ ಸಾಮರ್ಥ್ಯದ ಆಳವನ್ನು ತಿಳಿಸುತ್ತದೆ.
1890ರ ದಶಕದಲ್ಲಿ ತಿಲಕರು ಕಾಂಗ್ರೆಸ್ ಸೇರಿದರಾದರೂ, ಬಹುಬೇಗ ಸ್ವಾತಂತ್ರ್ಯ ಹೋರಾಟದಲ್ಲಿ ಅದರ ಉದಾರೀ-ಸೌಮ್ಯವಾದೀ ಧೋರಣೆಯನ್ನು ವಿರೋಧಿಸಿದರು. ಪರದೇಶೀ ವಸ್ತುಗಳನ್ನು ಬಹಿಷ್ಕರಿಸುವಂತೆ ತಿಲಕರು ನೀಡಿದ ಕರೆ ಬಹಳಷ್ಟು ಭಾರತೀಯರಲ್ಲಿ ದೇಶಭಕ್ತಿಯನ್ನು ಉಕ್ಕಿಸಿತು. ತಿಲಕರು ಮಹಾತ್ಮಾ ಗಾಂಧಿಯವರ ಅಹಿಂಸಾತ್ಮಕ , ಅಸಹಕಾರ ಚಳುವಳಿಯ ಟೀಕಾಕಾರರಾಗಿದ್ದರು. ಒಂದು ಕಾಲದಲ್ಲಿ ತೀವ್ರವಾದಿ ಕ್ರಾಂತಿಕಾರಿಯೆಂದು ಪರಿಗಣಿಸಲ್ಪಟ್ಟಿದ್ದರೂ, ನಂತರದ ವರ್ಷಗಳಲ್ಲಿ ಅವರು ಗಮನಾರ್ಹವಾಗಿ ಬದಲಾಗಿದ್ದರು. ಭಾರತವು ಸ್ವಾತಂತ್ರ ಗಳಿಸಲು, ಮಾತುಕತೆಗಳ ಮಾರ್ಗವೇ ಹೆಚ್ಚು ಪರಿಣಾಮಕಾರಿ ಎಂಬ ಬಗ್ಗೆ ಅವರಿಗೆ ಒಲವಿತ್ತು.
ಬ್ರಿಟಿಷ್ ಸಾಮ್ರಾಜ್ಯದಿಂದ ಹೊರಬರಬೇಕೆಂಬುದರಲ್ಲಿ ತಿಲಕರಿಗೆ ಒಲವೇನೂ ಇರಲಿಲ್ಲ ಎಂಬ ಅಭಿಪ್ರಾಯವೂ ಇದೆ. ಆದರೂ, ಸ್ವರಾಜ್ಯ ಮತ್ತು ರಾಜಕೀಯ ಸ್ವಾತಂತ್ರ್ಯಕ್ಕಾಗಿ ಹೋರಾಟವನ್ನು ಜನಸಾಮಾನ್ಯರವರೆಗೆ ಕೊಂಡೊಯ್ದ ತಿಲಕರನ್ನು ಸ್ವಾತಂತ್ರ್ಯ ಚಳುವಳಿಯ ಜನಕ ಎಂದು ಪರಿಗಣಿಸಲಾಗಿದೆ. ಭಾರತೀಯ ಸಂಸ್ಕೃತಿ, ಇತಿಹಾಸ ಹಾಗೂ ಧರ್ಮದ ಬಗೆಗಿನ ಲೇಖನಗಳಿಂದ ಅವರು ಲಕ್ಷಾಂತರ ಭಾರತೀಯರಿಗೆ ತಮ್ಮ ಭವ್ಯ ಪರಂಪರೆ ಮತ್ತು ನಾಗರೀಕತೆಗಳ ಅರಿವು ಮಾಡಿಕೊಟ್ಟು ನಾಡಿನ ಬಗ್ಗೆ ಅಭಿಮಾನವನ್ನು ಮೂಡಿಸಿದರು .
ತಿಲಕರನ್ನು ಭಾರತದ ರಾಜಕೀಯ ಹಾಗೂ ಆಧ್ಯಾತ್ಮಿಕ ನಾಯಕರನ್ನಾಗಿಯೂ, ಮಹಾತ್ಮಾ ಗಾಂಧಿಯವರನ್ನು ಇವರ ಉತ್ತರಾಧಿಕಾರಿಯಾಗಿಯೂ ಅನೇಕರು ಪರಿಗಣಿಸುತ್ತಾರೆ. 1920ರ ಆಗಸ್ಟ್ 1ರಂದು ತಿಲಕರು ತೀರಿಕೊಂಡಾಗ, ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ 200,000 ಜನರಲ್ಲಿ ಒಬ್ಬರಾದ ಮಹಾತ್ಮಾ ಗಾಂಧಿಯವರು ತಿಲಕರನ್ನು "ಆಧುನಿಕ ಭಾರತದ ಜನಕ" ಎಂದು ಬಣ್ಣಿಸಿದರು.
ಇಂದು ತಿಲಕರನ್ನು ಹಿಂದೂ ರಾಷ್ಟ್ರೀಯವಾದವನ್ನು ಹುಟ್ಟುಹಾಕಿದವರೆಂದು ನಂಬಲಾಗುತ್ತದೆ. ಹಿಂದುತ್ವದ ರಾಜಕೀಯ ಪ್ರಣಾಲಿಯನ್ನು ರಚಿಸಿದ ವಿನಾಯಕ ದಾಮೋದರ ಸಾವರಕರರಿಗೆ ತಿಲಕರು ಆರಾಧ್ಯ ದೈವವಾಗಿದ್ದರು.
1903ರಲ್ಲಿ ತಿಲಕರು Arctic Home in the Vedas ಎಂಬ ಗ್ರಂಥವನ್ನು ಬರೆದು, ಅದರಲ್ಲಿ , ಖಗೋಳಶಾಸ್ತ್ರದ ಆಧಾರದ ಮೇಲೆ, ವೇದಗಳನ್ನು ಧ್ರುವ ಪ್ರದೇಶಗಳಲ್ಲಿ ಮಾತ್ರವೇ ಸೃಷ್ಟಿಸಿರಲು ಸಾಧ್ಯ ಎಂದು ಪ್ರತಿಪಾದಿಸಿದ್ದಾರೆ. ಕೊನೆಯ ಮಂಜಿನಯುಗ ಆರಂಭಗೊಂಡ ಮೇಲೆ ಅಲ್ಲಿಂದ ದಕ್ಷಿಣದ ಕಡೆ ಸಾಗಿದ ಆರ್ಯರ ಮೂಲಕ ಅದು ದಕ್ಷಿಣ ದೇಶಗಳನ್ನು ಮುಟ್ಟಿತು ಎಂದೂ ಅವರು ಪ್ರತಿಪಾದಿಸಿದ್ದಾರೆ.
The Orion, ಅಥವಾ ವೇದಗಳ ಪ್ರಾಚೀನತೆಯ ಸಂಶೋಧನೆಗಳು ಎಂಬ ಪುಸ್ತಕದಲ್ಲಿ ವೇದಕಾಲೀನ ಜನರು ಕ್ರಿ.ಪೂ. 4ನೆಯ ಸಹಸ್ರಮಾನದಷ್ಟು ಹಿಂದೆಯೇ ಭಾರತದಲ್ಲಿ ನೆಲೆಸಿದ್ದರು ಎಂದು ಖಗೋಳಶಾಸ್ತ್ರದ ಆಧಾರದ ಮೇಲೆ ಪ್ರತಿಪಾದಿಸುತ್ತಾರೆ.
ತಿಲಕರ "ಗೀತಾರಹಸ್ಯ ಅಥವಾ ಜೀವನಧರ್ಮ ಯೋಗ" ಎಂಬ ಭಗವದ್ಗೀತೆಯ ತಾತ್ಪರ್ಯವು ಬಹಳ ಪ್ರಸಿದ್ಧವಾದ ಕೃತಿ. ಅವರ ಇತರ ಲೇಖನ ಸಂಗ್ರಹಗಳಲ್ಲಿ ಪ್ರಮುಖವಾದುವೆಂದರೆ 'The Hindu philosophy of life, ethics and religion', 'Vedic chronology and vedanga jyotisha'. 'ತಿಲಕರ ಪತ್ರಗಳು' ಎಂಬ ಕೃತಿಯನ್ನು ಎಂ. ಡಿ. ವಿದ್ವಾಂಸ್ ಸಂಪಾದಿಸಿದ್ದಾರೆ. ಬಾಲ ಗಂಗಾಧರ ತಿಲಕರ ಆಯ್ದ ಕಡತಗಳು 1880- 1920 ಅನ್ನು ರವೀಂದ್ರ ಕುಮಾರ್ ಎಂಬುವರು ಸಂಪಾದಿಸಿದ್ದಾರೆ.
On the birth anniversary of Bal Gangadhar Tilak 🌷🙏🌷
ಕಾಮೆಂಟ್‌ಗಳು